An unconventional News Portal.

ಫ್ಲಾಟ್ಫಾರಂ ಏರಿದ್ದು ಗೌಡ್ರ ಕಾರು: ಇದು ‘ಮಾಹಿತಿ ಯುದ್ಧ’, ಸ್ವಲ್ಪ ಹುಷಾರು!

ಫ್ಲಾಟ್ಫಾರಂ ಏರಿದ್ದು ಗೌಡ್ರ ಕಾರು: ಇದು ‘ಮಾಹಿತಿ ಯುದ್ಧ’, ಸ್ವಲ್ಪ ಹುಷಾರು!

ಆರು ವರ್ಷಗಳ ಹಿಂದಿನ ಫೊಟೋ ಒಂದನ್ನು ಈಗ ರಾಜಕೀಯ ಅಸ್ತ್ರವಾಗಿ ಬಳಸುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಬಿಎಸ್ವೈ ಅಭಿಮಾನಿಗಳು ಎಂದು ಹೇಳಿಕೊಂಡವರು ಅಪಸವ್ಯವೊಂದನ್ನು ಸೃಷ್ಟಿಸಿದ್ದಾರೆ.

ರೈಲ್ವೆ ನಿಲ್ದಾಣದ ಫ್ಲಾಟ್ ಫಾರಂ ಮದ್ಯೆ, ರೈಲಿನ ಪಕ್ಕದವರೆಗೂ ಮಾಜಿ ಪ್ರಧಾನಿ ದೇವೇಗೌಡರ ಕಾರು ನಿಂತಿರುವ ಹಳೆಯ ಫೊಟೋವನ್ನು ತಿರುಚುವ ಮೂಲಕ ಸಾಮಾಜಿಕ ಜಾಲಗಳಲ್ಲಿ ಮುಂದಿನ ದಿನಗಳಲ್ಲಿ ನಡೆಯಲಿರುವ ‘ಮಾಹಿತಿ ಯುದ್ಧ’ಗಳ ಸ್ವರೂಪ ಹೇಗಿರಬಹುದು ಎಂಬುದಕ್ಕೆ ಮುನ್ಸೂಚನೆಯೊಂದನ್ನು ನೀಡಿದ್ದಾರೆ.

ಏನಿದು ಘಟನೆ?:

2010ರ ಮಾರ್ಚ್ 7ರಂದು ಪತ್ರಕರ್ತ ಪ್ರಭುದೇವ್ ಶಾಸ್ತ್ರಿಮಠ ತಮಗೆ ಸಿಕ್ಕಿದ ಅಪರೂಪದ ಫೊಟೋ ಒಂದನ್ನು ಸಾಮಾಜಿಕ ಜಾಲತಾಣ ‘ಫೇಸ್ ಬುಕ್’ನಲ್ಲಿ ಹಂಚಿಕೊಂಡಿದ್ದರು. ಅನಾರೋಗ್ಯದ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ರೈಲನ್ನು ಏರಲು, ಅವರ ಕಾರನ್ನು ರೈಲ್ವೆ ಫ್ಲಾಟ್ ಫಾರಂ ಮೇಲೆ ತೆಗೆದುಕೊಂಡು ಹೋಗಿ ನಿಲ್ಲಿಸಿಕೊಂಡಿದ್ದ ಚಿತ್ರವದು. ಆ ಸಮಯದಲ್ಲಿ ಚಿತ್ರ ಅಷ್ಟೇನು ಸದ್ದು ಮಾಡಿರಲಿಲ್ಲ.

hdd-car-r-yr-back-post

ಆ ಸಮಯದಲ್ಲಿ ಇದಕ್ಕೆ ಪ್ರತಿಕ್ರಿಯಿಸಿದವರು, ಗಣ್ಯ ವ್ಯಕ್ತಿಗಳ ಇಂತಹ ವರ್ತನೆಗಳ ಕುರಿತು ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ರೈಲ್ವೆ ನಿಲ್ದಾಣದಲ್ಲಿ ಸಹಾಯಕ್ಕಾಗಿಯೇ ಎಲೆಕ್ಟ್ರಿಕಲ್ ವಾಹನಿಗಳಿರುವಾಗ, ಕಾರನ್ನು ಫ್ಲಾಟ್ ಫಾರಂವರೆಗೂ ತೆಗೆದುಕೊಂಡು ಹೋಗುವ ಅಗತ್ಯವೇನಿತ್ತು? ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸ್ತ್ರಿಮಠ, ದೇವೇಗೌಡರ ಅನಾರೋಗ್ಯದ ಸಮಸ್ಯೆ ಹಿನ್ನೆಲೆಯಲ್ಲಿ ಘಟನೆ ನಡೆದಿರುವುದನ್ನು ಸ್ಪಷ್ಟಪಡಿಸಿದ್ದರು.

hdd-car-datta-confirmation

ಈ ಕುರಿತು ‘ಸಮಾಚಾರ’ಕ್ಕೆ ಪ್ರತಿಕ್ರಿಯಿಸಿದ ಅವರು, “ನಾನಾಗ ಉದಯವಾಣಿ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದೆ. ಒಂದು ದಿನ ಬಹುಶಃ ಯಾರೋ ಫೊಟೋಗ್ರಾಫರ್ ಈ ಚಿತ್ರವನ್ನು ನನಗೆ ತಲುಪಿಸಿದರು. ಅವತ್ತಿನ ಪತ್ರಿಕೋದ್ಯಮದ ಸ್ಥಿತಿಯಲ್ಲಿ ಇಂತಹ ವಿಚಾರಗಳು ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿರಲಿಲ್ಲ. ನಾನದನ್ನು ‘ಫೇಸ್ ಬುಕ್’ಗೆ ಅಪ್ಲೋಡ್ ಮಾಡಿದ್ದೆ. ಕೆಲವರು ಪ್ರತಿಕ್ರಿಯಿಸಿದ್ದರು. ನಂತರ ಜೆಡಿಎಸ್ ಕಡೆಯಿಂದ ಫೋನ್ ಮಾಡಿ, ವಿಚಾರವನ್ನು ದೊಡ್ಡದು ಮಾಡಬೇಡಿ ಎಂದು ಕೇಳಿಕೊಂಡಿದ್ದ ನೆನಪು,” ಎಂದರು.

ಸದ್ಯ ಪ್ರಭುದೇವ್ ಶಾಸ್ತಿಮಠ, ‘ವಿಜಯ ಕರ್ನಾಟಕ’ ದಿನ ಪತ್ರಿಕೆಯಲ್ಲಿ ಡೆಪ್ಯೂಟಿ ನ್ಯೂಸ್ ಎಡಿಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಹೊಸ ಬೆಳವಣಿಗೆ:

ಈ ಘಟನೆ ನಡೆದು 6 ವರ್ಷಗಳೇ ಕಳೆದಿವೆ. ಆದರೆ ಇದ್ದಕ್ಕಿದ್ದ ಹಾಗೆ ಏ. 27 ನೇ ತಾರೀಖು ಸದರಿ ಫೊಟೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರತ್ಯಕ್ಷವಾಯಿತು. ಜತೆಗೆ, “ಇದು ನೋಡಿ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರದ ದರ್ಪ,” ಎಂಬ ಅಡಿಬರಹದೊಂದಿಗೆ ಸಾವಿರಾರು ಜನರು ಹಂಚಿಕೊಳ್ಳತೊಡಗಿದರು.

railway-car-bsy-group-post

ಇದರ ಮೂಲವನ್ನು ಹುಡುಕಿಕೊಂಡು ಹೊರಟಾಗ ಸಿಕ್ಕಿದ್ದು ಇದು. ತುಮಕೂರಿನ ಸಿದ್ದಗಂಗಾ ವಿದ್ಯಾ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಉಮಾಶಂಕರ್ ಎಂ. ಪಿ ಎಂಬುವವರು, ‘ಬಿ ಎಸ್ ಯಡಿಯೂರಪ್ಪ ಸಪೋರ್ಟರ್ಸ್ ಇನ್ ಫೇಸ್ ಬುಕ್’ ಪೇಜಿನಲ್ಲಿ ಮಧ್ಯಾಹ್ನ ಈ ಚಿತ್ರವನ್ನು ಅಂಟಿಸಿ, ಕೆಳಗಡೆ ಸಿಎಂ ಸಿದ್ದರಾಮಯ್ಯ ಅವರ ಕಾರು ಎಂದು ಬಿಂಬಿಸುವ ಪ್ರಯತ್ನ ಮಾಡಿದರು. ಇದನ್ನು ಮರು ಯೋಚನೆಗೂ ಒಳಪಡಿಸದೆ ಸಾವಿರಾರು ಜನ ತಮ್ಮ ಖಾತೆಯ ಮೂಲಕ ಹಂಚಿಕೊಂಡರು.

ಮಾಹಿತಿ ಯುದ್ಧ:

ಈ ವಿದ್ಯಮಾನ ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯ ವೇಳೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಡೆಯಬಹುದಾದ ಸಂಭವನೀಯ ‘ಮಾಹಿತಿ ಯುದ್ಧ’ದ ಮುನ್ಸೂಚನೆಯಂತೆ ಕಾಣಿಸುತ್ತಿದೆ.

“ಚುನಾವಣೆಗಳ ಸಮಯದಲ್ಲಿ ಸತ್ಯ ಮತ್ತು ಸುಳ್ಳುಗಳ ನಡುವೆ ಇರುವ ಅಂತರ ಅಳಿಸಿ ಹೋಗುತ್ತದೆ. ಅಂತಿಮವಾಗಿ ಇಲ್ಲಿ (ಸಾಮಾಜಿಕ ಜಾಲತಾಣಗಳಲ್ಲಿ) ಇಂತಹ ಗಾಳಿ ಸುದ್ದಿಗಳನ್ನು ಹರಿಯ ಬಿಡುವ ಮೂಲಕ ಚುನಾವಣೆಯನ್ನು ಗೆಲ್ಲುವ ಇರಾದೆ ಇರುತ್ತದೆ,” ಎನ್ನುತ್ತಾರೆ ರಾಜಕೀಯ ಪಕ್ಷವೊಂದರ ಸಾಮಾಜಿಕ ಜಾಲತಾಣಗಳನ್ನು ನಿರ್ವಹಿಸುತ್ತಿರುವ ಕಿರಣ್.

“ಇಂತಹ ಘಟನೆ ನಮ್ಮ ಗಮನಕ್ಕೆ ಬಂದಿಲ್ಲ. ಯಾರಾದರು ದೂರು ನೀಡಿದರೆ, ಖಂಡಿತಾ ಕ್ರಮ ಕೈಗೊಳ್ಳುತ್ತೇವೆ,” ಎನ್ನುತ್ತಾರೆ ಸೈಬರ್ ಕ್ರೈಂ ವಿಭಾಗದ ಹಿರಿಯ ಅಧಿಕಾರಿಯೊಬ್ಬರು. ಸಿಎಂ ಹೆಸರು ಇರುವದರಿಂದ ನಮ್ಮ ಹೆಸರನ್ನು ತರಬೇಡಿ ಎಂಬುದು ಅವರ ಕೋರಿಕೆ.

“ಇದೆಲ್ಲಾ ಏನೇ ಇರಲಿ, ಸಾಮಾಜಿಕ ಜಾಲತಾಣಗಳು ಚಾಲ್ತಿಗೆ ಬಂದು ಇಷ್ಟು ವರ್ಷಗಳಾದರೂ, ಅದನ್ನು ಹೊಣೆಗಾರಿಕೆಯಿಂದ ನಿರ್ವಹಣೆ ಮಾಡಬೇಕು ಭಾವನೆ ಬಳಕೆದಾರರಲ್ಲಿ ಮೂಡಿಲ್ಲ ಎಂಬುದು ಇಂತಹ ಘಟನೆಗಳಿಂದ ಸ್ಪಷ್ಟವಾಗುತ್ತಿದೆ. ಬಳಕೆದಾರರಲ್ಲಿ ಹೊಣೆಗಾರಿಕೆ ಬೆಳಯುವವರೆಗೂ, ಇಂತಹ ಅಪಸವ್ಯಗಳನ್ನು ಹುಟ್ಟುಹಾಕುವ ಮಂದಿ ಲಾಭ ಮಾಡಿಕೊಳ್ಳುತ್ತಲೇ ಇರುತ್ತಾರೆ,” ಎನ್ನುತ್ತಾರೆ ಪತ್ರಕರ್ತರೊಬ್ಬರು.

Leave a comment

FOOT PRINT

Top