An unconventional News Portal.

ಅಧಿಕಾರ ಸ್ವೀಕರಿಸಿ ಮೋದಿ, ಅಂಬೇಡ್ಕರ್ ನೆನೆದ ಯಡಿಯೂರಪ್ಪ

ಅಧಿಕಾರ ಸ್ವೀಕರಿಸಿ ಮೋದಿ, ಅಂಬೇಡ್ಕರ್ ನೆನೆದ ಯಡಿಯೂರಪ್ಪ

ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಗುರುವಾರ ಬೆಳಗ್ಗೆ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.

ಈ ಹಿಂದಿನ ರಾಜ್ಯಾಧ್ಯಕ್ಷರಾಗಿದ್ದ ಪ್ರಹ್ಲಾದ್ ಜೋಷಿ ಅವರು ಪಕ್ಷದ ಧ್ವಜವನ್ನು ನೀಡುವ ಮೂಲಕ ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಈ ಮೂಲಕ ನಾಲ್ಕನೆಯ ಬಾರಿಗೆ ಯಡಿಯೂರಪ್ಪ ಅವರು ನಾಲ್ಕನೇ ಬಾರಿ ಕರ್ನಾಟಕದಲ್ಲಿ ಪಕ್ಷದ ಹೊಣೆ ಹೊತ್ತುಕೊಂಡಂತಾಗಿದೆ.

ವಿಧಾನಸೌಧದ ಮುಂಭಾಗದಲ್ಲಿರುವ ಡಾ. ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಯಡಿಯೂರಪ್ಪನವರು ಅಲ್ಲಿಂದ ನೇರವಾಗಿ ಪಕ್ಷದ ಕಚೇರಿಗೆ ತೆರಳಿ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಹಾಗೂ ಸಂಸದ ಪಿ.ಸಿ. ಮೋಹನ್, ಮಾಜಿ ಸಚಿವ ನಾರಾಯಣಸ್ವಾಮಿ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿದರು.

ಅಧಿಕಾರ ಸ್ವೀಕರಿಸಿದ ಬಳಿಕ ಕಚೇರಿಯಲ್ಲಿರುವ ಸಂವಿಧಾನ ಶಿಲ್ಪಿ ಬಿ. ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿ “ಇಂದು ದೇಶಾದ್ಯಂತ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಗುತ್ತಿದೆ, ಪ್ರಧಾನಿ ನರೇಂದ್ರ ಮೋದಿ ಅಂಬೇಡ್ಕರ್ ವಿಚಾರ ಧಾರೆ ಬಿತ್ತುತ್ತಿದ್ದಾರೆ. ಇಂತಹ ಸುಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಾಗಿ ಅಧಿಕಾರ ಸ್ವೀಕರಿಸುತ್ತಿರುವುದು ಸಂತೋಷದ ವಿಚಾರ,” ಎಂದರು.

ತಮ್ಮ ನೆಚ್ಚಿನ ನಾಯಕರ ಅಧಿಕಾರ ಸ್ವೀಕರಿಸುವ ಸಂತಷದ ಕ್ಷಣವನ್ನು ಕಣ್ತುಂಬಿಸಿಕೊಳ್ಳಲು ಕಚೇರಿ ಒಳಗೆ ಮತ್ತು ಹೊರಗೆ ನೆರೆದಿದ್ದ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.ಅಧಿಕಾರ ಸ್ವೀಕರಿಸುವುದಕ್ಕೂ ಮುನ್ನ ಯಡಿಯೂರಪ್ಪನವರು ಶೇಷಾದ್ರಿಪುರಂನಲ್ಲಿರುವ ರಾಯರ ಮಠಕ್ಕೆ ತೆರಳಿ ಆಶೀರ್ವಾದವನ್ನು ಪಡೆದುಕೊಂಡರು.

ಕೇಂದ್ರ ಸಚಿವ ಅನಂತ ಕುಮಾರ್, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಆರ್. ಅಶೋಕ್, ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Leave a comment

FOOT PRINT

Top