An unconventional News Portal.

ನಗರ ಮಾಲಿನ್ಯ ತಡೆಗೆ ಕ್ರಮ: ದಿಲ್ಲಿ ರಸ್ತೆಗಳಿಂದ ಡೀಸೆಲ್ ಟ್ಯಾಕ್ಸಿ ನಿಷೇಧ

ನಗರ ಮಾಲಿನ್ಯ ತಡೆಗೆ ಕ್ರಮ: ದಿಲ್ಲಿ ರಸ್ತೆಗಳಿಂದ ಡೀಸೆಲ್ ಟ್ಯಾಕ್ಸಿ ನಿಷೇಧ

go- natural-cngಹೆಚ್ಚುತ್ತಿರುವ ನಗರ ಮಾಲಿನ್ಯ ತಡೆಗೆ ‘ನೈಸರ್ಗಿಕ ಅನಿಲ'(CNG) ಬಳಕೆಗೆ ಸುಪ್ರಿಂ ಕೋರ್ಟ್ ಸ್ಪಷ್ಟ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ, ಭಾನುವಾರದಿಂದ ದೇಶದ ರಾಜಧಾನಿ ದಿಲ್ಲಿಯ ರಸ್ತೆಗಳಿಂದ ಡೀಸೆಲ್ ವಾಹನಗಳನ್ನು ಹೊರಗಿಡುವ ಪ್ರಕ್ರಿಯೆ ಆರಂಭವಾಗಿದೆ.

ದಿಲ್ಲಿಯಲ್ಲಿ ಸುಮಾರು 27 ಸಾವಿರ ಡೀಸೆಲ್ ಚಾಲಿತ ವಾಹನಗಳು ಬಳಕೆಯಲ್ಲಿದ್ದವು. ಹಿಂದೆಯೇ ಡೀಸೆಲ್ ವಾಹನ ಸಂಚಾರವನ್ನು ನಿಷೇಧಿಸಲು ನ್ಯಾಯಾಲಯ ಹೇಳಿತ್ತಾದರೂ, ಗಡುವು ಮುಂದಕ್ಕೆ ಹಾಕಲು ಮನವಿ ಮಾಡಿಕೊಳ್ಳಲಾಗಿತ್ತು. ಆದರೆ, ಗಡುವನ್ನು ಮುಂದುವರಿಸಲು ಸುಪ್ರಿಂ ಕೋರ್ಟ್ ಶನಿವಾರ ನಿರಾಕರಿಸಿದ ಹಿನ್ನೆಲೆಯಲ್ಲಿ, ಡೀಸೆಲ್ ವಾಹನಗಳನ್ನು ರಸ್ತೆಗಳಿಂದ ಹೊರಗಿಡುವ ಪ್ರಕ್ರಿಯೆ ಶುರುವಾಗಲಿದೆ.

ದಿಲ್ಲಿ ಸಾರಿಗೆ ಇಲಾಖೆ ಪ್ರಕಾರ ಸುಮಾರು 60 ಸಾವಿರ ಟ್ಯಾಕ್ಸಿಗಳು ನೋಂದಣಿಯಾಗಿವೆ. ಇದರಲ್ಲಿ 27 ಸಾವಿರ ಡೀಸೆಲ್ ಚಾಲಿತ ವಾಹನಗಳಾಗಿವೆ. ಕಳೆದ ಕೆಲವು ತಿಂಗಳಲ್ಲಿ 2 ಸಾವಿರಕ್ಕೂ ಹೆಚ್ಚು ಟ್ಯಾಕ್ಸಿ ಚಾಲಕರು ‘ನೈಸರ್ಗಿಕ ಅನಿಲ’ಕ್ಕೆ ಮಾರ್ಪಾಡು ಮಾಡಿಕೊಂಡಿದ್ದಾರೆ.

ಸುಪ್ರಿಂ ಕೋರ್ಟ್ ನ ಈ ಸೂಚನೆಯು ‘ಆಲ್ ಇಂಡಿಯಾ ಪರ್ಮಿಟ್’ ಪಡೆದ ವಾಹನಗಳಿಗೆ ಅನ್ವಯವಾಗುವುದಿಲ್ಲ. ಬದಲಿಗೆ ಸ್ಥಳೀಯ ಟ್ಯಾಕ್ಸಿಗಳಿಗೆ ಬಿಸಿ ತಟ್ಟಲಿದೆ. ಇದರಿಂದಾಗಿ ದಿಲ್ಲಿ ನಗರ ಸಾರಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಟ್ಯಾಕ್ಸಿ ಸೇವೆಯಲ್ಲಿ ವ್ಯತ್ಯಯವಾಗಲಿದೆ.

ದಿಲ್ಲಿ ಸಾರಿಗೆ ಸಚಿವ ಗೋಪಾಲ್ ರೈ, ಈಗಾಗಲೇ ಡೀಸೆಲ್ ವಾಹನಗಳನ್ನು ರಸ್ತೆಗೆ ಇಳಿಯದಂತೆ ತಡೆಯಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. “ಡೀಸೆಲ್ ಚಾಲಿತ ವಾಹನಗಳನ್ನು ತಪಾಸಣೆ ಮಾಡಲು ಇಲಾಖೆ ಕ್ರಮ ಕೈಗೊಳ್ಳಲಿದೆ,” ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ದೇಶದ ಮಾಲಿನ್ಯಗೊಂಡ ನಗರಗಳ ಪೈಕಿ ದಿಲ್ಲಿ ಪ್ರಮುಖ ಸ್ಥಾನದಲ್ಲಿದೆ. ಹೀಗಾಗಿ, ಸುಪ್ರಿಂ ಕೋರ್ಟ್ ನಗರದ ಮಾಲಿನ್ಯ ತಡೆಗೆ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಿದೆ. ‘ಸಮ ಬೆಸ’ ಯೋಜನೆಯನ್ನು ದಿಲ್ಲಿ ಸರಕಾರ ಜಾರಿಗೆ ತಂದಿದೆ. ಅದರ ಎರಡನೇ ಹಂತದ ಅನುಷ್ಠಾನ ಶನಿವಾರ ಅಂತ್ಯವಾಗಿತ್ತು.

Leave a comment

FOOT PRINT

Top