An unconventional News Portal.

ಮಲ್ಯ ವಿರುದ್ಧ ಜಾಮೀನು ರಹಿತ ವಾರೆಂಟ್

ಮಲ್ಯ ವಿರುದ್ಧ ಜಾಮೀನು ರಹಿತ ವಾರೆಂಟ್

ಹಣ ದುರ್ಬಳಕೆ ಸಂಬಂಧ ವಿಚಾರಣೆಗಾಗಿ ಸ್ಥಾಪನೆಗೊಂಡಿರುವ ಮುಂಬೈ ವಿಶೇಷ ನ್ಯಾಯಾಲಯ ಸೋಮವಾರ ಬೆಂಗಳೂರು ಮೂಲದ ಉದ್ಯಮಿ ವಿಜಯ್ ಮಲ್ಯ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ.

ಇದೇ ವೇಳೆ, ಜಾರಿ ನಿರ್ದೇಶನಾಯಲ ಹೊರಿಸಿದ್ದ ಆರೋಪವನ್ನು ಕೈಬಿಡುವಂತೆ ಮಲ್ಯ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಮಲ್ಯಗೆ ಸೇರಿದ್ದ ‘ಕಿಂಗ್ ಫಿಶರ್ ಏರ್‍ಲೈನ್’ ವಿಮಾನಯಾನ ಸಂಸ್ಥೆ ಐಡಿಬಿಐ ಬ್ಯಾಂಕ್‍ನಿಂದ 430 ಕೋಟಿ ಸಾಲ ಪಡೆದು, ವಿದೇಶದಲ್ಲಿ ಹೂಡಿಕೆ ಮಾಡಿದ ಗಂಭೀರ ಆರೋಪವನ್ನು ಜಾರಿ ನಿರ್ದೇಶನಾಲಯ (ಇಡಿ) ಹೊರಿಸಿತ್ತು.

ಇದನ್ನು ಅಲ್ಲಗೆಳೆದ ಮಲ್ಯ ಪರ ವಕೀಲರು ಇಡಿ ಆರೋಪ ‘ಸುಳ್ಳು ಮತ್ತು ಸತ್ಯಕ್ಕೆ ದೂರವಾಗಿದ್ದು’ ಎಂದು ಸಲ್ಲಿಸಿದ್ದ ಅರ್ಜಿಯಲ್ಲಿ ವಾದಿಸಿತ್ತು. ಇದನ್ನು ವಿಚಾರಣೆಗೆ ಕೈಗೆತ್ತಿಕೊಂಡ ವಿಶೇಷ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿದೆ. ಜತೆಗೆ, ವಿಚಾರಣೆಗೆ ಖುದ್ದಾಗಿ ಹಾಜರಾಗದ ಹಿನ್ನೆಲೆಯಲ್ಲಿ, ಜಾಮೀಜು ರಹಿತ ವಾರೆಂಟ್ ಹೊರಡಿಸಿದೆ.

ಮುಂದುವರಿದ ಕಗ್ಗಂಟು:

ವಸೂಲಾಗದ ಸಾಲದ ವಿವರಗಳನ್ನು ಸಲ್ಲಿಸಿವಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಲ್ಲಾ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್‍ಗಳಿಗೆ ಸೂಚನೆ ನೀಡಿತ್ತು. ಹೀಗಾಗಿ, ಬಾಕಿ ಉಳಿಸಿಕೊಂಡಿರುವ ಸುಸ್ತಿದಾರರ ವಿರುದ್ಧ ಬ್ಯಾಂಕ್‍ಗಳು ನೋಟಿಸ್ ಜಾರಿ ಮಾಡಲು ಶುರುಮಾಡಿದ್ದವು. ಈ ಸಮಯದಲ್ಲಿ ಸಾಲ ಪಡೆದು, ತೀರಿಸಲು ಸಾಧ್ಯವಿಲ್ಲ ಎಂದು ‘ಸ್ವಯಂ ದಿವಾಳಿ’ ಘೋಷಿಸಿಕೊಂಡಿದ್ದ ಉದ್ಯಮಿ ವಿಜಯ್ ಮಲ್ಯ ವಿರುದ್ಧ ಎಸ್‍ಬಿಐ ಬ್ಯಾಂಕ್ ನೇತೃತ್ವದಲ್ಲಿ ಬ್ಯಾಂಕುಗಳ ಒಕ್ಕೂಟ ನ್ಯಾಯಾಲಯದ ಮೆಟ್ಟಿಲೇರಿತ್ತು. ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಹಾಗೂ ಹಣ ದುರುಪಯೋಗ ಪ್ರಕರಣದಲ್ಲಿ ಶಿಕ್ಷೆ ನೀಡುವಂತೆ ನ್ಯಾಯಾಲಯದಲ್ಲಿ ಕೋರಿಕೆ ಸಲ್ಲಿಸಿತ್ತು.

ಪ್ರಕರಣ ಕಗ್ಗಂಟಾಗುತ್ತಿದ್ದಂತೆ ಮಾ. 2ರಂದು ವಿಜಯ್ ಮಲ್ಯ ದೇಶ ಬಿಟ್ಟು ಪರಾರಿಯಾಗಿದ್ದರು. ಸದ್ಯ ಲಂಡನ್‍ನಲ್ಲಿ ಇದ್ದಾರೆ ಎಂಬುದು ಗುಮಾನಿ. ಹೀಗಿರುವಾಗಲೇ, ಇಡಿ ಸಲ್ಲಿಸಿದ್ದ ಕೋರಿಕೆ ಮೇರೆಗೆ ರಾಜ್ಯಸಭಾ ಸದಸ್ಯರೂ ಆಗಿರುವ ಮಲ್ಯಗೆ ನೀಡಿದ್ದ ಡಿಪ್ಲೊಮಾಟಿಕ್ ಪಾಸ್‍ಪೋರ್ಟ್ ರದ್ದು ಮಾಡಲು ವಿದೇಶಾಂಗ ಸಚಿವಾಲಯ ಮುಂದಾಗಿದೆ. ಕಳೆದ ವಾರ ಮಲ್ಯ ಪಾಸ್‍ಪೋರ್ಟ್ ಮುಟ್ಟುಗೋಲು ಹಾಕಿಕೊಳ್ಳುವ ಮುಂಚೆ ನೋಟಿಸ್ ನೀಡಿದ್ದು, ಸದ್ಯ ರಹದಾರಿ ಪ್ರಮಾಣ ಪತ್ರವನ್ನು ತಡೆ ಹಿಡಿದಿದೆ.

ಇದೀಗ, ಮುಂಬೈ ವಿಶೇಷ ನ್ಯಾಯಾಲಯವೂ ಜಾಮೀನು ರಹಿತ ವಾರೆಂಟ್ ಹೊರಡಿಸಿರುವುದು ಮಲ್ಯ ಸುತ್ತ ಕಾನೂನಿನ ಹಿಡಿಕೆ ಬಿಗಿಯಾದಂತಾಗಿದೆ. ಮುಂದಿನ ದಿನಗಳಲ್ಲಿ ಮಲ್ಯ, ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಆರೋಪಿ ಎಂದು ಘೋಷಿಸಬಹುದು. ಹಾಗೆಯೇ, ಅವರ ಹಸ್ತಾಂತರಕ್ಕೆ ಪ್ರಕ್ರಿಯೆ ಆರಂಭಿಸಬಹುದು.

Leave a comment

FOOT PRINT

Top