An unconventional News Portal.

ಉಳಿದಿರೋದು ಒಬ್ಬನೇ ಬಿಳಿಯ; ಇವನನ್ನಾದರೂ ಉಳಿಸಿಕೊಳ್ಳುವ!

ಉಳಿದಿರೋದು ಒಬ್ಬನೇ ಬಿಳಿಯ; ಇವನನ್ನಾದರೂ ಉಳಿಸಿಕೊಳ್ಳುವ!

ಅದೊಂದು ಬಿಳಿಯ ಘೇಂಡಾಮೃಗ. ಅದನ್ನು ಉಳಿಸಿಕೊಳ್ಳಲು ಅಲ್ಲಿ ನಾನಾ ಕಸರತ್ತುಗಳು ನಡೆಸಲಾಗುತ್ತಿದೆ. ಅದರ ರಕ್ಷಣೆಗಾಗಿ ಇಬ್ಬರು ಶಸ್ತ್ರಸಜ್ಜಿತ ಕಾವಲುಗಾರರು ದಿನದ 24 ಗಂಟೆಯೂ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಿದ್ದಾರೆ. ಅವರ ಸಾಹಸ ಕೇವಲ ಒಂದು ಘೇಂಡಾಮೃಗದ ರಕ್ಷಣೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ, ಭೂಮಿ ಮೇಲಿನ ಒಂದು ಸಂತತಿಯ ಅಳಿವು ಮತ್ತು ಉಳಿವಿನ ಪ್ರಶ್ನೆ ಇದು. ಕೊಂಚ ಅಚ್ಚರಿ ಅನ್ನಿಸಿದರೂ, ಇಡೀ ಭೂಮಿಯ ಮೇಲೆ ಸದ್ಯ ಉಳಿದಿರುವುದು ಏಕೈಕ ಬಿಳಿ ಘೇಂಡಾಮೃಗ ರಕ್ಷಣೆಗಾಗಿ ನಡೆಯುತ್ತಿರುವ ವಿಚಿತ್ರ ಕತೆ.

ಮನುಷ್ಯ ಹೆಚ್ಚೆಹೆಚ್ಚು ನಾಗರೀಕತೆ ಕಡೆಗೆ ವಾಲುತ್ತಿದ್ದಂತೆ ಪರಿಣಾಮ ಬೀರಲು ಶುರುವಾಗಿದ್ದು ನಿಸರ್ಗ ಮೇಲೆ. ಕಾಡು ಮೇಡುಗಳು, ಪ್ರಾಣಿ ಪಕ್ಷಿಗಳು ಆಧುನಿಕ ಮನುಷ್ಯನ ಐಶಾರಾಮಿತನಕ್ಕೆ, ಆತನ ಅಂತಸ್ಥಿನ ತೋರಿಕೆಗೆ ಬಳಕೆಯಾಗತೊಡಗಿದವು. ಒಂದು ಹಂತದಲ್ಲಿ ಇದೇ ಘೇಂಡಾಮೃಗದ ಮುಖದ ಮೇಲಿನ ಕೋಡುಗಳಿಗೆ ಭಾರಿ ಬೇಡಿಕೆ ಶುರುವಾಯಿತು. ಆಫ್ರಿಕಾ ಖಂಡದಿಂದ ಯುರೋಪ್, ಅಮೆರಿಕಾ ಹಾಗೂ ಚೀನಾಗಳಿಗೆ ಇವು ರಫ್ತಾಗತೊಡಗಿದವು. ಇದಕ್ಕಾಗಿ ಆಫ್ರಿಕಾದ ಕಾಡುಗಳಲ್ಲಿ ಘೇಂಡಾಮೃಗಗಳ ಮಾರಣಹೋಮ ಶುರುವಾಯಿತು.

ಘೇಂಡಾಮೃಗಗಳಲ್ಲಿರುವ ಕೋಡಿನಲ್ಲಿ ಔಷಧೀಯ ಗುಣವಿದೆ ಎಂಬ ನಂಬಿಕೆ ಹಾಗೂ ಇವುಗಳನ್ನು ಮನೆಗಳಲ್ಲಿ ಇಟ್ಟುಕೊಳ್ಳುವುದು ದೊಡ್ಡಸ್ಥಿಕೆ ಎಂಬುದು ಇಂತಹದೊಂದು ಕಪ್ಪು ಮಾರುಕಟ್ಟೆ ಹುಟ್ಟಿಕೊಳ್ಳಲು ಕಾರಣ. ಹೀಗಾಗಿ, ಈ ಕೋಡುಗಳಿಗಾಗಿ ಘೇಂಡಾಮೃಗದ ಸಂತತಿಗೆ ಸಂತತಿಯೇ ವಿನಾಶದ ಅಂಚಿಗೆ ಬಂದು ನಿಂತಿತು. ಪುಡಿ ಮಾಡಿದ ಘೇಂಡಾಮೃಗದ ಕೋಡು ಪ್ರತೀ ಕೆಜಿ ಗೆ 75 ಸಾವಿರ ಡಾಲರ್ ಗೆ ಮಾರಾಟವಾಗುತ್ತೆ. ಅಂದರೆ, ನಮ್ಮಲ್ಲಿ ಸುಮಾರು 51 ಲಕ್ಷ ರೂಪಾಯಿಗಳು.

4_northern-white-rhino

ಕಳೆದ ಕೆಲವು ವರ್ಷಗಳ ಅಂತರದಲ್ಲಿ ಸುಮಾರು 5 ಸಾವಿರಕ್ಕೂ ಅಧಿಕ ಘೇಂಡಾಮೃಗಗಳು ಕಳ್ಳಬೇಟೆಗೆ ಬಲಿಯಾಗಿವೆ ಎಂದು ವಿಶ್ವಸಂಸ್ಥೆಯ ಪರಿಸರ ಸಂಬಂಧಿತ ಸಮೀಕ್ಷೆಗಳು ಹೇಳುತ್ತವೆ. ಅವುಗಳ ಪ್ರಕಾರ ಐವತ್ತು ವರ್ಷಗಳ ಅಂತರದಲ್ಲಿ ಘೇಂಡಾಮೃಗಗಳ ಸಂತತಿ ಶೇ. 4ಕ್ಕೆ ಇಳಿದಿದೆ. ಅಂದರೆ, ಪ್ರತಿ ನೂರು ಘೇಂಡಾಮೃಗಗಳ ಪೈಕಿ 96 ಬೇಟೆಗಾರರಿಗೆ ಬಲಿಯಾಗಿವೆ; ಇಲ್ಲವೇ ತಮ್ಮ ಕೋಡುಗಳನ್ನು ಕಳೆದುಕೊಂಡು, ನಿಧಾನವಾಗಿ ಸಾವನ್ನಪ್ಪಿವೆ.

ಒಂದು ಹಂತದಲ್ಲಿ ಈ ಘೇಂಡಾಮೃಗದ ಮಾರುಕಟ್ಟೆಯ ಸುತ್ತ ಸುಳ್ಳಿನ ಸರಮಾಲೆಗಳೇ ಸೃಷ್ಟಿಯಾಗಿದ್ದವು. ಇವುಗಳ ಕೋಡುಗಳಲ್ಲಿ ಪ್ರೋಟೀನ್ ಇದೆ, ಇದು ಮನುಷ್ಯನನ್ನು ವಯಸ್ಸಾಗದಂತೆ ತಡೆಯುವ ಶಕ್ತಿ ಹೊಂದಿದೆ, ಪುರುಷತ್ವವನ್ನು ಹೆಚ್ಚಿಸುತ್ತೆ…ಹೀಗೆ ಅಂತೆಕಂತೆಗಳು ಇಲ್ಲಿ ಸಮೂಹ ಸನ್ನಿಯನ್ನು ಹುಟ್ಟುಹಾಕಿದ್ದವು. ಆದರೆ, ತಜ್ಞರ ಪ್ರಕಾರ ಇದೆಲ್ಲವೂ ಕಳ್ಳದಂಧೆಯೊಂದು ಅವ್ಯಾಹತವಾಗಿ ಮಾರುಕಟ್ಟೆ ಸೃಷ್ಟಿಸಿಕೊಳ್ಳಲು ಹುಟ್ಟುಹಾಕಿದ ಸಂತಿಗಳಾಗಿದ್ದವು ಅಷ್ಟೆ. ಇವೆಲ್ಲವುಗಳ ಸುತ್ತ ವಾಸ್ತವದ ಪರದೆಯೊಂದು ಸುತ್ತಿಕೊಳ್ಳುವ ಹೊತ್ತಿಗೆ ಘೇಂಡಾಮೃಗಗಳ ಸಂತತಿ ವಿನಾಶದ ಅಂಚಿಕೆ ಬಂದು ನಿಂತಾಗಿತ್ತು.

ಆದರೂ, ಇವುಗಳ ರಕ್ಷಣೆಗೆ ಅಂತರಾಷ್ಟ್ರೀಯ ಸಮುದಾಯ ನಿಧಾನವಾಗಿಯಾದರೂ ಎಚ್ಚೆತ್ತುಕೊಂಡಿತು. ಪೂರ್ವ ಆಫ್ರಿಕಾದಲ್ಲಿ ಘೇಂಡಾಮೃಗಗಳಿಗಾಗಿ ಅಭಯಾರಣ್ಯವೊಂದನ್ನು ಐದು ವರ್ಷಗಳ ಹಿಂದೆ ಸ್ಥಾಪಿಸಲಾಯಿತು. ಅಲ್ಲಿ ಒಟ್ಟು 6 ಬಿಳಿ ಘೇಂಡಾಮೃಗಗಳನ್ನು ಕಾಯುವ ಕೆಲಸ ಶುರುವಾಯಿತು. ಆದರೆ, ಸ್ಥಳೀಯ ಆಡಳಿತದಲ್ಲಿನ ಭ್ರಷ್ಟಾಚಾರ ಹಾಗೂ ದಂಧೆ ನಿರತರ ದುರಾಸೆಗೆ ಐದು ಘೇಂಡಾಮೃಗಗಳು ಬಲಿಯಾದವು. ಉಳಿದಿರುವುದು ಇವನೊಬ್ಬನೇ ಬಿಳಿಯ. ಇವನ್ನಾದರೂ ಉಳಿಸಿಕೊಳ್ಳುವ ಎಂದು 24 ಗಂಟೆಗಳ ಬಿಗಿ ಭದ್ರತೆ ನೀಡಲಾಗಿದೆ.

MM8054

ಖುಷಿಯ ಸಂಗತಿ ಏನೆಂದರೆ, ಈತನ ಸಂತತಿಯನ್ನು ಕೃತಕವಾಗಿ ಸೃಷ್ಟಿಸುವ ಕೆಲಸದಲ್ಲಿ ವಿಜ್ಞಾನಿಗಳು ನಿರತರಾಗಿದ್ದಾರೆ. ಹುಟ್ಟು, ಸಾವು ಮತ್ತು ನಿಸರ್ಗದ ನಡುವೆ ನಡೆಯುವ ಕೌತುಕಗಳು ಕೆಲವೊಮ್ಮೆ ಮಾನವೀಯ ಕ್ರೌರ್ಯಕ್ಕೆ, ಅದೇ ವೇಳೆ ಮನುಷ್ಯನ ಸಾಧ್ಯತೆಗಳಿಗೆ ಕನ್ನಡಿ ಹಿಡಿಯುತ್ತವೆ.

Leave a comment

FOOT PRINT

Top