An unconventional News Portal.

‘ಜುಗಾರಿ ಕ್ರಾಸ್’ಗೆ ಬಂದು ನಿಂತ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಯಾರು ಆ ‘ಬಾಸ್’?

‘ಜುಗಾರಿ ಕ್ರಾಸ್’ಗೆ ಬಂದು ನಿಂತ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಯಾರು ಆ ‘ಬಾಸ್’?

ವಿಧಾನಸೌಧದಿಂದ ಅನತಿ ದೂರದಲ್ಲಿರುವ ಸಿಐಡಿಯ ಬಿಳಿ ಬಣ್ಣದ ಭವ್ಯ ಕಟ್ಟಡದೊಳಗೆ ದೊಡ್ಡ ಮಟ್ಟದ ಸಂಚಲನ ಶುರುವಾಗಿದೆ.

ಪಿಯುಸಿ ‘ರಸಾಯನ ಶಾಸ್ತ್ರ’ದ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನಲೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳನ್ನು ತನಿಖೆ ನಡೆಸುತ್ತಿರುವ ಸಿಐಡಿ ತಂಡಕ್ಕೆ ಮಹತ್ವದ ಸುಳಿವು ಲಭ್ಯವಾಗಿದೆ. ಅದು ‘ಬಾಸ್’ ಅಲಿಯಾಸ್ ‘ಚೀಫ್’ ಎಂಬ ಅನಾಮಧೇಯ ವ್ಯಕ್ತಿಯ ಬಗೆಗಿನ ಸ್ಫೋಟಕ ಮಾಹಿತಿ. ಈ ಬಾರಿ ಇದು, ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ‘ಶಿವಕುಮಾರ್  ಎಂಬ ಕಿಂಗ್ ಪಿನ್’ಗೆ ಮಾತ್ರವೇ ಸೀಮಿತಗೊಳ್ಳುವ ‘ಹಗರಣ’ ಇದಲ್ಲ ಎಂಬುದು ತನಿಖೆಯನ್ನು ಮುನ್ನಡೆಸುತ್ತಿರುವ ಹಿರಿಯ ಅಧಿಕಾರಿಗಳಿಗೆ ಮನವರಿಕೆ ಆದಂತಿದೆ.

ಆದರೂ, ಮಂಗಳವಾರ ಇಡೀ ದಿನ, ಒಂದು ಕಡೆ ತನಿಖೆ, ಮತ್ತೊಂದೆಡೆ ಮಾಧ್ಯಮಗಳನ್ನು ‘ಮ್ಯಾನೇಜ್’ ಮಾಡುವ ಕೆಲಸದಲ್ಲಿ ಸಿಐಡಿ ಅಧಿಕಾರಿಗಳು ನಿರತರಾಗಿದ್ದರು!

ಇದರ ನಡುವೆಯೇ, ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ ಬೆನ್ನಿಗೆ ‘ಸಮಾಚಾರ’ ಬಿದ್ದಿದೆ. ಇರುವ ಸೀಮಿತ ಅವಕಾಶಗಳು ಹಾಗೂ ತಳಮಟ್ಟದಲ್ಲಿರುವ ಮಾಹಿತಿ ಮೂಲಗಳ ಬಹುದೊಡ್ಡ ಸಾಧ್ಯತೆಗಳನ್ನು ಬೆನ್ನಿಗೆ ಇಟ್ಟುಕೊಂಡು ಸದರಿ ಪ್ರಕರಣದ ತನಿಖೆಗೆ ಇಳಿದ ‘ಸಮಾಚಾರ’ಕ್ಕೆ ಲಭ್ಯವಾದ ಮಾಹಿತಿಗಳು ಬೆಚ್ಚಿ ಬೀಳಿಸುವಂತಿವೆ. ಪಿಯುಸಿ ಪ್ರಶ್ನೆ ಪತ್ರಿಕೆ ಹಗರಣದಲ್ಲಿ ತನಿಖಾಧಿಕಾರಿಗಳಿಗೂ ದಿಕ್ಕು ತಪ್ಪಿಸುತ್ತಿರುವ ಏಕೈಕ ವ್ಯಕ್ತಿಯ ಬಗ್ಗೆ ಸಿಕ್ಕಿರುವ ಸುಳಿವು ಮಹತ್ವದ್ದು. ಆತನನ್ನು ‘ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ’ದ ಬಗ್ಗೆ ಮೊದಲಿನಿಂದಲೂ ಮಾಹಿತಿ ಇರುವವರು ‘ಬಾಸ್’ ಅಥವಾ ‘ಚೀಫ್’ ಎಂದು ಗುರುತಿಸುತ್ತಿದ್ದಾರೆ. ಬೆಂಗಳೂರಿನ ಉತ್ತರ ಭಾಗದಲ್ಲಿ ಸಕ್ರಿಯವಾಗಿರುವ ಟ್ಯುಟೋರಿಯಲ್ ಕೇಂದ್ರಗಳು, ಮಂಗಳೂರು, ಹುಬ್ಬಳ್ಳಿ- ಧಾರವಾಡ ಮತ್ತು ಮೈಸೂರು ಭಾಗಗಳಲ್ಲಿ ಇರುವ ‘ಮನೆ ಪಾಠ’ದಲ್ಲಿ ನಿರತರಾಗಿರುವವರು ನೀಡುತ್ತಿರುವ ಮಾಹಿತಿ ಮೊನೆ ತೋರಿಸುತ್ತಿರುವುದು ಇದೇ ‘ಬಾಸ್’ ಅಥವಾ ‘ಚೀಫ್’ ಎಂದು ಕರೆಯುತ್ತಿರುವ ವ್ಯಕ್ತಿ ಕಡೆಗೆ.

‘ಬಾಸ್’- ಏನದು?:

ಪಿಯುಸಿಯ ‘ಕೆಮಿಸ್ಟ್ರಿ’ ಪತ್ರಿಕೆ ಸೋರಿಕೆ ವಿಚಾರದಲ್ಲಿ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಈಗಾಗಲೇ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಸದ್ಯದ ಅವರ ತನಿಖೆ ಪ್ರಕಾರ, ಕೇಂಬ್ರಿಡ್ಜ್ ಶಾಲೆಯಲ್ಲಿ ದೈಹಿಕ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಪ್ರಶ್ನೆ ಪತ್ರಿಕೆಗಳನ್ನು ‘ಅನಾಮಧೇಯ’ ವ್ಯಕ್ತಿಯಿಂದ ಪಡೆದುಕೊಂಡಿದ್ದಾನೆ. ಇದನ್ನು ಆತ ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಅವರ ವಿಶೇಷಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ಓಬಳರಾಜುಗೆ 10 ಲಕ್ಷ ರೂಪಾಯಿಗೆ ಮಾರಿಕೊಂಡಿದ್ದಾನೆ. ಓಬಳರಾಜು ತನ್ನ ಭಾವ, ಪಿಡಬ್ಲ್ಯೂಡಿ ಇಲಾಖೆಯಲ್ಲಿ ಕಚೇರಿ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದ ರುದ್ರಪ್ಪನ ಜತೆ ಸೇರಿ ಹಂಚಿಕೆ ಮಾಡಿದ್ದಾನೆ ಎಂದು ಸಿಐಡಿಯ ಈವರೆಗಿನ ತನಿಖೆ ಹೇಳುತ್ತದೆ. ಆದರೆ, ಆರೋಪಿ ಮಂಜುನಾಥ್ಗೆ ಪ್ರಶ್ನೆ ಪತ್ರಿಕೆಗಳನ್ನು ಕೊಟ್ಟವರು ಯಾರು? ಎಂಬುದು ಇವತ್ತಿಗೂ ನಿಗೂಢವಾಗಿಯೇ ಉಳಿದಿದೆ. ಈ ಬಗ್ಗೆ ‘ತನಿಖೆ ಇನ್ನೂ ಪ್ರಗತಿ’ಯಲ್ಲಿದೆ ಎಂದು ಸಿಐಡಿ ಪತ್ರಿಕಾ ಹೇಳಿಕೆ ತಿಳಿಸುತ್ತದೆ.

ಆದರೆ ಸದ್ಯದ ಮಾಹಿತಿ ಪ್ರಕಾರ, ಸಿಐಡಿ ಅಧಿಕಾರಿಗಳು ಕಳೆದ ಹತ್ತು ವರ್ಷಗಳ ಅಂತರದಲ್ಲಿ ರಾಜ್ಯದಲ್ಲಿ ಸಕ್ರಿಯವಾಗಿದ್ದ ಪ್ರಶ್ನೆ ಪತ್ರಿಕೆ ಸೋರಿಕೆ ಜಾಲವನ್ನು ಬೆನ್ನತ್ತಿದೆ. ಇದರಲ್ಲಿ ಈಗ ನ್ಯಾಯಾಲಯದಿಂದ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿರುವ ಆರೋಪಿಗಳ ಸಂಬಂಧಿಗಳು ಸೇರಿದಂತೆ ಹಲವು ಹೆಸರುಗಳು ಕೇಳಿಬರುತ್ತಿವೆ. ಇವರ ಫೋನ್ಗಳನ್ನು ಟ್ಯಾಪ್ ಮಾಡಿರುವ ತನಿಖಾಧಿಕಾರಿಗಳಿಗೆ ‘ಹಗರಣ’ದ ಕುರಿತು ಹೊಸ ಸುಳಿವುಗಳು ಲಭ್ಯವಾಗಿದೆ. ಅದರಲ್ಲಿ ಪ್ರಮುಖವಾದದ್ದು, ಮೈಸೂರು ಮೂಲದ ಮಂಜು ಎಂಬಾತ ನಡೆಸಿರುವ ಸಂಭಾಷಣೆಗಳು. ಈ ಬಾರಿಯ ಹಗರಣದ ಹಿಂದೆ ಅನಾಮಧೇಯ ವ್ಯಕ್ತಿಯೊಬ್ಬ ಇರುವುದು ಖಚಿತವಾಗಿದೆ. ಆತನನ್ನು ‘ಚೀಫ್’ ಅಥವಾ ‘ಬಾಸ್’ ಎಂದು ಕರೆಯುತ್ತಿರುವುದರ ಕುರಿತು ಮಾಹಿತಿ ಸಿಕ್ಕಿದೆ.

ಸಿಗುತ್ತಿರುವ ಮಾಹಿತಿ:

ಬೆಂಗಳೂರಿನ ಉತ್ತರ ಭಾಗದಲ್ಲಿರುವ ರಾಜಾಜಿನಗರ, ವಿಜಯನಗರ ಮತ್ತಿತರ ಕಡೆಗಳಲ್ಲಿ ಹಲವು ವರ್ಷಗಳಿಂದ ಶಿಕ್ಷಣ ಕ್ಷೇತ್ರದ ಮಾಫಿಯಾಗಳು ರಾಜಾರೋಷವಾಗಿ ಕಾರ್ಯಾಚರಣೆ ನಡೆಸುತ್ತಲೇ ಬಂದಿವೆ. ಅಧಿಕೃತ ಕಚೇರಿಗಳನ್ನು ಮಾಡಿಕೊಂಡು, ಬಿಎಡ್, ಡಿಎಡ್, ಬಿಎ, ಎಂಎ ಮತ್ತಿತರ ಪದವಿಗಳ ಪ್ರಮಾಣ ಪತ್ರಗಳನ್ನು ವಿತರಿಸುವ ದಂಧೆ ಇಲ್ಲಿ ನಿರಾತಂಕವಾಗಿ ನಡೆದುಕೊಂಡು ಬಂದಿದೆ. ಮುಕ್ತ ವಿಶ್ವವಿದ್ಯಾನಿಲಯಗಳ ಹೆಸರಿನಲ್ಲಿ ನಡೆಯುತ್ತಿರುವ ಈ ಮಾಫಿಯಾ, ಹಣ ಕೊಟ್ಟರೆ ಯಾವುದೇ ಪ್ರಮಾಣ ಪತ್ರವನ್ನು ಬೇಕಾದರೂ ವಿತರಿಸುತ್ತವೆ. ನೆಪ ಮಾತ್ರಕ್ಕೆ ಪರೀಕ್ಷೆ ತೆಗೆದುಕೊಂಡರೆ ಸಾಕು; ಜತೆಗೆ 5 ಸಾವಿರದಿಂದ 1 ಲಕ್ಷದವರೆಗೆ ಹಣ ಕಟ್ಟಬೇಕು.

ಇದೇ ಜಾಲದ ಇನ್ನೊಂದು ಮುಖ, ಪ್ರಶ್ನೆ ಪತ್ರಿಕೆಗಳನ್ನು ಟ್ಯುಟೋರಿಯಲ್ ಹಾಗೂ ಕಾಲೇಜುಗಳಿಗೆ ಹಂಚುವುದು. ಎಸ್ಎಸ್ಎಲ್ಸಿ, ಪಿಯುಸಿಯಿಂದ ಶುರುವಾಗಿ ಕೆಎಎಸ್, ಕೇಂದ್ರ ಸೇವಾ ಆಯೋಗ (ಎಸ್ಎಸ್ಸಿ)ದ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳನ್ನು ವ್ಯವಸ್ಥಿತವಾಗಿ ಸೋರಿಕೆ ಮಾಡುವ ಜಾಲ ಕಳೆದ ಒಂದು ದಶಕಗಳಿಂದ ನಡೆದುಕೊಂಡು ಬಂದಿದೆ. ಪ್ರತಿ ಸಾರಿಯೂ, ಈ ವಿಚಾರ ಬಹಿರಂಗವಾದಾಗ ಪೊಲೀಸರು ಅಥವಾ ಸಿಸಿಬಿ ತನಿಖೆ ನಡೆಸುತ್ತದೆ. ಕೊನೆಗೆ, ಉತ್ತರ ಕರ್ನಾಟಕ ಮೂಲದ ಶಿವಕುಮಾರ್ ಎಂಬಾತನವರೆಗೆ ಬಂದು ನಿಲ್ಲುತ್ತದೆ.

ಈತ ಹಳೇ ಪಂಟ:

ಈ ಶಿವಕುಮಾರ್ ಹಿಂದೆಯೂ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳು ಹೊರಬಂದಾಗ ಪೊಲೀಸರಿಂದ ಬಂಧನಕ್ಕೆ ಒಳಗಾದವನು. ಈತನನ್ನು ವಿಚಾರಣೆ ನಡೆಸಿದ ಸಿಸಿಬಿ ಅಧಿಕಾರಿಯೊಬ್ಬರು, “ಎಷ್ಟೇ ದೈಹಿಕ ಹಿಂಸೆ ಕೊಟ್ಟರೂ ಶಿವಕುಮಾರ್ ಬಾಯಿ ಬಿಡುವುದಿಲ್ಲ,” ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ. ಹೀಗಾಗಿ, ಹಿಂದಿನ ತನಿಖೆಗಳಲ್ಲಿ ಪೊಲೀಸರು ಶಿವಕುಮಾರ್ಗೆ ತನಿಖೆ ಕೊನೆಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿ ಕೈ ತೊಳೆದುಕೊಂಡರು ಎಂಬುದು ಅವರ ಅನುಭವ.

ಈ ಬಾರಿ ಕೂಡ ‘ಕಿಂಗ್ ಪಿನ್’ ಎಂದು ಕೇಳಿಬಂದಿರುವ ಹೆಸರು ಇದೇ ಶಿವಕುಮಾರ್ ಅಲಿಯಾಸ್ ಶಿವಕುಮಾರ್ ಸ್ವಾಮಿಯದ್ದು. ಈತ ಗಜೇಂದ್ರಗಢದಲ್ಲಿ ಭವ್ಯವಾದ ಮನೆಯೊಂದನ್ನು ಕಟ್ಟಿಸಿದ್ದಾನೆ. ಐಶಾರಾಮಿ ಕಾರುಗಳನ್ನು ಹೊಂದಿದ್ದಾನೆ. ಈ ಬಾರಿಯೂ ಸಿಐಡಿ ಅಧಿಕಾರಿಗಳು ಇದೇ ಶಿವಕುಮಾರನ ಬೆನ್ನಿಗೆ ಬಿದ್ದರು. ಆದರೆ ಆತ ತಲೆ ಮರೆಸಿಕೊಂಡ. ಕೊನೆಗೆ ಮಂಗಳವಾರ ಶಿವಕುಮಾರನ ಮಗನನ್ನು ಕರೆದುಕೊಂಡು ಬಂದಿದ್ದಾರೆ. ಆದರೆ, ಈತನ ಹಿಂದಿರುವ ವ್ಯಕ್ತಿ ಯಾರು? ಇದು ಮೇಲ್ನೋಟಕ್ಕೆ ತನಿಖಾಧಿಕಾರಿಗಳಿಗೆ ಗೊತ್ತಿದ್ದರೂ, ಒತ್ತಡಗಳ ಹಿನ್ನೆಲೆಯಲ್ಲಿ ಆತನನ್ನು ಮುಟ್ಟುವ ಸ್ಥಿತಿಯಲ್ಲಿ ಇಲ್ಲ ಎನ್ನುತ್ತವೆ ಮೂಲಗಳು.

ಸಾಧ್ಯತೆಗಳೇನಿವೆ?:

ಸದ್ಯ ಇರುವ ಮಾಹಿತಿಯನ್ನು ‘ಸಮಾಚಾರ’ ಸಿಐಡಿಯ ಹಿರಿಯ ಅಧಿಕಾರಿಯೊಬ್ಬರ ಜತೆ ಹಂಚಿಕೊಂಡಿತು. ಯಾವುದೇ ಕಾರಣಕ್ಕೂ ತಮ್ಮ ಹೆಸರನ್ನು ಪ್ರಸ್ತಾಪಿಸಬೇಡಿ ಎಂಬ ಷರತ್ತಿನ ಜತೆಯೇ ಮಾತನಾಡಿದ ಅವರು, “ಈ ಬಾಸ್ ಅಥವಾ ಚೀಫ್ ಎಂಬ ವ್ಯಕ್ತಿಯ ಕುರಿತು ಮಾಹಿತಿ ಸಿಕ್ಕಿದೆ. ಈ ಬಾರಿ ತನಿಖೆ ಶಿವಕುಮಾರ್ ದಾಟಿಯೂ ಉಳಿದ ವ್ಯಕ್ತಿಗಳನ್ನೂ ಬಯಲಿಗೆಳೆಯಲಿದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹೇಗೇ ನೋಡಿದರೂ, ಇದು ಕೇವಲ ‘ಕೆಮಿಸ್ಟ್ರಿ’ ಪ್ರಶ್ನೆ ಪತ್ರಿಕೆಯೊಂದರ ಸೋರಿಕೆ ಪ್ರಕರಣ ಮಾತ್ರವೇ ಅಲ್ಲ. ಹಲವು ವರ್ಷಗಳಿಂದ ರಾಜ್ಯದಲ್ಲಿ ವ್ಯವಸ್ಥಿತವಾಗಿ ನಡೆದುಕೊಂಡು ಬಂದಿರುವ ಬಹುಕೋಟಿ ಹಗರಣ ಎಂಬುದು ಈ ಬಾರಿ ಪೊಲೀಸರಿಗೂ ಅರ್ಥವಾಗಿದೆ. ಆದರೆ, ಇದರ ತಳ ಮುಟ್ಟುವಲ್ಲಿ ಅವರು ಯಶಸ್ವಿಯಾಗುತ್ತಾರ? ಇದು ಸದ್ಯಕ್ಕಿರುವ ಪ್ರಶ್ನೆ.

Leave a comment

FOOT PRINT

Top