An unconventional News Portal.

ಬರ ಪರಿಹಾರಕ್ಕೆ ಹಣ, ಮಕ್ಕಳಿಗೆ ರಜೆಯಲ್ಲೂ ಬಿಸಿಊಟ: ಸಂಪುಟ ಸಭೆಯ ತೀರ್ಮಾನಗಳು

ಬರ ಪರಿಹಾರಕ್ಕೆ ಹಣ, ಮಕ್ಕಳಿಗೆ ರಜೆಯಲ್ಲೂ ಬಿಸಿಊಟ: ಸಂಪುಟ ಸಭೆಯ ತೀರ್ಮಾನಗಳು

ಬರಪೀಡಿತ ಎಂದು ಘೋಷಿತವಾಗಿರುವ ಎಲ್ಲಾ 137 ತಾಲ್ಲೂಕುಗಳಲ್ಲಿ ಶಾಲಾ ಮಕ್ಕಳಿಗೆ ಬೇಸಿಗೆ ರಜಾ ಅವಧಿಯಲ್ಲೂ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ವಿಸ್ತರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

ಸಚಿವ ಸಂಪುಟ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ. ಬಿ. ಜಯಚಂದ್ರ, “ಬೇಸಿಗೆ ರಜಾ ಅವಧಿಯ ಎಲ್ಲಾ 39 ದಿನಗಳಲ್ಲೂ ಸಂಬಂಧಿತ ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ವಿತರಿಸಲು ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಇಲಾಖೆಗೆ ಸೂಚನೆ ನೀಡಲಾಗಿದೆ,” ಎಂದರು.

“ರಾಜ್ಯದ ಬರ ಪ್ರದೇಶಗಳಲ್ಲಿ ಕುಡಿಯುವ ನೀರು ಸರಬರಾಜು ಮಾಡಲು ಈಗಾಗಲೇ ಬಿಡುಗಡೆ ಮಾಡಿರುವ 50 ಕೋಟಿ ರೂ ಜೊತೆಗೆ 100 ಕೋಟಿ ರೂ ಅನುದಾನ ಬಿಡುಗಡೆ ಮಾಡಲು ಸಂಪುಟ ಸಮ್ಮತಿಸಿದೆ. ಇದರಿಂದ ಈ ಬಾಬ್ತಿಗೆ 150 ಕೋಟಿ ರೂ ಅನುದಾನ ಒದಗಿಸಿದಂತಾಗಿದೆ. ಬರ ಪೀಡಿತ ಪ್ರದೇಶಗಳಲ್ಲಿ ಗೋಶಾಲೆಗಳನ್ನು ತೆರೆಯಲು ರಾಜ್ಯ ಸರ್ಕಾರ 15 ಕೋಟಿ ರೂ ಅನುದಾನವನ್ನು ಬಿಡುಗಡೆ ಮಾಡಲು ಸಂಪುಟ ಒಪ್ಪಿಗೆ ನೀಡಿದೆ. ಅಲ್ಲದೆ, ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ವೈಯುಕ್ತಿಕ ಠೇವಣಿ ಖಾತೆಗಳಲ್ಲಿ ಬರ ನಿರ್ವಹಣೆಗಾಗಿ 357 ಕೋಟಿ ರೂ ಅನುದಾನ ಲಭ್ಯವಿದೆ. ಇದರ ಜೊತೆಗೆ ಕೇಂದ್ರ ಸರ್ಕಾರದ ‘ಮಹಾತ್ಮಾ ಗಾಂಧೀ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ’ಯ ಅಡಿಯಲ್ಲಿ ರಾಜ್ಯಕ್ಕೆ 800 ಕೋಟಿ ರೂ ಅನುದಾನ ದೊರೆಯುವ ನಿರೀಕ್ಷೆ ಇದೆ,” ಸಚಿವರು ವಿವರಿಸಿದರು.

ಎರಡು ಆಸ್ಪತ್ರೆಗಳ ನಿರ್ಮಾಣ

ರಾಮನಗರ ಜಿಲ್ಲೆಯ ಅರ್ಚಕರ ಹಳ್ಳಿ ಗ್ರಾಮದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರಾಂಗಣದಲ್ಲಿ ವಿವಿಧ ಕಟ್ಟಡಗಳ ಕಾಮಗಾರಿಗಳಿಗಾಗಿ 580 ಕೋಟಿ ರೂ ಪರಿಷ್ಕೃತ ಅಂದಾಜು ವೆಚ್ಚಕ್ಕೆ ರಾಜ್ಯ ಸಚಿವ ಸಂಪುಟವು ಆಡಳಿತಾತ್ಮಕ ಅನುಮೋದನೆ ನೀಡಿದೆ. ಇದರಲ್ಲಿ ನಾಗಾರ್ಜುನ ಕನ್‍ಸ್ಟ್ರಕ್ಷನ್ ಕಾಪೋರೇಷನ್ ಅವರ 468 ಕೋಟಿ ರೂ ಟೆಂಡರ್ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಉಳಿದ 111.59 ಕೋಟಿ ರೂ ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆಯು ನಿರ್ವಹಿಸಲಿದೆ.

“ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರಾಂಗಣದಲ್ಲಿ 250 ಹಾಸಿಗೆಗಳ ಒಂದು ಹೈ-ಟೆಕ್ ಆಸ್ಪತ್ರೆ ಹಾಗೂ 750 ಹಾಸಿಗೆಗಳ ಒಂದು ಸಾಮಾನ್ಯ ಆಸ್ಪತ್ರೆ ಸ್ಥಾಪಿಸಲಾಗುವುದು. ಹೈ-ಟೆಕ್ ಆಸ್ಪತ್ರೆಯ ನಿರ್ವಹಣೆಯ ಹೊಣೆಯನ್ನು ವಿಶ್ವವಿದ್ಯಾಲಯ ಹಾಗೂ ಸಾಮಾನ್ಯ ಆಸ್ಪತ್ರೆಯ ನಿರ್ವಹಣೆಯ ಹೊಣೆಯನ್ನು ರಾಜ್ಯ ಸರ್ಕಾರ ವಹಿಸಿಕೊಳ್ಳಲಿದೆ,” ಜಯಚಂದ್ರ ಹೇಳಿದರು.

ಟೆಂಡರ್ ಆಧ್ಯತೆ:

ರಾಜ್ಯದ 2013-14 ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವಂತೆ ಪಂಚಾಯತ್ ರಾಜ್ ಸಂಸ್ಥೆಗಳೂ ಸೇರಿದಂತೆ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿನ 50 ಲಕ್ಷ ರೂ ವರೆಗಿನ ಕಾಮಗಾರಿಗಳನ್ನು ಪರಿಶಿಷ್ಠರಿಗೆ ನೀಡಲು ಅನುಕೂಲವಾಗುವಂತೆ ಸಚಿವ ಸಂಪುಟ ನಿರ್ಣಯಿಸಿದೆ.

ಅದರಂತೆ ಪರಿಶಿಷ್ಠ ಜಾತಿಯ ಜನಸಂಖ್ಯೆ ಶೇಕಡಾ 17.15 ಹಾಗೂ ಪರಿಶಿಷ್ಠ ಪಂಗಡಗಳ ಜನಸಂಖ್ಯೆಗೆ ಶೇಕಡಾ 6.95 ಅನುಗುಣವಾಗಿ ಕಾಮಗಾರಿಗಳನ್ನು ಈ ಸಮುದಾಯದವರಿಗೆ ನೀಡಲು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕ ಕಾಯಿದೆ-1999 ಕ್ಕೆ ತಿದ್ದುಪಡಿ ತರಲು ಸಂಪುಟವು ತೀರ್ಮಾನಿಸಿತು.

ಪದ ಬಳಕೆ ಸಲ್ಲ

ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಮಧ್ಯಂತರ ವರದಿಯ ಶಿಫಾರಸ್ಸಿನ ಮೇರೆಗೆ ನಾಯಿಂದ ‘ಹಜಾಮ’ ಬಳಕೆ ಮಾಡುವಂತಿಲ್ಲ. ಬದಲಿಗೆ, ‘ಸವಿತಾ ಸಮಾಜ’ ಎಂದೇ ಜಾತಿ ಪ್ರಮಾಣ ಪತ್ರಗಳನ್ನು ನೀಡುವಂತೆ ಕಂದಾಯ ಇಲಾಖೆಗೆ ಸೂಚಿಸಲು ರಾಜ್ಯ ಸಚಿವ ಸಂಪುಟವು ಮಹತ್ವದ ತೀರ್ಮಾನ ಕೈಗೊಂಡಿದೆ.

Leave a comment

FOOT PRINT

Top