An unconventional News Portal.

‘ಹಾರಟ ಶುರುಮಾಡಿದ 15 ನಿಮಿಷಕ್ಕೆ ಆತನ ಹತೋಟಿಯಲ್ಲಿತ್ತು ವಿಮಾನ’: ಹೈಜಾಕರ್ ಮುಸ್ತಫಾನ ಅಸಲಿ ಕತೆ!

‘ಹಾರಟ ಶುರುಮಾಡಿದ 15 ನಿಮಿಷಕ್ಕೆ ಆತನ ಹತೋಟಿಯಲ್ಲಿತ್ತು ವಿಮಾನ’: ಹೈಜಾಕರ್ ಮುಸ್ತಫಾನ ಅಸಲಿ ಕತೆ!

ಬುಧವಾರ ಲಾರ್ನಾಕ ನ್ಯಾಯಾಲಯದಿಂದ ಹೊರಬಂದ ಆರೋಪಿ ಮುಸ್ತಫಾ 'ವಿಜಯಿ ಚಿನ್ಹೆ'ಯನ್ನು ಮಾಧ್ಯಮಗಳಿಗೆ ತೋರಿಸಿದ್ದು ಹೀಗೆ...(ಚಿತ್ರ: ಎಪಿ)

ಬುಧವಾರ ಲಾರ್ನಾಕ ನ್ಯಾಯಾಲಯದಿಂದ ಹೊರಬಂದ ಆರೋಪಿ ಮುಸ್ತಫಾ ‘ವಿಜಯಿ ಚಿನ್ಹೆ’ಯನ್ನು ಮಾಧ್ಯಮಗಳಿಗೆ ತೋರಿಸಿದ್ದು ಹೀಗೆ…(ಚಿತ್ರ: ಎಪಿ)

ಮಂಗಳವಾರ ಇಡೀ ಜಗತ್ತನ್ನು ತುದಿಗಾಲ ಮೇಲೆ ನಿಲ್ಲಿಸಿದ್ದ ‘ಈಜಿಪ್ಟ್ ವಿಮಾನ ಅಪಹರಣ ಪ್ರಕರಣ’ದ ನಿಜಾಂಶ ಇದೀಗ ಬಹಿರಂಗಗೊಂಡಿದೆ. ಆರೋಪಿ ಸೈಫ್ ಎಲ್-ದೀನ್ ಮುಸ್ತಫಾನನ್ನು ಸಿಪ್ರಸ್ ದೇಶದ ಲಾರ್ನಾಕ ನ್ಯಾಯಾಲಯಕ್ಕೆ ಹಾಜರುಪಡಿಸಿರುವ ಪೊಲೀಸರು ಘಟನೆ ಕುರಿತು ಮಾಹಿತಿ ನೀಡಿದ್ದಾರೆ. ಆರೋಪಿಯನ್ನು ಮುಂದಿನ ಎಂಟು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿರುವ ನ್ಯಾಯಾಲಯ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿರುವುದಾಗಿ ತಿಳಿಸಿದೆ.

ಹೈಜಾಕ್ ಯಾಕೆ?:

ಸೈಫ್ ಎಲ್- ದೀನ್ ಮುಸ್ತಫಾ ಮೂಲತಃ ಈಜಿಪ್ಟ್ ದೇಶದ ಪ್ರಜೆ. ಈತನಿಂದ ದೂರವಾದ ಪತ್ನಿ ಹಾಗೂ ಮಕ್ಕಳು ಸಿಪ್ರಸ್ನಲ್ಲಿ ವಾಸವಾಗಿದ್ದರು. “ಇವರನ್ನು ನೋಡಲು ಕಳೆದ 24 ವರ್ಷಗಳಿಂದ ಕಾತುರದಿಂದ ಕಾಯುತ್ತಿದ್ದೆ. ಆದರೆ ಈಜಿಪ್ಟ್ ದೇಶದ ಅಧಿಕಾರಿಗಳು ಅದಕ್ಕೆ ಅವಕಾಶ ಮಾಡಿಕೊಟ್ಟಿರಲಿಲ್ಲ. ಹೀಗಾಗಿ ವಿಮಾನವನ್ನು ಹೈ ಜಾಕ್ ಮಾಡಬೇಕಾಗಿ ಬಂತು,” ಎಂಬ ಆರೋಪಿ ಹೇಳಿಕೆಯನ್ನು ಸಿಪ್ರಸ್ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಹೈಜಾಕ್ ಹೇಗೆ?:

ಈಜಿಪ್ಟ್ ದೇಶದ ಅಲೆಗ್ಸಾಂಡ್ರಿಯಾ ವಿಮಾನ ನಿಲ್ದಾಣದಿಂದ ‘ಈಜಿಪ್ಟ್ ಏರ್’ ವಿಮಾನಯಾನ ಸಂಸ್ಥೆಗೆ ಸೇರಿದ ಜಟ್ ಫ್ಲೈಟ್ ಟೇಕಾಫ್ ಆಗಿ 15 ನಿಮಿಷಗಳಿಗೆ ಮುಸ್ತಫಾ ಹತೋಟಿಗೆ ತೆಗೆದುಕೊಂಡ ಎಂದು ಪೊಲೀಸರು ತಿಳಿಸಿದ್ದಾರೆ. ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳ ಪ್ರಕಾರ, ‘ವಿಮಾನ ಹಾರಾಟ ಶುರುಮಾಡಿ 15 ನಿಮಿಷವಾಗುತ್ತಲೇ ವಿಮಾನದ ಸಿಬ್ಬಂದಿಯೊಬ್ಬರ ಬಳಿ ಬಂದ ಮುಸ್ತಫಾ ಸೊಂಟಕ್ಕೆ ಸುತ್ತಿಕೊಂಡಿದ್ದ ಬೆಲ್ಟ್ ತೋರಿಸಿದ್ದಾನೆ. ನಾನು ಹೇಳದಂತೆ ಕೇಳದಿದ್ದರೆ ಸ್ಫೋಟಿಸುವುದಾಗಿ ಬೆದರಿಸಿದ್ದಾರೆ. ವಿಮಾನದಲ್ಲಿದ್ದ ಪ್ರಯಾಣಿಕರ ಪಾಸ್ಪೋರ್ಟ್ ವಶಕ್ಕೆ ಪಡೆದುಕೊಂಡಿದ್ದಾನೆ. ವಿಮಾನವನ್ನು ಈಜಿಪ್ಟ್ ಬಿಟ್ಟಯ ಬೇರೆ ಎಲ್ಲಾದರೂ ಇಳಿಸುವಂತೆ ತಿಳಿಸಿದ್ದಾನೆ. ಸಿಪ್ರಸ್ಗೆ ತೆಗೆದುಕೊಂಡು ಹೋದರೆ ಒಳ್ಳೆಯದು ಎಂದೂ ತಿಳಿಸಿದ್ದಾನೆ,’ ಎಂದು ವಿವರವಾಗಿ ವಿಮಾನ ಅಪಹರಣಕ್ಕೆ ಈಡಾದ ಬಗೆಯನ್ನು ಪೊಲೀಸರು ನ್ಯಾಯಾಲಯದ ಮುಂದೆ ಬಿಚ್ಚಿಟ್ಟಿದ್ದಾರೆ.

ಬಾಂಬ್ ನಿಜನಾ?

ಇದೇ ವೇಳೆ, ಆರೋಪಿ ಮುಸ್ತಫಾ ಮೊಬೈಲ್ ಫೋನ್ಗಳನ್ನು ಬಟ್ಟೆಯಲ್ಲಿ ಸುತ್ತಿಕೊಂಡು ಬಾಂಬ್ ಎಂದು ಬೆದರಿಸಿದ್ದಾನೆ ಎಂದು ‘ಸಿಪ್ರಸ್ ಮೇಲ್’ ಪತ್ರಿಕೆ ವರದಿ ಮಾಡಿದೆ. ಸ್ಥಳೀಯ ತನಿಖಾಧಿಕಾರಿಯೊಬ್ಬರು ನೀಡಿದ ಮಾಹಿತಿಯನ್ನು ಆಧರಿಸಿರುವ ವರದಿಯಲ್ಲಿ, ‘ಆರೋಪಿ ಮುಸ್ತಫಾ ನಕಲಿ ಬಾಂಬ್ ಇಟ್ಟುಕೊಂಡು ಇಡೀ ವಿಮಾನವನ್ನು ಅಪಹರಿಸುವ ನಾಟಕ ಮಾಡಿದ್ದಾನೆ. ಈತ ಹಿಂದೆಯೂ ಕಲವು ಕ್ರಿಮಿನಲ್ ಕೃತ್ಯಗಳಲ್ಲಿ ಪಾಲ್ಗೊಂಡ ಬಗ್ಗೆ ಮಾಹಿತಿ ಇದೆ,’ ಎಂದು ಪ್ರಸ್ತಾಪಿಸಲಾಗಿದೆ.

ಮಂಗಳವಾರ ಬೆಳಗ್ಗೆ ಅಲೆಗ್ಸಾಂಡ್ರಿಯ ನಗರದಿಂದ ಕೈರೋಗೆ ಹೊರಟಿದ್ದ ವಿಮಾನ ಮಾರ್ಗ ಮಧ್ಯೆ ಅಪಹರಣಕ್ಕೆ ಈಡಾಗಿತ್ತು. ತನ್ನ ಪತ್ನಿ ಹಾಗೂ ಮಕ್ಕಳನ್ನು ನೋಡುವ ಸಲುವಾಗಿ 52 ವರ್ಷದ ಮುಸ್ತಫಾ ವಿಮಾನವನ್ನು ಹೈ ಜಾಕ್ ಮಾಡಿ ಬಲವಂತವಾಗಿ ಸಿಪ್ರಸ್ ದೇಶದ ಲಾರ್ನಾಕ ವಿಮಾನ ನಿಲ್ದಾಣದಲ್ಲಿ ಇಳಿಸಿದ್ದ. ನಂತರ ಆತ ಪೊಲೀಸರಿಗೆ ಶರಣಾಗಿದ್ದ.

 

Leave a comment

FOOT PRINT

Top