An unconventional News Portal.

ಶುರುವಾಗದ ಪಿಯು ಮೌಲ್ಯಮಾಪನ: ಪರ್ಯಾಯ ನಿಜಕ್ಕೂ ಇದ್ಯಾ?

ಶುರುವಾಗದ ಪಿಯು ಮೌಲ್ಯಮಾಪನ: ಪರ್ಯಾಯ ನಿಜಕ್ಕೂ ಇದ್ಯಾ?

ಪಿಯುಸಿ ಮೌಲ್ಯಮಾಪನ ಗೊಂದಲ ರಾಮನವಮಿಗೂ ಅಂತ್ಯಕಾಣುವ ಲಕ್ಷಣ ಶುಕ್ರವಾರ ಇಡೀ ದಿನ ಗೋಚರಿಸಲಿಲ್ಲ.

ಗುರುವಾರ ಮೌಲ್ಯಮಾಪನ ಶುರುಮಾಡಿಯೇ ಬಿಡುತ್ತೀವಿ, ನಮ್ಮ ಬಳಿ ಪರ್ಯಾಯ ವ್ಯವಸ್ಥೆ ಇದೆ ಎಂದಿದ್ದ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರ ಮಾತುಗಳು ಹೇಳಿಕೆಯಾಗಿಯೇ ಉಳಿಯಿತು. ಅತ್ತ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನಾ ನಿರತ ಉಪನ್ಯಾಸಕರು ಮತ್ತು ಪ್ರಾಂಶುಪಾಲರು ಧರಣಿ, ಉಪವಾಸ ಸತ್ಯಾಗ್ರಹ ಮುಂದುವರಿಸಿದ್ದಾರೆ. ಹೇಗೇ ನೋಡಿದರೂ ಈ ವರ್ಷದ ಪಿಯುಸಿ ಫಲಿತಾಂಶ ಮೇ ಮೊದಲ ವಾರದಲ್ಲಿ ಪ್ರಕಟವಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಒಂದು ಕಡೆ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಸುಖಾಸುಮ್ಮನೆ ಒತ್ತಡಕ್ಕೆ ಒಳಗಾಗಿದ್ದ ಪಿಯುಸಿ ವಿದ್ಯಾರ್ಥಿಗಳಿಗೆ ಇದೀಗ ಮುಂದನ ಶೈಕ್ಷಣಿಕ ಪ್ರಗತಿಗೆ ಫಲಿತಾಂಶ ಕೂಡ ಗೊಂದಲ ಉಂಟುಮಾಡಲಿದೆ.

ಪರ್ಯಾಯದ ಹೇಳಿಕೆ:

ಪಿಯುಸಿ ಉಪನ್ಯಾಸಕರು ವರ್ಷ ವರ್ಷವೂ ತಮ್ಮ ವೇತನ ಬೇಡಿಕೆ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಲೇ ಬಂದಿದ್ದರು. ಆದರೆ, ಈ ಬಾರಿ ಅವರು ಪಟ್ಟು ಹಿಡಿದು ಕುಳಿತಿದ್ದಾರೆ. ಸಿಎಂ ಸಿದ್ದರಾಮಯ್ಯ, ಸಚಿವ ಕಿಮ್ಮನೆ ರತ್ನಾಕರ್ ಹಲವು ಸುತ್ತಿನ ಮಾತುಕತೆ ನಡೆಸಿದರಾದರೂ ಪ್ರತಿಭಟನಾನಿರತರು ಮಧ್ಯದ ಪರಿಹಾರಕ್ಕೆ ಒಪ್ಪಲಿಲ್ಲ. ಜತೆಗೆ, ಅವರು ಸರಕಾರ ನೀರುವ ಭರವಸೆ ಬಗ್ಗೆ ವಿಶ್ವಾಸವನ್ನೂ ಕಳೆದುಕೊಂಡಿದ್ದಾರೆ. ಇಂತಹ ಸಮಯದಲ್ಲಿ ಮೌಲ್ಯ ಮಾಪನ ಪ್ರಕ್ರಿಯೆಗೆ ಯಾವುದೇ ತೊಂದರೆಯಾಗದಂತೆ ಅನುದಾನ ರಹಿತ ಕಾಲೇಜುಗಳ ಉಪನ್ಯಾಸಕರನ್ನು ಬಳಸಿಕೊಳ್ಳಲಾಗುವುದು ಎಂದು ಗುರುವಾರ ಶಿಕ್ಷಣ ಸಚಿವರು ಹೇಳಿದ್ದರು. ಆದರೆ, ಶುಕ್ರವಾರ ಸಂಜೆವರೆಗೂ ಮೌಲ್ಯ ಮಾಪನ ಪ್ರಕ್ರಿಯೆಗಳು ಆರಂಭಗೊಳ್ಳಲಿಲ್ಲ. ಇದು ಸರಕಾರದ ಬಳಿ ನಿಜಕ್ಕೂ ಪರ್ಯಾಯ ವ್ಯವಸ್ಥೆ ಇದೆಯಾ ಎಂಬ ಅನುಮಾನವನ್ನೂ ಹುಟ್ಟು ಹಾಕಿದೆ.

ಫಲಿತಾಂಶ ವಿಳಂಬ:

ಗೊಂದಲ ಹೀಗೆ ಮುಂದುವರಿದರೆ ಮೇ ಮೊದಲ ವಾರದಲ್ಲಿ, ಕನಿಷ್ಠ ಸಿಇಟಿ ಪರೀಕ್ಷೆ ನಂತರವೂ ಫಲಿತಾಂಶ ಪ್ರಕಟವಾಗುವ ಭರವಸೆ ಇಲ್ಲ. “ಪ್ರಶ್ನೆ ಪತ್ರಿಕೆಗಳ ಕೋಡಿಂಗ್, ಡಿ- ಕೋಡಿಂಗ್ ಶುರುಮಾಡಿದರೆ 2 ದಿನ ಅದಕ್ಕೇ ಬೇಕಾಗುತ್ತದೆ. ನಂತರ 15 ದಿನ ಪ್ರಶ್ನೆ ಪತ್ರಿಕೆಗಳ ಮೌಲ್ಯ ಮಾಪನಕ್ಕೆ ಹಿಡಿಯುತ್ತದೆ. ನಂತರ ಫಲಿತಾಂಶ ಪ್ರಕಟಿಸಿವು ಪ್ರಕ್ರಿಯೆಗಳಿಗೆ 2-3 ದಿನ ಬೇಕಾಗಬಹುದು. ಹೀಗಾಗಿ, ಶನಿವಾರ ಮೌಲ್ಯಮಾಪನ ಪ್ರಕ್ರಿಯೆ ಆರಂಭಗೊಂಡರೂ, ಫಲಿತಾಂಶ ಪ್ರಕಟಗೊಳ್ಳಲು ಕನಿಷ್ಟ 20 ದಿನ ಬೇಕಾಗುತ್ತದೆ,” ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

ವಿದ್ಯಾರ್ಥಿಗಳಿಗೆ ಸಂಕಷ್ಟ:

“ಈ ಬಾರಿಯ ಪಿಯುಸಿ ಫಲಿತಾಂಶ ವಿಳಂಭಗೊಂಡರೆ ಮುಂದಿನ ಶೈಕ್ಷಣಿಕ ಆಯ್ಕೆಗಳಿಗೆ ವಿದ್ಯಾರ್ಥಿಗಳಿಗೆ ಸಮಯ ಕಡಿಮೆ ಸಿಗುತ್ತದೆ. ಜತೆಗೆ, ಹೊರಗಿನ ವಿಶ್ವವಿದ್ಯಾನಿಲಯಗಳ ದಾಖಲಾತಿ ಪ್ರಕ್ರಿಯೆ ಶುರುವಾಗಿರುತ್ತದೆ. ಇದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತದೆ,” ಎನ್ನುತ್ತಾರೆ ಶಿಕ್ಷಣ ತಜ್ಞರು.

ಒಟ್ಟಿನಲ್ಲಿ, ಸರಕಾರ ಮತ್ತು ಉಪನ್ಯಾಸಕರ ನಡುವಿನ ಹಗ್ಗ ಜಗ್ಗಾಟದಲ್ಲಿ ಪಿಯುಸಿ ವಿದ್ಯಾರ್ಥಿಗಳ ಸಂಕಷ್ಟ ಮುಂದುವರಿಯಲಿದೆ.

Leave a comment

FOOT PRINT

Top