An unconventional News Portal.

ನೀರಿಗಾಗಿ ಹುತಾತ್ಮರಾದ ಲೀಲಾವತಿಯೂ; ಬರ ಕಣ್ಣೆತ್ತಿ ನೋಡದ ಜನಪ್ರತಿನಿಧಿಗಳೂ…

ನೀರಿಗಾಗಿ ಹುತಾತ್ಮರಾದ ಲೀಲಾವತಿಯೂ; ಬರ ಕಣ್ಣೆತ್ತಿ ನೋಡದ ಜನಪ್ರತಿನಿಧಿಗಳೂ…

  • ಕಿರಣ್ ಎಂ. ಗಾಜನೂರು: 

ಬರಗಾಲ ತಾಂಡವವಾಡುತ್ತಿದೆ; ನೀರಿಗಾಗಿ ಜನರ ತತ್ವಾರ ಮುಂದುವರಿದೆ. ಈ ಸಮಯದಲ್ಲಿ, ಇದೇ ನೀರಿನ ಬವಣೆಯನ್ನು ಬದಲಾಯಿಸಲು ಚುನಾವಣೆಗೆ ನಿಂತು, ನೀರು ನೀಡುವುದಾಗಿ ಜನರಿಗೆ ಆಶ್ವಾಸನೆ ಈಡೇರಿಸುವ ಸಲುವಾಗಿ ಸ್ಥಳೀಯ ಟ್ಯಾಂಕರ್ ಮಾಫಿಯಾ ವಿರುದ್ಧ ಹೋರಾಡಿ, ಕೊನೆಗೊಮ್ಮೆ ಜನರಿಗೆ ನೀರು ಒದಗಿಸುವ ಕನಸು ಈಡೇರುವ ಮುನ್ನವೇ ಕೊಲೆಯಾದ ದಿಟ್ಟ ಮಹಿಳೆಯೊಬ್ಬರ ದುರಂತ ಕತೆಯನ್ನ ‘ಸಮಾಚಾರ’ ನಿಮ್ಮ ಮುಂದಿಡುತ್ತಿದೆ.

ಈ ಸ್ಟೋರಿ ಆರಂಭವಾಗುವುದು ತಮಿಳುನಾಡಿನ ಮಧುರೈ ಜಿಲ್ಲೆಯ ವಿಲ್ಲಾಪುರಂ ಎಂಬಲ್ಲಿಂದ. ಹೆಚ್ಚು ಕಡಿಮೆ ನಮ್ಮ ಉತ್ತರ ಕರ್ನಾಟಕದ ಹಳ್ಳಿಗಳನ್ನೇ ಹೋಲುವ ಟಿಪಿಕಲ್ ನಗರಸಭೆ ಅದು. ಅಲ್ಲಿ ಬೇಸಿಗೆ ಬಂತು ಎಂದರೆ ಕುಡಿಯುವ ನೀರಿಗಾಗಿ ಜನರ ಹಾಹಾಕಾರ ಶುರುವಾಗುತ್ತಿತ್ತು. ಇದನ್ನು ಬಳಸಿಕೊಳ್ಳುತ್ತಿದ್ದದ್ದು ಸ್ಥಳೀಯ ಟ್ಯಾಂಕರ್ ಮಾಫಿಯಾ. ಜನರಿಗೆ ಇವರಿಂದ ನೀರನ್ನು ಖರೀದಿಸದೆ ಬೇರೆ ವಿಧಿ ಇಲ್ಲ ಎಂಬಂತಿತ್ತು ಸ್ಥಿತಿ.

ಅಖಾಡಕ್ಕಿಳಿದ ಆಕೆ:

ವಿಲ್ಲಾಪುರಂನಲ್ಲಿ ಎಲ್ಲರಂತೆಯೇ ಸಾಮಾನ್ಯ ಮಹಿಳೆಯಾಗಿದ್ದವರು ಲೀಲಾವತಿ. ಮನೆಯಲ್ಲಿ ನೇಯ್ಗೆ ಕೆಲಸ ಮಾಡುತ್ತಿದ್ದರು. ಗಂಡ ಕುಪ್ಪುಸ್ವಾಮಿ ಸ್ಟೀಲ್ ಪಾತ್ರೆಗಳನ್ನು ತಳ್ಳುವ ಗಾಡಿಯಲ್ಲಿ ಮಾರಾಟ ಮಾಡುತ್ತಿದ್ದರು. ದಂಪತಿಗೆ ಮೂವರು ಹೆಣ್ಣು ಮಕ್ಕಳು. ಒಂದು ಕೋಣೆಯ ಪುಟ್ಟ ಮನೆ. ಅಲ್ಲಿಯೇ ನೇಯ್ಗೆ ಕೆಲಸ, ಅಡುಗೆ, ತುಂಬು ಸಂಸಾರ.

ದಿನವಿಡೀ ಕಷ್ಟಪಟ್ಟರೆ ದುಡಿಮೆ ಕೈಗೆ, ಬಾಯಿಗೆ ಸಾಕು ಎಂಬಂತಿತ್ತು ಸ್ಥಿತಿ. ಇದು ಅಲ್ಲಿನ ಬಹುತೇಕ ಮನೆಗಳ ಆರ್ಥಿಕ ಸ್ಥಿತಿ ಕೂಡ. ಹೀಗಿರುವಾಗ, ನೀರಿಗೂ ಹಣ ಕಕ್ಕಬೇಕು; ಟ್ಯಾಂಕರ್ ಮಾಫಿಯಾಗೆ ದುಡಿಮೆ ಬಹುಪಾಲು ತೆರಬೇಕು ಎಂಬ ಸ್ಥಿತಿಯ ವಿರುದ್ಧ ಜನರ ಸಹಜ ಆಕ್ರೋಶ ವ್ಯಕ್ತವಾಗುತ್ತಿತ್ತು. ಲೀಲಾವತಿ ಕೂಡ ಪರಿಸ್ಥಿತಿಯ ಬಗ್ಗೆ ಗೊಣಗಿಕೊಂಡಿದ್ದವರಲ್ಲಿ ಒಬ್ಬರು.

ಈ ಸಮಯದಲ್ಲಿ ದೇಶದ ಸ್ಥಳೀಯ ಸರಕಾರಗಳಲ್ಲಿ ಮಹತ್ವದ ಬದಲಾವಣೆಗೆ ಸಂವಿಧಾನದ ತಿದ್ದುಪಡಿ ಮುನ್ನುಡಿ ಬರೆಯಿತು. ಸ್ಥಳೀಯ ಆಡಳಿತದಲ್ಲಿ ಶೇ. 33ರಷ್ಟು ಮಹಿಳೆಯರಿಗೆ ಮೀಸಲಾತಿ ಜಾರಿಗೆ ಬಂತು. 1996ರದಲ್ಲಿ ನಡೆದ ಚುನಾವಣೆಯಲ್ಲಿ ಲೀಲಾವತಿ ವಿಲ್ಲಾಪುರದ 59ನೇ ವಾರ್ಡ್ನಿಂದ ಸ್ಪರ್ಧೆ ಇಳಿದರು. ಊರಿನ ಜನರಿಗೆ ಶಾಶ್ವತ ನೀರಿನ ಸೌಕರ್ಯ ಒದಗಿಸುವುದು ಅವರ ಚುನಾವಣೆಯ ಆಶ್ವಾಸನೆಯಾಗಿತ್ತು. ಜನ ಮರು ಯೋಚನೆ ಮಾಡದೆ ಲೀಲಾವತಿಯವರನ್ನು ಗೆಲ್ಲಿಸಿ ನಗರಸಭೆಗೆ ಕಳುಹಿಸಿದರು.

ಹೋರಾಟಕ್ಕೆ ಬಲ:

ನೆಲದ ಆಕ್ರೋಶಗಳನ್ನು ಹೊಂದಿದ್ದ ಲೀಲಾವತಿ, ಜನಪ್ರತಿನಿಧಿಯೂ ಆಗಿದ್ದರಿಂದ ಟ್ಯಾಂಟರ್ ಮಾಫಿಯಾ ವಿರುದ್ಧದ ಅವರ ಹೋರಾಟಕ್ಕೆ ಇನ್ನಷ್ಟು ಬಲ ಬಂತು. ನಗರಸಭೆ ಒಳಗೆ ಹಾಗೂ ಬೀದಿಗಳಲ್ಲಿ ತಮ್ಮ ಬೇಡಿಕೆ ಮುಂದಿಟ್ಟು ಹೋರಾಟ ರೂಪಿಸಿದರು. ಇದಕ್ಕೆ ರಾಜ್ಯಾದ್ಯಂತ ಬೆಂಬಲವೂ ವ್ಯಕ್ತವಾಯಿತು. ಕೊನೆಗೆ, ಲೀಲಾವತಿ ಅವರ ಕನಸಿನ ಶಾಶ್ವತ ಕುಡಿಯುವ ನೀರಿನ ಯೋಜನೆ ಜಾರಿಗೆ ಬಂತು. ಅದು, 1997 ರ ಏಪ್ರಿಲ್ 23 ನೇ ತಾರೀಖು. ಲೀಲಾವತಿ ಅವರ ಹೋರಾಟದ ಫಲವಾಗಿ ನೀರಿನ ಯೋಜನೆಗೆ ಚಾಲನೆ ನೀಡುವುದಕ್ಕೆ ಮೂರು ದಿನ ಬಾಕಿ ಇತ್ತು.

ಹುತಾತ್ಮರಾದರು:

ಲೀಲಾವತಿಯವರ ಪ್ರಾಮಾಣಿಕ ಜನಪರ ನಿಲುವುಗಳಿಂದ ಸಮಸ್ಯೆಗೆ ಒಳಗಾಗಿದ್ದು ಸ್ಥಳೀಯ ಟ್ಯಾಂಕರ್ ಮಾಫಿಯಾ ಮುನ್ನಡೆಸುತ್ತಿದ್ದ ಕುಳಗಳು. ನೀರಿನ ಯೋಜನೆ ಜಾರಿಗೆ ಮೂರು ದಿನ ಇರುವಾಗಲೇ ಅವರನ್ನು ನಡು ಬೀದಿಯಲ್ಲಿ ಕೊಚ್ಚಿ ಕೊಲ್ಲಲಾಯಿತು. ಸಾಮಾನ್ಯ ಹೆಂಗಸೊಬ್ಬಳು ವ್ಯವಸ್ಥೆ ವಿರುದ್ಧ ಹೋರಾಡಿ, ಇನ್ನೇನು ನ್ಯಾಯ ದಾಖಲಿಸುವ ಹೊಸ್ತಿಲಲ್ಲಿ ಈ ಹತ್ಯೆ ನಡೆದು ಹೋಗಿತ್ತು. ವಿಲ್ಲಾಪುರಂ ಜನರಿಗಾಗಿ ಜನಪ್ರತಿನಿಧಿಯೊಬ್ಬರು ಹುತಾತ್ಮರಾಗಿದ್ದರು.

ಇವರ ಹತ್ಯೆ ಕುರಿತು ತಮಿಳುನಾಡಿನಾದ್ಯಂತ ಆಕ್ರೋಶ ವ್ಯಕ್ತವಾಯಿತು. ಪ್ರಕರಣದ ತನಿಖೆ ನಡೆದು ಆರೋಪಿಗಳಿಗೆ ಜೀವಾವಧಿ ಶಿಕ್ಷೆಯೂ ಆಯಿತು. ಇವತ್ತಿಗೂ ಸ್ಥಳೀಯ ಸಂಸ್ಥೆಗಳ ವಿಚಾರ ಬಂದಾಗ ಇಡೀ ದೇಶದಲ್ಲಿ ಲೀಲಾವತಿ ಅವರ ವ್ಯಕ್ತಿತ್ವ ಚರ್ಚೆಗೆ, ಅಧ್ಯಯನಕ್ಕೆ ಯೋಗ್ಯ ವಿಷಯ ಎಂದು ಪರಿಗಣಿಸಲ್ಪಡುತ್ತಿದೆ.

ಉತ್ತರ ಕರ್ನಾಟಕದ ಬರ ನಿರ್ವಹಣೆಯಲ್ಲಿ ನಮ್ಮ ಜನಪ್ರತಿನಿಧಿಗಳ ಸೋಗಲಾಡಿತನಗಳನ್ನು ನೋಡುತ್ತಿದ್ದರೆ, ಲೀಲಾವತಿ ಅವಂತರಹ ವ್ಯಕ್ತಿತ್ವ ಇವರಲ್ಲಿ ಏಕೆ ಕಾಣಿಸುವುದಿಲ್ಲ ಎಂಬ ಕೊರಗು ಕಾಡುತ್ತದೆ…

(ಲೇಖಕರು ಕುವೆಂಪು ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದಲ್ಲಿ ಪೋಸ್ಟ್ ಡಾಕ್ಟೊರಲ್‌ ಫೆಲೊ) 

 

Leave a comment

FOOT PRINT

Top