An unconventional News Portal.

‘ಉಗಾದಿ ಘೋಷಣೆ’: ಮುನಿಸಿಕೊಂಡವರ ಮನೆಗೆ ಹಳೇ ಯಜಮಾನನೇ ಸಾರಥಿ!

‘ಉಗಾದಿ ಘೋಷಣೆ’: ಮುನಿಸಿಕೊಂಡವರ ಮನೆಗೆ ಹಳೇ ಯಜಮಾನನೇ ಸಾರಥಿ!

ನಿರೀಕ್ಷೆಯಂತೆಯೇ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವುದು ಶುಕ್ರವಾರ ಸ್ಪಷ್ಟವಾಗಿದೆ.

ಬಿಜೆಪಿ ಹೈಕಮಾಂಡ್ ಮೂರು ರಾಜ್ಯಗಳ ರಾಜ್ಯಧ್ಯಕ್ಷರ ಸ್ಥಾನಗಳನ್ನು ಘೋಷಿಸಿದ್ದು, ಇದರಲ್ಲಿ ಕರ್ನಾಟಕದ ಬಿಜೆಪಿಗೆ ಯಡಿಯೂರಪ್ಪ ಅವರ ಹೆಸರನ್ನು ಅಂತಿಮಗೊಳಿಸಿದೆ. ಈ ಮೂಲಕ, ರಾಜ್ಯದಲ್ಲಿ ಒಡೆದ ಮನೆಯಂತಾಗಿರುವ ಬಿಜೆಪಿಯನ್ನು ಮುಂಬರುವ ವಿಧಾನಸಭಾ ಚುನಾವಣೆ ಒಳಗೆ ಪುನಶ್ಚೇತನ ನೀಡುವ ಸಾಧ್ಯತೆಯೊಂದನ್ನು ಹಿರಿಯ ನಾಯಕರು ಕಂಡುಕೊಂಡಿದ್ದಾರೆ. ಹೀಗಾಗಿ, ಆರ್ಎಸ್ಎಸ್ ಹಾಗೂ ರಾಜ್ಯದ ಹಲವು ನಾಯಕರ ಭಿನ್ನ ಅಭಿಪ್ರಾಯಗಳಿಗೆ ಮನ್ನಣೆ ನೀಡದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಯಡಿಯೂರಪ್ಪ ಅವರ ಕೈಗೆ ಚುಕ್ಕಾಣಿ ನೀಡುವ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಅದಕ್ಕೆ ಕಾರಣ, ದಕ್ಷಿಣ ಭಾರತದ ರಾಜ್ಯಗಳ ಪೈಕಿ ಬಿಜೆಪಿ ಅಧಿಕಾರ ಪಡೆದ ಮೊದಲ ಹಾಗೂ ಏಕೈಕ ರಾಜ್ಯ ಕರ್ನಾಟಕ. ಆಗ ಅದರ ಚುಕ್ಕಾಣಿ ಹಿಡಿದವರು ಇದೇ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ. ಅವತ್ತಿಗೆ ಅವರ ಬಳಿ ಹೋರಾಟ ಕೆಚ್ಚೆದೆ ಇತ್ತು, ತಾವೇ ಬೆಳೆಸಿದ ಪಕ್ಷದ ಅನೇಕರು ಬೆನ್ನಿಗಿದ್ದರು, ಅದಕ್ಕಿಂತ ಹೆಚ್ಚಾಗಿ ರಾಜ್ಯಾದ್ಯಂತ ಅನುಕಂಪದ ಅಲೆ ಇತ್ತು. ಹೀಗೆ, ಹಲವು ಸಾಧ್ಯತೆಯನ್ನು ಬೆನ್ನಿಗಿಟ್ಟುಕೊಂಡು 2008ರ ಚುನಾವಣೆಗೆ ಇಳಿದವರು ಸಹಜವಾಗಿಯೇ ಬಿಜೆಪಿಯನ್ನು ಗೆಲ್ಲಿಸಿ, ತಾವೂ ಮುಖ್ಯಮಂತ್ರಿಯಾದರು.

ಕಾಲ ಬದಲಾಯಿತು:

ಆದರೆ, ಒಂದೂವರೆ ವರ್ಷಗಳಲ್ಲಿ ಕಾಲ ಬದಲಾಯಿತು. ಯಡಿಯೂರಪ್ಪದ ಸಿಟ್ಟು ಹಾಗೂ ಕುಟುಂಬ ಪ್ರೇಮ ಪಕ್ಷ ಹಾಗೂ ಸರಕಾರದೊಳಗೆ ಉಸಿರು ಕಟ್ಟಿಸುವ ವಾತಾವರಣವನ್ನು ಸೃಷ್ಟಿಸಿತು. ನೋಡುನೋಡುತ್ತಿದ್ದಂತೆ ಹಗರಣಗಳು ಮೆತ್ತಿಕೊಂಡು ಜೈಲು ಪಾಲಾಗಿ ಹೋದರು ಯಡಿಯೂರಪ್ಪ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಒಳಗಿದ್ದಾಗಲೇ, ಅವರೇ ಒತ್ತಾಸೆಯಿಂದ ಅನುದಾನ ಬಿಡುಗಡೆ ಮಾಡಿದ್ದ ಮೆಟ್ರೊ ರೈಲಿನ ಮೊದಲ ಹಂತದ ಉದ್ಘಾಟನೆಯನ್ನು ಮುಖ್ಯಮಂತ್ರಿ ಡಿ. ವಿ. ಸದಾನಂದ ಗೌಡ ಮಾಡಿ ಮುಗಿಸಿದರು. ಈ ಮೂಲಕ ಬಿಜೆಪಿಯ ಎರಡನೇ ಹಂತದಲ್ಲಿದ್ದ ನಾಯಕರು ಯಡಿಯೂರಪ್ಪ ಅವರನ್ನು ಮೊದಲಿನಂತೆ ಒಪ್ಪಿಕೊಳ್ಳುವುದಿಲ್ಲ ಎಂಬ ಸಂದೇಶ ರವಾನೆಯಾಯಿತು. ಜಗದೀಶ್ ಶೆಟ್ಟರ್, ಆರ್. ಅಶೋಕ್, ಪ್ರಹ್ಲಾದ್ ಜೋಷಿ ಹೀಗೆ ಹಲವು ನಾಯಕರು ಯಡಿಯೂರಪ್ಪರ ವಿರುದ್ಧವೇ ಕೆಲಸ ಮಾಡತೊಡಗಿದರು. ಅವರಿಗೆಲ್ಲಾ ಬೆನ್ನೆಲುಬಾಗಿ ನಿಂತಿದ್ದವರು ಕೇಂದ್ರ ಸಚಿವ ಅನಂತ್ ಕುಮಾರ್.

ಅವತ್ತು, ಯಡಿಯೂರಪ್ಪ ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಲು ಇಂತಹ ಕೆಲವು ಕಾರಣಗಳೇ ಹೊರತು ಗಟ್ಟಿಯಾದ ಕಾರಣಗಳೇ ಇರಲಿಲ್ಲ. ಮೈ ತುಂಬಾ ಕಳಂಕ ಹೊತ್ತುಕೊಂಡು, ಸಾಮಾಜಿಕವಾಗಿಯೂ ದುರ್ಬಲವಾಗಿದ್ದ ಯಡಿಯೂರಪ್ಪ ಅವರನ್ನು ಪಕ್ಷ ಹೊರಕ್ಕೆ ಕಳುಹಿಸಿತು. ಮುಂದೆ ಅವರು ‘ಕೆಜೆಪಿ’ ಪಕ್ಷವನ್ನು ಕಟ್ಟಿ, ಚುನಾವಣೆಯಲ್ಲಿ ತಾವು ಗೆದ್ದು; ಬಿಜೆಪಿಯ ಸೋಲಿಗೆ ಕಾರಣರಾಗಿದ್ದು ಈಗ ಇತಿಹಾಸ.

ಮುಂದಿನ ಸಾಧ್ಯತೆಗಳು:

ಇವತ್ತು ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಆ ಮೂಲಕ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಸಿಎಂ ಅಭ್ಯರ್ಥಿ ಎಂಬ ಸಾಧ್ಯತೆ ಕಡೆಗೆ ಮೊದಲ ಹೆಜ್ಜೆ ಇಟ್ಟಿದ್ದಾರೆ. ಮೈಸೂರು ಮೂಲದ ಸಂಸದ ಪ್ರತಾಪ್ ಸಿಂಹ, ಸಾಮಾಜಿಕ ತಾಣಗಳಲ್ಲಿ ‘2018 ಕರ್ನಾಟಕ ಅಸೆಂಬ್ಲಿ ಎಲೆಕ್ಷನ್: ಸಿಎಂ ಬಿಎಸ್ವೈ’ ಎಂದು ಭಾವನೆಯನ್ನು ಹಂಚಿಕೊಂಡಿದ್ದಾರೆ.

ಆದರೆ, ಬಿಜೆಪಿಯ ಆಂತರಿಕ ಪರಿಸ್ಥಿತಿ ಹಿಂದಿನಂತಿಲ್ಲ ಎಂಬುದನ್ನು ಗಮನಿಸಬೇಕಿದೆ. ಹಿಂದೆ 2008ರಲ್ಲಿ ಚುನಾವಣೆ ಎದುರಿಸಿದ ಯಡಿಯೂರಪ್ಪ ಅವರಲ್ಲಿ ಇದ್ದ ಕಸುವು ಈಗ ಕಾಣಿಸುತ್ತಿಲ್ಲ. ಅದಕ್ಕಿಂತ ಹೆಚ್ಚಾಗಿ, ಪಕ್ಷದೊಳಗೆ ವಿ. ಸೋಮಣ್ಣ, ಬಸವರಾಜ್ ಬೊಮ್ಮಾಯಿ, ಯತ್ನಾಳ್ ರಂತಹ ನಾಯಕರನ್ನು ಹೊರತು ಪಡಿಸಿದರೆ ಉಳಿದವರ ಬೆಂಬಲ ಇಲ್ಲ. ಹಿರಿಯ ನಾಯಕರಿಗೆ, ಸಂಘಪರಿವಾರಕ್ಕೆ ಯಡಿಯೂರಪ್ಪ ಆಯ್ಕೆ ಬಗ್ಗೆಯೇ ಸಕಾರಾತ್ಮಕ ನಿಲುವು ಇರಲಿಲ್ಲ. ಈಗ ಅವರ ಹಳೆಯ ಎಲ್ಲವನ್ನೂ ಸಹಿಸಿಕೊಂಡು ಮುಂದೆ ಪಕ್ಷದ ಹಿತಕ್ಕಾಗಿ ಕೆಲಸ ಮಾಡುವ ಸಾಧ್ಯತೆಗಳೂ ಕಾಣಿಸುತ್ತಿಲ್ಲ.

ಇದೇ ವೇಳೆ, ತಮ್ಮ ವಿರುದ್ಧ ಷಢ್ಯಂತ್ರ ನಡೆಸಿದವರನ್ನು ಕ್ಷಮಿಸಿ, ಜತೆಗೆ ಕರೆದುಕೊಂಡು ಹೋಗುವ ಜಾಯಮಾನವೂ ಯಡಿಯೂರಪ್ಪ ಅವರದ್ದು ಅಲ್ಲ. ಹೀಗಾಗಿ, ಬಿಜೆಪಿಯ ಆಂತರಿಕ ಭಿನ್ನಮತ ಇನ್ನಷ್ಟು ಬಿಗಡಾಯಿಸುವ ಎಲ್ಲಾ ಸಾಧ್ಯತೆಗಳನ್ನು ಈ ಬೆಳವಣಿಗೆ ಮುಂದೆ ಮಾಡಿದೆ.

ಕಳಂಕ ಇದ್ದೇ ಇದೆ:

ಯಡಿಯೂರಪ್ಪ ಅವರನ್ನು ಬಿಜೆಪಿ ಹೊರಗೆ ಹಾಕಲು ಅವರ ಮೇಲಿದ್ದ ಭ್ರಷ್ಟಾಚಾರ ಪ್ರಕರಣಗಳೂ ಕಾರಣವಾಗಿದ್ದವು. ಅವತ್ತು ಲೋಕಾಯುಕ್ತ, ಸಿಬಿಐ ಅಂತ ಡಜನ್ಗೂ ಮೀರಿ ಯಡಿಯೂರಪ್ಪ ವಿರುದ್ಧ ಆರೋಪಗಳಗಳಿದ್ದವು. ಅವುಗಳಲ್ಲಿ ಕೆಲವನ್ನು ನ್ಯಾಯಾಲಯ ರದ್ದುಗೊಳಿಸಿದೆ. ಆದರೆ, ಇನ್ನೂ ಗಂಭೀರ ಪ್ರಕರಣಗಳಿವೆ. ಅದಕ್ಕಿಂತ ಹೆಚ್ಚಾಗಿ ಅವರಿಗೆ ಅಂಟಿರುವ ಕಳಂಕಗಳು ಅಷ್ಟು ಸುಲಭಕ್ಕೆ ಅಳಿಸಿ ಹೋಗುವಂತವಲ್ಲ.

ಸದ್ಯ ರಾಜ್ಯ ಸರಕಾರದ ವಿರುದ್ಧ ‘ಎಸಿಬಿ’ ರಚನೆ ಕುರಿತು ಪ್ರತಿಭಟನೆ ನಡೆಯುತ್ತಿದೆ. ನಾಳೆ, ಬಿಜೆಪಿ ಹಾಗೂ ಅದರ ನೂತನ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ, ‘ಸೇವ್ ಲೋಕಾಯುಕ್ತ’ ಎಂದು ಬೀದಿಗಿಳಿದರೆ ಜನ ಹೇಗೆ ಸ್ವೀಕರಿಸುತ್ತಾರೆ? ಎಂಬುದು ಊಹೆಗೆ ನಿಲುಕದ್ದೇನಲ್ಲ. ಹೀಗಿರುವಾಗ, ಮುಂಬರುವ ಚುನಾವಣೆ ವೇಳೆಗೆ, ಯಡಿಯೂರಪ್ಪ ವಿರುದ್ಧ ಪ್ರತಿಪಕ್ಷಗಳಿಗೆ ಹಾಗೂ ಅವರದ್ದೇ ಪಕ್ಷದೊಳಗಿನ ವಿರೋಧಿಗಳಿಗೆ ಇದು ಅಸ್ತ್ರವಾಗಬಹುದು. ಒಟ್ಟಾರೆ ಬಿಜೆಪಿಗೆ ಸಮಸ್ಯೆ ತಂದೊಡ್ಡಬಹುದು.

ತಳಮಟ್ಟದ ಸ್ಥಿತಿ ಏನು?:

ಇಂತಹ ಸಾಧ್ಯತೆಗಳನ್ನು ಪಕ್ಕಕ್ಕಿಟ್ಟು, ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶವನ್ನು ಗಮನಿಸಿದರೂ, ಯಡಿಯೂರಪ್ಪ ಅವರಿಗೆ ಪೂರಕ ಸನ್ನಿವೇಶ ಕಂಡುಬರುವುದಿಲ್ಲ. “ಸಾಮಾನ್ಯವಾಗಿ ಆಡಳಿತ ಪಕ್ಷಕ್ಕೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆಲುವಿನ ಸಾಧ್ಯತೆ ಹೆಚ್ಚಿರುತ್ತದೆ. ಹೀಗಿದ್ದೂ, ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸ್ಥಳೀಯ ಸಂಸ್ಥೆಗಳ ಮತ ಹಂಚಿಕೆಯಲ್ಲಿ ಶೇ. 2ರಷ್ಟು ವ್ಯತ್ಯಾಸ ಇತ್ತು. ಈ ಬಾರಿ ಯಡಿಯೂರಪ್ಪ ಆದಿಯಾಗಿ ಬಿಜೆಪಿ ನಾಯಕರು ಕೆಲಸ ಮಾಡಿದರೂ ಅಂತರ ಶೇ. 14ರಷ್ಟಾಗಿದೆ,” ಎಂಬ ರಾಜಕೀಯ ವಿಶ್ಲೇಷಣೆಗಳಿವೆ. ಹಿಂದೆ, ಬಿಜೆಪಿ ಗೆಲುವಿಗೆ ಇದ್ದ ಅನುಕೂಲರವಾದ ಪರಿಸ್ಥಿತಿ ಇವತ್ತಿಗೆ ಇಲ್ಲ ಎಂಬುದನ್ನು ತಳಮಟ್ಟದ ಈ ಅಂಕಿ ಅಂಶಗಳು ಸ್ಪಷ್ಟಪಡಿಸುತ್ತಿವೆ. ಮಹದಾಯಿ ಯೋಜನೆ ವಿಚಾರದಲ್ಲಿ ಉತ್ತರ ಕರ್ನಾಟಕದಲ್ಲಿ ಬಿಜೆಪಿಗೆ ಪೂರಕವಾಗಿದ್ದ ಸನ್ನಿವೇಶವೂ ಬದಲಾಗಿದೆ. ಮಠ, ಮಾನ್ಯಗಳ ಬೆಂಬಲ, ಜಾತಿ ಲೆಕ್ಕಾಚಾರಗಳು ಕೊನೆಯ ಹಂತದಲ್ಲಿ ಹೇಗೆಲ್ಲಾ ತಿರುಗುತ್ತವೆ ಎಂಬುದನ್ನು ಕಾದು ನೋಡಬೇಕಿದೆ.

ಹೀಗಾಗಿ, ಇದು ಯಡಿಯೂರಪ್ಪ ಅವರ ಇಳೀ ವಯಸ್ಸಿನಲ್ಲಿ ತೆಗೆದುಕೊಂಡು ನಿರ್ಣಾಯಕ ಹೊಣೆಗಾರಿಕೆ ಅಷ್ಟೆ. ಅವರು ಸಿಎಂ ಆಗುವ ಸಾಧ್ಯತೆಗಳನ್ನು ಇಷ್ಟು ಬೇಗನೇ ನಿರ್ಧರಿಸುವುದು ಕಷ್ಟ; ನಿರ್ಧರಿಸಿದರೂ, ಬಿಜೆಪಿಯ ಒಳಗಿನವರೇ ನಕ್ಕು ಬಿಡಬಹುದು.

 

Leave a comment

FOOT PRINT

Top