An unconventional News Portal.

ದೇಶದ ಮೊದಲ ಸಲಿಂಗಿ ಎಸ್ಐ: ಮೀಟ್ ಮಿಸ್ ಪ್ರೀತಿಕಾ  

ದೇಶದ ಮೊದಲ ಸಲಿಂಗಿ ಎಸ್ಐ: ಮೀಟ್ ಮಿಸ್ ಪ್ರೀತಿಕಾ  

ಆಕೆ ದೊಡ್ಡದೊಂದು ಕಾನೂನು ಹೋರಾಟದ ನಂತರ ಇದೀಗ ಅಧಿಕಾರ ಕೇಂದ್ರಕ್ಕೆ ಬಂದು ನಿಂತಿದ್ದಾಳೆ. ಅದಕ್ಕಾಗಿ ಆಕೆ ಪಟ್ಟ ಕಷ್ಟಗಳು ಇವತ್ತು ಆಕೆಯ ಕಣ್ಣಲ್ಲಿ ಕನಸುಗಳ ರೂಪದಲ್ಲಿ ಜಿನುಗುತ್ತಿವೆ. ಯಾವ ಸಮಾಜ ತನ್ನನ್ನು ಹೊರಗಿಟ್ಟಿತ್ತೋ, ಅದೇ ಸಮಾಜದ ನಡುವೆ ಆಕೆ ಖಾಕಿಯ ಅಧಿಕಾರವನ್ನು ಚಲಾಯಿಸಲು ಮುಂದಾಗಿದ್ದಾಳೆ. ಆಕೆಯ ಸಮುದಾಯದಲ್ಲಿ ಹೀಗೊಂದು ಅವಕಾಶ ಗಿಟ್ಟಿಸಿಕೊಂಡವರ ಪೈಕಿ ಇಡೀ ದೇಶಕ್ಕೆ ಈಕೆಯೇ ಮೊದಲಿಗಳು. ಅಂದಹಾಗೆ, ಮೀಟ್ ಮಿಸ್ ಕೆ. ಪ್ರೀತಿಕಾ ಯಾಶೀನ್ ಫ್ರಮ್ ತಮಿಳುನಾಡು!

ಪ್ರೀತಿಕಾಳ ಮೊದಲ ಹೆಸರು ಪ್ರದೀಪ್ ಕುಮಾರ್. ತಮಿಳುನಾಡಿನ ಸೇಲಂ ಈಕೆಯ ಹುಟ್ಟೂರು. ತಂದೆ ಚಾಲಕ; ತಾಯಿ ಟೈಲರ್. ಬಡ ಕುಟುಂಬದಲ್ಲಿ ಹುಟ್ಟಿದ ಆಕೆಗೆ ಪಿಯುಸಿಗೆ ಬರುವ ಹೊತ್ತಿಗೆ ತನ್ನ ದೇಹದಲ್ಲಾಗುತ್ತಿದ್ದ ಬದಲಾವಣೆ ಗಮನಕ್ಕೆ ಬಂದಿತ್ತು. ಇದರಿಂದ ಗಾಬರಿ ಬಿದ್ದ ಪೋಷಕರು ಮಗನನ್ನು ಕರೆದುಕೊಂಡು ದೇವರು ದಿಂಡರು ಅಂತ ಸುತ್ತತೊಡಗಿದರು. ಮಗನ ದೇಹದಲ್ಲಿ ಹೆಣ್ಣಿನ ಕಳೆ ಕಟ್ಟುವುದನ್ನು ತಡೆಯುವ ಹರಸಾಹಸ ಮಾಡಿದರು. ಆದರೆ, ಪ್ರದೀಪ್ ಕುಮಾರ್ ಅಷ್ಟೊತ್ತಿಗಾಗಲೇ ತನ್ನೊಳಗಿದ್ದ ಹೆಣ್ಣುತನದ ಮೊಟ್ಟೆಯನ್ನು ಒಡೆದುಕೊಂಡಾಗಿತ್ತು. ಸೇಲಂನಿಂದ ರಾತ್ರೋರಾತ್ರಿ ಚೆನ್ನೈ ಬಂದು ತನ್ನ ಸಮುದಾಯವನ್ನು ಸೇರಿಕೊಂಡಾಯಿತು. ಹೀಗೆ, ಪ್ರದೀಪ್ ಕುಮಾರ್ ಪ್ರೀತಿಕಾಳಾಗಿ ಬದಲಾದಳು.

ಇಷ್ಟೆ ಆಗಿದ್ದರೆ, ಪ್ರೀತಿಕಾ ಕೂಡ ಅಸಂಖ್ಯಾತ ಸಲಿಂಗಿಗಳಲ್ಲಿ ಒಬ್ಬಳಾಗಿ ಉಳಿದು ಹೋಗಿ ಬಿಡುತ್ತಿದ್ದಳೋ ಏನೊ? ಆದರೆ, ಆಕೆಯ ಒಳಗಿದ್ದ ಸಾಧನೆಯ ಛಲ ಮತ್ತೊಂದು ದಿಟ್ಟ ಹೆಜ್ಜೆಯನ್ನು ಮುಂದಿಡುವಂತೆ ಪ್ರೇರೇಪಿಸಿತು. ಅದು 2015ರ ಆರಂಭದ ದಿನಗಳು. ತಮಿಳುನಾಡು ರಾಜ್ಯ ಯೂನಿಫಾರಮ್ಡ್ ಸರ್ವಿಸಸ್ ರಿಕ್ರ್ಯೂಟ್ಮೆಂಟ್ ಬೋರ್ಡ್(ಟಿಎನ್ಎಸ್ಯುಎಸ್ಆರ್ಬಿ) ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಕರೆ ನೀಡಿತು. ಅವತ್ತು ಅರ್ಜಿ ಸಲ್ಲಿಸಿದವರ ಪೈಕಿ ಪ್ರೀತಿಕಾ ಕೂಡ ಒಬ್ಬಳು. ಗಂಡೂ ಅಲ್ಲದ, ಹೆಣ್ಣೂ ಅಲ್ಲದ ಈಕೆಯ ಅರ್ಜಿಯನ್ನು ಟಿಎನ್ಎಸ್ಯುಎಸ್ಆರ್ಬಿ ತಿರಸ್ಕರಿಸಿದಳು. ಪ್ರೀತಿಕಾ ಸುಮ್ಮನಾಗಲಿಲ್ಲ. ಸೀದಾ ಚೆನ್ನೈ ಹೈಕೋರ್ಟ್ ಮೆಟ್ಟಿಲೇರಿದಳು.

ಕೊನೆಗೆ, ಈಕೆಯ ಅವಹಾಲು ಒಪ್ಪಿಕೊಂಡ ನ್ಯಾಯಾಲಯ ಪರೀಕ್ಷೆಗೆ ಅವಕಾಶ ನೀಡುವಂತೆ ಟಿಎನ್ಎಸ್ಯುಎಸ್ಆರ್ಬಿಗೆ ಸೂಚಿಸಿತು. ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ ಹಾಗೂ ಮೌಖಿಕ ಪರೀಕ್ಷೆಗಳಲ್ಲಿ ಪ್ರೀತಿಕಾ ಪಾಲ್ಗೊಂಡು ತನ್ನ ಅರ್ಹತೆಗಳನ್ನು ಸಾಭೀತುಪಡಿಸುವ ಅವಕಾಶವನ್ನು ಪಡೆದುಕೊಂಡಳು. “ಇಡೀ ದಿನ ನ್ಯಾಯಾಲಯದ ಕಲಾಪಗಳಲ್ಲೇ ಮುಗಿದು ಹೋಗುತ್ತಿತ್ತು. ಓದಲು ಸಮಯ ಕೂಡ ಇರಲಿಲ್ಲ. ಲಿಖಿತ ಪರೀಕ್ಷೆಗೆ ಪ್ರವೇಶ ಪತ್ರ ಸಿಕ್ಕಾಗಿ ರಾತ್ರಿ 10. 30 ಆಗಿತ್ತು. ಬೆಳಗ್ಗೆ ಪರೀಕ್ಷೆ ಬರೆಯಬೇಕು. ಇಡೀ ರಾತ್ರಿ ನಿದ್ದೆ ಬಿಟ್ಟು ಓದಿದ್ದೆ,’’ ಎಂದು ಪ್ರೀತಿಕಾ ‘ದಿ ಹಿಂದೂ’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ನೆನಪು ಮಾಡಿಕೊಂಡಿದ್ದಾಳೆ.

prithika yashini_transgender_subinspector_tamilnadu-2ಹೀಗೆ, ಪರೀಕ್ಷೆ ಬರೆದು ಗೆದ್ದ ಪ್ರೀತಿಕಾ ದೈಹಿಕ ಪರೀಕ್ಷೆಯಲ್ಲಿ ಎರಡನೇಯವಳಾಗಿಬಿಡುತ್ತಾಳೆ. ಮತ್ತೆ ನ್ಯಾಯಾಲಯದ ಮೊರೆ ಹೋಗುತ್ತಾಳೆ. ಅಲ್ಲಿ ಆಕೆಯ ಅರ್ಹತೆಗಳನ್ನು ಅಳೆದು ನೋಡಿದ ನ್ಯಾಯಾಲಯ ಕೊನೆಗೂ ಪ್ರೀತಿಕಾಳಿಗೆ ಕನಸಿನ ಖಾಕಿ ಧರಿಸುವ ಅವಕಾಶಕ್ಕೆ ಗ್ರೀನ್ ಸಿಗ್ನಲ್ ನೀಡುತ್ತದೆ.

ಬುಧವಾರವಷ್ಟೆ ಪ್ರೀತಿಕಾ ಚೆನ್ನೈ ಪೊಲೀಸ್ ಆಯುಕ್ತರಿಂದ ಅಪಾಯಿಂಟ್ಮೆಂಟ್ ಲೆಟರ್ ತೆಗದುಕೊಂಡಳು. “ಹೆಣ್ಣು ಭ್ರೂಣ ಹತ್ಯೆ ಹಾಗೂ ಮಹಿಳೆಯರ ಮೇಲಿನ ದೌರ್ಜನ್ಯ ತಡೆಯುವುದು ನನ್ನ ಕರ್ತವ್ಯ. ಜತೆಗೆ, ನನ್ನ ಸಮುದಾಯದವರಿಗೆ ಮಾದರಿಯಾಗಿ ಬದುಕಿ ತೋರಿಸಬೇಕು,’’ ಎಂಬುದು ಆಕೆಯ ಪ್ರತಿಕ್ರಿಯೆ. ಯುಪಿಎಸ್ಸಿ ಪರೀಕ್ಷೆ ಬರೆಯಬೇಕು ಎಂಬ ಆಕೆಯ ಕನಸಿನ್ನೂ ಜೀವಂತವಾಗಿದೆ. ಕನಸುಗಳಿಗೆ ಲಿಂಗ ಇರುವುದಿಲ್ಲ ಎಂಬುದಕ್ಕೆ ಈಕೆ ಸವೆಸಿದ ಹಾದಿ ಹೊಸ ಮಾದರಿಯ ಉದಾಹರಣೆ ಅಷ್ಟೆ.

photos: Internet

Leave a comment

FOOT PRINT

Top