An unconventional News Portal.

ಜನಶ್ರೀಗೆ ಮರುಹುಟ್ಟು: ಹಳೇ ದೋಣಿಗೆ ಅನಂತ ಚಿನಿವಾರ್ ಹುಟ್ಟು!

ಜನಶ್ರೀಗೆ ಮರುಹುಟ್ಟು: ಹಳೇ ದೋಣಿಗೆ ಅನಂತ ಚಿನಿವಾರ್ ಹುಟ್ಟು!

ಕನ್ನಡ ಪತ್ರಿಕೋದ್ಯಮದಲ್ಲಿ ಏನು ಬೇಕಾದರೂ ಸಂಭವಿಸಬಹುದು ಎಂಬುದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ. ಶನಿವಾರ ಜನಶ್ರೀ ಸುದ್ದಿ ವಾಹಿನಿಯ ಹಿರಿಯ ಸಂಪಾದಕರಾಗಿ ಅನಂತ ಚಿನಿವಾರ್ ಹೊಣೆಗಾರಿಕೆ ವಹಿಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ಜನಶ್ರೀ ವಾಹಿನಿಯನ್ನು ಕಟ್ಟಿ, ಸುದ್ದಿ ವಾಹಿನಿಗಳ ಕಾರ್ಯಕ್ರಮಗಳ ವಿಚಾರದಲ್ಲಿ ಬ್ರಾಂಡ್ ಇಮೇಜ್ ತಂದಿದ್ದವರು ಅನಂತ ಚಿನಿವಾರ್. ನಂತರದ ದಿನಗಳಲ್ಲಿ ನಡೆದ ಆಂತರಿಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವಾಹಿನಿಯಿಂದ ತಮ್ಮ ತಂಡದ ಜತೆ 2013ರ ಮಧ್ಯಭಾಗದಲ್ಲಿ ನಿರ್ಗಮಿಸಿದ್ದರು. ಇದೀಗ ಎರಡೂವರೆ ವರ್ಷಗಳ ನಂತರ, ಮತ್ತೆ ಜನಶ್ರೀ ಪರಿವಾರಕ್ಕೆ ಅನಂತ ಚಿನಿವಾರ್ ಮರಳಿದ್ದಾರೆ.

ಪ್ರಬುದ್ಧ ಸಂಪಾದಕ: 

ಸುದ್ದಿ ವಾಹಿನಿಗಳ ಸಂಪಾದಕರ ವಿಚಾರ ಬಂದರೆ ಅನಂತ ಚಿನಾವಾರ್ ಪ್ರಬುದ್ಧರು. ಸ್ವಲ್ಪ ಮೂಡಿ ಎಂಬ ಮಾತುಗಳಿವೆ. ಅದಕ್ಕಿಂತ ಹೆಚ್ಚಾಗಿ ಒಳ್ಳೆಯ ಬರಹಗಾರರು. ಸುಪ್ರಭಾತ ಎಂಬ ವಾಹಿನಿ 90ರ ದಶಕದಲ್ಲಿ ಶುರುವಾದಾಗ ಅದರಲ್ಲಿದ್ದ ಪ್ರಮುಖರಲ್ಲಿ ಅನಂತ ಚಿನಿವಾರ್ ಕೂಡ ಒಬ್ಬರಾಗಿದ್ದರು. ಕಾಲದ ಒತ್ತಡದಲ್ಲಿ ಸುಪ್ರಭಾತ ಕಣ್ಮುಚ್ಚಿತ್ತು. ನಂತರ ಅವರು ಪತ್ರಿಕೋದ್ಯಮದ ಹಲವು ಪ್ರಯೋಗಗಳಲ್ಲಿ ಪಾಲ್ಗೊಂಡರಾದರೂ, ಹೊಸ ತಲೆಮಾರಿಗೆ ಪರಿಚಿತರಾಗಿದ್ದು, ‘ಹಾಯ್ ಬೆಂಗಳೂರು’ ಹಾಗೂ ‘ಓ ಮನಸೇ’ಗಳ ಮೂಲಕ. ಅವುಗಳಲ್ಲಿ ಇವರ ಬರೆಯುತ್ತಿದ್ದ ಅಂಕಣಗಳಿಗೆ ಭಾರಿ ಸಂಖ್ಯೆಯಲ್ಲಿ ಓದುಗ ವಲಯವೂ ಸೃಷ್ಟಿಯಾಗಿತ್ತು. ಮುಂದೆ, ‘ಹಾಯ್ ಬೆಂಗಳೂರು’ ಬಿಟ್ಟ ಚಿನಿವಾರ್, ತಮಿಳುನಾಡು ಮೂಲದ ವಾಹಿನಿಯೊಂದನ್ನು ಕಟ್ಟುವ ಕೆಲಸಕ್ಕೆ ಕೈ ಹಾಕಿದ್ದು 2009ರ ಸುಮಾರಿಗೆ. ಆದರೆ, ಅದು ಪ್ರಯೋಗದ ಹಂತದಲ್ಲಿಯೇ ಕೊನೆಯಾಯಿತು. ಮುಂದೆ, 2011ರಲ್ಲಿ ಜನಾರ್ಧನ ರೆಡ್ಡಿ ನ್ಯೂಸ್ ಚಾನಲ್ ಕಟ್ಟುವ ಪ್ರಕ್ರಿಯೆ ಆರಂಭಿಸಿದಾಗ, ಅದರ ಸಂಪಾದಕೀಯ ಹೊಣೆಯನ್ನು ಹೊತ್ತುಕೊಂಡವರು ಚಿನಿವಾರ್.

ಏಳುಬೀಳುಗಳ ಅಧ್ಯಾಯ:

ಜನಶ್ರೀ ವಾಹಿನಿ ಆರಂಭದಲ್ಲಿ ಅವತ್ತಿನ ನ್ಯೂಸ್ ಚಾನಲ್ಗಳಿಗೆ ಹೋಲಿಸಿದರೆ ಎಲ್ಲಾ ವಿಚಾರಗಳಲ್ಲೂ ಭಿನ್ನವಾಗಿತ್ತು. ಮೂಲಭೂತವಾಗಿ ವಾಹಿನಿಗೆ ದೊಡ್ಡ ಮಟ್ಟದಲ್ಲಿ ಹಣ ಹೂಡಿಕೆಯಾಗಿತ್ತು. ಹಿಂದೆಂದೂ ಕನ್ನಡ ಸುದ್ದಿ ವಾಹಿನಿಗಳು ಕಾಣದ ಹಣದ ಹರಿವು ಅದು. ಅದ್ಭುತವಾಗಿರುವ ಸ್ಟುಡಿಯೋ, ಆಧುನಿಕ ತಂತ್ರಜ್ಞಾನ ಎಲ್ಲವೂ ಸಂಪಾದಕೀಯ ಬಳಗಕ್ಕೆ ಹೊಸ ಅವಕಾಶಗಳ ಸಾಧ್ಯತೆಯನ್ನು ಪರಿಚಯಿಸಿದ್ದವು.

ಅದಕ್ಕೆ ಸರಿಯಾಗಿ ಅನಂತ್ ಚಿನಿವಾರ್ ಅಂಡ್ ಟೀಮು, ಒಳ್ಳೊಳ್ಳೆಯ ಕಾರ್ಯಕ್ರಮಗಳನ್ನು ರೂಪಿಸಿದ್ದರು ಕೂಡ. ಒಂದು ಹಂತದಲ್ಲಿ ವಾಹಿನಿಗೆ ಒಳ್ಳೆಯ ರೇಟಿಂಗ್, ಜನ ಮನ್ನಣೆ ಪ್ರಾಪ್ತವಾಗಿತ್ತು. ಆದರೆ, ಮಾಜಿ ಸಚಿವ, ಚಾನಲ್ ಮಾಲೀಕ ಜನಾರ್ಧನ ರೆಡ್ಡಿ ಚಂಚಲಗುಡ ಜೈಲು ಪಾಲಾಗುವ ಮೂಲಕ ವಾಹಿನಿಯ ಭವಿಷ್ಯ ಡೋಲಾಯಮಾನವಾಯಿತು. ಅವರ ಆಪ್ತ ಶ್ರೀರಾಮುಲು ಬಿಜೆಪಿ ವಿರುದ್ಧ ಸಿಡಿದೆದ್ದು ಪಾದಯಾತ್ರೆ ಶುರು ಮಾಡುತ್ತಿದ್ದಂತೆ, ಜನಶ್ರೀ ಸಂಪೂರ್ಣವಾಗಿ ಮಾಲೀಕರ ಹಿತಾಸಕ್ತಿಗೆ ಕುಣಿಯುವ ದರ್ದಿಗೆ ಬಿತ್ತು. ಸಹಜವಾಗಿಯೇ, ಸಾಮಾಜಿಕ ಮನ್ನಣೆ ಕುಸಿಯತೊಡಗಿತು.

ಹೊರಬಿದ್ದ ತಂಡ:

ಈ ಸಮಯದಲ್ಲಿ ಅನಂತ ಚಿನಿವಾರ್ ಹಾಗೂ ಅವರ ಕೆಲವು ಆಪ್ತರು ‘ಸುವರ್ಣ ವಾಹಿನಿ’ಗೆ ಹೊರಟು ಹೋದರು. ಇತ್ತ ಜನಶ್ರೀ ಎರಡು ಮೂರು ಬಾರಿ ಮ್ಯಾನೇಜ್ಮೆಂಟ್ ಬದಲಾವಣೆ ಗಾಳಿಗೆ ಸಿಕ್ಕಿ ನಲುಗತೊಡಗಿತು. ಕೆಲಸ ಮಾಡುವವರಿಗೆ ಸಂಬಳ ಸಿಗದ ಪರಿಸ್ಥಿತಿ ನಿರ್ಮಾಣವಾಯಿತು. ಒಂದಷ್ಟು ಜನ ಕಾರ್ಮಿಕ ಇಲಾಖೆಯ ಮೆಟ್ಟಿಲೇರಿದರು. ಯಾರೇ ಬಂದರು ಜನಶ್ರೀ ಇನ್ನು ಉದ್ದಾರವಾಗಲ್ಲ ಎಂಬ ಮಾತುಗಳು ಶುರುವಾದವು.

ಇದಕ್ಕೆ ಸಮಾನಾಂತರವಾಗಿ ಅನಂತ ಚಿನಿವಾರ್, ‘ಸುವರ್ಣ’ ಬಿಟ್ಟು ಹೊರಬರುವ ಪರಿಸ್ಥಿತಿ ನಿರ್ಮಾಣವಾಯಿತು. ಆದರೆ, ಅವರ ಆಪ್ತರು ಅಲ್ಲಿಯೇ ಉಳಿದುಕೊಂಡರು. ಒಂದಿಬ್ಬರು ಬೇರೆ ವಾಹಿನಗಳ ಕಡೆ ಮುಖ ಮಾಡಿದರು. ಅನಂತ್ ಚಿನಿವಾರ್ ಮುಂದಿನ ಪ್ರಯೋಗ ನಡೆದಿದ್ದು ಎಚ್. ಆರ್. ರಂಗನಾಥ್ ಅವರ ‘ಪಬ್ಲಿಕ್ ಟಿವಿ’ಯಲ್ಲಿ. ಅಲ್ಲಿಯೂ ಹೆಚ್ಚು ದಿನ ಅವರು ಉಳಿಯಲಿಲ್ಲ. ಹೀಗಿರುವಾಗಲೇ, ಸುವರ್ಣಕ್ಕೆ ಸುಗತ ಶ್ರೀನಿವಾಸರಾಜು ಬಂದರು. ಅವರು ಮತ್ತೆ ಚಿನಿವಾರ್ ಕರೆದು ಹೊಣೆಗಾರಿಕೆ ನೀಡಿದರು. ಆದರೆ, ಅಲ್ಲಿಯೂ ದಿನಗಳ ಲೆಕ್ಕದಲ್ಲಿದ್ದ ಚಿನಿವಾರ್ ಹೊರಬಿದ್ದರು. ಇದೀಗ, ಜನಶ್ರೀಗೆ ಮರಳಿದ್ದಾರೆ.

ಶನಿವಾರ, ಜನಶ್ರೀ ತಂಡದ ಜತೆ ಮಾತನಾಡಿದ ಅವರು, “ಮೊದಲಿನ ಹಾಗೆ ಚಾನಲ್ ಕಟ್ಟಬೇಕಿದೆ. ಎಲ್ಲರೂ ಜತೆಯಾಗಿ ಕೆಲಸ ಮಾಡೋಣ,” ಎಂದಿದ್ದಾರೆ ಎಂಬ ಮಾಹಿತಿ ಇದೆ.

ಜನಶ್ರೀ ಮತ್ತೆ ಹಳೆಯ ದಿನಗಳನ್ನು ಕಾಣಲು ಸಾಧ್ಯವಾಗುತ್ತಾ? ತಮ್ಮದೇ ಒಂದು ಚಾನಲ್ ಕಟ್ಟುವ ಕನಸುಗಳನ್ನು ಅನಂತ್ ಚಿನಿವಾರ್ ಕೈ ಬಿಟ್ಟಿದ್ದಾರಾ? ಅಥವಾ ತಾತ್ಕಾಲಿಕವಾಗಿ ಮುಂದೂಡಿದ್ದಾರಾ? ಇಂತಹ ಹಲವು ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಿರುವುದು ಚಿನಿವಾರ್ ಅವರಿಗೆ ಮಾತ್ರ. ಅವರನ್ನು ಸಂಪರ್ಕಿಸಲು ‘ಸಮಾಚಾರ’ ಪ್ರಯತ್ನಿಸಿತಾದರೂ ಚಿನಿವಾರ್ ಲಭ್ಯರಾಗಲಿಲ್ಲ.

ಎಪಿಲಾಗ್: 

ಈ ವರದಿ ಪ್ರಕಟವಾದ ಬೆನ್ನಲ್ಲೇ, ಅನಂತ್ ಚಿನಿವಾರ್ ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಜನಶ್ರೀ ತಂಡವನ್ನು ಸೇರಿಕೊಂಡಿದ್ದನ್ನು ಸ್ಪಷ್ಟಪಡಿಸಿದ್ದಾರೆ. “ಎರಡು ತಿಂಗಳ ಅವಧಿಗೆ ಸಂಪಾದಕೀಯ ಸಲಹೆಗಾರನಾಗಿ ಜನಶ್ರೀ ಸೇರಿದ್ದೇನೆ. ಕಳೆದ ಒಂದು ವರ್ಷದಿಂದ ಕನಸಿನ ಯೋಜನೆಗಾಗಿ ಕೆಲಸ ಮಾಡುತ್ತಿದ್ದೇನೆ,” ಎಂದು ತಿಳಿಸಿದ್ದಾರೆ. ಸಂಪೂರ್ಣ ವಿವರ ಇಲ್ಲಿದೆ…

ananth-chinivar-post-reaction

Leave a comment

FOOT PRINT

Top