An unconventional News Portal.

ಬರ ಅಂದ್ರೆ ಎಲ್ಲರಿಗೂ ಇಷ್ಟ: ಸಿಎಂ ಬಂದ್ರೆ ಅಧಿಕಾರಿಗಳಿಗೆ ಕಷ್ಟ!

ಬರ ಅಂದ್ರೆ ಎಲ್ಲರಿಗೂ ಇಷ್ಟ: ಸಿಎಂ ಬಂದ್ರೆ ಅಧಿಕಾರಿಗಳಿಗೆ ಕಷ್ಟ!

ಎರಡನೇ ಸುತ್ತಿನ ಬರ ಪ್ರವಾಸವನ್ನು ಮುಗಿಸಿಕೊಂಡು  ಸಿಎಂ ಸಿದ್ದರಾಮಯ್ಯ ರಾಜಧಾನಿ ಬೆಂಗಳೂರಿಗೆ ವಾಪಾಸಾಗಿದ್ದಾರೆ. ಆದರೆ ಬರ ಪ್ರವಾಸದ ಸಮಯದಲ್ಲಿ ಎಲ್ಲೆಲ್ಲಿ ಮುಖ್ಯಮಂತ್ರಿಯನ್ನು ಅಧಿಕಾರಿಗಳು ವ್ಯವಸ್ಥಿತವಾಗಿ ದಾರಿ ತಪ್ಪಿಸಿದ್ದಾರೆ ಎಂಬುದಕ್ಕೆ ಈಗ ಹೊರಬೀಳುತ್ತಿರುವ ಸ್ಥಳೀಯ ವರದಿಗಳು ಸಾಕ್ಷಿಯಾಗಿವೆ.

ಕೆಲವು ಕಡೆಗಳಲ್ಲಿ ಗ್ರಾಮಸ್ಥರ ಶ್ರಮವನ್ನೇ, ಅಧಿಕಾರಿಗಳು ತಾವು ಮಾಡಿದ ಘನಕಾರ್ಯ ಎಂದು ಸಿಎಂ ಎದುರು ಬಿಂಬಿಸಿದ್ದಾರೆ. ಇನ್ನು ಕೆಲವು ಕಡೆಗಳಲ್ಲಿ ಸಿಎಂ ಭೇಟಿ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಜಾನುವಾರುಗಳನ್ನು ಮನೆಗೆ ತೆಗೆದುಕೊಂಡು ಹೋಗುವಂತೆ ಜನರಿಗೆ ತಿಳಿಸಲಾಗಿದೆ. ಇದಲ್ಲಕ್ಕಿಂತ ವ್ಯಂಗ್ಯ ಏನೆಂದರೆ, ಕಾಮಗಾರಿ ಮುಗಿಯದ ಒಂದು ಸ್ಥಳದಲ್ಲಿ ಜೇನುನೊಣಗಳ ಕಾಟವಿದೆ ಎಂದು ಸುಳ್ಳು ಮಾಹಿತಿ ನೀಡಿ, ಮುಖ್ಯಮಂತ್ರಿ ಪ್ರವಾಸದ ದಿಕ್ಕನ್ನೇ ಬದಲಿಸುವ ಚಾಣಾಕ್ಷ ನಡೆಯನ್ನು ಅಧಿಕಾರಿಗಳು ಇಟ್ಟಿದ್ದಾರೆ. ಸ್ಥಳೀಯವಾಗಿ ಹರಿದಾಡುತ್ತಿರುವ ಈ ಮಾಹಿತಿಯನ್ನು ‘ಸಮಾಚಾರ’ ವಿವರವಾಗಿ ಪಟ್ಟಿ ಮಾಡುತ್ತಿದೆ.

ಕೆರೆ ಹೂಳು ಎತ್ತಿದೋರ್ಯಾರು?

ಈ ಬಾರಿಯ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬರ ಪ್ರವಾಸ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಏ. 15ರಂದು ಬೀದರ್ ಜಿಲ್ಲೆಯ ಔರಾದ್ ತಾಲೂಕಿಗೆ ಭೇಟಿ ನೀಡಿದ್ದರು. ಅವರು ಭೇಟಿ ಸಮಯದಲ್ಲಿ ಕೆರೆಯ ಹೂಳು ಎತ್ತುತ್ತಿರುವ ಕಾಮಗಾರಿ ನಡೆಯುತ್ತಿತ್ತು. ಅವರ ಸುತ್ತಮುತ್ತ ಓಡಾಡಿದ ಅಧಿಕಾರಿಗಳು ಬರ ಕಾಮಗಾರಿ ಭರದಿಂದ ಸಾಗಿದೆ ಎಂದು ಬಿಂಬಿಸುವ ಪ್ರಯತ್ನ ಮಾಡಿದರು. ಮಂದಹಾಸ ಬೀರುತ್ತಲೇ ಕಾಮಗಾರಿ ಪ್ರಗತಿಯನ್ನು ವೀಕ್ಷಿಸಿದ ಸಿಎಂ, ಅಲ್ಲಿಂದ ವಾಪಾಸಾದರು.

ಅಸಲಿ ವಿಚಾರ ಏನೆಂದರೆ, ಸದರಿ ಕೆರೆ ಹೂಳು ಎತ್ತುವ ಕಾಮಗಾರಿಗೆ ಬರ ಪರಿಹಾರ ನಿಧಿಯಿಂದಾಗಲೀ, ಜಿಲ್ಲಾಡಳಿತದ ಇತರೆ ಯೋಜನೆ ಕೆಳಗಾಗಲೀ ನಯಾ ಪೈಸೆ ಹಣ ವಿನಿಯೋಗವಾಗಿರಲೇ ಇಲ್ಲ. ಗ್ರಾಮದ ಜನರೇ ಪ್ರತಿ ಲೋಡಿಗೆ 200-300 ರೂಪಾಯಿ ಖರ್ಚು ಮಾಡಿ ಹೂಳು ಎತ್ತಿಸುತ್ತಿದ್ದರು ಎಂಬುದು ಈಗ ತಿಳಿದು ಬರುತ್ತಿರುವ ವಿಚಾರ. ಈ ಕುರಿತು ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸಿದರೂ, ಪ್ರತಿಕ್ರಿಯೆ ಲಭ್ಯವಾಗಲಿಲ್ಲ.

ಗೋಶಾಲೆಯೆಂಬ ಸ್ಟೇಜ್:

cm-drought-tour-3

ಸಾಂದರ್ಭಿಕ ಚಿತ್ರ.

ಇದೇ ವೇಳೆಯಲ್ಲಿ ಬೀದರ್ ಜಿಲ್ಲೆಯ ಬರ ವೀಕ್ಷಣೆಗೆ ಮುಖ್ಯಮಂತ್ರಿ ಮುಂದಾಗಿದ್ದರು. ಜಿಲ್ಲೆಯ ಜೇವರ್ಗಿ ತಾಲೂಕಿನ ಕಟ್ಚಿ ಸಂಗಾವಿ ಗ್ರಾಮದಲ್ಲಿ ಸರಕಾರದ ವತಿಯಿಂದ ನಿರ್ಮಿಸಲಾದ ಗೋಶಾಲೆಯನ್ನು ಸಿಎಂ ವೀಕ್ಷಿಸಿದರು. ಅಲ್ಲಿದ್ದ ಜಾನುವಾರುಗಳಿಗೆ ಮೇವು ನೀಡಿದರು. ಅಧಿಕಾರಿಗಳು ಬರದ ಹಿನ್ನೆಲೆಯಲ್ಲಿ ಜಾನುವಾರುಗಳ ಮೇವಿಗಾಗಿ ತೆಗೆದುಕೊಂಡ ಕ್ರಮಗಳನ್ನು ವೀಕ್ಷಿಸಿದರು.

“ಸಿಎಂ ಅತ್ತ ಹೋಗುತ್ತಿದ್ದಂತೆ ರಾತ್ರೋರಾತ್ರಿ ರೈತರ ಕೈಗೆ ಒಂದಿಷ್ಟು ಕಾಸು ಕೊಟ್ಟು, ತಂದಿದ್ದ ಜಾನುವಾರುಗಳನ್ನು ತೆಗೆದುಕೊಂಡು ಹೋಗುವಂತೆ ಅಧಿಕಾರಿಗಳು ಹೇಳಿದರು,” ಎಂಬುದು ಸ್ಥಳೀಯರು ಈಗ ನೀಡುತ್ತಿರುವ ಮಾಹಿತಿ. ಗ್ರಾಮಕ್ಕೆ ಮುಖ್ಯಮಂತ್ರಿ ಭೇಟಿ ಕಾರ್ಯಕ್ರಮ ನಿಗದಿಯಾಗುತ್ತಿದ್ದಂತೆ ಅಧಿಕಾರಿಗಳು ಗೋಶಾಲೆಯೊಂದನ್ನು ತರಾತುರಿಯಲ್ಲಿ ನಿರ್ಮಿಸಿ, ಜಾನುವಾರುಗಳನ್ನು ಬಾಡಿಗೆಗೆ ತಂದು ಕಟ್ಟಿದ್ದಾರೆ ಎಂಬ ಗಂಭೀರ ಆರೋಪವೀಗ ಕೇಳಿಬರುತ್ತಿದೆ. ಈ ಕುರಿತು ಸೂಕ್ತ ತನಿಖೆಯಾಗಲಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಜೇನುನೊಣದ ಐಡಿಯಾ:

ರಾಯಚೂರು ನಗರ ಈ ಬಾರಿಯ ಬರಕ್ಕೆ ತತ್ತರಿಸಿದೆ. ನೀರಿನ ಸರಬರಾಜಿನಲ್ಲಿ ವ್ಯತ್ಯಯವಾಗಿದೆ. ಹೀಗಾಗಿ ಕೃಷ್ಣ ನದಿಯಿಂದ ನೀರು ಸರಬರಾಜು ಮಾಡುವ ಯೋಜನೆ ‘ಜಾಕ್ ವೆಲ್’ಯನ್ನು ಸಿಎಂ ವೀಕ್ಷಿಸುವ ಕಾರ್ಯಕ್ರಮವು ಪ್ರವಾಸದಲ್ಲಿ ನಿಗದಿಯಾಗಿತ್ತು. ಆದರೆ, ವಾಸ್ತವದಲ್ಲಿ ನೀರು ಸರಬರಾಜಿನ ಕಾಮಗಾರಿ ಇವತ್ತಿಗೂ ಪೂರ್ಣವಾಗಿಲ್ಲ. ಹೀಗಾಗಿ, ಸಿಎಂ ಅತ್ತ ಬರದಂತೆ ತಡೆಯಲು ಅಧಿಕಾರಿಗಳು ಜೇನು ನೊಣದ ಕತೆಯನ್ನು ಕಟ್ಟಿದ್ದಾರೆ ಎನ್ನಲಾಗುತ್ತಿದೆ. “ಸ್ಥಳದಲ್ಲಿ ಜೇನುನೊಣಗಳ ಕಾಟ ಇರುವುದರಿಂದ ಮುಖ್ಯಮಂತ್ರಿ ಭೇಟಿ ಮಾಡುವುದು ಕಷ್ಟ,” ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಪ್ರವಾಸದ ವೇಳೆಯಲ್ಲಿ ವಾಸ್ತವ ದರ್ಶನ ತಪ್ಪಿ ಹೋಯಿತು ಎಂಬುದು ಆರೋಪ.

ಜನರ ಆಕ್ರೋಶಗಳು:

ಇವೆಲ್ಲ ವಿಚಾರಗಳಿಗೆ ಪೂರಕ ಎಂಬಂತೆ ಕೆಲವು ಕಡೆಗಳಲ್ಲಿ ಸಿಎಂ ವಿರುದ್ಧ ಜನ ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದರು. ವಿಜಯಪುರ ಜಿಲ್ಲೆಯಇಂಡಿ ತಾಲೂಕಿನಲ್ಲಿ ಬರ ಅಧ್ಯಯನಕ್ಕೆ ಅಂತ ಬಂದ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಆರ್. ಪಾಟೀಲ್, ಖಾಸಗಿ ಶಾಲೆಯಲ್ಲಿ ಗಾಂಧೀಜಿ ಪುತ್ಥಳಿ ಅನಾವರಣ ಮಾಡಿ ಹೋದರು. ಸ್ಥಳೀಯರು ಸಿಎಂಗೆ ಧಿಕ್ಕಾರ ಕೂಗುವ ಮೂಲಕ ಆಕ್ರೋಶ ಹೊರಹಾಕಿದರು.

ಹಾವೇರಿ ಜಿಲ್ಲೆಯಲ್ಲಿ ಬರ ಪ್ರವಾಸದ ವೇಳೆ ಸಿಎಂ ಅಧಿಕಾರಿಗಳ ಸಭೆ ಕರೆದಿದ್ದರು. ಅಲ್ಲಿ ಹಿಂಗಾರು ಬೆಳೆ ಕೈಕೊಟ್ಟ ಬಗ್ಗೆ ಸುಳ್ಳು ವರದಿಯನ್ನು ಅಧಿಕಾರಿಗಳು ನೀಡಿದರು. ಆದರೆ ಅಧಿಕಾರಿಗಳ ಸುಳ್ಳು ಲೆಕ್ಕ ಸಿಎಂ ಗಮನಕ್ಕೆ ಬಂತು. ಅದಕ್ಕಾಗಿ 20 ಅಧಿಕಾರಿಗಳಿಗೆ ‘ಸಸ್ಪೆಂಡ್ ಭಾಗ್ಯ’ನೂ ದಯಪಾಲಿಸಲಾಯಿತು.

ಹೀಗೆ, ಮುಖ್ಯಮಂತ್ರಿಯೇ ಖುದ್ದಾಗಿ ಬರ ಪರಿಹಾರ ಕಾರ್ಯವನ್ನು ಗಮನಿಸಲು ಶಕ್ತಿಸೌಧ ಬಿಟ್ಟು, ಜಿಲ್ಲೆಗಳಿಗೆ ಭೇಟಿ ನೀಡಿದರೂ, ವಾಸ್ತವದಲ್ಲಿ ಪರಿಸ್ಥಿತಿ ಹೆಚ್ಚೇನೂ ಬದಲಾವಣೆ ಆಗುವುದಿಲ್ಲ ಎಂಬುದನ್ನು ಮೇಲಿನ ನಿದರ್ಶನಗಳು ಮುಂದಿಡುತ್ತಿವೆ. ‘ಬರ ಎಂದರೆ ಎಲ್ಲರಿಗೂ ಇಷ್ಟ’ ಎಂಬುದಕ್ಕೆ ಇವುಗಳು ತಾಜಾ ಉದಾಹರಣೆಗಳು.

ಕುಮಾರಸ್ವಾಮಿ ಟೀಕೆ:

ಕಳೆದ ಒಂದು ವರ್ಷದಿಂದ ರಾಜ್ಯಾದಾದ್ಯಂತ ತೀವ್ರ ಬರಗಾಲ ತಾಂಡವವಾಡುತ್ತಿದ್ದು ಅನ್ನ-ನೀರು, ಮೇವಿಲ್ಲದೆ ಜನ-ಜಾನುವಾರು ತತ್ತರಿಸಿ ಹೋಗಿದ್ದಾರೆ. ದಿಕ್ಕು ಕಾಣದೆ ಗುಳೆ ಹೋಗುತ್ತಿದ್ದಾರೆ. ಬರ ಪರಿಸ್ಥಿತಿಯ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಜೆಡಿಎಸ್ ರಾಜ್ಯಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

Leave a comment

FOOT PRINT

Top