An unconventional News Portal.

ಐಟಿ ಇಲಾಖೆ ಮಾಹಿತಿ ಬಹಿರಂಗ: ನಮ್ಮಿಂದ ಸಂಗ್ರಹಿಸಿದ್ದೇ 60 ಸಾವಿರ ಕೋಟಿ!

ಐಟಿ ಇಲಾಖೆ ಮಾಹಿತಿ ಬಹಿರಂಗ: ನಮ್ಮಿಂದ ಸಂಗ್ರಹಿಸಿದ್ದೇ 60 ಸಾವಿರ ಕೋಟಿ!

ಮಹತ್ವದ ಬೆಳವಣಿಗೆಯಲ್ಲಿ ಶುಕ್ರವಾರ ಸಂಜೆ ವೇಳೆಗೆ ಆದಾಯ ತೆರಿಗೆ ಇಲಾಖೆ 16 ವರ್ಷಗಳ ಮಾಹಿತಿಯನ್ನು ಸಾರ್ವಜನಿಕಗೊಳಿಸಿದೆ.

ವೈಯುಕ್ತಿಕ ಆದಾಯ ತೆರಿಗೆ ಕಟ್ಟಿದ ವಿವರಗಳೂ ಸೇರಿದಂತೆ, ನಾನಾ ಸರಕಾರಗಳು ಸಂಗ್ರಹಿಸಿದ ತೆರಿಗೆ ಮೊತ್ತದ ಮಾಹಿತಿಯನ್ನು ವರ್ಷವಾರು ಲೆಕ್ಕದಲ್ಲಿ ದಾಖಲೆಗಳು ಒಳಗೊಂಡಿವೆ.

ಸ್ವಾತಂತ್ರ್ಯ ಬಂದ ನಂತರ ದೇಶದಲ್ಲಿ ಇದೇ ಮೊದಲ ಬಾರಿಗೆ ಆದಾಯ ತೆರಿಗೆ ಇಲಾಖೆಯ ಮಾಹಿತಿ ಹೀಗೆ ಸ್ವ ಇಚ್ಚೆಯಿಂದ ಬಹಿರಂಗವಾಗುತ್ತಿದೆ. ಒಟ್ಟು 84 ಪುಟಗಳ ದಾಖಲೆಯನ್ನು ಮೂರು ಪ್ರತ್ಯೇಕ ವಿಭಾಗಗಳ ಅಡಿಯಲ್ಲಿ ಆದಾಯ ತೆರಿಗೆ ಇಲಾಖೆ ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿದೆ. ಇಲ್ಲಿರುವ ಅಪರೂಪದ ಮಾಹಿತಿ ಮುಂದಿನ ದಿನಗಳಲ್ಲಿ ಆರ್ಥಿಕ ತಜ್ಞರು ಹಾಗೂ ಆಸಕ್ತರಿಗೆ ತೆರಿಗೆ ಸಂಗ್ರಹ ಹಾಗೂ ಸರಕಾರಗಳ ಆದಾಯದ ಕುರಿತು ಇನ್ನಷ್ಟು ಆಳವಾದ ತಿಳಿವಳಿಕೆಯನ್ನು ಹೊಂದಲು ಅನುಕೂಲ ಮಾಡಿಕೊಡಲಿವೆ ಎಂದು ನಂಬಲಾಗಿದೆ.

ಪ್ರಮುಖ ವಿಚಾರಗಳು:

ಸದ್ಯ ಬಹಿರಂಗಪಡಿಸಿರುವ ಮಾಹಿತಿಯಲ್ಲಿ, ಕೆಲವು ಪ್ರಮುಖ ವಿಚಾರಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

2011ರಲ್ಲಿ ತೆರಿಗೆ ಪಾವತಿಸಿದವರು 4 ಕೋಟಿಯಷ್ಟಿದೆ. 2014ರ ವೇಳೆಗೆ  ಆದಾಯ ತೆರಿಗೆ ಪಾವತಿಸಿದ ದೇಶದ ಪ್ರಜೆಗಳ ಸಂಖ್ಯೆ 5 ಕೋಟಿ ಮುಟ್ಟಿದೆ.

2014ರಲ್ಲಿ ಮಹಾರಾಷ್ಟ್ರದಲ್ಲಿ ಅತೀ ಹೆಚ್ಚಿನ ವರಮಾನ ತರಿಗೆಯ ಸಂಗ್ರಹವಾಗಿದೆ. ಇಲ್ಲಿ ಪಾವತಿಸಿದ ನೇರ ತೆರಿಗೆಯ ಒಟ್ಟು ಮೊತ್ತವೇ ಸುಮಾರು 2. 77 ಲಕ್ಷ ಕೋಟಿಯಷ್ಟಿದೆ. ಇದರ ನಂತರ ಸ್ಥಾನದಲ್ಲಿ ದಿಲ್ಲಿ ಇದೆ. ಇಲ್ಲಿ ಸಂಗ್ರಹವಾರ ತೆರಿಗೆ ಪ್ರಮಾಣ 91, 274 ಕೋಟಿ ರೂಪಾಯಿಗಳು. ಇವುಗಳನ್ನು ಹೊರತು ಪಡಿಸಿದರೆ, ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಕರ್ನಾಟಕ, ತಮಿಳುನಾಡು ಇವೆ. ಪ್ರಧಾನಿ ನರೇಂದ್ರ ಮೋದಿ ತವರು ರಾಜ್ಯ ಗುಜರಾತ್ ನಂತರದ ಸ್ಥಾನದಲ್ಲಿದೆ.

ಕಳೆದ ಆರು ವರ್ಷಗಳಲ್ಲಿ ಆದಾಯ ತೆರಿಗೆ ಸಂಗ್ರಹದಲ್ಲಿ ಗಣನೀಯ ಪ್ರಮಾಣದ ಕುಂಠಿತವಾಗಿದೆ. 2010ರಲ್ಲಿ ಶೇ. 18ರಷ್ಟು ಆದಾಯ ತೆರಿಗೆ ಸಂಗ್ರಹದಲ್ಲಿ ಹೆಚ್ಚಳವಾಗಿತ್ತು. ಇದು ಕಳೆದ ಸಾಲಿನಲ್ಲಿ ಶೇ. 6.7ಕ್ಕೆ ಇಳಿದಿದೆ.

ಹೆಚ್ಚಿನ ಮಾಹಿತಿ, ಇಲಾಖೆಯ ವೆಬ್ ಸೈಟ್ನಲ್ಲಿ ಲಭ್ಯವಿದೆ.

“ಒಟ್ಟು 84 ಪುಟಗಳ ಮಾಹಿತಿಯನ್ನು ಸದ್ಯ ಬಿಡುಗಡೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಆದಾಯ ತೆರಿಗೆ ಇಲಾಖೆ ತನ್ನ ಮಾಹಿತಿಯನ್ನು ಬಹಿರಂಗಪಡಿಸಿದೆ. ಇದರಿಂದ ಆರ್ಥಿಕ ತಜ್ಞರಿಗೆ ಹಾಗೂ ಆಸಕ್ತರಿಗೆ ಈ ಕುರಿತು ಅಧ್ಯಯನ ನಡೆಸಲು ಸಹಾಯಕವಾಗಲಿದೆ,” ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಕರ್ನಾಟಕದ ಮಾಹಿತಿ: 

ಆದಾಯ ತೆರಿಗೆ ಇಲಾಖೆ ಪ್ರಕಟಿಸಿರುವ ಮಾಹಿತಿ ಪೈಕಿ, ರಾಜ್ಯವಾರು ತೆರಿಗೆ ಸಂಗ್ರಹದ ಮಾಹಿತಿ ನೀಡಲಾಗಿದೆ. ಇದರಲ್ಲಿ ಕರ್ನಾಟಕದ ಪಾಲು ಹೀಗಿದೆ. 2008-09ರ ಸಾಲಿನಲ್ಲಿ 27311.2 ಕೋಟಿ ರೂಪಾಯಿ ರಾಜ್ಯದಲ್ಲಿ ಆದಾಯ ತೆರಿಗೆ ಸಂಗ್ರಹವಾಗಿದೆ. ಅಲ್ಲಿಂದ 2013-14ರವರೆಗೆ ಕ್ರಮವಾಗಿ 29220.9, 35824.8, 40956.0, 49047.8, 59769.8 ಕೋಟಿ ರೂಪಾಯಿಗಳ ಸಂಗ್ರಹವಾಗಿದೆ. 2014-15ರಲ್ಲಿ ತೆರಿಗೆ ಪ್ರಮಾಣ ಏರಿಕೆಯಾಗಿದ್ದು, 60595.22 ಕೋಟಿ ರೂಪಾಯಿ ಸಂಗ್ರಹವಾಗಿದೆ ಎಂದು ದಾಖಲೆಗಳು ತಿಳಿಸುತ್ತಿವೆ.

ಮೋದಿ ಹರ್ಷ:

ಈ ನಡೆಯನ್ನು ಸ್ವಾಗತಿಸಿರುವ ಪ್ರಧಾನಿ ಮೋದಿ, “ಪಾರದರ್ಶಕತೆ ಕಡೆಗೆ ಗಟ್ಟಿಯಾದ ಹೆಜ್ಜೆ,” ಎಂದು ಸಾಮಾಜಿಕ ಜಾಲತಾಣ ಟ್ವಿಟ್ಟರ್ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಜತೆಗೆ, ಮಾಹಿತಿ ಅಧ್ಯಯನ ನಡೆಸುವವರಿಗೆ ಹೊಸ ಹೊಳವುಗಳನ್ನು ನೀಡಬಲ್ಲದು ಎಂದು ಆಶಯವನ್ನು ವ್ಯಕ್ತಪಡಿಸಿದ್ದಾರೆ.

modi-tweet-on-it-records

Leave a comment

FOOT PRINT

Top