An unconventional News Portal.

‘ಬಿಟಿವಿ’ ಹೇಳಿಕೆಗೆ ಧನಂಜಯ್ ಪ್ರತಿಕ್ರಿಯೆ: ‘ಸಂಧಾನದ ಅಗತ್ಯವಿರಲಿಲ್ಲ; ಸತ್ಯಕ್ಕೆ ಸಾವಿಲ್ಲ’!

‘ಬಿಟಿವಿ’ ಹೇಳಿಕೆಗೆ ಧನಂಜಯ್ ಪ್ರತಿಕ್ರಿಯೆ: ‘ಸಂಧಾನದ ಅಗತ್ಯವಿರಲಿಲ್ಲ; ಸತ್ಯಕ್ಕೆ ಸಾವಿಲ್ಲ’!

ಕೆ. ವಿ. ಧನಂಜಯ್
kv-dhananjayಸುದ್ದಿ ಮಾಧ್ಯಮವೊಂದರ ಮೇಲೆ ಶಾಸಕರಾದ ಪ್ರಿಯ ಕೃಷ್ಣರವರು ಹೂಡಿರುವ ಮಾನನಷ್ಟ ಮೊಕದ್ದಮೆಯು ನಿನ್ನೆಯಿಂದ ಇಲ್ಲಿ ಚರ್ಚೆಯ ವಸ್ತುವಾಗಿದೆ. ಕರ್ನಾಟಕದಲ್ಲಿ ದಾಖಲಾದ ಅತೀ ದೊಡ್ಡ ಮೊತ್ತದ ಮಾನಹಾನಿ ಪ್ರಕರಣ ಇದಾಗಿರುವುದರಿಂದ, ಸಹಜವಾಗಿಯೇ ಸಾರ್ವಜನಿಕರ ಗಮನ ಸೆಳೆದಿದೆ. ‘ಸಮಾಚಾರ’ ಪ್ರಕರಣದ ನ್ಯಾಯಾಲಯದ ವಿಚಾರಣೆ ಸಂಬಂಧಿಸಿದಂತೆ ಶನಿವಾರ ವರದಿ ಪ್ರಕಟಿಸುತ್ತಿದ್ದಂತೆ, ಬಿಟಿವಿ ಸುದ್ದಿ ವಾಹಿನಿ ತನ್ನ ಪ್ರತಿಕ್ರಿಯೆಯನ್ನು ನೀಡಿದೆ.

ಈ ಹಿನ್ನೆಲೆಯಲ್ಲಿ, ಈ ಪ್ರಕರಣದಲ್ಲಿ ಶಾಸಕರಾದ ಪ್ರಿಯ ಕೃಷ್ಣರವರ ವಕೀಲನಾಗಿರುವ ನಾನು ಪ್ರತಿಕ್ರಿಯೆ ನೀಡಬೇಕಿದೆ. ಶನಿವಾರ ನ್ಯಾಯಾಲಯವು ಸಂಧಾನದ ಸಾದ್ಯತೆಯನ್ನು ಕಂಡುಕೊಳ್ಳಲು ವಿಚಾರಣೆ ನಡೆಸಬೇಕಿತ್ತು. ವಿಚಾರಣೆ ನಡೆಯದೆ ಹೋದದ್ದರಿಂದ, ಇದೇ ಪ್ರಕ್ರಿಯೆಯನ್ನು ಜೂ. 4ಕ್ಕೆ ನ್ಯಾಯಾಲಯವು ಮುಂದೂಡಿದೆ.

ಈ ಪ್ರಕರಣದಲ್ಲಿ ನಮಗೆ ಸಂಧಾನದ ಅವಶ್ಯಕತೆಯೇ ಇರಲಿಲ್ಲ. ವಕೀಲನಾಗಿ ನಾನು ಯಾವುದೇ ಪೂರ್ವ ತಯಾರಿ ಇಲ್ಲದೆ ಯಾವ ಪ್ರಕರಣವನ್ನೂ ತೆಗೆದುಕೊಳ್ಳುವುದಿಲ್ಲ. ಇಂತಹ ಪ್ರಕರಣಗಳಲ್ಲಿ ನ್ಯಾಯಾಲಯವು ಸತ್ಯವೇನೆಂಬ ಅನ್ವೇಷಣೆಯಲ್ಲಿ ತೊಡಗುತ್ತದೆ.

ಈ ಪ್ರಕರಣವು ಪ್ರಿಯ ಕೃಷ್ಣರವರ ಶ್ರೀಮಂತಿಕೆಯ ಸಂಕೇತವಲ್ಲ. ತಮ್ಮ ವಿರುದ್ದ ಕಟ್ಟು ಕತೆಯನ್ನೇ ಹೆಣೆದು ಪ್ರತಿವಾದಿಯು ರಾಜ್ಯವ್ಯಾಪಿ ಪ್ರಸಾರ ಮಾಡಿ ತಮಗೆ ತೀವ್ರ ಮಾನಹಾನಿ ಮಾಡಿದ್ದಾರೆಂದು ನ್ಯಾಯಾಲಯಕ್ಕೆ ಪ್ರಿಯ ಕೃಷ್ಣರವರು ಪ್ರಮಾಣಪತ್ರವನ್ನು ಸಲ್ಲಿಸಿದ್ದಾರೆ. ಕಾರ್ಯಕ್ರಮದಲ್ಲಿ ಬಿಟಿವಿಯು ತೋರಿಸಿದ್ದ ‘ಪ್ರಥಮ ವರ್ತಮಾನ ವರದಿಯೇ’ ಅಸ್ತಿತ್ವದಲ್ಲಿಲ್ಲವೆಂದು ನ್ಯಾಯಾಲಯಕ್ಕೆ ಪ್ರಮಾಣೀಕರಿಸಿ ಹೇಳಲಾಗಿದೆ. ಈ ರೀತಿ ನ್ಯಾಯಾಲಯದ ಬಾಗಿಲು ತಟ್ಟುವ ಅರ್ಜಿದಾರನಿಗೆ ಬೇಕಿರುವುದು ಹಣಬಲವಲ್ಲ; ನೈತಿಕ ಬಲವಷ್ಟೇ.

ತಾವು ಮಾಡಿದ್ದ ಸುದ್ದಿ ಪ್ರಸಾರವು ಸತ್ಯದ ಮೇಲೆ ನಿಂತಿದೆಯೆಂದು ಬಿಟಿವಿಯು ನ್ಯಾಯಾಲಯಕ್ಕೆ ಈಗ ಸಾಬೀತು ಪಡಿಸಬೇಕಿದೆ. ಆದರೆ, ಈವರೆಗೆ ‘ಬಿಟಿವಿ’ಯು ನ್ಯಾಯಾಲಯಕ್ಕೆ ನೀಡಿರುವ ಪ್ರತ್ಯತ್ತರಗಳು ಅದು ಮುಗ್ಗರಿಸಿ ಬೀಳುತ್ತಿರುವ ಸೂಚನೆಯನ್ನು ನೀಡುತ್ತಿವೆ. ಅತ್ಯುತ್ತಮ ವಕೀಲರು ಬಿಟಿವಿಯನ್ನು ಪ್ರತಿನಿಧಿಸುತ್ತಿದ್ದರೂ, ಈವರೆಗೆ ಮೂವರು ವಕೀಲರು ಬದಲಾಗಿದ್ದಾರೆ. ಹಾಗಂತ ಸಂಸ್ಥೆಯೇ ನ್ಯಾಯಾಲಯದಲ್ಲಿ ತಿಳಿಸಿದೆ. ಆದರೆ, ಬಂದವರೆಲ್ಲರೂ ಉತ್ತಮ ಪ್ರಯತ್ನವನ್ನೇ ಮಾಡಿದ್ದಾರೆ ಎಂಬುದು ನನ್ನ ಅನಿಸಿಕೆ.

ಸತ್ಯವನ್ನಷ್ಟೇ ಪ್ರತಿಪಾದಿಸುವುದಕ್ಕೆ ಶ್ರೀಮಂತಿಕೆ ಬೇಕೆ? ಹಣ ಹರಿಸಬೇಕೆ? ನೂರು ಕೋಟಿ ಇಲ್ಲವೇ ಸಾವಿರ ಕೋಟಿ ರುಪಾಯಿಗಳ ಪರಿಹಾರವನ್ನು ಇಲ್ಲಿ ಕೋರಿರುವುದು ಅಪ್ರಸ್ತುತ. ಹಿಂದೆಂದೂ ಸಲ್ಲಿಕೆಯಾಗದಷ್ಟು ಲಕ್ಷಾಂತರ ರೂಪಾಯಿಗಳ ಶುಲ್ಕವನ್ನೂ ನ್ಯಾಯಾಲಯಕ್ಕೆ ಪಾವತಿಸಲಾಗಿದೆಯೆಂಬುದು ಇಲ್ಲಿ ಅಪ್ರಸಸ್ತುತ. ಮಾಧ್ಯಮ ಪ್ರತಿವಾದಿಯ ಮೇಲೆ ಈಗ ಹೊರಿಸಲಾಗಿರುವ ಹೊಣೆಗಾರಿಕೆಯನ್ನು ಪೂರೈಸಲು ಅದಕ್ಕೆ ಬೇಕಿರುವುದು ಹಣವಲ್ಲ; ಕೇವಲ ಗುಣವಷ್ಟೇ – ಪ್ರಾಮಾಣಿಕತೆ. ಹಣಕ್ಕೆ ಇಲ್ಲಿ ಯಾವುದೇ ಮಹತ್ವವಿಲ್ಲ.

ಮೇಲಾಗಿ, ನ್ಯಾಯಾಲಯಕ್ಕೆ ಸಲ್ಲಿಸಿರುವ ತಮ್ಮ ಅರ್ಜಿಯಲ್ಲಿ, ಮಾಧ್ಯಮದ ಅಸಾಧಾರಣ ಪಾತ್ರ ಮತ್ತು ಮಹತ್ವದ ಬಗ್ಗೆ ಪ್ರಿಯ ಕೃಷ್ಣರವರು ನ್ಯಾಯಾಲಯದ ಗಮನ ಸೆಳೆದಿದ್ದಾರೆ. ನಿಷ್ಪಕ್ಷಪಾತ ಮತ್ತು ನಿರ್ದಾಕ್ಷಿಣ್ಯವಾಗಿ ಸತ್ಯವನ್ನು ವರದಿ ಮಾಡಬೇಕಾದ ಸಾಂವಿಧಾನಿಕ ಹೊಣೆಗಾರಿಕೆಯನ್ನು ಹೊತ್ತಿರುವ ಮಾಧ್ಯಮ ಸಮೂಹವನ್ನು ಪೋಷಿಸಬೇಕಾದ್ದು ಶಾಸಕರಾದ ತಮ್ಮ ಕರ್ತವ್ಯವಾಗಿದ್ದು, ಈ ಪ್ರಕರಣವು ಆ ಕರ್ತವ್ಯಕ್ಕೆ ಅಡ್ಡಿಯನ್ನುಂಟು ಮಾಡಬಲ್ಲ ಯಾವುದೇ ಅಂಶಗಳನ್ನು ಒಳಗೊಂಡಿಲ್ಲವೆಂದೂ ನ್ಯಾಯಾಲಯಕ್ಕೆ ತಿಳಿಸಿರುತ್ತಾರೆ. ಸಾಮಾನ್ಯ ವಕೀಲನಾದ ನಾನೂ ಕೂಡ, ಸಂವಿಧಾನದತ್ತವಾದ ಮಾಧ್ಯಮದ ಸ್ವಾತಂತ್ರ್ಯಕ್ಕೆ ಚ್ಯುತಿ ತರುವಂತಹ ಯಾವುದೇ ವಾದವನ್ನು ನ್ಯಾಯಾಲಯದಲ್ಲಿ ಈವರೆಗೆ ಮಾಡಿಲ್ಲ ಮತ್ತು ಮುಂದೆಂದೂ ಮಾಡುವುದಿಲ್ಲ. ಅಂತಹ ವಾದ ಮಂಡಿಸುವುದಕ್ಕೆ ಈ ಪ್ರಕರಣದಲ್ಲಿ ಯಾವುದೇ ಅವಕಾಶವಿರುವುದಿಲ್ಲ.
ಶಾಸಕ ಪ್ರಿಯ ಕೃಷ್ಣ ಹಾಗೂ ಬಿಟಿವಿ ನಡುವಿನ ಈ ಪ್ರಕರಣ ಸರಳವಾಗಿದ್ದು ಇಲ್ಲಿ ಅಂತಿಮವಾಗಿ ಸತ್ಯಕ್ಕೆ ಗೆಲುವಾಗಲಿದೆ. ಇದು ಎಲ್ಲಾ ಮಾನಹಾನಿ ಪ್ರಕರಣಗಳ ಮೂಲಭೂತ ಆಶಯ ಕೂಡ.

ಪ್ರಕರಣವು ನ್ಯಾಯಾಲಯದಲ್ಲಿ ತ್ವರಿತಗತಿಯಲ್ಲಿ ವಿಚಾರಣೆ ನಡೆಯುತ್ತಿದೆ. ನ್ಯಾಯಾಲಯಕ್ಕೆ ಬಿಟಿವಿಯು ಈಗಾಗಲೇ ನ್ಯಾಯಾಲಯದಲ್ಲಿ ಸಲ್ಲಿಸಿರುವ ಪ್ರತ್ಯುತ್ತರಕ್ಕೂ, ‘ಸಮಾಚಾರ’ಕ್ಕೆ ಅದು ನೀಡಿರುವ ಪ್ರತಿಕ್ರಿಯೆಗೂ ಅಸಾಧಾರಣ ವ್ಯತ್ಯಾಸವಿದೆ. ಈ ಹೊಸ ತರನಾದ ಪ್ರತಿಕ್ರಿಯೆಯನ್ನು ಕಂಡು ನಮಗೆ ಆಶ್ಚರ್ಯವಾಗಿದೆ. ಸಾರ್ವಜನಿಕವಾಗಿ ಬಿಟಿವಿಯು ತಳೆದಿರುವ ಈ ಹೊಸ ನಿಲುವನ್ನು ನ್ಯಾಯಾಲಯಕ್ಕೆ ತಿಳಿಸಲಾಗುವುದು.

ಪ್ರಕರಣದ ವಿಚಾರಣೆ ನಡೆದು ಶೀಘ್ರವಾಗಿ ತೀರ್ಪು ಹೊರಬಿದ್ದಾಗ ನೈತಿಕತೆ, ಪ್ರಾಮಾಣಿಕತೆ ಮತ್ತು ಸತ್ಯಕ್ಕಷ್ಟೇ ಜಯ ಸಿಗಲಿದೆ.


  • ಲೇಖಕರು, ಸುಪ್ರಿಂ ಕೋರ್ಟ್ ವಕೀಲರು ಹಾಗೂ  ಶಾಸಕ ಪ್ರಿಯಕೃಷ್ಣ ಪರ ವಕೀಲರು. 

Leave a comment

FOOT PRINT

Top