An unconventional News Portal.

‘ದಿ ಹಿಂದೂ’ ಪತ್ರಿಕೆಯ ಸಂಪಾದಕರಿಗೆ ದೇವೇಗೌಡರ ಪುತ್ರ ಪತ್ರ ಬರೀತಾರಂತೆ!

‘ದಿ ಹಿಂದೂ’ ಪತ್ರಿಕೆಯ ಸಂಪಾದಕರಿಗೆ ದೇವೇಗೌಡರ ಪುತ್ರ ಪತ್ರ ಬರೀತಾರಂತೆ!

ಹಾಸನ ಜಿಲ್ಲೆಯ ಸಿಗರನಹಳ್ಳಿ ಪ್ರಕರಣದ ಹಿನ್ನೆಲೆಯಲ್ಲಿ ಭಾನುವಾರ ಹಾಸನದಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದ ಶಾಸಕ ರೇವಣ್ಣ ‘ದಿ ಹಿಂದೂ’ ಪತ್ರಿಕೆ ವಿರುದ್ಧ ತಮ್ಮ ಕೋಪತಾಪವನ್ನು ಹೊರಹಾಕಿದ್ದಾರೆ.

ಜೆಡಿಎಸ್ ರಾಷ್ಟ್ರಾದ್ಯಕ್ಷ, ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರ ಹುಟ್ಟೂರು ಹರದನಹಳ್ಳಿಯಿಂದ ಕೇವಲ 2. ಕಿ.ಮೀ ಅಂತರದಲ್ಲಿರುವ ಸಿಗರನಹಳ್ಳಿ ಗ್ರಾಮ, ಮೇಲ್ವರ್ಗದ ಒಕ್ಕಲಿಗರು ಹಾಗೂ ದಲಿತರ ನಡುವಿನ ಗಲಾಟೆಯಿಂದ ಕೆಳೆದ ಮೂರ್ನಾಲ್ಕು ದಿನಗಳಿಂದ ಸುದ್ದಿ ಕೇಂದ್ರದಲ್ಲಿದೆ.

ಗ್ರಾಮದ ಬಸವೇಶ್ವರ ದೇವರ ಜಾತ್ರಿ ವಿಚಾರದಲ್ಲಿ ಏ. 1ರಂದು ಗ್ರಾಮದ ಮೇಲ್ವರ್ಗದ ಜನ ಇಬ್ಬರು ಪತ್ರಕರ್ತರು ಸೇರಿದಂತೆ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದರು. ದಲಿತರ ಪರವಾಗಿ ವರದಿ ಮಾಡಲು ತೆರಳಿದ್ದ ವಿಜಯವಾಣಿ ಹಾಗೂ ವಿಶ್ವವಾಣಿ ಪತ್ರಿಕೆಗಳ ವರದಿಗಾರರು ಗಂಭೀರವಾಗಿ ಗಾಯಗೊಂಡ ಹಿನ್ನೆಲೆಯಲ್ಲಿ ಹಾಸನ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಘಟನೆಯಲ್ಲಿ ಶಾಸಕ ರೇವಣ್ಣ ಸ್ವಜಾತಿ ಪ್ರೇಮಕ್ಕೆ ಬಲಿಯಾಗಿ ಸಾಮಾಜಿಕ ನ್ಯಾಯವನ್ನು ಮರೆತಿದ್ದಾರೆ ಎಂದು ದೂರುಗಳು ಕೇಳಿ ಬಂದಿದ್ದರು.

ಹಿನ್ನಲೆ ಹೀಗಿರುವಾಗಲೇ, ಭಾನುವಾರ ಪತ್ರಿಕಾಗೋಷ್ಠಿ ಕರೆದ ರೇವಣ್ಣ, ಸಿಗರನಹಳ್ಳಿ ಘಟನೆ ಕುರಿತು ವರದಿ ಮಾಡಿದ ‘ದಿ ಹಿಂದೂ’ ಪತ್ರಿಕೆ ವಿರುದ್ಧ ಕಿಡಿಕಾರಿದ್ದಾರೆ. ಹಾಸನದಿಂದ ರಾಷ್ಟ್ರೀಯ ಪತ್ರಿಕೆಗೆ ವರದಿ ಮಾಡುತ್ತಿರುವ ಜಿ. ಟಿ. ಸತೀಶ್ ಅವರ ವಿರುದ್ಧ ಪರೋಕ್ಷವಾಗಿ ಕೋಪತಾಪವನ್ನು ಹೊರಹಾಕಿದ್ದಾರೆ. “ವರದಿಗಾರರು (ಸತೀಶ್) ರಾಷ್ಟ್ರಾದ್ಯಂತ ಸುದ್ದಿ ಮುಟ್ಟಿಸಿದ್ದಾರೆ. ‘ದಿ ಹಿಂದೂ’ ಪತ್ರಿಕೆಯ ರಾಮ್ ಅವರಿಗೂ ಪತ್ರ ಬರೆಯುತ್ತೇನೆ. ಅವರೂ ಬಂದು ನೋಡಲಿ,” ಎಂದು ಪತ್ರಿಕಾಗೋಷ್ಠಿಯಲ್ಲಿ ರೇವಣ್ಣ ಹೇಳಿದ್ದಾರೆ.

ಸದ್ಯ ಸಿಗರನಹಳ್ಳಿಯಲ್ಲಿ ಪೊಲೀಸ್ ಕಾವಲು ಮುಂದುವರಿದಿದೆ. ಗ್ರಾಮದಲ್ಲಿರುವ 28 ದಲಿತ ಕುಟುಂಬಗಳಿಗೂ ದೇವರ ಪೂಜೆಯಲ್ಲಿ ಪಾಲ್ಗೊಳ್ಳಲು ಅನುಮತಿ ಕೋರಿ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದ ಸ್ಥಳೀಯ ಪತ್ರಕರ್ತ ವಿಜಯ ಕುಮಾರ್ ವಿರುದ್ಧವೇ ಶಾಸಕ ರೇವಣ್ಣ ದೂರು ದಾಖಲಿಸಲು ಒತ್ತಡ ಹೇರುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Leave a comment

FOOT PRINT

Top