An unconventional News Portal.

ಕುರ್ಚಿ ಬಿಕ್ಕಟ್ಟನ್ನು ಪಾರು ಮಾಡಿತು ಬರ; ಸಮಾನ ಮನಸ್ಕರರಿಗೆ ಸಿಗಲಿಲ್ಲ ವರ!

ಕುರ್ಚಿ ಬಿಕ್ಕಟ್ಟನ್ನು ಪಾರು ಮಾಡಿತು ಬರ; ಸಮಾನ ಮನಸ್ಕರರಿಗೆ ಸಿಗಲಿಲ್ಲ ವರ!

ಬುಧವಾರ ಮುಂಜಾನೆಯಿಂದ ಬೆಂಗಳೂರಿನ ಹೃದಯ ಭಾಗದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳು ಸಂಜೆ ಹೊತ್ತಿಗೆ ಸ್ಪಷ್ಟಗೊಂಡಿವೆ.

ರಾಜ್ಯಾಡಳಿತದ ಉನ್ನತ ಸ್ಥಾನದಲ್ಲಿರುವ ಸಿಎಂ ಸಿದ್ದರಾಮಯ್ಯ ಪಕ್ಷದೊಳಗಿನ ಆಂತರಿಕ ಬೆಳವಣಿಗೆಗಳನ್ನು ಮೀರಿ ಇನ್ನಷ್ಟು ದಿನ ತಮ್ಮ ಸ್ಥಾನದಲ್ಲಿ ಅಬಾಧಿತವಾಗಿ ಮುಂದುವರಿಯಲಿದ್ದಾರೆ. ಆದರೆ ತಲೆಯ ಮೇಲೆ ‘ನಾವು ಕರೆಯುವವರೆಗೂ ದಿಲ್ಲಿಯ ಕಡೆ ತಲೆ ಹಾಕಬೇಡಿ’ ಎಂಬ ಹೈಕಮಾಂಡ್ ಸಂದೇಶದ ತೂಗುಗತ್ತಿ ನೇತಾಡಲು ಶುರುವಾಗಿದೆ. ‘ಸಮಾನ ಮನಸ್ಕರು’ ಎಂಬ ಬ್ಯಾನರ್ ಅಡಿಯಲ್ಲಿ ಸಂಘಟಿತರಾಗಿದ್ದ ಶಾಸಕರ ಒಳಗುದಿ ಮುಂದಿವರಿಯಲಿದೆ. ಎಂಎಲ್ಸಿಗಳಿಗೂ ಸಚಿವ ಸ್ಥಾನ ನೀಡಬೇಕು ಎಂಬ ಬೇಡಿಕೆ, ಬೇಡಿಕೆಯಾಗಿಯೇ ಉಳಿಯಲಿದೆ. ಒಟ್ಟಾರೆಯಾಗಿ, ನಾನಾ ಆಯಾಮಗಳಲ್ಲಿ ಚರ್ಚೆಗೆ ಅನುವು ಮಾಡಿಕೊಟ್ಟಿದ್ದ ಇತ್ತೀಚಿನ ಆಡಳಿತ ಪಕ್ಷದೊಳಗಿನ ಎಲ್ಲಾ ಬೆಳವಣಿಗೆಗಳಿಗೆ ತಾತ್ಕಾಲಿಕ ಬ್ರೇಕ್ ಬಿದ್ದಿದೆ. ಇಷ್ಟಕ್ಕೆಲ್ಲಾ ಕಾರಣವಾಗಿದ್ದು ರಾಜ್ಯ ಉಸ್ತುವಾರಿ ಹೊತ್ತುಕೊಂಡಿರುವ ದಿಗ್ವಿಜಯ್ ಸಿಂಗ್ ಭೇಟಿ.

ಇಂದು ಬೆಳಗ್ಗೆ ಬೆಂಗಳೂರಿಗೆ ಆಗಮಿಸಿದ ಅವರು ಕುಮಾರಕೃಪಾದಲ್ಲಿ ಸಮಾನ ಮನಸ್ಕ ಶಾಸಕರನ್ನು ಭೇಟಿ ಮಾಡಿದರು. ಅವರ ಬೇಡಿಕೆಗಳಿಗೆ ಕಿವಿಯಾದರು. ಕೊನೆಗೆ, ‘ಮೊದಲು ಬರದ ಬಗ್ಗೆ ಗಮನ ನೀಡಿ’ ಎಂದು ಕಿವಿಮಾತು ಹೇಳಿದರು. ನಂತರದ ಸರದಿ ಎಂಎಲ್ಸಿಗಳದ್ದು. 28 ವಿಧಾನ ಪರಿಷತ್ ಸದಸ್ಯರು, ತಮಗೂ ಎಸ್. ಎಂ. ಕೃಷ್ಣಾ ಅವರ ಸಂಪುಟದ ಮಾದರಿಯಲ್ಲಿ ಸಚಿವ ಸ್ಥಾನದ ಅವಕಾಶ ನೀಡಿ ಎಂಬ ಬೇಡಿಕೆ  ಮುಂದಿಟ್ಟರು. ಅವರಿಗೂ ಬರದ ಹಿನ್ನೆಲೆಯಲ್ಲಿ ನಿರೀಕ್ಷಿತ ಉತ್ತರ ಸಿಕ್ಕಿತು. ಕೊನೆಗೆ, ಮುಖ್ಯಮಂತ್ರಿಗಳ ನಿವಾಸದಲ್ಲಿ ಸಿಎಂ ಭೇಟಿ ಮಾಡಿದ ದಿಗ್ವಿಜಯ್ ಸಿಂಗ್, ‘ಸದ್ಯ ಎಲ್ಲವನ್ನೂ ಪಕ್ಕಕ್ಕಿಟ್ಟು ಬರ ಪರಿಸ್ಥಿತಿಗಳ ಗಮನ ಹರಿಸಿ’ ಎಂದರು. ಜತೆಗೆ, ”ಸದ್ಯ ದಿಲ್ಲಿಗೆ ಬರುವ ಅಗತ್ಯವಿಲ್ಲ. ನಾವು ಹೇಳಿ ಕಳುಹಿಸಿದ ನಂತರ ಬನ್ನಿ,” ಎಂದರು. ಅಲ್ಲಿಗೆ, ರಾಜ್ಯ ಆಡಳಿತದಲ್ಲಿ ನಾಯಕತ್ವ ಬದಲಾವಣೆ, ಸಂಪುಟ ಪುನರಾಚನೆ ವಿಚಾರಗಳು ಪುಟಿದೆದ್ದಷ್ಟೆ ವೇಗವಾಗಿ ಕಮರಿ ಹೋದಂತಾಯಿತು.

ಸನ್ನಿವೇಶಗಳ ಪಾತ್ರ:

ಕಳೆದ ಮೂರು ವರ್ಷಗಳ ಅಂತರದಲ್ಲಿ ರಾಜ್ಯದಲ್ಲಿ ಅಧಿಕಾರ ಸ್ವೀಕರಿಸಿದ ಸಿಎಂ ಸಿದ್ದರಾಮಯ್ಯ ಅವರ ಬದಲಾವಣೆ ವಿಚಾರ ಅನೇಕ ಬಾರಿ ಮುನ್ನಲೆಗೆ ಬಂದಿದೆ. ಆದರೆ, ಪ್ರತಿ ಸಾರಿಯೂ ಒಂದಿಲ್ಲೊಂದು ಸನ್ನಿವೇಶ ಅವರನ್ನು ರಕ್ಷಿಸುತ್ತಿದೆ. ಈ ಬಾರಿ ಸಿಎಂ ವಿರುದ್ಧ ದಿಕ್ಕಿನಲ್ಲಿದ್ದವರ ಆಲೋಚನೆಗಳಿಗೆ ತೊಡಕಾಗಿದ್ದು ಕೂಡ ಬರದ ಸನ್ನಿವೇಶ. ಉತ್ತರ ಕರ್ನಾಟಕದ ನಾನಾ ಜಿಲ್ಲೆಗಳಲ್ಲಿ ಬರದ ತೀವ್ರತೆ ಹೆಚ್ಚಿದೆ. ಜನ, ಜಾನುವಾರುಗಳು ನೀರಿನ ಕೊರತೆಯಿಂದ ನಲುಗಿ ಹೋಗಿದ್ದಾರೆ. ಹೀಗಿರುವಾಗ, ರಾಜ್ಯಾಡಳಿತದಲ್ಲಿ ಮಹತ್ವದ ಬದಲಾವಣೆ ಕಷ್ಟ ಎಂದು ಸಹಜವಾಗಿಯೇ ಹೈಕಮಾಂಡ್ ಅನ್ನಿಸಿದೆ.

ಹೈಕಮಾಂಡ್ ಒತ್ತಡಗಳು:

ಸದ್ಯದ ಸ್ಥಿತಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಐದು ರಾಜ್ಯಗಳ ಚುನಾವಣೆ ಒತ್ತಡದಲ್ಲಿದೆ. ಅದಕ್ಕಿಂತ ಹೆಚ್ಚಾಗಿ, ಇಡೀ ದೇಶದಲ್ಲಿ ಪಕ್ಷ ಬಲ ಕಳೆದುಕೊಂಡಿರುವ ಸಮಯದಲ್ಲಿ ಕರ್ನಾಟಕದಲ್ಲಿ ಅಧಿಕಾರದಲ್ಲಿರುವುದು ಎಲ್ಲಾ ರೀತಿಯಲ್ಲೂ ಕಾಂಗ್ರೆಸ್ ದಿಲ್ಲಿ ನಾಯಕರಿಗೆ ಬಲ ನೀಡುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಈ ವಿಚಾರದಲ್ಲಿ ಕರ್ನಾಟಕದಿಂದ ಯಾವುದೇ ಸಮಸ್ಯೆಯಾಗಿಲ್ಲ. ಇದರ ಜತೆಗೆ, ಕಾಂಗ್ರೆಸ್ ಹಿರಿಯ ನಾಯಕರಾದ ಎಸ್. ಎಂ. ಕೃಷ್ಣಾ ಹಾಗೂ ಮಲ್ಲಿಕಾರ್ಜುನ ಖರ್ಗೆ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಲು ಸಿದ್ಧರಿಲ್ಲ ಎಂದು ಮೂಲಗಳು ಹೇಳುತ್ತವೆ. ಹೀಗಿರುವಾಗ, ಹೈಕಮಾಂಡ್ ಬಳಿ ಪರ್ಯಾಯ ಇಲ್ಲ. ಇದೂ ಕೂಡ ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿ ಎಲ್ಲಾ ಬಿಕ್ಕಟ್ಟುಗಳನ್ನು ಮೀರಿ ಮುಂದುವರಿಯಲು ಸಹಾಯ ಮಾಡುತ್ತಿದೆ.

ತೂಗುಗತ್ತಿ ವಿಚಾರ:

ಇದರ ನಡುವೆಯೇ, ಬುಧವಾರ ದಿಗ್ವಿಜಯ್ ಸಿಂಗ್, ಸಿಎಂ ಸಿದ್ದರಾಮಯ್ಯ ಅವರಿಗೆ ಹೇಳಿದ ‘ಕರೆದಾಗ ದಿಲ್ಲಿಗೆ ಬನ್ನಿ’ ಎಂಬ ವಿಚಾರವನ್ನು ಗಮನಿಸಬೇಕಿದೆ. ಇದು ಎರಡು ರೀತಿಯಲ್ಲಿ ಧ್ವನಿಸುತ್ತಿದೆ ಎನ್ನುತ್ತಾರೆ ಹಿರಿಯ ರಾಜಕೀಯ ವರದಿಗಾರರು. ಒಂದು; ಏನೂ ಆಗಲ್ಲ, ನಾನು ದಿಲ್ಲಿಯ ಸನ್ನಿವೇಶಗಳನ್ನು ನಿಭಾಯಿಸುತ್ತೇನೆ ಎಂಬುದು. ಮತ್ತೊಂದು, ಬದಲಾವಣೆಗಳ ಬಗ್ಗೆ ತೀರ್ಮಾನ ಮಾಡಿದರೆ, ಹೇಳಿ ಕಳುಹಿಸುತ್ತೇವೆ ಎಂಬುದು. ಇಂತಹ ಸಾಧ್ಯತೆಗಳ ಆಚೆಗೂ ಇಂದು ನಡೆದ ರಾಜಕೀಯ ಬೆಳವಣಿಗೆಗಳು ಸದ್ಯದ ಮಟ್ಟಿಗಂತೂ ಸಿಎಂ ಸಿದ್ದರಾಮಯ್ಯ ಅವರಿಗೆ ನಿರಾಳತೆಯನ್ನು ಮೂಡಿಸಿರುವುದು ಸ್ಪಷ್ಟ.

ಬರ ಕಳೆದು, ಇಳೆಗೆ ಮಳೆ ಬಿದ್ದು ನಂತರ ವಾತಾವರಣ ಹೇಗೆ ಬದಲಾಗಬಹುದು ಎಂಬದನ್ನು ಕಾದು ನೋಡಬೇಕಿದೆ.

Leave a comment

FOOT PRINT

Top