An unconventional News Portal.

ಪಟಾಕಿ ಸಿಡಿಸುವ ಆಚರಣೆ ದುರಂತಕ್ಕೆ ಕಾರಣ: ದೇವಸ್ಥಾನದ ಆಡಳಿತ ಮಂಡಳಿ ವಿರುದ್ಧ ಕ್ರಮ

ಪಟಾಕಿ ಸಿಡಿಸುವ ಆಚರಣೆ ದುರಂತಕ್ಕೆ ಕಾರಣ: ದೇವಸ್ಥಾನದ ಆಡಳಿತ ಮಂಡಳಿ ವಿರುದ್ಧ ಕ್ರಮ

ನವ ವಸಂತವನ್ನು ಸ್ವಾಗತಿಸಲೆಂದು ದೇವಸ್ಥಾನಕ್ಕೆ ಬಂದ 102 ಜನ ಅಗ್ನಿ ದುರಂತದಲ್ಲಿ ಸಾವನ್ನಪ್ಪಿ, 350ಕ್ಕೂ ಹೆಚ್ಚು ಜನ ಗಾಯಗೊಂಡ ಘಟನೆ ಭಾನುವಾರ ಕೇರಳದಲ್ಲಿ ನಡೆದಿದೆ.

ಇಲ್ಲಿನ ಕೊಲ್ಲಂನ ಪರವೂರ್ ಪುಟ್ಟಿಂಗಲ್ ದೇವಿ ದೇವಸ್ಥಾನದಲ್ಲಿ ಇಂದು ಮುಂಜಾನೆ ಭೀಕರ ದುರಂತ ಸಂಭವಿಸಿದೆ. ಹೊಸ ವರ್ಷವನ್ನು ಬರಮಾಡಿಕೊಳ್ಳಲು ದೇವಸ್ಥಾನದಲ್ಲಿ ಸುಡುಮದ್ದು ಪ್ರದರ್ಶನ ಏರ್ಪಡಿಸಲಾಗಿತ್ತು. ಇದೇ ಘಟನೆಗೆ ಕಾರಣ ಎಂದು ಪ್ರಾಥಮಿಕ ಮಾಹಿತಿ ಹೇಳುತ್ತಿವೆ.

ನಿನ್ನೆ ಮಧ್ಯರಾತ್ರಿ 10 ಸಾವಿರಕ್ಕೂ ಅಧಿಕ ಭಕ್ತ ಜನ ಪುಟ್ಟಿಂಗಲ್ ದೇವಿ ದೇವಸ್ಥಾನಕ್ಕೆ ಆಗಮಿಸಿದ್ದರು. ಹೊಸ ವರ್ಷವನ್ನು ಬರಮಾಡಿಕೊಳ್ಳುವ ಸುಡುಮದ್ದು ಪ್ರದರ್ಶನ ಮಧ್ಯರಾತ್ರಿಯಿಂದ ಆರಂಭವಾಗಿತ್ತು.

ದುರಂತ ವರದಿಯಾಗುತ್ತಿದ್ದಂತೆ ಸ್ಥಳಕ್ಕೆ ಕೇರಳ ಮುಖ್ಯಮಂತ್ರಿ ಒಮ್ಮನ್ ಚಾಂಡಿ ಧಾವಿಸಿದ್ದಾರೆ. ಈ ಕುರಿತು ನರೇಂದ್ರ ಮೋದಿ ಟ್ವೀಟ್ ಮಾಡಿದ್ದು, ‘ಹೃದಯ ವಿದ್ರಾವಕ’, ‘ಶಬ್ದದಿಂದ ವಿವರಿಸಲಾಗದಷ್ಟು ಅಘಾತಕಾರಿ’ ಎಂದಿದ್ದಾರೆ. ಆರೋಗ್ಯ ಸಚಿವ ಜೆ.ಪಿ ನಡ್ಡಾರಿಗೆ ತಕ್ಷಣ ಸ್ಥಳಕ್ಕೆ ತೆರಳುವಂತೆ ಸೂಚಿಸಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸರಕಾರ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿದೆ.

ಪ್ರತ್ಯಕ್ಷದರ್ಶಿ ಮಾಹಿತಿ

“ಮಧ್ಯರಾತ್ರಿ ಪ್ರದರ್ಶನ ಆರಂಭವಾಗಿತ್ತು. ಇನ್ನೇನು ಕೊನೆಗೊಳ್ಳಬೇಕು ಎಂದಾಗ ಪ್ರದರ್ಶನ ಸ್ಥಳದಿಂದ ಹಾರಿದ ಸ್ಪೋಟಕವೊಂದು ಹೋಗಿ ಇನ್ನೊಂದು ಕಟ್ಟಡದ ಮೇಲೆ ಬಿದ್ದಿತು. ಆ ಕಟ್ಟಡದಲ್ಲಿ ಮತ್ತಷ್ಟು ಸ್ಪೋಟಕಗಳಿದ್ದವು. ಈ ಸ್ಪೋಟಕಗಳಿಗೆ ಬೆಂಕಿ ತಗುಲುತ್ತಿದ್ದಂತೆ ಭಾರೀ ಸ್ಫೋಟ ಕಾಣಿಸಿಕೊಂಡಿತು. ಇದರಿಂದ ಗಾಬರಿಗೊಂಡ ಜನ ಓಡಲಾರಂಭಿಸಿದರು,” ಎಂದು ಘಟನೆ ಕುರಿತು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ಈ ಸ್ಪೋಟಕಗಳು ಎಷ್ಟು ಶಕ್ತಿಶಾಲಿಯಾಗಿದ್ದವು ಎಂದರೆ ದೇವಸ್ಥಾನದ ಒಂದು ಭಾಗವೇ ಕುಸಿದಿದೆ. ಬುಲ್ಡೋಜರ್ ಗಳು ಕುಸಿದ ಭಾಗವನ್ನು ತೆರವು ಮಾಡುತ್ತಿವೆ. ಇದರ ಅಡಿಯಲ್ಲಿ ಜನ ಸಿಲುಕಿಕೊಂಡಿದ್ದರು.

ಗಾಯಾಳುಗಳನ್ನು ಕೊಲ್ಲಂ ಆಸ್ಪತ್ರೆಗೆ ಮತ್ತು 70 ಕಿ. ಮೀ ದೂರದಲ್ಲಿರುವ ರಾಜಧಾನಿ ತಿರುವನಂತಪುರಂನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ

ಕೇರಳದಲ್ಲಿ ವಿಧಾನಸಭೆ ಚುನಾವಣೆಯ ಪ್ರಚಾರ ನಡೆಯುತ್ತಿದ್ದು, ಮುಖ್ಯಮಂತ್ರಿ ಒಮ್ಮನ್ ಚಾಂಡಿ ಇವತ್ತು ಪ್ರಚಾರ ಸಭೆಗಳನ್ನು ಆಯೋಜಿಸಿದ್ದರು. ಘಟನೆ ಹಿನ್ನೆಲೆಯಲ್ಲಿ ಅವರು ತಮ್ಮ ಪ್ರವಾಸಗಳನ್ನು ರದ್ದುಪಡಿಸಿದ್ದಾರೆ.

“ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಪೂರ್ತಿ ಮುಗಿದಿದೆ. ಸರಕಾರದ ಮುಂದಿನ ಗುರಿ ಗಾಯಾಳುಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡುವುದು” ಎಂದವರು ಪ್ರತಿಕ್ರಿಯಿಸಿದ್ದಾರೆ.

“ಆಸ್ಪತ್ರೆಗಳಿಂದ ವರದಿಗಳು ಬರುತ್ತಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಸಾಧ್ಯತೆಗಳಿವೆ. ಇದೊಂದು ಕಲ್ಪಿಸಲು ಸಾಧ್ಯವಿಲ್ಲದ ಘಟನೆ ಮತ್ತು ಎಚ್ಚೆತ್ತುಕೊಳ್ಳಬೇಕಾದ ಘಟನೆ,” ಎಂದು ಚಾಂಡಿ ಹೇಳಿದ್ದಾರೆ.

“ಸಂಬಂಧಿಕರ ಬೇಡಿಕೆಗೆ ತಕ್ಕಂತೆ ಗಾಯಾಳುಗಳಿಗೆ ಚಿಕಿತ್ಸೆ ನೀಡಲಿದ್ದೇವೆ. ರಾಜ್ಯದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ, ಗಾಯಾಳುಗಳಿಗೆ ಹೆಚ್ಚಿನ ಚಿಕಿತ್ಸೆಗೆ ಎಲ್ಲಾ ಸಹಾಯ ನೀಡಲು ಅನುವು ಮಾಡಿಕೊಡುವಂತೆ ಚುನಾವಣಾಧಿಕಾರಿಗೆ ಪತ್ರ ಬರೆಯುವಂತೆ  ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದೇನೆ,” ಎಂದು ಅವರು ಹೇಳಿದರು.

“ಇದೊಂದು ಪ್ರಮುಖ ದುರಂತ. ಸಂತ್ರಸ್ತರಿಗೆ ಎಲ್ಲಾ ಸಹಕಾರಗಳನ್ನೂ ನೀಡಲು ನಾವು ಚುನಾವಣಾ ಆಯೋಗದೊಂದಿಗೆ ಸಂಪರ್ಕದಲ್ಲಿದ್ದೇವೆ. ಉನ್ನತ ಮಟ್ಟದ ತನಿಖೆಗೆ ಸದ್ಯದಲ್ಲೇ ಆದೇಶ ನೀಡಲಾಗುವುದು,” ಎಂದು ಗೃಹ ಮಂತ್ರಿ ರಮೇಶ್ ಚೆನ್ನಿತ್ತಿಲ ತಿಳಿಸಿದ್ದಾರೆ.

ತಿರುವಂನಂತಪುರಂ ವೈದ್ಯಕೀಯ ಕಾಲೇಜು ಹೃದಯ ವಿದ್ರಾವಕ ಘಟನೆಗೆ ಸಾಕ್ಷಿಯಾಗಿದೆ. ಗಂಭೀರ ಸುಟ್ಟ ಗಾಯಗಳಿಗೆ ಒಳಗಾಗಿರುವ 100ಕ್ಕೂ ಹೆಚ್ಚು ಗಾಯಾಳುಗಳು ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.  ಪೊಲೀಸರು ಹಲವು ರಸ್ತೆಗಳನ್ನು ಬಂದ್ ಮಾಡಿದ್ದು, ಆಸ್ಪತ್ರೆಗೆ ಗಾಯಾಳುಗಳನ್ನು ಸಾಗಿಸಲು ನೆರವಾಗಿದ್ದಾರೆ.

ಘಟನಾ ಸ್ಥಳಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಒಮ್ಮನ್ ಚಾಂಡಿ ಜಂಟಿಯಾಗಿ ಭೇಟಿ ನೀಡುವ ಸಾಧ್ಯತೆಗಳಿವೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಭೇಟಿ ನೀಡಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಪ್ರಧಾನಿ ನರೇಂದ್ರ ಮೋದಿ ಕೂಡ ವೈದ್ಯರ ತಂಡದೊಂದಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಕೇರಳದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಘಟನೆಗೆ ಎಲ್ಲಿಲ್ಲದ ಮಹತ್ವ ಬಂದಿದೆ.

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಕೇರಳ ಸರಕಾರ ಪರಿಹಾರ ಘೋಷಣೆ ಮಾಡಲು ಸಾಧ್ಯವಿಲ್ಲ. ಹೀಗಾಗಿ, ಕೇಂದ್ರ ಸರಕಾರ ಸಾವಿಗೀಡಾದವರಿಗೆ 2 ಲಕ್ಷ ಮತ್ತು ಗಾಯಾಳುಗಳಿಗೆ 50 ಸಾವಿರ ಪರಿಹಾರ ಘೋಷಿಸಿದೆ. ಈ ಕುರಿತು ಪ್ರಧಾನಿ ಜತೆ ಮಾತನಾಡಿರುವುದಾಗಿ ಕೇರಳ ಮುಖ್ಯಮಂತ್ರಿ ಒಮ್ಮನ್ ಚಾಂಡಿ ವಾಹಿನಿಯೊಂದಕ್ಕೆ ತಿಳಿಸಿದ್ದಾರೆ.

ಸುಡು ಮದ್ದು ಪ್ರದರ್ಶನಕ್ಕೆ ಜಿಲ್ಲಾಡಳಿತ ಅನುಮತಿ ನೀಡಿರಲಿಲ್ಲ. ಹೀಗಿದ್ದೂ ದೇವಸ್ಥಾನದ ಮಂಡಳಿ ತನ್ನ ಸ್ವ ಇಚ್ಛೆಯ ಮೇಲೆ ಪ್ರದರ್ಶನ ಏರ್ಪಡಿಸಿತ್ತು.

ಮಧ್ಯಾಹ್ನ ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಓಮನ್ ಚಾಂಡಿ, “ಮೃತ ದೇಹಗಳ ಮರಣೋತ್ತರ ಪರೀಕ್ಷೆಯನ್ನು ತ್ವರಿತವಾಗಿ ಮುಗಿಸಲು ಸೂಚನೆ ನೀಡಲಾಗಿದೆ. ದೇವಸ್ಥಾನದ ಆಡಳಿತ ಮಂಡಳಿ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಸಂಪುಟ ಸಭೆಯ ನಂತರ ಪ್ರಕಟಿಸಲಾಗುವುದು,” ಎಂದರು.

”ಪ್ರತಿ ವರ್ಷ ಉಗಾದಿ ಸಮಯದಲ್ಲಿ ಕೊಲ್ಲಂ ದೇವಾಲಯದಲ್ಲಿ ಪಟಾಕಿಗಳನ್ನು ಸಿಡಿಸುವ ಸ್ಪರ್ಧೆ ಏರ್ಪಡಿಸಲಾಗುತ್ತದೆ. ಯಾವ ತಂಡದ ಪಟಾಕಿ ಹೆಚ್ಚು ಆಕರ್ಷಕವಾಗಿತ್ತದೋ, ಅವರಿಗೆ ಬಹುಮಾನವನ್ನು ವಿತರಿಸಲಾಗುವ ಸಂಪ್ರದಾಯ ಆಚರಣೆಯಲ್ಲಿತ್ತು,” ‘ನ್ಯೂಸ್ ಮಿನಿಟ್’ ವರದಿ ಮಾಡಿದೆ. ಸೋಮವಾರ ನಸುಕಿನ ಜಾವ 3.30ರ ಸುಮಾರಿಗೆ ಸಿಡಿಸುತ್ತಿದ್ದ ಪಟಾಕಿಯಲ್ಲಿ ಒಂದು ನೆಲಕ್ಕೆ ಬಿದ್ದು ಸ್ಫೋಟಗೊಂಡಿತು. ಇದರಿಂದ ಹಬ್ಬಿದ ಬೆಂಕಿದ ಕಿಡಿಗಳು ಇತರೆ ಪಟಾಕಿಗಳು ಸಿಡಿಯಲು ಕಾರಣವಾಯಿತು ಎಂದು ವರದಿ ಹೇಳಿದೆ.

Leave a comment

FOOT PRINT

Top