An unconventional News Portal.

ಪ್ರತಿಷ್ಠಿತ ಪ್ರಶಸ್ತಿಗೆ 100ರ ಒನಪು; ಪುಲಿಟ್ಜರ್ ಎಂಬ ಅಪರೂಪದ ಪತ್ರಕರ್ತನ ನೆನಪು!

ಪ್ರತಿಷ್ಠಿತ ಪ್ರಶಸ್ತಿಗೆ 100ರ ಒನಪು; ಪುಲಿಟ್ಜರ್ ಎಂಬ ಅಪರೂಪದ ಪತ್ರಕರ್ತನ ನೆನಪು!

ಜಗತ್ತಿನ ಎಲ್ಲಾ ಕ್ಷೇತ್ರಗಳಲ್ಲಿ ಪ್ರಶಸ್ತಿಗಳ ಸಂಖ್ಯೆ ನೂರಾರಿದ್ದರೂ, ಪತ್ರಿಕೋದ್ಯಮದ ಮಟ್ಟಿಗೆ ಪುರಸ್ಕಾರ, ಸಮ್ಮಾನಗಳು ತೀರಾ ಅಪರೂಪ. ಇಂಥ ವಿರಳ ಪ್ರಶಸ್ತಿಗಳಲ್ಲೇ ಪ್ರತಿಷ್ಠಿತವಾದದ್ದು ಅಮೆರಿಕಾದ ಪತ್ರಕರ್ತರಿಗೆ ಮಾತ್ರವೇ ಮೀಸಲಾಗಿರುವ ‘ಪುಲಿಟ್ಜರ್ ಅವಾರ್ಡ್’. ಅಂದ ಹಾಗೆ ಇಂದಿಗೆ ಪುಲಿಟ್ಜರ್ ಪ್ರಶಸ್ತಿ ಆರಂಭವಾಗಿ 100ನೇ ವರ್ಷ ತುಂಬಿತು.

ಕಲೆ ಮತ್ತು ಪತ್ರಿಕೋದ್ಯಮದ ಒಟ್ಟು 21 ವಿಭಾಗಗಳಲ್ಲಿ ನೀಡಲಾಗುವ ಪ್ರಶಸ್ತಿ ವಿಜೇತರ ಈ ವರ್ಷದ ಪಟ್ಟಿ ನಿನ್ನೆಯಷ್ಟೇ ಬಿಡುಗಡೆಯಾಗಿದೆ. ಅಮೆರಿಕಾದ ಪತ್ರಕರ್ತರಿಗಷ್ಟೇ ಈ ಪ್ರಶಸ್ತಿ ನೀಡುವುದರಿಂದ, ಕನ್ನಡದಲ್ಲಿ ‘ಸಮಾಚಾರ’ ಓದುತ್ತಿರುವವರಿಗೆ ಈ ಸುದೀರ್ಘ ಪಟ್ಟಿಯಲ್ಲಿರುವ ಪತ್ರಕರ್ತರ ಹೆಸರು ಅಪ್ರಸ್ತುತ; ಸದ್ಯ ಅದನ್ನು ಪಕ್ಕಕ್ಕಿಡೋಣ.

21 ವಿಭಾಗಗಳ ಪ್ರಶಸ್ತಿಗಳಲ್ಲಿ ಜನಪ್ರಿಯವಾಗಿರುವುದು ‘ತನಿಖಾ ಪತ್ರಿಕೋದ್ಯಮ’ ಮತ್ತು ‘ಫೀಚರ್ ಫೊಟೋಗ್ರಫಿ’ ವಿಭಾಗಗಳ ಪ್ರಶಸ್ತಿಗಳು. ಈ ಎರಡೂ ವಿಭಾಗಗಳಲ್ಲಿ ಪುರಸ್ಕಾರ ಪಡೆಯಲು ಪ್ರತಿ ವರ್ಷ ನೂರಾರು ಪತ್ರಕರ್ತರು ಜಿದ್ದಿಗೆ ಬಿದ್ದವರಂತೆ ಸ್ಪರ್ಧೆಗೆ ಇಳಿಯುತ್ತಾರೆ. ಎಲ್ಲಾ ವಿಭಾಗಕ್ಕೂ 10 ಸಾವಿರ ಡಾಲರ್(ಸುಮಾರು 6.8 ಲಕ್ಷ ರೂ.) ಮೊತ್ತದ ಬಹುಮಾನ ನೀಡಲಾಗುತ್ತದೆ. ಪ್ರಶಸ್ತಿಯ ಮೊತ್ತ ಇಲ್ಲಿ ನಗಣ್ಯ. ನಗದಿನ ಆಚೆಗೆ ಪುಲಿಟ್ಜರ್ ಪ್ರಶಸ್ತಿ ಪಡೆಯುವುದೇ ಒಂದು ಹೆಮ್ಮೆ, ಪ್ರತಿಷ್ಠೆ ಮತ್ತು ಎಷ್ಟೋ ಪತ್ರಕರ್ತರ ಜೀವನದ ಏಕಮೇವ ಕನಸು.

ಫ್ಲಾಶ್ ಬ್ಯಾಕ್:

CentennialMarkwithMedal

ಮೊದಲ ಪುಲಿಟ್ಜರ್ ಪ್ರಶಸ್ತಿ ಘೋಷಣೆಯಾಗಿದ್ದು 1917ರಲ್ಲಿ. ಅಮೆರಿಕಾದ ಪ್ರಖ್ಯಾತ ಕೊಲಂಬಿಯಾ ವಿಶ್ವವಿದ್ಯಾಲಯದ ದತ್ತಿ ಪ್ರಶಸ್ತಿಯಾಗಿ ಇದನ್ನು ಸ್ಥಾಪನೆ ಮಾಡಲಾಗಿದೆ. 1911ರಲ್ಲಿ ಜೋಸೆಫ್ ಪುಲಿಟ್ಜರ್ ಸಾಯುವಾಗ ತನ್ನ ಹೆಸರಿನಲ್ಲಿ ಪ್ರಶಸ್ತಿ ನೀಡುವಂತೆ ವಿಲ್ ಬರೆದಿಟ್ಟಿದ್ದ. ಇದರಂತೆ ಕಳೆದ 100 ವರ್ಷಗಳಿಂದ ಪ್ರಶಸ್ತಿ ನೀಡುತ್ತಾ ಬರಲಾಗಿದೆ. ಕಾಲದಿಂದ ಕಾಲಕ್ಕೆ ಪ್ರಶಸ್ತಿಯ ವಿಭಾಗಗಳು, ಪ್ರಶಸ್ತಿಯ ಮೊತ್ತ ಮತ್ತು ನಿಯಮಗಳು ಬದಲಾಗುತ್ತಾ ಬಂದಿವೆ. ಸದ್ಯ ಪ್ರತಿ ವಿಭಾಗಕ್ಕೂ 7 ಜನ ಪರಿಣತ ತೀರ್ಪುಗಾರರಿರುತ್ತಾರೆ. ಕೊಲಂಬಿಯಾ ವಿಶ್ವವಿದ್ಯಾಲಯ, ‘ಪುಲಿಟ್ಜರ್ ಪ್ರೈಜ್ ಬೋರ್ಡ್’ ಇದನ್ನೆಲ್ಲಾ ನಿರ್ವಹಿಸುತ್ತದೆ. ಇದಕ್ಕಾಗಿ ಪ್ರತ್ಯೇಕ ವ್ಯವಸ್ಥೆಗಳನ್ನೇ ಮಾಡಲಾಗಿದ್ದು, ಪಕ್ಕಾ ವೃತ್ತಿಪರ ರೀತಿಯಲ್ಲಿ ಪ್ರಶಸ್ತಿ ನೀಡಲಾಗುತ್ತದೆ. ಇದೇ ಕಾರಣಕ್ಕೆ 100 ವರ್ಷ ಕಳೆದರೂ ಪ್ರಶಸ್ತಿಯ ಮೌಲ್ಯ ಮುಕ್ಕಾಗಿಲ್ಲ.

ಯಾರೀತ ಪುಲಿಟ್ಜರ್?

ಜೋಸೆಫ್ ಪುಲಿಟ್ಜರ್ ಈ ಜಗತ್ತು ಕಂಡ ಶ್ರೀಮಂತ, ಅದ್ಭುತ ಮತ್ತು ಅಪರೂಪದ ಪತ್ರಿಕೋದ್ಯಮಿ. 1847ರಿಂದ 1911ರವರಗೆ ಬದುಕಿದ್ದ ಈತನ ಕಾರ್ಯಕ್ಷೇತ್ರ ಅಮೆರಿಕಾದ ನ್ಯೂಯಾರ್ಕ್ ನಗರ. ಇಡೀ ವಿಶ್ವದ ಪತ್ರಿಕೋದ್ಯಮದ ದಿಕ್ಕು ದೆಸೆಯನ್ನೇ ಬದಲಿಸಿ ಹಾಕಿದಾತ. ಹಂಗೇರಿಯಿಂದ ಹೊಟ್ಟೆಪಾಡಿಗಾಗಿ, ಅಮೆರಿಕಾದ ನಾಗರಿಕ ಯುದ್ಧದಲ್ಲಿ ಪಾಲ್ಗೊಳ್ಳಲೆಂದು ಬಂದವ. ಅಲ್ಲಿನ ನಿವಾಸಿಯಾಗಿ ಇಡೀ ಜಗತ್ತನ್ನೇ ತನ್ನತ್ತ ತಿರುಗುವಂತೆ ಮಾಡಿದ್ದು ಇವತ್ತಿಗೆ ಇತಿಹಾಸ; ಅವತ್ತಿಗೆ ವ್ಯಕ್ತಿಯೊಬ್ಬನ ಸಾಹಸ.

ಬೋಸ್ಟನ್ ನಗರದಲ್ಲಿ ಬಂದಿಳಿದವ ತನ್ನ ಕೃಷಕಾಯದಿಂದಾಗಿ ಯಾವ ಕೆಲಸನ್ನೂ ಸರಿಯಾಗಿ ಮಾಡಲಾಗದೇ ಕೊನೆಗೆ ಇಳಿದದ್ದು ರಾಜಕಾರಣಕ್ಕೆ. ನಂತರ ಪುಲಿಟ್ಜರ್ ಪತ್ರಿಕೆಯೊಂದನ್ನು ಖರೀದಿಸಿ ಪತ್ರಿಕೋದ್ಯಮಕ್ಕೆ ಇಳಿದ. ಆದರೆ ನಿಜವಾದ ಉದ್ಯಮ ಆರಂಭವಾಗಿದ್ದು 1883ರಲ್ಲಿ ‘ದಿ ನ್ಯೂಯಾರ್ಕ್ ವರ್ಲ್ಡ್’ ಪತ್ರಿಕೆ ಖರೀಸಿದ ನಂತರ. ತನ್ನದೇ ಶೈಲಿಯಲ್ಲಿ ಪತ್ರಿಕೆ ರೂಪಿಸುತ್ತಾ ಅಮೆರಿಕಾ ಪತ್ರಿಕೋದ್ಯಮವನ್ನೇ ಆಳಿದ ಜೋಸೆಫ್ ಪುಲಿಟ್ಜರ್, ದೈತ್ಯ ಉದ್ಯಮಿಯಾಗಿ ಬೆಳೆದ. ಅವತ್ತಿಗೆ ಈತ ಅಮೆರಿಕಾ ಪತ್ರಿಕೋದ್ಯಮದ ಏಕಚಕ್ರಾಧಿಪತಿ.

ಅಮೆರಿಕಾ ಪತ್ರಿಕೋದ್ಯವನ್ನೇ ಆಳುತ್ತಿದ್ದ ಪುಲಿಟ್ಜರ್ ಸಾಮ್ರಾಜ್ಯ, ಪೀತ ಪತ್ರಿಕೋದ್ಯಮದ ಪಿತಾಮಹ ಎಂದೇ ಹೆಸರಾದ ವಿಲಿಯಂ ರಾಂಡಾಲ್ಫ್ ಹರ್ಸ್ಟ್ ಆಗಮನದೊಂದಿಗೆ ಪತನವಾಯ್ತು. ಅಮೆರಿಕಾ ಪತ್ರಿಕೋದ್ಯಮದ ಮೇಲಾಟಕ್ಕಾಗಿ ದಶಕಗಳ ಕಾಲ ಇವರಿಬ್ಬರ ನಡುವೆ ನಡೆದ ಕಾದಾಟ ಜರ್ನಲಿಸಂ ಇತಿಹಾಸದ ರೋಚಕ ಕಥೆಗಳಲ್ಲೊಂದು (ಈ ಕುರಿತು ಸದ್ಯದಲ್ಲಿಯೇ ‘ಸಮಾಚಾರ’ ಸರಣಿಯೊಂದನ್ನು ಆರಂಭಿಸಲಿದೆ).

ಪುಲಿಟ್ಜರ್ ಬಗ್ಗೆ ವಾಪಾಸಾಗೋಣ. ಈತ ಪತ್ರಿಕೆಗಳನ್ನು ಹೊಸ ಪ್ರಯೋಗಗಳಿಗೆ ಒಡ್ಡಿದ. ಮೊದಲ ಬಾರಿಗೆ ತನಿಖಾ ಪತ್ರಿಕೋದ್ಯಮವನ್ನು ಮುನ್ನೆಲೆಗೆ ತಂದ. ಜಾಹೀರಾತುಗಳಿಂದ ಪತ್ರಿಕೆ ನಡೆಸಬಹುದು ಎಂಬುದನ್ನು ತೋರಿಸಿಕೊಟ್ಟ. ಮನೋರಂಜನೆ ಸುದ್ದಿಗಳ ಪ್ರಕಟಣೆ ಆರಂಭಿಸಿದ.

ಹೀಗೆ ಪತ್ರಿಕೆಗಳಿಗೆ ಹೊಸ ಚೌಕಟ್ಟು ನೀಡಿದ ಈತ ಸಾಯುವಾಗ ಕೋಟಿಗಟ್ಟಲೆ ಬೆಲೆಬಾಳುವ ಆಸ್ತಿಬಿಟ್ಟು ಹೋದ. ಮೂರು ಹೆಲಿಪ್ಯಾಡ್,  450 ಐಶಾರಾಮಿ ಕೋಣೆಗಳ ಪುಲಿಟ್ಜರ್ ಹೌಸ್, ಅಂದಿನ ಕಾಲಕ್ಕೆ ನ್ಯೂಯಾರ್ಕ್ನಲ್ಲೇ 20 ಮಹಡಿಗಳ ಅತೀ ಎತ್ತರದ ಪುಲಿಟ್ಜರ್ ಬಿಲ್ಡಿಂಗ್ ಇವುಗಳಲ್ಲಿ ಸೇರಿತ್ತು. ಪುಲಿಟ್ಜರ್ ವಿಲ್ ಬರೆದಿಟ್ಟಿದ್ದ ಹಣದಲ್ಲಿ ‘ಕೊಲಂಬಿಯಾ ಸ್ಕೂಲ್ ಆಫ್ ಜರ್ನಲಿಸಂ’ ಮತ್ತು ‘ಪುಲಿಟ್ಜರ್ ಪ್ರಶಸ್ತಿ’ಗಳು ಸ್ಥಾಪನೆಯಾದವು.

ಬಹುಶಃ ಇವತ್ತು ಪೀತ ಪತ್ರಿಕೋದ್ಯಮವನ್ನು ಬಯ್ಯುವವರು ಮೊದಲು ಪುಲಿಟ್ಜರ್ ಸಾಗಿ ಬಂದ ಹಾದಿಯನ್ನೊಮ್ಮೆ ನೋಡಬೇಕಿದೆ. ಅದು ಕನ್ನಡ ಪತ್ರಿಕೋದ್ಯಮದ ಸಾಗುತ್ತಿರುವ ಇವತ್ತಿನ ಕವಲು ಹಾದಿಯಲ್ಲಿ ಅನಿವಾರ್ಯ ಮತ್ತು ಕಲಿಕೆಗೆ ಇರುವ ಅಪೂರ್ವ ಅವಕಾಶ.

Leave a comment

FOOT PRINT

Top