An unconventional News Portal.

ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ: ಪ್ರತಿಷ್ಠಿತ ಕಾಲೇಜುಗಳ ಮೇಲೆ ದಾಳಿ

ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ: ಪ್ರತಿಷ್ಠಿತ ಕಾಲೇಜುಗಳ ಮೇಲೆ ದಾಳಿ

ಪಿಯುಸಿ ಕೆಮಿಸ್ಟ್ರಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ಪ್ರತಿಷ್ಠಿತ ಕಾಲೇಜುಗಳ ಅಂಗಳಕ್ಕೆ ಬಂದು ನಿಂತಿದೆ.

ಪ್ರಶ್ನೆ ಪತ್ರಿಕೆ ಸೋರಿಕೆ ಜಾಲದ ಹಿಂದೆ ಪ್ರತಿಷ್ಠಿತ ಕಾಲೇಜುಗಳು ಇರುವುದು ಅನುಮಾನದ ಮೇಲೆ ಸಿಐಡಿ ಪೊಲೀಸರು ಶುಕ್ರವಾರ ದಾಳಿ ನಡೆಸಿದ್ದಾರೆ. ಸಿಐಡಿ ಡಿಐಜಿ ಸೋನಿಯಾ ನಾರಂಗ್ ನೇತೃತ್ವದಲ್ಲಿ ಬೆಂಗಳೂರು, ಮಂಗಳೂರು, ತುಮಕೂರು, ಬಳ್ಳಾರಿಗಳಲ್ಲಿ ಏಕಕಾಲಕ್ಕೆ ಸಿಐಡಿ ಪೊಲೀಸರ 11 ತಂಡಗಳು ದಾಳಿ ನಡೆಸಿವೆ.

ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿರುವ ನಾರಾಯಣ ಹಾಗೂ ಚೈತನ್ಯ ಪಿಯು ಕಾಲೇಜು, ಯಲಹಂಕದ ದೀಕ್ಷಾ ಕಾಲೇಜು, ಕೆಂಪಾಪುರದಲ್ಲಿರುವ ಪ್ರೆಸಿಡೆನ್ಸಿ ಕಾಲೇಜು, ಸಂಜಯನಗರದಲ್ಲಿರುವ ಬೃಂದಾವನ ಕಾಲೇಜು, ಕಲ್ಯಾಣ ನಗರದಲ್ಲಿರುವ ರಾಯಲ್ ಕನ್‍ಕರ್ಡ್ ಕಾಲೇಜು, ಮಂಗಳೂರಿನಲ್ಲಿ ಎಕ್ಸಪರ್ಟ್ ಹಾಗೂ ಮಹೇಶ್ ಪಿಯು ಕಾಲೇಜುಗಳ ಮೇಲೆ ದಾಳಿಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.

“ಮಂಗಳೂರು ಮೂಲದ ಕಾಲೇಜೊಂದರಲ್ಲಿ ಹಿಂದಿನಿಂದಲೂ ಪಿಯು ಪರೀಕ್ಷೆಗಾಗಿ 5 ಮಾದಿ ಪ್ರಶ್ನೆಗಳನ್ನು ನೀಡಲಾಗುತ್ತಿತ್ತು. ಇವುಗಳಲ್ಲಿ ಒಂದು ಪಿಯು ಮಂಡಳಿ ನೀಡುವ ಅಂತಿಮ ಪ್ರಶ್ನೆ ಪತ್ರಿಕೆಯೇ ಆಗಿರುತ್ತಿತ್ತು,” ಎಂಬ ಮಾಹಿತಿಯನ್ನು ದಕ್ಷಿಣ ಕನ್ನಡ ಮೂಲದ ವಿದ್ಯಾರ್ಥಿಯೊಬ್ಬರು ‘ಸಮಾಚಾರ’ಕ್ಕೆ ತಿಳಿಸಿದ್ದಾರೆ.

 

ಈಗಾಗಲೇ ಪ್ರಕರಣ ಸಂಬಂಧ ಬಂಧನಗಳು ನಡೆಯುತ್ತಿವೆ. ಪ್ರಶ್ನೆ ಪತ್ರಿಕೆ ಜಾಲದಲ್ಲಿ ಆರೋಪಿಗಳ ಜತೆ ಕಾಲೇಜುಗಳು ನೇರ ಸಂಪರ್ಕವನ್ನು ಇಟ್ಟುಕೊಂಡಿರುವ ಕುರಿತು ಸಿಐಡಿ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ನಡೆದ ದಾಳಿಗಳಲ್ಲಿ ಮಹತ್ವದ ದಾಖಲೆಗಳು ಲಭ್ಯವಾಗಿವೆ ಎಂಬ ಮಾಹಿತಿ ಇದೆ.

Leave a comment

FOOT PRINT

Top