An unconventional News Portal.

ಮೂರು ಕೋಟಿ ಪ್ರಕರಣಗಳ ಬಾಕಿ ಉಳಿಸಿಕೊಂಡಿರುವ ನ್ಯಾಯಾಲಯಗಳು

ಮೂರು ಕೋಟಿ ಪ್ರಕರಣಗಳ ಬಾಕಿ ಉಳಿಸಿಕೊಂಡಿರುವ ನ್ಯಾಯಾಲಯಗಳು

ದೇಶದ 24 ಹೈಕೋರ್ಟ್ ಹಾಗೂ ಹಲವು ಕೆಳ ನ್ಯಾಯಾಲಯಗಳಲ್ಲಿ 3 ಕೋಟಿಗೂ ಹೆಚ್ಚು ಪ್ರಕರಣಗಳು ಇತ್ಯರ್ಥವಾಗಲು ಬಾಕಿ ಇವೆ ಎಂದು ರಾಜ್ಯಸಭೆಗೆ ಶನಿವಾರ ಕೇಂದ್ರ ಕಾನೂನು ಸಚಿವ ಡಿ. ವಿ. ಸದಾನಂದಗೌಡ ತಿಳಿಸಿದ್ದಾರೆ.

ಕಳೆದ ವರ್ಷ 2 ಕೋಟಿ ಮೊಕದ್ದಮೆಗಳು ಇತ್ಯರ್ಥಗೊಂಡಿದ್ದರೂ, ಹೈ ಕೋರ್ಟ್‍ಗಳಲ್ಲಿ 38.70 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಇತ್ಯರ್ಥವಾಗಬೇಕಿದೆ. ಜಿಲ್ಲಾ ಮತ್ತು ಕೆಳ ನ್ಯಾಯಾಲಯಗಳಲ್ಲಿ ಒಟ್ಟು 2.70 ಕೋಟಿ ಪ್ರಕರಣಗಳು ಬಾಕಿ ಉಳಿದಿವೆ ಎಂದು ಮಾಹಿತಿ ನೀಡಿದ್ದಾರೆ.

ಅಲ್ಲದೆ ಈಗಾಗಲೇ ಇತ್ಯರ್ಥಗೊಂಡಿರುವ ಪ್ರಕರಣಗಳ ಬಗ್ಗೆ ನ್ಯಾಯಾಲಯದ ಮಾಹಿತಿ ನೀಡಿದ ಸದಾನಂದ ಗೌಡ, “2015ರಲ್ಲಿ ಹೈ ಕೋರ್ಟ್ 15,80,911 ಪ್ರಕರಣಗಳನ್ನು ಇತ್ಯರ್ಥಗೊಳಿಸಿತ್ತು. ಕೆಳ ನ್ಯಾಯಾಲಯಗಳು 1.7 ಕೋಟಿಗೂ ಹೆಚ್ಚು ಪ್ರಕರಣಗಳನ್ನ ಇತ್ಯರ್ಥಗೊಳಿಸಿವೆ,” ಎಂದು ತಿಳಿಸಿದರು.

ಕಳೆದ ಭಾನುವಾರವಷ್ಟೇ ನಡೆದ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ಜಂಟಿ ಅಧಿವೇಶನವನ್ನ ಉದ್ದೇಶಿಸಿ ಮಾತನಾಡಿದ್ದ ಜಸ್ಟೀಸ್ ಠಾಕೂರ್, ದೇಶದಲ್ಲಿ ನ್ಯಾಯಾಧೀಶರ ಕೊರತೆ ಕಾಡ್ತಿದೆ ಎಂದು ಕಣ್ಣೀರು ಹಾಕಿದ್ದರು. 1987ರಿಂದ ನ್ಯಾಯಮೂರ್ತಿಗಳ ಸಂಖ್ಯೆಯನ್ನ ಹೆಚ್ಚಿಸಲು ಪ್ರಧಾನಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲವೆಂದು ಭಾವುಕರಾಗಿದ್ದರು.

ನ್ಯಾಯಾಧೀಶರ ಸಂಖ್ಯೆಯನ್ನು 21 ಸಾವಿರದಿಂದ 40 ಸಾವಿರಕ್ಕೆ ಏರಿಸುವಂತೆ ಮನವಿ ಮಾಡಿದ್ದರು.

Leave a comment

FOOT PRINT

Top