An unconventional News Portal.

‘ವೃತ್ತಿ ಬದಲಾವಣೆಯೇ ಮನುಷ್ಯನಿಗೆ ಸಿಗುವ ವಿಶ್ರಾಂತಿ’: ‘ಮನೆದೇವ್ರ’ ಮನದಾಳದ ಮಾತು!

‘ವೃತ್ತಿ ಬದಲಾವಣೆಯೇ ಮನುಷ್ಯನಿಗೆ ಸಿಗುವ ವಿಶ್ರಾಂತಿ’: ‘ಮನೆದೇವ್ರ’ ಮನದಾಳದ ಮಾತು!

”ಇಡೀ ನಿಸರ್ಗದಲ್ಲಿ ಯಾವ ಜೀವಿಯೂ 24/7 ಕೆಲಸ ಮಾಡಲು ವಿನ್ಯಾಸಗೊಂಡಿಲ್ಲ. ಆದರೆ, ಮನುಷ್ಯ ಮಾತ್ರ ಯಾವಾಗಲೂ ತನ್ನ ಅರಿವನ್ನು ಜೀವಂತವಾಗಿಟ್ಟುಕೊಂಡು, ಕೆಲಸದಲ್ಲಿ ಮುಳುಗಿರುವ ಜೀವಿ. ಬಹುಶಃ, ವೃತ್ತಿಯಿಂದ ವೃತ್ತಿಗೆ ಬದಲಾವಣೆ ಮಾಡಿಕೊಳ್ಳುವುದೇ ಅವನಿಗೆ ಸಿಗುವ ವಿರಾಮ ಅನ್ನಿಸುತ್ತದೆ…”

ಹೀಗೆ ಸಮಾಜ ಶಾಸ್ತ್ರಜ್ಞರ ರೀತಿಯಲ್ಲಿ ಮಾತನಾಡಿದವರು ರವಿ ಕುಮಾರ್. 16 ವರ್ಷಗಳ ಗಂಭೀರ ಪತ್ರಿಕೋದ್ಯಮದ ನಂತರ, ಅವರೀಗ ಕಿರುತೆರೆಗೆ ಕಾಲಿಟ್ಟಿದ್ದಾರೆ. ಕಲರ್ಸ್ ಕನ್ನಡದಲ್ಲಿ ಬರುವ ‘ಮನೆದೇವ್ರು’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿಭಾಯಿಸುತ್ತಿದ್ದಾರೆ. ಎಂಜಿನಿಯರಿಂಗ್ ಹಿನ್ನೆಲೆಯಿಂದ ಬಂದು ‘ಇಂಡಿಯನ್ ಎಕ್ಸ್ ಪ್ರೆಸ್’, ‘ಉಷಾಕಿರಣ’, ‘ಟೈಮ್ಸ್ ಆಫ್ ಇಂಡಿಯಾ- ಕನ್ನಡ’, ‘ವಿಜಯ ನೆಕ್ಸ್ಟ್’ ಹೀಗೆ ಹಲವು ಸಂಸ್ಥೆಗಳಲ್ಲಿ ಕೆಲಸ ಮಾಡಿದವರು ಅವರು.

ಕಳೆದ ವರ್ಷದ ಅಂತ್ಯದಲ್ಲಿ ಪತ್ರಿಕೋದ್ಯಮ ತೊರೆದು, ಹೊಸತೇನನ್ನಾದರೂ ಮಾಡಬೇಕು ಎಂದು ಹೊರಟರು. ಅವರಿಗಾಗ 40 ವರ್ಷ ವಯಸ್ಸು. ಸಾಮಾನ್ಯವಾಗಿ ಒಂದು ಹಂತ ದಾಟಿದ ನಂತರ ಪತ್ರಕರ್ತರು ತಮ್ಮ ವೃತ್ತಿ ಬದುಕಿನಲ್ಲಿ ದೊಡ್ಡ ಮಟ್ಟದ ಮಾರ್ಪಾಡುಗಳನ್ನು ಬಯಸುವುದಿಲ್ಲ; ಯಥಾಸ್ಥಿತಿಗಾಗಿಯೇ ಬಡಿದಾಡುತ್ತಾರೆ. ಇದಕ್ಕೆ ಅಪವಾದ ರವಿಕುಮಾರ್.

ರಂಗಭೂಮಿ, ಪತ್ರಿಕೋದ್ಯಮ ಈಗ ಕಿರುತೆರೆಯಲ್ಲಿ ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ಅವರೀಗ ಮಿಂಚುತ್ತಿದ್ದಾರೆ. ಅವರ ಜತೆ ‘ಸಮಾಚಾರ’ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಸಮಾಚಾರ: ನಿಮ್ಮ 16 ವರ್ಷಗಳ ಪತ್ರಿಕೋದ್ಯಮದಿಂದ ಹೊರಬಂದಿದ್ದೀರಿ, ಅವತ್ತಿನ ದಿನಗಳು ಹೇಗೆ ಅನ್ನಿಸುತ್ತವೆ?

ರವಿ ಕುಮಾರ್: ನಾನು ಎಂಜಿನಿಯರಿಂಗ್ ಓದುತ್ತಿದ್ದ ದಿನಗಳಲ್ಲೇ ಮೈಸೂರಿನಲ್ಲಿ ಪರಿಸರವಾದಿಗಳು ತರುತ್ತಿದ್ದ 8 ಪುಟಗಳ  Beehive ಎನ್ನುವ ಪತ್ರಿಕೆಗೆ ಕೆಲಸ ಮಾಡುತ್ತಿದ್ದೆ. ಅದು ನನ್ನ ಮೊದಲ ಪತ್ರಕೋದ್ಯಮದ ಜತೆಗಿನ ಮುಖಾಮುಖಿ. ಆಮೇಲೆ ಹೈದರಾಬಾದ್ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದೆ. ಸಿಜಿಕೆ ಅವರ ಪ್ರೇರಣೆಯಿಂದ ‘ಗ್ರಾಮಾಂತರಂಗ’ ಎಂಬ ಗೋಡೆ ಪತ್ರಿಕೆ ನಡೆಸುವ ಹೊಸ ಕೆಲಸಕ್ಕೆ ಸೇರಿಕೊಂಡೆ. ತುಂಗಭದ್ರಾ ನೀರಾವರಿ ಯೋಜನೆಯ ಸಂದರ್ಭದಲ್ಲಿ ರೈತರ ಜಾಗೃತಿಗಾಗಿ ಅದು ಸಿಂಧನೂರಿನ 32 ಹಳ್ಳಿಗಳಲ್ಲಿ ನಡೆಸುತ್ತಿದ್ದ ಪತ್ರಿಕೆ. ತುಂಬಾ ಸರಳ ಭಾಷೆ ಅಲ್ಲಿ ಬಳಸಬೇಕಾಗಿತ್ತು.  ಮುಂದೆ ಇದೇ ನನಗೆ ಪತ್ರಿಕೋದ್ಯಮದ ಬೇರೆ ಬೇರೆ ಸಂದರ್ಭಗಳಲ್ಲಿ ಉಪಯೋಗಕ್ಕೆ ಬಂತು.

ಇದಾದ ಮೇಲೆ ಶಿವಮೊಗ್ಗದಲ್ಲಿ ‘ನಾವಿಕ’ ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದೆ. ನಂತರ, ‘ಇಂಡಿಯನ್ ಎಕ್ಸ್ ಪ್ರೆಸ್’ ಸೇರಿಕೊಂಡೆ. ಅಲ್ಲಿಂದ ಬೆಂಗಳೂರಿಗೆ ವರ್ಗಾವಣೆಯಾಯಿತು. ಮೂರು ವರ್ಷಗಳ ನಂತರ ಮತ್ತೆ ಕೆಲಸ ಬದಲಾಯಿಸಿದೆ. ‘ಹಾಟ್ ಮೇಲ್’ ಸೇರಿಕೊಂಡೆ. ಅಲ್ಲಿಂದ ಉಷಾಕಿರಣ. ಉಷಾಕಿರಣದಲ್ಲಿದ್ದಾಗ ಕನ್ನಡದಲ್ಲೇ ಮೊದಲ ಬಾರಿಗೆ 8 ಪುಟಗಳ ವಿದ್ಯಾರ್ಥಿ ಸಂಚಿಕೆ ಹೊರತಂದೆವು. ಪತ್ರಿಕೆ ಕಟ್ಟುವ ಕೆಲಸಗಳನ್ನು ಅಲ್ಲಿ ಕಲಿತೆ. ಮುಂದೆ ಟೈಮ್ಸ್ ಆಫ್ ಇಂಡಿಯಾ ಕನ್ನಡ ಪತ್ರಿಕೆ ಆರಂಭಿಸಿದೆವು. ಅದು ಒಂದಷ್ಟು ಕಾಲದ ನಂತರ ನಿಂತು ಹೋಯಿತು.  ಮುಂದೆ ‘ವಿಜಯ ನೆಕ್ಸ್ಟ್’. ಅಲ್ಲಿ ಇ. ರಾಘವನ್ ಜತೆ ಕೆಲಸ ಮಾಡುವ ಅವಕಾಶ. ಅಪರೂಪದ ಸಂಪಾದಕ ಅವರು. ಇದೆಲ್ಲಾ ಆಗುವ ಹೊತ್ತಿಗೆ ‘ಲವಲVK’ ಹೆಗಲೇರಿತು. ನೋಡಿ, 16 ವರ್ಷಗಳ ಅನುಭವ ಹೇಳಲು ನಾನು 16 ನಿಮಿಷ ಕೂಡ ತೆಗೆದುಕೊಳ್ಳಲಿಲ್ಲ…

ಇಷ್ಟೊಂದು ಬದಲಾವಣೆಗಳು, ಯಾಕೆ?

ನಾನು ಸಮಾಜ ಶಾಸ್ತ್ರಜ್ಞನಲ್ಲ; ನನಗೆ ತಿಳಿದ ಮಟ್ಟಿಗೆ ಎಲ್ಲಾ ಪ್ರಾಣಿಗಳು ಸೀಸನಲ್ ಆಗಿ ಬದುಕುತ್ತವೆ. ಮನುಷ್ಯನ ರೀತಿ 365 ದಿನ ರೆಸ್ಟ್ ಇಲ್ಲದೆಯೇ ದುಡಿಯುವುದಿಲ್ಲ. ಬಹುಶಃ ಪ್ರತೀ ಬಾರಿ ಹೊಸ ವೃತ್ತಿ ಹಿಡಿದಾಗಲೂ, ಒಂದಷ್ಟು ದಿನ ಹೊಸ ಕೆಲಸದ ಖುಷಿ ಇರುತ್ತದೆ. ಅದು ನಮ್ಮ ಪಾಲಿಗೆ ವಿರಾಮದ ಅನುಭವ ನೀಡುತ್ತದೆ. ಇಂತಹ ವೃತ್ತಿ ಪಲ್ಲಟಗಳೇ ನಮ್ಮ ವಿಶ್ರಾಂತಿಗಳು ಅನ್ನಿಸುತ್ತದೆ.

ಪತ್ರಿಕೋದ್ಯಮ ಬಿಡಬೇಕು ಅನ್ನಿಸಲು ಬಲವಾದ ಕಾರಣಗಳೇನಾದರೂ ಇದ್ದವಾ?

13082583_1023462051055052_4876843651381807947_n

ನನಗೆ ನಟನೆ ಮಾಡಬೇಕು ಅಂತ ಅನಿಸಿದ್ದು ತುಂಬಾ ಹಿಂದೆಯೇ. ಅವತ್ತಿಗೇ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದೆ. ಆದರೆ 2010ರ ನಂತರ ಮುಂದಿನ 5 ವರ್ಷ ನಟನೆಯಲ್ಲಿ ತೊಡಗಿಸಿಕೊಳ್ಳಲಾಗದಷ್ಟು ಪತ್ರಿಕೋದ್ಯಮದಲ್ಲಿ ಬ್ಯುಸಿಯಾದೆ. ಕೊನೆಗೊಂದು ದಿನ ರಾಜೀನಾಮೆ ಕೊಟ್ಟು ಹೊರಬಂದೆ. ಅವತ್ತಿಗೆ ಒಂದು ವರ್ಷ ವಿರಾಮ ತೆಗೆದುಕೊಳ್ಳಲಷ್ಟೇ ಆ ನಿರ್ಧಾರ. ಮುಂದೆ ನಟನೆಯಲ್ಲಿ ನನ್ನಿಂದೇನೂ ಸಾಧ್ಯವಾಗದಿದ್ರೆ ಮತ್ತೆ ಇನ್ನೆಲ್ಲಾದೂ ಅಪ್ಲಿಕೇಷನ್ ಹಾಕಿಕೊಂಡರಾಯ್ತು ಎಂಬ ಮನಸ್ಥಿತಿ ಅವತ್ತು ನನ್ನದಾಗಿತ್ತು. ನಾನು ನಟನೆ ಅಂತ ಹೊರಟವ; ಧಾರಾವಾಹಿ, ರಂಗಭೂಮಿ ಅನ್ನುವ ಗಡಿಗಳು ನನಗಿಲ್ಲಿಲ್ಲ.

ನಟನೆ ಖುಷಿ ಕೊಡುತ್ತಿದೆಯಾ; ಬದಲಾವಣೆಯಿಂದ ಹೊಸತೇನನ್ನು ಕಂಡುಕೊಂಡಿರಿ?

ನನಗೆ ಸಾಂಪ್ರದಾಯಿಕ ವೃತ್ತಿ ಮಾಡದೆಯೇ ಬದುಕಲು ಸಾಧ್ಯವಿದೆ ಅಂತ 40 ವರ್ಷಗಳ ಕೆಳಗೆ ಅನಿಸಬೇಕಾಗಿತ್ತು. ಅಂದರೆ ನಾನು ಹುಟ್ಟಿದಾಗಲೇ ಈ ಚೌಕಟ್ಟುಗಳನ್ನು ಮೀರಬೇಕಿತ್ತು ಅನ್ನಿಸಿತ್ತಿದೆ. ನಾನು ಕಳೆದ ವರ್ಷ ಪತ್ರಿಕೋದ್ಯಮ ಸಾಕು ಎಂದು ಹೊರಬಂದಾಗ ಒಂದಷ್ಟು ದಿನ ವಿಶ್ರಾಂತಿ ತೆಗೆದುಕೊಳ್ಳೊಣ ಅಂದುಕೊಂಡಿದ್ದೆ. ಮತ್ತೆ ಸ್ವಲ್ಪ ದಿನಗಳ ನಂತರ ಅಗತ್ಯಬಿದ್ದರೆ ಅರ್ಜಿ ಹಾಕೋಣ ಅಂದುಕೊಂಡಿದ್ದೆ. ಆದರೆ, ಅಷ್ಟರೊಳಗೆ ಒಂದು ಆರ್ಟ್ ಸಿನಿಮಾದಲ್ಲಿ ಅವಕಾಶ ಸಿಕ್ಕಿತು. ನಂತರ, ಧಾರಾವಾಹಿಯಲ್ಲಿ ಪಾತ್ರ. ಈಗ ಅನ್ನಿಸುತ್ತದೆ, ನನ್ನ ಪಾಲಿನ ಸಮಯವನ್ನೂ ಉಳಿಸಿಕೊಂಡು, ನನ್ನ ಅಗತ್ಯದ ದುಡಿಮೆಯನ್ನು ಪ್ರಾಮಾಣಿಕವಾಗಿ ಮಾಡಿಕೊಂಡು ಬದುಕು ಸಾಗಿಸಬಹುದು ಅಂತ. ಇದು ನನಗೆ ಮೊದಲೇ ಅನ್ನಿಸಬೇಕಿತ್ತು.

ನಿಜಕ್ಕೂ, ಪತ್ರಿಕೋದ್ಯಮದ ಸೆಳೆತವನ್ನು ತಪ್ಪಿಸಿಕೊಂಡೆ ಅನ್ನಿಸುತ್ತಿದೆಯಾ?

ಹೀಗೆ ಕಿರುತೆರೆಯ ನಟನೆಯಲ್ಲಿಯೇ ಒಂದೆರಡು ವರ್ಷ ಕಳೆಯಬಹುದು ಅನ್ನಿಸುತ್ತದೆ. ಈಗ ನನ್ನಲ್ಲಿ ಬಂದಿರುವ ಬದಲಾವಣೆ ಏನು ಎಂದರೆ, ಮೊದಲಿನ ಹಾಗೆ ದಿನದ ಸುದ್ದಿಯ ಬಗ್ಗೆ ಅಪ್ ಡೇಟ್ ಇರೋಕೆ ಆಗುತ್ತಿಲ್ಲ, ಅಥವಾ ಇರಬೇಕು ಅನ್ನಿಸುತ್ತಿಲ್ಲ. ಅದರ ಬಗ್ಗೆ ಖುಷಿ ಇದೆ.

ಮತ್ತೆ ಪತ್ರಿಕೋದ್ಯಮಕ್ಕೆ ವಾಪಾಸಾಗುತ್ತೇನೋ ಗೊತ್ತಿಲ್ಲ; ಆದರೆ ಬರವಣಿಗೆಯನ್ನು ನಿಲ್ಲಿಸುವುದಿಲ್ಲ.

Leave a comment

FOOT PRINT

Top