An unconventional News Portal.

ರಿಯಲ್ ಎಸ್ಟೇಟ್ ಎಂಬ ‘ನಾಯಿಸಂತೆ’: ಕೂಸು ಹುಟ್ಟುವ ಮುನ್ನವೇ ‘Online ಕುಲಾವಿ’!

ರಿಯಲ್ ಎಸ್ಟೇಟ್ ಎಂಬ ‘ನಾಯಿಸಂತೆ’: ಕೂಸು ಹುಟ್ಟುವ ಮುನ್ನವೇ ‘Online ಕುಲಾವಿ’!

ಮನೆ ಕಟ್ಟಬೇಕು ಎಂಬ ನಗರ ಪ್ರದೇಶದ ಜನರ ಕನಸುಗಳನ್ನೇ ಬಂಡವಾಳ ಮಾಡಿಕೊಂಡು, ಬೃಹತ್ ಪ್ರಮಾಣದ ಆನ್ಲೈನ್ ಉದ್ಯಮವೊಂದು ಸದ್ದಿಲ್ಲದೆ ಬೆಳೆದು ನಿಂತಿದೆ.

ಭಿನ್ನ ಪ್ರಚಾರ ತಂತ್ರ, ತಂತ್ರಜ್ಞಾನದ ಬಳಕೆ, ಜನರನ್ನು ನಂಬಿಸಲು ಕಸರತ್ತುಗಳು, ದೊಡ್ಡ ಮಟ್ಟದ ಆದಾಯ ಹಾಗೂ ಯುವಕರೇ ತುಂಬಿಕೊಂಡಿರುವ  ವಿಚಿತ್ರ ಸಂಕರಗಳಿರುವ ಹೊಸ ಕಾಲದ ಉದ್ಯಮವಿದು. ಇಲ್ಲಿಯೂ ಪೈಪೋಟಿ ಇದೆ, ಮೋಸವಿದೆ, ವಂಚನೆ ಇದೆ, ಗಾಸಿಪ್ ಇದೆ, ತನ್ನದೇ ಜಾಲವಿದೆ, ಒಳಸುಳಿಗಳಿವೆ ಮತ್ತು ರಿಯಲ್ ಎಸ್ಟೇಟ್ ಉದ್ಯಮದ ಸಮಸ್ತ ಜಾತಕ ಇದೆ. ಅದೆಲ್ಲಕ್ಕಿಂತ ಹೆಚ್ಚಾಗಿ ತೋಳ್ಬಲಕ್ಕಿಂತ ಯುಕ್ತಿಯನ್ನು ನಂಬಿಕೊಂಡು ನಡೆಸುವ ಉದ್ಯಮವಿದು.

ಚಾನಲ್ ಪಾರ್ಟ್ನರ್ಸ್:

ಅವರನ್ನು ‘ಚಾನಲ್ ಪಾರ್ಟ್ನರ್ಸ್’ ಎಂದು ಕರೆಯುತ್ತಾರೆ. ಯಾವುದಾದರೂ ರಿಯಲ್ ಎಸ್ಟೇಟ್ ಕಂಪನಿ ಹೊಸ ಅಪಾರ್ಟ್ಮೆಂಟ್ ಯೋಜನೆಯನ್ನು ಘೋಷಿಸುತ್ತಿದ್ದಂತೆ ಇವರು ಪಾದರಸದ ಹಾಗೆ ಚುರುಕಾಗಿ ಬಿಡುತ್ತಾರೆ. ಎಷ್ಟರ ಮಟ್ಟಿಗೆ ಅಂದರೆ, ರಿಯಲ್ ಎಸ್ಟೇಟ್ ಕಂಪನಿ, ತನ್ನ ಯೋಜನೆಯನ್ನು ಪ್ರಚಾರ ಮಾಡುವ ಮುನ್ನವೇ ಇವರು ಅದೇ ಹೆಸರಿನಲ್ಲಿ ನೂರಾರು ವೆಬ್ ಡೊಮೈನ್ಗಳನ್ನು ಬುಕ್ ಮಾಡಿ ಬಿಡುತ್ತಾರೆ.

ಉದಾಹರಣೆ, ಈ ವರ್ಷದ ಆರಂಭದಲ್ಲಿ ಬೆಂಗಳೂರಿನಲ್ಲಿ ಪ್ರೆಸ್ಟೀಜ್ ಗ್ರೂಪ್, ‘ಕ್ಯೂ ಗಾರ್ಡನ್’ ಎಂಬ ಹೆಸರಿನಲ್ಲಿ ಹೊಸ ಅಪಾರ್ಟ್ಮೆಂಟ್ ಒಂದನ್ನು ಘೋಷಿಸಿತು. ಹೆಚ್ಚು ಕಡಿಮೆ ಅದೇ ದಿನ, ‘ಕ್ಯೂ ಗಾರ್ಡನ್, ಪ್ರೆಸ್ಟೀಜ್’ ಹೆಸರನ್ನು ಸ್ವಲ್ಪ ಹಿಂದೆ ಮುಂದೆ ಮಾಡಿಕೊಂಡ ನೂರಾರು ವೆಬ್ ಪೋರ್ಟಲ್ಗಳು ಜೀವ ಪಡೆದುಕೊಂಡವು.

real estate-1

ಲಾಭ ಹೇಗೆ?:

‘ಚಾನಲ್ ಪಾರ್ಟನರ್ಸ್’ ಹೆಸರಿನಲ್ಲಿ ವೆಬ್ ಸೈಟ್ ಸೃಷ್ಟಿಸುವವರಿಗೆ ಅವರದ್ದೇ ಲಾಭಗಳಿವೆ. ಜನ ಪ್ರೆಸ್ಟೀಜ್ ಗ್ರೂಪ್ ನಿರ್ಮಿಸುತ್ತಿರುವ ಫ್ಲ್ಯಾಟ್ ಕೊಳ್ಳಬೇಕು ಎಂದು ಅಂತರಾರ್ಜಾಲದಲ್ಲಿ ಹುಡುಕುತ್ತಿದ್ದಂತೆ ಈ ಮಧ್ಯವರ್ತಿಗಳು ಸೃಷ್ಟಿಸಿದ ವೆಬ್ ಪೇಜಸ್ ಸಿಗುತ್ತವೆ. ಅವಕ್ಕೆ ನೀವು ಭೇಟಿ ಕೊಟ್ಟರೆ, ಅಲ್ಲಿ ಅಪಾರ್ಟ್ಮೆಂಟ್ ಸಂಪೂರ್ಣ ವಿವರ ಇರುತ್ತದೆ. ನೀವು ಪ್ರಾಪರ್ಟಿ ಕೊಳ್ಳಬೇಕು ಅಂತಿದ್ದರೆ ಸಂಪರ್ಕಿಸಿ ಎಂಬ ಮಾಹಿತಿಯೂ ಸಿಗುತ್ತದೆ. ನಿಮ್ಮನ್ನು ‘ಲೀಡ್’ ಎಂದು ಪರಿಗಣಿಸುವ ಇವರು ಮುಂದೆ, ಫ್ಲ್ಯಾಟ್ ಕೊಡಿಸುವವರೆಗೂ ನಿಮ್ಮ ಜತೆ ಸಂಪರ್ಕದಲ್ಲಿರುತ್ತಾರೆ. “ಇದರಿಂದ ಕಮಿಷನ್ ರೂಪದಲ್ಲಿ ಒಬ್ಬೊಬ್ಬರು ಒಂದೊಂದು ರೇಟು ಫಿಕ್ಸು ಮಾಡಿರುತ್ತಾರೆ. ಸಾಮಾನ್ಯವಾಗಿ ನಮಗೆ ಶೇ. 2ರಷ್ಟು ಒಂದು ಡೀಲ್ ಮೂಲಕ ಸಿಗುತ್ತದೆ,” ಎನ್ನುತ್ತಾರೆ ಭಾವನ ರಿಯಲ್ ಎಸ್ಟೇಟ್ ಹೆಸರಿನಲ್ಲಿ ಇಂತಹದೊಂದು ಮಧ್ಯವರ್ತಿ ಕಂಪನಿ ನಡೆಸುತ್ತಿರುವ ಚಟರ್ಜಿ.

ಸಮಸ್ಯೆಗಳೇನು?: real estate-2

“ಯಾವುದೇ ಹೊಸ ಅಪಾರ್ಟ್ಮೆಂಟ್ ಯೋಜನೆ ಘೋಷಣೆಯಾಗುತ್ತಿದ್ದಂತೆ ನಾಯಿಕೊಡೆಗಳಂತೆ ಅದೇ ಹೆಸರಿನಲ್ಲಿ ಹುಟ್ಟಿಕೊಳ್ಳುವ ವೆಬ್ಸೈಟ್ಗಳನ್ನು ನಂಬಿ ಮೋಸ ಹೋದವರೂ ಇದ್ದಾರೆ,” ಎನ್ನುತ್ತಾರೆ ‘ಪ್ರಾಪ್ ರಿವೀವ್’ ಎಂಬ ರಿಯಲ್ ಎಸ್ಟೇಟ್ ಕನ್ಸಲ್ಟೇಶನ್ ಕಂಪನಿ ನಡೆಸುತ್ತಿರುವ ಅನೂಪ್ ಹೆಗ್ಗಾರ್. “ಇಲ್ಲಿ ಎಷ್ಟೋ ಯೋಜನೆಗಳಿಗೆ ಯಾವುದೇ ತಲೆ ಬುಡವೇ ಇರುವುದಿಲ್ಲ. ಖಾಲಿ ಜಾಗದಲ್ಲಿ ಹೋರ್ಡಿಂಗ್ ಹಾಕಿಸಿ, ದುಡ್ಡು ಎತ್ತಿದವರೂ ಇರುತ್ತಾರೆ. ಇಂತವರಿಗಾಗಿ ಕೇವಲ ಕಮಿಷನ್ ಆಸೆಗೆ ಬಿದ್ದ ಚಾನಲ್ ಪಾರ್ಟನರ್ಸ್ ಮೂಲಕ ಜನ ಮೋಸ ಹೋಗಿದ್ದೂ ಇದೆ,” ಎಂದವರು ಉದಾಹರಣೆ ಸಹಿತ ವಿವರಿಸುತ್ತಾರೆ.

ಸದ್ಯ, ರಿಯಲ್ ಎಸ್ಟೇಟ್ ಉದ್ಯಮಕ್ಕೆ ಕಡಿವಾಣ ಹಾಕುವ ಹೊಸ ಕಾಯ್ದೆ ಜಾರಿಗೆ ಬಂದಿದೆ. ಯೋಜನೆಯ ಹಣವನ್ನೂ ಯೋಜನೆಗಾಗಿಯೇ ಬಳಸಬೇಕು ಎಂದು ಅದು ಹೇಳುತ್ತಿದೆ. ಆದರೆ, ಹೀಗೆ ಯೋಜನೆಯನ್ನು ಕೇವಲ ಪತ್ರಿಕೆ, ಟಿವಿಗಳಲ್ಲಿ ಹಾಗೂ ಚಾನಲ್ ಪಾರ್ಟ್ನರ್ಸ್ ಹೆಸರಿನಲ್ಲಿ ಪ್ರಚಾರ ಮಾಡಿ, ಶುರುವಾಗುವ ಮುನ್ನವೇ ಜನರಿಂದ ದುಡ್ಡು ಎತ್ತುವುದಕ್ಕೆ ಯಾವುದೇ ಕಡಿವಾಣಗಳಿಲ್ಲ. ಇದರಿಂದ ನಡೆಯುತ್ತಿರುವ ಮೋಸ, ವಂಚನೆಗಳದ್ದೇ ಒಂದು ಪ್ರತ್ಯೇಕ ಕತೆ.

 

1 Comment

 • Apr 26,2016
  Praveena shetty

  Hi, this is a comment.
  To get started with moderating, editing, and deleting comments, please visit the Comments screen in the dashboard.
  Commenter avatars come from Gravatar.

  Reply Reply

Leave a comment

FOOT PRINT

Top