An unconventional News Portal.

ನಾಯಕರಿಲ್ಲದೆ ಬೀದಿಗಿಳಿದ ಮಹಿಳೆಯರು: ನ್ಯಾಯೋಚಿತ ಬೇಡಿಕೆಯನ್ನು ದಿಕ್ಕು ತಪ್ಪಿಸಿದವರು ಯಾರು?

ನಾಯಕರಿಲ್ಲದೆ ಬೀದಿಗಿಳಿದ ಮಹಿಳೆಯರು: ನ್ಯಾಯೋಚಿತ ಬೇಡಿಕೆಯನ್ನು ದಿಕ್ಕು ತಪ್ಪಿಸಿದವರು ಯಾರು?

ನಾಯಕತ್ವವೇ ಇಲ್ಲದೆ ಬೀದಿಗಳಿದ ಗಾರ್ಮೆಂಟ್ಸ್ ಫ್ಯಾಕ್ಟರಿ ನೌಕರರು, ಬೆಂಗಳೂರು- ಹೊಸೂರು ಹೆದ್ದಾರಿ ಬಂದ್, 20 ಕಿ. ಮೀಗೂ ಹೆಚ್ಚು ದೂರ ಟ್ರಾಫಿಕ್ ಜಾಮ್, ಮನವೊಲಿಸಲು ಪೊಲೀಸರ ಹರಸಾಹಸ, ತೂರಿ ಬಂದ ಕಲ್ಲುಗಳು, ಮನಬಂದಂತೆ ಲಾಠಿ ಬೀಸಿದ ಆರಕ್ಷಕರು, ಹಲವರ ಸ್ಥಿತಿ ಗಂಭೀರ, ವಾಹನಗಳು ಜಖಂ…

ಇದು ಸೋಮವಾರ ಬೆಳಗ್ಗೆಯಿಂದ ಸಂಜೆವರೆಗೆ ಬೆಂಗಳೂರಿನ ಬೊಮ್ಮನಹಳ್ಳಿ ಮುಖ್ಯರಸ್ತೆಯಲ್ಲಿ ನಡೆದ ಘಟನಾವಳಿಗಳು. ಕೇಂದ್ರ ಸರಕಾರ ತರಲು ಹೊರಟಿದ್ದ ಪಿಎಫ್ ನೀತಿಗಳ ಬದಲಾವಣೆಗೆ ವಿರೋಧಿಸಿ ಬೆಳಗ್ಗೆ 7 ಗಾರ್ಮೆಂಟ್ಸ್ ಫ್ಯಾಕ್ಟರಿಗಳಿಂದ ಸುಮಾರು 15 ಸಾವಿರಕ್ಕೂ ಅಧಿಕ ನೌಕರರು ಬೇಗೂರು ರಸ್ತೆಯಲ್ಲಿ ಬೀದಿಗಳಿದು ಪ್ರತಿಭಟನೆ ಆರಂಭಿಸಿದರು. ಮೊದಲು ಶಾಸಕ ಸತೀಶ್ ರೆಡ್ಡಿ ಅವರ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಿದರು. ನಂತರ ಮುಖ್ಯ ರಸ್ತೆಗೆ ಬಂದು ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ರಸ್ತೆ ತಡೆ ಆರಂಭಿಸಿದರು.

ಇದರಿಂದಾಗಿ ಬೆಂಗಳೂರು- ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ನಿಂತುಹೋಯಿತು. ಟ್ರಾಫಿಕ್ ಜಾಮ್ ಬೆಳೆಯತೊಡಗಿತು. ಮಧ್ಯಾಹ್ನದ ವೇಳೆ, ಪ್ರತಿಭಟನಾ ನಿರತರ ಜತೆ ಕಡಿಮೆ ಸಂಖ್ಯೆಯಲ್ಲಿದ್ದ ಪೊಲೀಸರು ಮಾತುಕತೆ ಆರಂಭಿಸಿದರಾದರೂ, ಯಾವುದೇ ಪ್ರಯೋಜನವಾಗಲಿಲ್ಲ.

ಕೊನೆಗೆ, ಹೆಚ್ಚಿನ ಪೊಲೀಸರು ಸ್ಥಳಕ್ಕೆ ಬಂದರು. ಈ ಸಮಯದಲ್ಲಿ ಪ್ರತಿಭಟನಾಕಾರರ ನಡುವೆ ಘರ್ಷಣೆ ತಾರಕ್ಕೇರಿ ಲಾಠಿ ಚಾರ್ಜ್ ಆರಂಭವಾಯಿತು. ಈ ಸಮಯದಲ್ಲಿ ಕಲ್ಲು ತೂರಾಟದಿಂದ ಪೊಲೀಸರ ಜೀಪ್ ಸೇರಿದಂತೆ ವಾಹನಗಳು ಜಖಂಗೊಂಡವು. ಹಲವರು ಗಾಯಗೊಂಡರು. ಇಬ್ಬರು ಪೊಲೀಸರಿಗೂ ಘರ್ಷಣೆಯಲ್ಲಿ ಹೊಡೆತ ಬಿದ್ದು, ಆಸ್ಪತ್ರೆಗೆ ಸೇರಿಸಲಾಯಿತು.

ನಾಯಕತ್ವವಿಲ್ಲದ ಪ್ರತಿಭಟನೆ:

ಗಾರ್ಮೆಂರ್ಟ್ಸ್ ಕಾರ್ಮಿಕರ ಜತೆ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಕಾರ್ಮಿಕ ಸಂಘಟನೆಗಳಿಗೇ ಇವತ್ತಿನ ಪ್ರತಿಭಟನೆ ಕುರಿತು ಮಾಹಿತಿ ಇರಲಿಲ್ಲ. ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಪ್ರತಿಭಟನೆ ಆರಂಭಿಸಿದರಾದರೂ, ಅವರಲ್ಲಿ ಪ್ರತಿಭಟನೆಯ ಸ್ಪಷ್ಟತೆ ಇರಲಿಲ್ಲ. “ಪೊಲೀಸರು ಸ್ಥಳಕ್ಕೆ ಬಂದಾಗಲೂ, ತಮ್ಮ ಮನವಿಗಳನ್ನು ಮುಂದಿಡುವ ನಾಯಕತ್ವ ಇರಲಿಲ್ಲ. ಇದೇ ಸಮಯದಲ್ಲಿ ಕಿಡಿಗೇಡಿಗಳೂ ಪ್ರತಿಭಟನೆಯಲ್ಲಿ ತೂರಿಕೊಂಡು ಕಲ್ಲು ತೂರಾಟ ಆರಂಭಿಸಿದರು. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಾಗಲಿಲ್ಲ,” ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ಪಿ. ಹರಿಶೇಖರನ್ ತಿಳಿಸಿದ್ದಾರೆ.

ಮಾಲೀಕರ ಪಿತೂರಿ:

ಕಳೆದ ಕೇಂದ್ರ ಬಜೆಟ್ ಮಂಡನೆ ನಂತರ ದೇಶಾದ್ಯಂತ ಪಿಎಫ್ ವಿಚಾರದಲ್ಲಿ ಕೇಂದ್ರ ಸರಕಾರ ಪ್ರಕಟಿಸಿದ ನಿಲುವುಗಳ ಕುರಿತು ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಮೊದಲು ಪಿಎಫ್ ವಾಪಾಸ್ ಪಡೆದರೆ ಅದರ ಮೇಲೆ ತೆರಿಗೆ ವಿಧಿಸುವುದಾಗಿ ಕೇಂದ್ರ ಸರಕಾರ ಹೇಳಿತು. ನಂತರ ಆ ನಿರ್ಧಾರವನ್ನು ಕೈಬಿಟ್ಟ ಸರಕಾರ, ಪಿಎಫ್ ಪಡೆಯುವಾಗ ಮಾಲೀಕರ ಕಡೆಯಿಂದ ಕಟ್ಟಿದ ಹಣವನ್ನು ನಿವೃತ್ತರಾಗುವವರೆಗೂ ತೆಗೆಯುವಂತಿಲ್ಲ ಎಂದು ಹೇಳಿತು. “ತಳಮಟ್ಟದಲ್ಲಿ ಕಡಿಮೆ ವೇತನ, ಅನಿಶ್ವಿತತೆ ಹಾಗೂ ಅಭದ್ರತೆಗಳ ನಡುವೆ ಬದುಕುತ್ತಿದ್ದ ಗಾರ್ಮೆಂಟ್ಸ್ ನೌಕರರಲ್ಲಿ ಪಿಎಫ್ ಇರುವುದೇ ಇಲ್ಲ ಎಂಬ ಸಂದೇಶ ಹರಿದಾಡಿತು. ಇದು ಅವರಲ್ಲಿ ಸಹಜ ಆತಂಕ ಮೂಡಿಸಿತ್ತು,” ಎನ್ನುತ್ತಾರೆ ಸಿಐಟಿಯು ಉಪಾಧ್ಯಕ್ಷ ಪ್ರಕಾಶ್.

ಇದೇ  ವೇಳೆಯಲ್ಲಿ, ಗಾರ್ಮೆಂಟ್ಸ್ ಮಾಲೀಕರು ಸರಿಯಾಗಿ ಪಿಎಫ್ ಕಟ್ಟುತ್ತಿಲ್ಲ ಎಂಬ ಹಿನ್ನೆಲೆಯಲ್ಲಿ ಇತ್ತೀಚೆಗೆ ಪಿಎಫ್ ಇಲಾಖೆ ಅಧಿಕಾರಿಗಳು ರೈಡ್ಗಳನ್ನು ಮಾಡುತ್ತಿದ್ದರು ಎಂಬ ಮಾಹಿತಿ ಇದೆ. ಇವತ್ತಿನ ಪ್ರತಿಭಟನೆ ಸ್ವರೂಪ ನೋಡಿದರೆ, ಗಾರ್ಮೆಂಟ್ಸ್ ಫ್ಯಾಕ್ಟರಿ ಮಾಲೀಕರೇ ಮಹಿಳೆಯರನ್ನು ಮುಂದಿಟ್ಟುಕೊಂಡು ಪಿಎಫ್ ಇಲಾಖೆ ವಿರುದ್ಧ ನಡೆಸಿದ ಪ್ರತಿಭಟನೆ ಎಂಬ ಅನುಮಾನವನ್ನು ಹತ್ತಿರದಿಂದ ಬೆಳವಣಿಗೆಗಳನ್ನು ಗಮನಿಸಿದವರು ಹೇಳುತ್ತಿದ್ದಾರೆ.

ನ್ಯಾಯೋಚಿತ ಬೇಡಿಕೆ:

“ಪಿಎಫ್ ವಿಚಾರದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ನ್ಯಾಯೋಚಿತವಾಗಿವೆ. ದುಡಿಮೆಯ ಹಕ್ಕನ್ನು (ವರ್ಷದಲ್ಲಿ ಮೂರು ತಿಂಗಳ ಸಂಬಳ) ಪಿಎಫ್ ರೂಪದಲ್ಲಿ ಸಿಕ್ಕರೆ, ಕನಿಷ್ಟ ವೇತನದಲ್ಲಿ ಕೆಲಸ ಮಾಡುವ ನೌಕರರಿಗೆ ನೆರವಾಗುತ್ತದೆ,” ಎನ್ನುತ್ತಾರೆ ಕಾರ್ಮಿಕ ಮುಖಂಡ ಮೀನಾಕ್ಷಿ ಸುಂದರಂ. ಪಿಎಫ್ ವಿಚಾರವಾಗಿ ನೌಕರರಲ್ಲಿ ಹುಟ್ಟಿರುವ ಅಸಹನೆಯನ್ನು ಮಾಲೀಕರು ದಾಳ ಮಾಡಿಕೊಂಡಿರುವ ಸಾಧ್ಯತೆಯನ್ನು ಇವರೂ ಮುಂದಿಡುತ್ತಾರೆ. “ಇದನ್ನು ಮ್ಯಾನೇಜ್ ಮಾಡುವಲ್ಲಿ ಪೊಲೀಸರು ಸೋತಿದ್ದಾರೆ. ಅಮಾಯಕ ಮಹಿಳೆಯರ ಮೇಲೆ ಲಾಠಿ ಎತ್ತಬಾರದಿತ್ತು,” ಎಂದವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

 

Leave a comment

FOOT PRINT

Top