An unconventional News Portal.

ಪಾಸ್ಪೋರ್ಟ್ ಮುಟ್ಟುಗೋಲಿಗೆ ಇಡಿ ಪತ್ರ: ಮಲ್ಯ ಸುತ್ತ ಬಿಗಿಯಾಗುತ್ತಿವ ಬಲೆ

ಪಾಸ್ಪೋರ್ಟ್ ಮುಟ್ಟುಗೋಲಿಗೆ ಇಡಿ ಪತ್ರ: ಮಲ್ಯ ಸುತ್ತ ಬಿಗಿಯಾಗುತ್ತಿವ ಬಲೆ

ಸಾಲ ತೀರಿಸಲಾಗದೆ ದೇಶ ಬಿಟ್ಟು ಲಂಡನ್ ಸೇರಿಕೊಂಡಿರುವ ಬೆಂಗಳೂರು ಮೂಲದ ಉದ್ಯಮಿ ವಿಜಯ್ ಮಲ್ಯ ಪಾಸ್ ಪೋರ್ಟ್ ಮುಟ್ಟುಗೋಲು ಹಾಕಿಕೊಳ್ಳಲು ಜಾರಿ ನಿರ್ದೇಶನಾಲಯ ಪತ್ರ ಬರೆದಿದೆ.

ಐಡಿಬಿಐ ಬ್ಯಾಂಕ್ ಸಾಲ ಮರುಪಾವತಿ ಮಾಡದ ಪ್ರಕರಣದಲ್ಲಿ, ವಿದೇಶಾಂಗ ಇಲಾಖೆಗೆ ಪತ್ರ ಬರೆದಿರುವ ಜಾರಿ ನಿರ್ದೇಶನಾಲಯ (ಇಡಿ), ಪಾರ್ಸ್ಪೋರ್ಟ್ ಕಾಯ್ದೆ, 1967ರ ಅನ್ವಯ, ಮಲ್ಯ ದಾಖಲೆಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಕೋರಿದೆ. ತನಿಖೆಗೆ ಸಹಕಾರ ನೀಡದ ಹಿನ್ನೆಲೆಯಲ್ಲಿ ಈ ಕ್ರಮ ಅನಿವಾರ್ಯ ಎಂದು ಇಡಿ ಪತ್ರದಲ್ಲಿ ತಿಳಿಸಿದೆ.

ಸಾಲ ಮರುಪಾವತಿ ಪ್ರಕರಣ ಬೆಳೆಯುತ್ತಿದ್ದಂತೆ ಮಾ. 2ರಂದು ವಿಜಯ್ ಮಲ್ಯ ದೇಶ ಬಿಟ್ಟು ಹೋಗಿದ್ದರು. ಅವರು ರಾಜ್ಯಸಭಾ ಸದಸ್ಯರಾಗಿದ್ದ ಹಿನ್ನೆಲೆಯಲ್ಲಿ ವಿತರಿಸಿದ್ದ ವಿಶೇಷ ಪಾಸ್ ಪೋರ್ಟ್ ಬಳಸಿಕೊಂಡಿದ್ದರು. ಇದಾದ ನಂತರ ಮೂರು ಬಾರಿ ಸಮನ್ಸ್ ಜಾರಿ ಮಾಡಿದರೂ, ಮಲ್ಯ ವಿಚಾರಣೆಗೆ ಹಾಜರಾಗಿರಲಿಲ್ಲ. ಇದನ್ನು ಪತ್ರದಲ್ಲಿ ನಮೋದಿಸಿರುವ ಇಡಿ, ‘ಮಲ್ಯ ಸಹಕಾರ ನೀಡದ ಹಿನ್ನೆಲೆಯಲ್ಲಿ ತನಿಖೆಯಲ್ಲಿ ಪ್ರಗತಿ ಕಾಣುತ್ತಿಲ್ಲ’ ಎಂದು ದೂರಿದೆ.

‘ಇಡಿಯ ಮನವಿಯನ್ನು ಅಂಗೀಕರಿಸಿರುವ ವಿದೇಶಾಂಗ ಇಲಾಖೆ ಪ್ರಕ್ರಿಯೆಗಳನ್ನು ಆರಂಭಿಸಿದೆ. ಸದ್ಯದಲ್ಲಿಯೇ ಯುಕೆ ಅಧಿಕಾರಿಗಳಿಗೆ ಮಲ್ಯ ಅವರನ್ನು ದೇಶದಿಂದ ಹೊರಹಾಕುವಂತೆ ಮನವಿ ಸಲ್ಲಿಸಲಾಗುವುದು’ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಐಡಿಬಿಐ ಬ್ಯಾಂಕ್ ಮಲ್ಯಗೆ ಸುಮಾರು 900 ಕೋಟಿ ಸಾಲ ನೀಡಿತ್ತು. ಇದನ್ನು ಮರು ಪಾವತಿ ಮಾಡಲು ಮಲ್ಯ ವಿಫಲರಾದ ಹಿನ್ನೆಲೆಯಲ್ಲಿ ಹಣ ದುರುಪಯೋಗ ಕಾಯ್ದೆ ಅಡಿ ಪ್ರಕರಣವನ್ನು ದಾಖಲಿಸಲಾಗಿತ್ತು.

 

 

ಮಾ. 18, ಏ. 2 ಹಾಗೂ ಏ 9ರಂದು ಮಲ್ಯ ವಿಚಾರಣೆಗೆ ದಿನಾಂಕ ನಿಗದಿ ಮಾಡಲಾಗಿತ್ತು. ಆದರೆ, ಮೂರೂ ಬಾರಿಯೂ ಮಲ್ಯ ಗೈರು ಹಾಜರಾಗಿದ್ದರು. ಈ ಸಮಯದಲ್ಲಿ, ಮಲ್ಯ ಪರ ವಕೀಲರು ವಿಚಾರಣೆಗೆ ಹಾಜರಾಗಿ ಸಮಜಾಯಿಷಿ ನೀಡಿದ್ದರು. “ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವುದರಿಂದ ಮಲ್ಯ ಹಾಜರಾತಿ ಅನಿವಾರ್ಯ,” ಎಂದು ಇಡಿ ಅಧಿಕಾರಿಗಳು ವಾದಿಸಿದ್ದರು.

ಒಂದು ವೇಳೆ, ಪಾಸ್ಪೋರ್ಟ್ ಮುಟ್ಟುಗೋಲು ಹಾಕಿಕೊಂಡರೆ, ಮಲ್ಯ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸುವಂತೆ ಕೋರಲು ಇಡಿಗೆ ಬಲ ಬಂದಂತಾಗುತ್ತದೆ. ಅದೇ ವೇಳೆ, ಇಂಟರ್ ಪೂಲ್ ಮೂಕಲ ಮಲ್ಯ ವಿರುದ್ಧ ‘ರೆಡ್ ಕಾರ್ನರ್’ ನೋಟಿಸ್ ಜಾರಿಗೊಳಿಸಬಹುದಾಗಿದೆ.

ಇದರ ನಡುವೆ, ಏ. 21ರೊಳಗೆ ಮಲ್ಯ ತಮ್ಮ ಹಾಗೂ ಕುಟುಂಬದ ಆಸ್ತಿಗಳ ಸಂಪೂರ್ಣ ವಿವರನ್ನು ಸಲ್ಲಿಸುವಂತೆ ಸುಪ್ರಿಂ ಕೋರ್ಟ್ ಆದೇಶಿಸಿದೆ. ಒಟ್ಟಾರೆ, ದೇಶ ಬಿಟ್ಟು ಹೋದರೂ, ಮಲ್ಯ ಸುತ್ತ ಹಣ ದುರುಪಯೋಗದ ಪ್ರಕರಣ ದಿನದಿಂದ ದಿನಕ್ಕೆ ಬಿಗಿಯಾಗುತ್ತಿದೆ. ಇದು ಮುಂದಿನ ದಿನಗಳಲ್ಲಿ ಮಲ್ಯ ಸ್ಥಿತಿ ಏನಾಗಲಿದೆ ಎಂಬ ಕುತೂಹಲ ಮೂಡಿಸಿದೆ.

Leave a comment

FOOT PRINT

Top