An unconventional News Portal.

ಬಜೆಟ್ ಮಂಡನೆ ಶಾಸ್ತ್ರ ಮುಗಿಸಿದ ಬಿಬಿಎಂಪಿ; ಆದಾಯಕ್ಕೆ ರಾಜ್ಯ ಸರಕಾರವೇ ಆಸರೆ, ವೆಚ್ಚದಲ್ಲಿ ಇಲ್ಲದ ಭರವಸೆ!

ಬಜೆಟ್ ಮಂಡನೆ ಶಾಸ್ತ್ರ ಮುಗಿಸಿದ ಬಿಬಿಎಂಪಿ; ಆದಾಯಕ್ಕೆ ರಾಜ್ಯ ಸರಕಾರವೇ ಆಸರೆ, ವೆಚ್ಚದಲ್ಲಿ ಇಲ್ಲದ ಭರವಸೆ!

ಬಿಬಿಎಂಪಿ ಕೇಂದ್ರ ಕಟ್ಟಡ (ಚಿತ್ರ: ದಿ ಹಿಂದೂ)

ಬಿಬಿಎಂಪಿ ಕೇಂದ್ರ ಕಟ್ಟಡ (ಚಿತ್ರ: ದಿ ಹಿಂದೂ)

2016-17 ನೇ ಸಾಲಿನ ಬಿಬಿಎಂಪಿ ಬಜೆಟ್ ಮಂಡನೆ ಶಾಸ್ತ್ರವನ್ನು ಸೋಮವಾರ ಮುಗಿಸಲಾಯಿತು.

ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಕೂಟದ ಪರವಾಗಿ ಪಾಲಿಕೆಯ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಶಿವರಾಜು ಆಯವ್ಯಯವನ್ನು ಮಂಡಿಸಿದರು. ದಿವಾಳಿ ಸ್ಥಿತಿ ತಲುಪಿದ್ದ, ಆದಾಯ ಮತ್ತು ಖರ್ಚಿನ ನಡುವೆ ಬ್ಯಾಲೆನ್ಸ್ ಕಳೆದುಕೊಂಡಿದ್ದ ಬಿಬಿಎಂಪಿ, ಹಲವು ವರ್ಷಗಳ ನಂತರ ಮೊದಲ ಬಾರಿಗೆ ಆದಾಯ ಮತ್ತು ವಿನಿಯೋಗದಲ್ಲಿ ಸಮತೋಲನ ಕಾಯ್ದುಕೊಂಡಿರುವುದು ಇದರ ಹೈಲೈಟ್ಸ್. ಇದನ್ನು ಬಿಟ್ಟರೆ, 8, 994. 41 ಕೋಟಿ ರೂಪಾಯಿ ಗಾತ್ರದ ಬಜೆಟ್ನಲ್ಲಿ ಸಿಲಿಕಾನ್ ಸಿಟಿಯ ಸಮಗ್ರ ಅಭಿವೃದ್ಧಿಯ ಬಗ್ಗೆ ಒಳನೋಟಗಳು ಸಿಗುವುದಿಲ್ಲ. ವಾರ್ಡ್ವಾರು ಸದಸ್ಯರನ್ನು ಖುಷಿ ಪಡಿಸುವ ಸಲುವಾಗಿ ಅನುದಾನಗಳ ವಿಂಘಡನೆ ಮತ್ತು ಜನಪ್ರಿಯತೆಗೆ ಒತ್ತು ನೀಡುವ ವ್ಯರ್ಥ ಪ್ರಯತ್ನ ಎದ್ದು ಕಾಣಿಸುತ್ತಿದೆ.

ಕಾಯ್ದುಕೊಂಡ ಸಮತೋಲನ

ಪಾಲಿಕೆ ಇನ್ನೇನು ದಿವಾಳಿ ಹಂತಕ್ಕೆ ಬಂದಿದೆ ಎಂಬ ಮಾತುಗಳು ಕಳೆದು ಮೂರು ವರ್ಷಗಳ ಅಂತರದಲ್ಲಿ ಕೇಳಿಬಂದಿದ್ದವು. ಇದಕ್ಕೆ ಪೂರಕ ಎಂಬಂತೆ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಆಡಳಿತ ಮಂಡಿಸಿದ ಬಜೆಟ್ ಕೂಡ ಆದಾಯ ಕಮ್ಮಿ, ಖರ್ಚು ಜಾಸ್ತಿ ಎಂಬ ಸ್ಥಿತಿಯಲ್ಲಿತ್ತು. ತೆರಿಗೆ ಸಂಗ್ರಹಗಳಲ್ಲಿ ಪಾಲಿಕೆ ವಿಫಲಗೊಂಡಿತ್ತು. ಆದರೆ, ರಾಜಕೀಯ ಬೆಳವಣಿಗೆಯಲ್ಲಿ ಆಡಳಿತಾಧಿಕಾರಿ ನೇಮಕದ ನಂತರ ಪಾಲಿಗೆ ತೆರಿಗೆ ಸಂಗ್ರಹದ ವಿಚಾರದಲ್ಲಿ ಕೊಂಚ ಚೇತರಿಕೆ ಕಂಡುಬಂದಿತ್ತು. ಜತೆಗೆ, ನಿಖರ ಆದಾಯದ ಬಗ್ಗೆಯೂ ಒಂದು ಅಂಕಿ ಅಂಶ ಸಿಕ್ಕಿತ್ತು. ಈ ಬಾರಿ ಬಜೆಟ್ ಮಂಡನೆ ವೇಳೆ, ಸುಮಾರು 4. 7 ಸಾವಿರ ಕೋಟಿ ತೆರಿಗೆ ಸಂಗ್ರಹದ ಗುರಿಯನ್ನು ತೋರಿಸಲಾಗಿದೆ. ಅಂಗಡಿ ಮಳಿಗೆಗಳ ಬಾಡಿಗೆ, ಜಾಹೀರಾತು ತೆರಿಗೆ, ಓಎಫ್ಸಿ ಕೇಬಲ್ ಅಳವಡಿಕೆ ಹೀಗೆ ಸಿದ್ಧ ಮೂಲಗಳಿಂದ ಆದಾಯವನ್ನು ನಿರೀಕ್ಷಿಸಲಾಗುತ್ತಿದೆ. ಹೊಸ ಆದಾಯ ಮೂಲಗಳನ್ನು ಕಂಡುಕೊಳ್ಳುವ ಒಳನೋಟಗಳು ಬಜೆಟ್ನಲ್ಲಿ ಲಭ್ಯವಿಲ್ಲವಾದರೂ, ಇರುವ ಮೂಲಗಳಿಂದ ಹೆಚ್ಚಿನ ತೆರಿಗೆ ಸಂಗ್ರಹದ ಮೂಲಕ ಒಟ್ಟು 4755. 68 ಕೋಟಿ ಆದಾಯದ ನಿರೀಕ್ಷೆಯನ್ನು ಬಜೆಟ್ ಮೂಡಿಸಿದೆ. ಇದರ ಜತೆಗೆ ರಾಜ್ಯ ಸರಕಾರದಿಂದ ಬರುವ ಸುಮಾರು 4235.490  ಕೋಟಿ ರೂಪಾಯಿ ಬಿಬಿಎಂಪಿಯ ಸದ್ಯದ ಬೆನ್ನೆಲುಬು.

ಅದೇ ಹಳೇ ಮಾದರಿ

ಇನ್ನು, ವೆಚ್ಚದ ವಿಚಾರಕ್ಕೆ ಬಂದರೆ, ಪಾಲಿಕೆ ಆಡಳಿತದಲ್ಲಿ ಹೊಸ ವಿಶ್ವಾಸಗಳನ್ನು ಇಟ್ಟುಕೊಳ್ಳುವ ಅಗತ್ಯವಿಲ್ಲ ಎಂಬುದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಕಳೆದ ಬಾರಿಯ ಖೋತಾ ಬಜೆಟ್ ಕಾಪಿಯಲ್ಲಿ ಚಿಕ್ಕಪುಟ್ಟ ವ್ಯತ್ಯಾಸ ಮಾಡಿದರೆ, ವೆಚ್ಚದ ವಿಚಾರದಲ್ಲಿ ಹೆಚ್ಚಿನ ಬದಲಾವಣೆ ಕಾಣಿಸುವುದಿಲ್ಲ. ಬದಲಿಗೆ, ಇನ್ನೊಂದಿಷ್ಟು ಜನಪ್ರಿಯತೆಯ, ಹಿಂದುಳಿದ ವರ್ಗದ ಪರವಾದ ಮುಖವಾಡ ತೊಡಿಸುವ ವ್ಯರ್ಥ ಪ್ರಯತ್ನಗಳು ಕಾಣಿಸುತ್ತವೆ. ಇಲ್ಲಿ, ಕಾಳಜಿಗಳಿಗಿಂತ ಕಣ್ಕಟ್ಟಿನ ತಂತ್ರಗಳು ಢಾಳಾಗಿವೆ. ಉದಾಹರಣೆಗೆ, ಬಿಬಿಎಂಪಿ ಸರಕಾರಿ ಶಾಲಾ ಮಕ್ಕಳಿಗೆ ಶೈಕ್ಷಣಿಕ ಪ್ರವಾಸಕ್ಕಾಗಿ ಬಜೆಟ್ ಎತ್ತಿಟ್ಟುರುವ 1 ಕೋಟಿ. ತಳಮಟ್ಟದಲ್ಲಿ ಶಾಲೆಗಳು ಮುಚ್ಚಿಕೊಂಡು ಹೋಗುತ್ತಿವೆ, ಗುಣಮಟ್ಟವನ್ನು ಉಳಿಸಿಕೊಳ್ಳಲು ಶಿಕ್ಷಕರು ಪರದಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಶೈಕ್ಷಣಿಕ ಪ್ರವಾಸಕ್ಕೆ ಒತ್ತು ನೀಡಬೇಕೋ? ತಳಮಟ್ಟದ ಅಭಿವೃದ್ಧಿಗೆ ಆಲೋಚನೆ ಮಾಡಬೇಕೋ? ಎಂಬ ಪ್ರಶ್ನೆ ಸಹಜವಾಗಿಯೇ ಹುಟ್ಟಿಕೊಳ್ಳುತ್ತದೆ. ಉಳಿದಂತೆ, ಇಂತಹ ಹತ್ತು ಹಲವು ಯೋಜನೆಗಳ ಘೋಷಣೆ ಕಾಣಸಿಗುತ್ತದೆ. ನಗರ ಪ್ರದೇಶಗಳಲ್ಲಿ ನಿರ್ಗತಿಕರಿಗೆ ರಾತ್ರಿ ತಂಗುದಾಣಗಳನ್ನು ನಿರ್ಮಿಸುವ ಬಗ್ಗೆ ಪ್ರಸ್ತಾಪ ಇದೆ; ಆದರೆ, ಅನುದಾನ ಇಲ್ಲ. ಇಂತಹ ಕೆಲವು ಅಪಸವ್ಯಗಳನ್ನು ಹೊರತುಪಡಿಸಿದರೆ, ಪಾಲಿಕೆ ಬಜೆಟ್ ಘೋಷಣೆಗಳಿಗೆ ಕಮ್ಮಿ ಏನಿಲ್ಲ.

ಅಗತ್ಯ ಇರುವುದು ಕನಿಷ್ಟ ಮಾಡಿದ ಘೋಷಣೆಗಳ ಅನುಷ್ಠಾನ. ಬಹುತೇಕ ಯೋಜನೆಗಳು ವಾರ್ಡ್ ಮಟ್ಟದಲ್ಲಿಯೇ ವಿಭಜನೆಗೊಳ್ಳಲು ಅನುಕೂಲಕರವಾಗಿವೆ. ಹೀಗಾಗಿ, ಇವುಗಳು ಕಾರ್ಯಗತವಾಗಿದ್ದರ ಬಗ್ಗೆ ಪಾರದರ್ಶಕತೆಯನ್ನು ನಿರೀಕ್ಷಿಸುವುದು ಕಷ್ಟ.

ಬಜೆಟ್ ಹೈಲೈಟ್ಸ್:

 • ಆಡಳಿತ ಸುಧಾರಣೆಗೆ App ಬಳಕೆ
 • 2 ಲಕ್ಷ ಗಿಡಗಳನ್ನು ನೆಡಲು 6 ಕೋಟಿ ಮೀಸಲು
 • ಅಲ್ಪಸಂಖ್ಯಾತರಿಗೆ ಪ್ರತಿ ವಾರ್ಡ್ ಗೆ 118 ಕೋಟಿ ರೂ. ಮೀಸಲು
 • ಹೊಸದಾಗಿ ಪಾರ್ಕ್ ನಿರ್ಮಾಣಕ್ಕೆ 40 ಕೋಟಿ ಅನುದಾನ
 • ಮಾರುಕಟ್ಟೆಗಳ ಅಭಿವೃದ್ಧಿಗೆ 10 ಕೋಟಿ
 • ಬೆಂಗಳೂರಿನ ಕಸ ವಿಲೇವಾರಿಗಾಗಿ 636 ಕೋಟಿ
 • ಡಾ.ಅಂಬೇಡ್ಕರ್ ಜಯಂತಿ ಆಚರಣೆಗೆ 1 ಕೋಟಿ
 • ಮಹಿಳಾ ಸದಸ್ಯರಿರುವ ವಾರ್ಡ್ ಗೆ 10 ಲಕ್ಷ ರೂ. ಮೀಸಲು
 • ಮಂಗಳಮುಖಿಯರ ಅಭಿವೃದ್ಧಿಗೆ 2 ಕೋಟಿ ರೂಪಾಯಿ
 • ಮಿನರ್ವ ವೃತ್ತದಿಂದ ಟೌನ್ ಹಾಲ್ ವರೆಗೆ ಉಕ್ಕಿನ ಸೇತುವೆ
 • ಹಿರಿಯ ನಾಗರಿಕರಿಗೆ ಮಧ್ಯಾಹ್ನ ಬಿಸಿಯೂಟದ ಯೋಜನೆಗೆ 4 ಕೋಟಿ
 • ಹಿಂದುಳಿದ ವರ್ಗ/ ಪಂಗಡಕ್ಕೆ ನಮ್ಮ ಮನೆ ಯೋಜನೆ ಜಾರಿಗೆ, ಪ್ರತಿ ವಾರ್ಡ್ ನಲ್ಲಿ 30 ಮನೆ.

Leave a comment

FOOT PRINT

Top