An unconventional News Portal.

‘ಕವಿಮನೆ ಕಳ್ಳತನ ಪ್ರಕರಣ’: ಆತುರಕ್ಕೆ ಬಿದ್ದ ಶಿವಮೊಗ್ಗ ಪೊಲೀಸರು ತನಿಖೆಯನ್ನು ಹಳ್ಳ ಹಿಡಿಸಿದರಾ?

‘ಕವಿಮನೆ ಕಳ್ಳತನ ಪ್ರಕರಣ’: ಆತುರಕ್ಕೆ ಬಿದ್ದ ಶಿವಮೊಗ್ಗ ಪೊಲೀಸರು ತನಿಖೆಯನ್ನು ಹಳ್ಳ ಹಿಡಿಸಿದರಾ?

ರಾಷ್ಟ್ರಕವಿ ಕುವೆಂಪು ಅವರ ‘ಕವಿ ಮನೆ’ ಕಳ್ಳತನ ಪ್ರಕರಣದಲ್ಲಿ ಆತುರಕ್ಕೆ ಬಿದ್ದ ಪೊಲೀಸರು ತನಿಖೆಯನ್ನು ಅರ್ಧದಲ್ಲಿಯೇ ಹಾದಿ ತಪ್ಪಿಸಿದರಾ? ಹೀಗೊಂದು ಅನುಮಾನ ಈಗ ವ್ಯಕ್ತವಾಗುತ್ತಿವೆ.

ಕಳೆದ ನವೆಂಬರ್ 23ನೇ ತಾರೀಖು ರಾತ್ರಿ ವೇಳೆ ಕುಪ್ಪಳ್ಳಿಯ ಮನೆಯಲ್ಲಿ ಕಳ್ಳತನವಾಗಿತ್ತು. ಕುವೆಂಪು ಅವರಿಗೆ ಬಂದಿದ್ದ ಪದ್ಮಭೂಷಣ ಸೇರಿದಂತೆ ನಾಲ್ಕು ಪದಕಗಳನ್ನು ಕದ್ದೊಯ್ಯಲಾಗಿತ್ತು.  ಜತೆಗೆ, ‘ಕವಿಮನೆ’ಯಲ್ಲಿದ್ದ ಹಣ ಪೆಟ್ಟಿಗೆ ಹಾಗೂ ಗಾಜುಗಳನ್ನು ಒಡೆಯಲಾಗಿತ್ತು.

ಮಾರನೇ ದಿನ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ರಾಜ್ಯಾದ್ಯಂತ ಭಾರಿ ಸುದ್ದಿಯಾಗಿತ್ತು. ಅಷ್ಟೇ ವೇಗವಾಗಿ ಕಾರ್ಯಚರಣೆಗೆ ಇಳಿದ ಶಿವಮೊಗ್ಗ ಪೊಲೀಸರು ‘ವಿಶೇಷ ತನಿಖಾ ತಂಡ’ವನ್ನು ರಚಿಸಿದ್ದರು. 48 ಗಂಟೆ ಒಳಗಾಗಿ ಮೂವರು ಆರೋಪಿಗಳನ್ನು ಬಂಧಿಸಿ ಜೈಲಿಗೂ ಕಳಿಸಿದ್ದರು. ದಾವಣಗೆರೆ ಮೂಲದ ರೇವಣ ಸಿದ್ದಪ್ಪ ಅಲಿಯಾಸ್ ಕಾಯಕದ ರೇವಣ್ಣ, ಕುಪ್ಪಳ್ಳಿ ಪ್ರತಿಷ್ಠಾನದಲ್ಲಿ ಒಂದೂವರೆ ದಶಕಗಳಿಂದ ಕೆಲಸ ಮಾಡಿಕೊಂಡು ಬರುತ್ತಿದ್ದ ಆಂಜನಪ್ಪ ಹಾಗೂ ಶಿವಮೊಗ್ಗ ಸಮೀಪದ ಸವಳಂಗ ಮೂಲದ ಪ್ರಕಾಶ್ ಬಂಧಿತರು. ಇವರಿಂದ ಕದ್ದಿದ್ದ ಪದಕಗಳನ್ನು ವಶಕ್ಕೆ ಪಡೆದುದ್ದಾಗಿ ಪೊಲೀಸರು ಹೇಳಿಕೊಂಡರಾದರೂ, ಪದ್ಮವಿಭೂಷಣ ಪದಕ ಚೌಕಟ್ಟು (ಫ್ರೇಂ) ಮಾತ್ರವೇ ಸಿಕ್ಕಿತು. ಇದಾಗಿ ಎರಡು ತಿಂಗಳು ಕಳೆಯುವುದೊರಳಗಾಗಿ ಮೂವರೂ ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಇದರಲ್ಲಿ ಪ್ರಮುಖ ಆರೋಪಿ ರೇವಣ ಸಿದ್ದಪ್ಪ ಮಾತ್ರ ಸ್ಥಳೀಯ ಇಬ್ಬರ ಸೆಕ್ಯುರಿಟಿ ಬಾಂಡ್ ಸಿಗದ ಹಿನ್ನೆಲೆಯಲ್ಲಿ ಇನ್ನೂ ಜೈಲಿನಲ್ಲಿದ್ದಾನೆ. ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿದ್ದ ಪ್ರಕರಣದಲ್ಲಿ ಪೊಲೀಸರು ದೋಷಾರೋಪ ಪಟ್ಟಿಯನ್ನೂ ಸಲ್ಲಿಸಿದ್ದಾರೆ.

ಇವತ್ತು ನ್ಯಾಯಾಲಯದಲ್ಲಿ ಪೊಲೀಸರು ಸಲ್ಲಿರುವ ತನಿಖೆಯ ದಾಖಲೆಗಳು, ಆರೋಪಿಗಳ ಹಿನ್ನಲೆ, ಕಳ್ಳತನದ ಸುತ್ತ ನಡೆದಿರುವ ಸಂಚು (ಪೊಲೀಸರು ಹೇಳವಂತೆ) ಹಾಗೂ ಕುಪ್ಪಳ್ಳಿ ಸುತ್ತಮುತ್ತ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ, ಪ್ರಕರಣದ ತನಿಖೆ ಮೇಲ್ಮಟ್ಟದಲ್ಲಿಯೇ ತೇಪೆ ಸಾರಿಸಿದ ಸಾಧ್ಯತೆಗಳ ಬಗ್ಗೆ ದಟ್ಟ ಅನುಮಾನಗಳು ಕಾಡುತ್ತವೆ.

ದೋಷಾರೋಪ ಪಟ್ಟಿಯಲ್ಲೇನಿದೆ?

ಕವಿಮನೆ ಕಳ್ಳತನ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಆರೋಪಿಗಳು (ಎಡದಿಂದ- ಆಂಜನಪ್ಪ, ರೇವಣ ಸಿದ್ದಪ್ಪ, ಪ್ರಕಾಶ್)

ಕವಿಮನೆ ಕಳ್ಳತನ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಆರೋಪಿಗಳು (ಎಡದಿಂದ- ಆಂಜನಪ್ಪ, ರೇವಣ ಸಿದ್ದಪ್ಪ, ಪ್ರಕಾಶ್)

ಪ್ರಕರಣದ ತನಿಖೆ ಮುಗಿಸಿರುವ ಪೊಲೀಸರು ತೀರ್ಥಹಳ್ಳಿ ನ್ಯಾಯಾಲಯದ ಮುಂದೆ ಮೂವರೂ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ‘ಮೊದಲ ಆರೋಪಿ ರೇವಣ ಸಿದ್ದಪ್ಪನ ಮಗಳು ಬಾಣಂತನಕ್ಕೆ ತವರು ಮನೆಗೆ ಬಂದಿದ್ದಳು. ಆತನ ಆರ್ಥಿಕ ಸ್ಥಿತಿ ಸರಿ ಇಲ್ಲವಾದ್ದರಿಂದ ಕುವೆಂಪು ಮನೆಯಲ್ಲಿದ್ದ ಪದಕಗಳನ್ನು ಕದಿಯಲು ತೀರ್ಮಾನಿಸಿದ. ಹಾಗೊಂದು ಐಡಿಯಾ ಕೊಟ್ಟಿದ್ದು ‘ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ’ದಲ್ಲಿ 15 ವರ್ಷಗಳಿಂದ ಉದ್ಯೋಗಿಯಾಗಿರುವ ಆಂಜನಪ್ಪ. ಆತನ ಸಹಾಯದಿಂದ ಕವಿಮನೆಗೆ ಹಿಂದಿನಿಂದ ಏಣಿ ಹಾಕಿಕೊಂಡು ಒಳಕ್ಕೆ ಇಳಿದ ರೇವಣ ಸಿದ್ದಪ್ಪ, ಪದಕಗಳನ್ನು ಕದ್ದಿದ್ದಾನೆ. ಅದರಲ್ಲಿ ಎರಡು ಕಳ್ಳತನ ಮಾಡಿಕೊಂಡು ಹೋಗುವಾಗ ಬಿದ್ದು ಹೋಗಿವೆ. ಉಳಿದಿದ್ದರಲ್ಲಿ ಒಂದನ್ನು ಆಂಜನಪ್ಪನಿಗೆ ಕೊಟ್ಟು 500 ರೂಪಾಯಿ ತೆಗೆದುಕೊಂಡಿದ್ದಾನೆ. ಮತ್ತೊಂದು ಹಿತ್ತಾಳೆ ಪದಕವನ್ನು ಸವಳಂಗ ಸಮೀಪದ ರಟ್ಟೆಹಳ್ಳಿಯಲ್ಲಿದ್ದ ದೂರ ಸಂಬಂಧಿ ಪ್ರಕಾಶ್ ಎಂಬುವವನಿಗೆ ಕೊಟ್ಟು 2000 ತೆಗೆದುಕೊಂಡಿದ್ದಾನೆ…’ ಎಂಬುದು ಪೊಲೀಸರು ಹೇಳುತ್ತಿರುವ ಕಳ್ಳತನ ಪ್ರಕರಣದ ಸಾರಾಂಶ.

“ನಮ್ಮ ತನಿಖೆಯಲ್ಲಿ ಈವರೆಗೆ ಕಂಡುಬಂದಿರುವುದು ಇಷ್ಟು. ಮುಂದಿನ ದಿನಗಳಲ್ಲಿ ಹೊಸ ವಿಚಾರಗಳು ತಿಳಿದುಬಂದರೆ, ತನಿಖೆ ನಡೆಸಲು ನಾವು ಸಿದ್ಧರಿದ್ದೇವೆ. ಸಧ್ಯ ಪ್ರಕರಣದಲ್ಲಿ ನಮ್ಮ ತನಿಖೆ ಮುಗಿದು, ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದೇವೆ…”

– ರವಿ ಚನ್ನಣ್ಣನವರ್,  ಶಿವಮೊಗ್ಗ ಪೊಲೀಸ್ ವರಿಷ್ಟಾಧಿಕಾರಿ

ಹಲವು ಅನುಮಾನ:

ಪೊಲೀಸರು ಹೇಳುತ್ತಿರುವ ಈ ಕತೆಯಲ್ಲಿಯೇ ಹಲವು ಅನುಮಾನಗಳು ಮೂಡುತ್ತಿವೆ. ಮೊದಲನೆಯದಾಗಿ ಆರೋಪಿಗಳ ಹಿನ್ನೆಲೆ ಮತ್ತು ಅವರು ಕದಿಯಲು ಯೋಚಿಸಿದ ಪದಕಗಳ ಮೌಲ್ಯಗಳ ನಡುವೆ ದೊಡ್ಡ ಅಂತರವೊಂದು ಕಂಡುಬರುತ್ತದೆ. ಮೊದಲ ಆರೋಪಿ ರೇವಣ ಸಿದ್ದಪ್ಪ ಇದಕ್ಕೂ ಮೊದಲು ಹಲವು ಪ್ರಕರಣಗಳಲ್ಲಿ ಜೈಲು ಪಾಲಾಗಿದ್ದ ವ್ಯಕ್ತಿ. ಪದೇ ಪದೇ ಪೊಲೀಸರು ಈತನನ್ನು ಹುಡುಕಿಕೊಂಡು ಮನೆಗೆ ಬರುತ್ತಿದ್ದರು. ಈ ಹಿನ್ನೆಲೆಯಲ್ಲಿಆತ ಮನೆಯನ್ನು ಪದೇ ಪದೇ ಬದಲಿಸುತ್ತಿದ್ದವನು. ಹಾಗಂತ ಅವನೇ ‘ಸ್ವ ಖುಷಿ ಹೇಳಿಕೆ’ಯಲ್ಲಿ ಹೇಳಿಕೊಂಡಿದ್ದಾನೆ. ಆತನ ಜತೆಗಿದ್ದ ದಾವಣಗೆರೆ ಮೂಲವೊಂದರ ಮಾಹಿತಿ ಪ್ರಕಾರ ಈತ ಪೊಲೀಸರಿಗೆ ಆಪ್ತವಾಗಿದ್ದ ಮನುಷ್ಯ. ಕೆಲವು ಕಳ್ಳತನ ಪ್ರಕರಣಗಳಲ್ಲಿ ಈತ ‘ಅಪ್ರೂವರ್’ ಆಗುವ ಮೂಲಕ ಪ್ರಕರಣಗಳನ್ನು ಭೇದಿಸಲು ಪೊಲೀಸರಿಗೆ ನೆರವಾಗುತ್ತಿದ್ದ!. ಇಂತವನು ಆರ್ಥಿಕ ಮುಗ್ಗಟ್ಟು ಎದುರಾಗುತ್ತಿದ್ದಂತೆ, ದಾವಣಗೆರೆಯಿಂದ ಕುಪ್ಪಳ್ಳಿಗೆ ಬಂದು ಹಿತ್ತಾಳೆ ಪದಕಗಳನ್ನು ಕದಿಯುತ್ತಾನೆ; ಅದೂ 2500 ರೂಪಾಯಿಗಳಿಗೆ.

‘ಕವಿಮನೆ’ಯಲ್ಲಿ ಸಿಕ್ಕ ಕಳ್ಳತನದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಆರೋಪಿ ಮುಖ ಮುಚ್ಚಿಕೊಂಡಿದ್ದಾನೆ. ಉಳಿದ ದೃಶ್ಯಗಳು ಕಪ್ಪು ಬಿಳುಪುಗಳಲ್ಲಿವೆ. ‘ಸಮಾಚಾರ’ ಈ ಬಗ್ಗೆ ಮತ್ತೊಬ್ಬ ಆರೋಪಿ ಆಂಜನಪ್ಪನ ಜತೆ ಮಾತುಕತೆ ನಡೆಸಿದಾಗ, “ಆ ದೃಶ್ಯಗಳಲ್ಲಿ ಇದ್ದವನು ರೇವಣ ಸಿದ್ದಪ್ಪನೇ. ಆದರೆ ಆತ ಇಲ್ಲಿಗೆ ಬಂದು ಕದಿಯಲು ಬೇರೆ ಕಾರಣಗಳಿರಬಹುದು,” ಎಂಬ ಅನುಮಾನ ವ್ಯಕ್ತಪಡಿಸುತ್ತಾನೆ.

ಇನ್ನು, ಪೊಲೀಸರ ಪ್ರಕಾರ ರೇವಣ ಸಿದ್ದಪ್ಪ ಕುಪ್ಪಳ್ಳಿಗೆ ಬರಲು ಕಾರಣ ಪ್ರತಿಷ್ಠಾನದ ಕೆಲಸಗಾರ ಆಂಜನಪ್ಪ. ಈತ ಮತ್ತು ರೇವಣ ಸಿದ್ದಪ್ಪ ದಾವಣಗೆರೆ ಮೂಲದವರು. ಇಬ್ಬರಿಗೂ ಮೊದಲೇ ಪರಿಚಯ ಇತ್ತು. ಹೀಗಾಗಿ, ರೇವಣ ಸಿದ್ದಪ್ಪನಿಗೆ ಕುಪ್ಪಳ್ಳಿ ಮನೆಯಲ್ಲಿ ಕದಿಯುವ ಕುರಿತು ಯೋಜನೆ ಹಾಕಿಕೊಟ್ಟವನು ಆಂಜನಪ್ಪ ಎಂಬುದು ಆರೋಪ. “ಕುಪ್ಪಳ್ಳಿ ನನಗೆ ಅನ್ನ, ಬದುಕು ಕೊಟ್ಟ ಊರು. ಹದಿನೈದು ವರ್ಷಗಳಿಂದ ಅಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ಆ ಪದಕಗಳು ಅಲ್ಲಿದ್ದರೆ ಮಾತ್ರವೇ ಅವುಗಳಿಗೆ ಮೌಲ್ಯ. ಕದಿಯುವುದೇ ಆಗಿದ್ದ 15 ವರ್ಷ ಕಾಯಬೇಕಿರಲಿಲ್ಲ. ಅದಕ್ಕಿಂತ ಹೆಚ್ಚಾಗಿ ಅಲ್ಲಿ ಸಿಸಿಟಿವಿ ಹಾಕಿಸಲು ನಾನೇ ಹೇಳಿದ್ದೆ,” ಎನ್ನುತ್ತಾನೆ ಆಂಜುನಪ್ಪ. ಕುವೆಂಪು ಬಗ್ಗೆ ಕುಪ್ಪಳ್ಳಿಯ ಬಗ್ಗೆ ಈವರೆಗೆ ಒಂದು ಲಕ್ಷ ಜನರಿಗೆ ಮಾರ್ಗದರ್ಶನ ಮಾಡಿದವನು ಆಂಜನಪ್ಪ. ಆತನ ಮನೆಯಲ್ಲಿ ಇರುವ ಮೂರು ಫೊಟೋಗಳ ಪೈಕಿ ಎರಡು ಕುವೆಂಪು ಅವರದ್ದು. “ಈಗ ಪದ್ಮಭೂಷಣ ಪದಕ ಕಳೆದು ಹೋಗಿದೆ ಎನ್ನುತ್ತಿದ್ದಾರೆ. ಕದಿಯಲು ಬಂದವರು ಬೀಳಿಸಿಕೊಂಡು ಹೋಗ್ತಾರ,” ಎಂಬುದು ಆಂಜುನಪ್ಪನ ಪ್ರಶ್ನೆ.

ಮತ್ತೊಂದು ಹಿತ್ತಾಳೆ ಪದಕವನ್ನು ರೇವಣ ಸಿದ್ದಪ್ಪನಿಂದ 2000 ಸಾವಿರ ರೂಪಾಯಿಗೆ ಖರೀದಿಸಿದವನು ಸವಳಂಗ ಮೂಲದ ಪ್ರಕಾಶ್. ಚಿಕ್ಕದೊಂದು ಕಿರಾಣಿ ಅಂಗಡಿ ನಡೆಸುವುದು ಆತನ ಹಿನ್ನೆಲೆ. ಇಂತವನು ಕುವೆಂಪು ಅವರಿಗೆ ಬಂದ ಹಿತ್ತಾಳೆ ಪದಕಕ್ಕೆ 2000 ಸಾವಿರ ಕೊಟ್ಟು ಯಾಕೆ ಖರೀದಿಸುತ್ತಾನೆ?

ಪದಕಗಳನ್ನು ಕದಿಯಲು ಬಂದವರು ಮನೆಯ ವಸ್ತುಗಳನ್ನು ಚಲ್ಲಾಪಿಲ್ಲಿ ಮಾಡಿದ ಪರಿ.

ಪದಕಗಳನ್ನು ಕದಿಯಲು ಬಂದವರು ಮನೆಯ ವಸ್ತುಗಳನ್ನು ಚಲ್ಲಾಪಿಲ್ಲಿ ಮಾಡಿದ ಪರಿ.

ಇಂತಹ ಕೆಲವು ಅನುಮಾನಗಳು ಈ ಪ್ರಕರಣದ ತನಿಖೆಯನ್ನು ಗಮನಿಸಿದರೆ ಮೂಡುತ್ತವೆ. ಇದು ಬರೀ ಒಬ್ಬ ಹವ್ಯಾಸಿ ಕಳ್ಳನೊಬ್ಬ ತನ್ನ ಆರ್ಥಿಕ ಸಂಕಷ್ಟವನ್ನು ಪರಿಹರಿಸಿಕೊಳ್ಳಲು ನಡೆಸಿದ ಕಳ್ಳತನ ಮಾತ್ರನಾ? ಅಥವಾ ಕುಪ್ಪಳ್ಳಿ ಮನೆಯಲ್ಲಿ ಅಂದು ರಾತ್ರಿ ನಡೆಸಿದ ದಾಂಧಲೆ, ಒಡೆದ ಗಾಜುಗಳ ದೃಶ್ಯಗಳ ಮೂಲಕ ಬೇರೇನೋ ಸಂದೇಶ ನೀಡಲು ಯತ್ನಿಸಿದ ಷಢ್ಯಂತ್ರವಾ? ಪೊಲೀಸರು ತಮ್ಮ ತನಿಖೆಯಲ್ಲಿ ಮೂವರ ಹೊರತಾದ ಕಾಣದ ಕೈಗಳನ್ನು ಗುರುತಿಸಲು ಸೋತರಾ? ಇಂತಹ ಪ್ರಶ್ನೆಗಳು ಕುಪ್ಪಳ್ಳಿ ಸುತ್ತಮುತ್ತ ಕೇಳಿಬರುತ್ತಿವೆ. ಪರಿಹರಿಸಬೇಕಾದವರು ಆತುರಕ್ಕೆ ಬಿದ್ದವರಂತೆ, ತನಿಖೆ ನಡೆಸಿ ಕೈ ತೊಳೆದುಕೊಂಡಿದ್ದಾರೆ. 

 

 • ಕುಪ್ಪಳ್ಳಿಯ ‘ಕವಿಮನೆ’. (ಚಿತ್ರ: kishusworld.blogspost.com)

1 Comment

 • Apr 02,2016
  raghu

  Hi, this is a comment.
  To get started with moderating, editing, and deleting comments, please visit the Comments screen in the dashboard.
  Commenter avatars come from Gravatar.

  Reply Reply

Leave a comment

FOOT PRINT

Top