An unconventional News Portal.

ಕಡಿಸಿಕೊಂಡಲ್ಲೇ ಹುಡುಕುವ ಮೂಲಕ ಉದ್ಯಮಿಯಾದ 11ರ ಪೋರಿ!

ಕಡಿಸಿಕೊಂಡಲ್ಲೇ ಹುಡುಕುವ ಮೂಲಕ ಉದ್ಯಮಿಯಾದ 11ರ ಪೋರಿ!

ಹನ್ನೊಂದರ ಹರೆಯ ಅಂದರೆ ಅದಿನ್ನೂ ಶಾಲೆ, ಆಟ ತುಂಟಾಟ ಅಂತ ಸಮಯ ಕಳೆಯುವ ವಯಸ್ಸು. ಆದ್ರೆ ಮಿಕಾಯ್ಲಾ ಉಲ್ಮರ್ ಎಂಬ ಪೋರಿ ಈ ಎಳೆ ಮಯಸ್ಸಿನಲ್ಲಿ ಮಾಡುತ್ತಿರುವ ಸಾಧನೆ ಮಾತ್ರ ವಯಸ್ಸನ್ನೂ ಮೀರಿದ್ದು. ಶಾಲೆಯಿಂದ ಬಂದು ಟ್ಯೂಷನ್, ಹೊಂ ವರ್ಕ್ ಅಂತಾ ಕಾಲ ಕಳೆಯಬೇಕಿದ್ದ ಇವಳು ಈಗ ಸ್ವಂತ ಉದ್ಯಮವೊಂದನ್ನು ನಡೆಸುತ್ತಿದ್ದಾಳೆ.

 

1940 ರಿಂದ ಉಲ್ಮರ್ ಅಜ್ಜಿ ಲಿಂಬೆ ಹಾಗೂ ಜೇನಿನಿಂದ ವಿಶಿಷ್ಟವಾದ ಜೇನನ್ನು ತಯಾರಿಸುತ್ತಿದ್ದರು. ತಮ್ಮ ಕುಟುಂಬದ ಭಾಗವೇ ಎಂಬಂತಿದ್ದ  ಈ ಉತ್ಪನ್ನವನ್ನು ಮಿಕಾಯ್ಲಾ ಉಲ್ಮರ್ ಹೊಸ ಉದ್ಯಮವನ್ನಾಗಿ ಪರಿವರ್ತಿಸಿದ್ದಾಳೆ. ಜೇನಿನ ವಿಶಿಷ್ಠವಾದ ಉತ್ಪನ್ನವನ್ನು ಮಾರುಕಟ್ಟೆಗೆ ತಂದು ಈಗ ಅಮೆರಿಕದಾದ್ಯಂತ ಸುದ್ದಿಯಲ್ಲಿದ್ದಾಳೆ ಈ ಬಾಲೆ. ಈ ರೆಸಿಪಿಗೆ ಮಿಕಾಯ್ಲಾ ಉಲ್ಮರ್ ‘ಬೀ ಸ್ವೀಟ್’ ಎಂದು ಹೆಸರಿಟ್ಟಿದ್ದಾಳೆ.

ಈ ‘ಬೀ ಸ್ವೀಟ್’ ಉತ್ಪನ್ನವೀಗ ಅಮೆರಿಕಾದ ಖ್ಯಾತ ಸೂಪರ್ ಮಾರ್ಕೆಟ್ ಗಳು ಸೇರಿದಂತೆ ಅನೇಕ ಅಂಗಡಿಗಳಲ್ಲಿ ಮಾರಾಟ ಮಾಡಲಾಗ್ತಿದೆ. ಹೀಗಾಗಿ ಈ ಉದ್ಯಮವೀಗ  ಅಮೆರಿಕಾದಲ್ಲಿ ಅಭಿವೃದ್ಧಿ ಹೊಂದುತ್ತಿರುವ ಉದ್ಯಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮಿಕಾಯ್ಲಾ ಉಲ್ಮರ್ ‘ಬೀ ಸ್ವೀಟ್’ ಅನ್ನು ತಯಾರಿಸಿರುವ ಹಿಂದೆಯೂ ಒಂದು ಕುತೂಹಲಕಾರಿ ಕಥೆಯೊಂದಿದೆ. ಉಲ್ಮರ್ ನಾಲ್ಕು ವರ್ಷದವಳಿದ್ದಾಗ, ಒಂದೇ ವಾರದಲ್ಲಿ ಎರಡು ಬಾರಿ ಜೇನು ನೊಣಗಳಿಂದ ಕಚ್ಚಿಸಿಕೊಂಡಳಂತೆ. ಇದರಿಂದಾಗಿ ಆಕೆ ಗಂಭೀರವಾಗಿ ಗಾಯಗೊಂಡಿದ್ದಳು . ಅಲ್ಲದೆ ಜೇನು ನೊಣಗಳನ್ನು ಕಂಡರೆ ಭಯಗೊಳ್ಳಲು ಆರಂಭಿಸಿದ್ದಳು. ಹೀಗಾಗಿ ಜೇನುನೊಣಗಳ ಮೇಲೆ ಇವಳಿಗಿರುವ ಭಯವನ್ನು ಹೋಗಲಾಡಿಸಲು ಹಾಗೂ ಜೇನು ನೊಣಗಳ ಬಗ್ಗೆ ಆಸಕ್ತಿಯನ್ನು ಉಂಟುಮಾಡಲು ಆ ಪುಟ್ಟ ಬಾಲೆಯಿಂದ ಸಣ್ಣ ಸಣ್ಣ ಸಂಶೋಧನೆಗಳನ್ನು ಮಾಡಿಸಿದರು ಆಕೆಯ ಪೋಷಕರು. ಆದರೆ ಅದು ಈಕೆ ಜೀವನದಲ್ಲಿ ಬಹುದೊಡ್ಡ ಪರಿಣಾಮ ಬೀರಿತು.

mikaila_and_dad_shark_tank_c2015_american_broadcasting_companies_inc_f13a827825e488f3d9c6e82b85aaf9fa.nbcnews-ux-2880-1000

ಜೇನು ಕಡಿದ ಘಟನೆ ನನ್ನ ಜೀವದಲ್ಲಿ ಮಹತ್ವದ ಬದಲಾವಣೆಯನ್ನು ತಂದಿತು. ನಂತರದ ದಿನಗಳಲ್ಲಿ ಜೇನಿನ ಮೂಲಕ ನನ್ನ ಅಜ್ಜಿ ತಯಾರಿ ಮಾಡುತ್ತಿದ್ದ ಈ ಖಾದ್ಯಕ್ಕೆ ದೊಡ್ಡ ಮಾರುಕಟ್ಟೆ ಕಂಡುಕೊಳ್ಳವ ಬಗ್ಗೆ ಯೋಚಿಸಲು ಆರಂಭಿಸಿದೆ ಎನ್ನುತ್ತಾಳೆ ಮಿಕೈಲಾ ಉಲ್ಮರ್.

ಉಲ್ಮರ್ ತನ್ನ ‘ಬೀ ಸ್ವೀಟ್’ ಉತ್ಪನ್ನದೊಂದಿಗೆ ಅಳಿವಿನಂಚಿನಲ್ಲಿರುವ ಜೇನು ಹುಳಗಳ ರಕ್ಷಣೆಯನ್ನು ಮಾಡುತ್ತಿದ್ದಾಳೆ. ಜೇನು ಹುಳಗಳು ತಯಾರಿಸಿರುವ ಜೇನುಗಳಲ್ಲಿ ಮೂರನೇ ಒಂದು ಭಾಗವನ್ನು ಮಾತ್ರ ನಮ್ಮ ಉಪಯೋಗಕ್ಕೆ ಬಳಸಿಕೊಳ್ಳಬೇಕು. ಇಲ್ಲವಾದರೆ ಅವುಗಳು ನಾಶವಾಗುತ್ತವೆ ಎಂಬುದನ್ನು ತಾನು ಕಂಡುಕೊಂಡಿರುವ ಸಂಶೋಧನೆಯಿಂದ ತಿಳಿದುಕೊಂಡಿದ್ದಾಳೆ.

ಉಲ್ಮರ್ ಹಲವಾರು ಯುವ ಉದ್ಯಮಶೀಲ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾಳೆ. ಶಾರ್ಕ್ ಟ್ಯಾಂಕ್ ಎಂಬ ಕಂಪನಿಯ ಸ್ಫರ್ಧೆಯಲ್ಲಿ ಭಾಗವಹಿಸಿ 60,000 ಡಾಲರ್ ವ್ಯವಹಾರ ಮತ್ತು ಕಂಪನಿಯ 25 ಶೇಕಡಾ ಶೇರನ್ನು ತನ್ನದಾಗಿಸಿಕೊಂಡಿದ್ದಾಳೆ.

 

ಮಿಕಾಯ್ಲಾ ಉಲ್ಮರ್ ಈಗ ಕೇವಲ ಉದ್ಯಮಿ ಅಂತ ಮಾತ್ರ ಗುರುತಿಸಿಕೊಂಡಿಲ್ಲ. ತಾನೊಬ್ಬಳು ವಾಗ್ಮಿಯಾಗಿಯೂ ಸುದ್ದಿಯಾಗುತ್ತಿದ್ದಾರೆ. ತನ್ನ ಉತ್ಪನ್ನಗಳಲ್ಲಿ ಇನ್ನಷ್ಟು ಸಂಶೋಧನೆಗಳನ್ನು ಮಾಡುತ್ತ ವಿಶ್ವ ಮಾರುಕಟ್ಟೆಗೆ ಲಗ್ಗೆಯಿಡಲು ಈ ಬಾಲ ಉದ್ಯಮಿ ಕಾತರಳಾಗಿದ್ದಾಳೆ. ಮುಂದೊಂದಿನ ನಮ್ಮನೆ ಪಕ್ಕದ ಸೂಪರ್ ಮಾರ್ಕೆಟ್ನಲ್ಲಿಯೂ ಈ ‘ಬೀ ಸ್ವೀಟ್ಸ್’ ಹನಿ ಕಣ್ಣಿಗೆ ಬಿದ್ದರೆ, ಈ ಪೋರಿಯನ್ನು ನೆನಪು ಮಾಡಿಕೊಳ್ಳಿ.

Leave a comment

FOOT PRINT

Top