An unconventional News Portal.

ಸಮಾಚಾರ ಸಮೀಕ್ಷೆ: ನ್ಯೂಸ್ ಚಾನಲ್ ವೀಕ್ಷಕರೇ ಕೊಟ್ಟ TRP ಎಷ್ಟು?

ಸಮಾಚಾರ ಸಮೀಕ್ಷೆ: ನ್ಯೂಸ್ ಚಾನಲ್ ವೀಕ್ಷಕರೇ ಕೊಟ್ಟ TRP ಎಷ್ಟು?

ಕನ್ನಡದ ಮಾಧ್ಯಮ ಪಾಲಿಗೆ ಇದೊಂದು ವಿಭಿನ್ನ ಪ್ರಯೋಗ. ಕರ್ನಾಟಕದಲ್ಲಿ ಸುದ್ದಿ ವಾಹಿನಿಗಳು ಚಾಲಾವಣೆಗೆ ಬಂದು ದಶಕದ ನಂತರ ಇದೇ ಮೊದಲ ಬಾರಿಗೆ ವೀಕ್ಷಕರ ಮನಸ್ಥಿತಿಯನ್ನು ಚೌಕಟ್ಟಿನಾಚೆಗೆ ಅರಿಯುವ ಪ್ರಯತ್ನವನ್ನು ‘ಸಮಾಚಾರ’ ಮಾಡಿದೆ.

ಇದೊಂತರ ‘ಲವ್ ಅಂಡ್ ಹೇಟ್ರೆಡ್’ ಸಂಬಂಧ!

ಕನ್ನಡದ ಸುದ್ದಿ ವಾಹಿನಿಗಳು ಹಾಗೂ ಅಂತರ್ಜಾಲದ ಮೂಲಕ ಜಗತ್ತು ಅರಿಯುತ್ತಿರುವ ಹೊಸ ತಲೆಮಾರಿನ ವೀಕ್ಷಕರ ನಡುವಿನ ಸಂಬಂಧವನ್ನು ಹೀಗೆ ಮಾತ್ರವೇ ವಿವರಿಸಬಹುದೇನೋ? ಬ್ರೇಕಿಂಗ್ ನ್ಯೂಸಿನಿಂದ ಆರಂಭಗೊಂಡು ಮಲಗುವ ಮುನ್ನ ಭಿತ್ತರಿಸುವ ಅಪರಾಧ ಜಗತ್ತಿನ ಸುದ್ದಿಗಳವರೆಗೆ ಪ್ರತಿಯೊಬ್ಬರಿಗೂ ಅವರದ್ದೇ ಆದ ಅಭಿಪ್ರಾಯಗಳಿವೆ. ಹಿಂದೆಲ್ಲಾ ಇಂತಹ ಅಭಿಪ್ರಾಯಗಳು ವೀಕ್ಷಕರ ಮನದಲ್ಲಿಯೇ ಉಳಿದು ಹೋಗುತ್ತಿದ್ದವು. ಹೆಚ್ಚೆಂದರೆ ನೇರ ಕಾರ್ಯಕ್ರಮಕ್ಕೆ ಕರೆ ಮಾಡಿ ತಮ್ಮ ಅಸಹನೆ ವ್ಯಕ್ತಪಡಿಸುತ್ತಿದ್ದರು. ಬಹುತೇಕ ಸಮಯದಲ್ಲಿ ಅಂತವರ ಕರೆಗಳು ‘ತಾಂತ್ರಿಕ ಕಾರಣ’ಗಳಿಗಾಗಿ ಕಡಿತಗೊಂಡು ವೀಕ್ಷಕರ ಮನದ ಮಾತುಗಳಿಗೆ ವೇದಿಕೆ ಸಿಗದೇ ಹೋಗಿ ಬಿಡುತ್ತಿತ್ತು. ಆದರೆ, ಸಾಮಾಜಿಕ ಜಾಲತಾಣಗಳು ಬೆರಳ ತುದಿಯಲ್ಲಿರುವ ದಿನಗಳಿವು. ಅನ್ನಿಸಿದ್ದನ್ನು ಯಾವ ಮುಚ್ಚುಮರೆಯಿಲ್ಲದೇ ನೇರವಾಗಿ ಜಗತ್ತಿಗೆ ತಿಳಿಸುವ ಸಾಧ್ಯತೆಯೊಂದು ಆವಿಷ್ಕಾರಗೊಂಡಿದೆ. ಹೀಗಾಗಿಯೇ, ಸುದ್ದಿ ವಾಹಿನಿಗಳ ಬಗ್ಗೆ ಆಯಾ ವಿಷಯಕ್ಕೆ ಸಂಬಂಧಪಟ್ಟಂತೆ ಆಗಾಗ್ಗೆ ಚರ್ಚೆಗಳು ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಲೇ ಇರುತ್ತವೆ.

ಈ ಹಿನ್ನೆಲೆಯಲ್ಲಿ, ‘ಸಮಾಚಾರ.ಕಾಂ’ ಅಂತರ್ಜಾಲದ ನವ ಸಾಕ್ಷರರು ಎಂದು ಕರೆಯಬಹುದಾದ ಜನರನ್ನು ಗುರಿಯಾಗಿಸಿಕೊಂಡು ‘ಮಾಧ್ಯಮ ಸಮೀಕ್ಷೆ 2.0’ ಎಂಬ ಹೆಸರಿನಲ್ಲಿ ಸರ್ವೆಯೊಂದನ್ನು ನಡೆಸಿತು. ಸಮೀಕ್ಷೆಗಾಗಿ ಮೊದಲು ಒಂದಷ್ಟು ಪ್ರಶ್ನೆಗಳನ್ನು ಪಟ್ಟಿ ಮಾಡಿಕೊಳ್ಳಲಾಯಿತು. ಅವುಗಳನ್ನು ‘ಗೂಗಲ್ ಫಾರಂ’ ಎಂಬ ತಂತ್ರಜ್ಞಾನದ ಮೂಲಕ ಸಾಮಾಜಿಕ ಜಾಲತಾಣಗಳನ್ನು ಬಳಸುವ ಕನ್ನಡಿಗರಿಗೆ ತಲುಪಿಸಲಾಯಿತು. ಸುಮಾರು 1300 ಮಂದಿ ಈ ಸಮೀಕ್ಷೆಗೆ ಪ್ರತಿಕ್ರಿಯಿಸಿದರು. ಇವರು ನೀಡಿದ ಉತ್ತರಗಳನ್ನು ‘ಗೂಗಲ್ ಫಾರಂ’ ಒಂದೆಡೆ ಕಲೆ ಹಾಕಿ ಅಧ್ಯಯನ ಪೂರ್ಣ ಮಾಹಿತಿಯನ್ನು ನೀಡಿದೆ.

‘ಸಮಾಚಾರ ಸಮೀಕ್ಷೆ’ಯ ವಿವರಗಳನ್ನು ನಿಮ್ಮ ಜತೆ ಹಂಚಿಕೊಳ್ಳುತ್ತಿದ್ದೇವೆ. ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವವರಿಗೆ, ಮಾಧ್ಯಮಗಳ ಬಗ್ಗೆ ಕುತೂಹಲ ಹೊಂದಿರುವವರಿಗೆ ಇದೊಂದು ಅಧ್ಯಯನ ಯೋಗ್ಯ, ಒಳನೋಟಗಳನ್ನು ನೀಡುವ ಸರಕು.


samachara_survey_media_1

ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ 25ರಿಂದ 45ರ ನಡುವೆ ಇರುವವರದ್ದೇ ಸಿಂಹಪಾಲು. ಶೇ. 67. 8ರಷ್ಟು ಜನ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಉಳಿದಂತೆ 15ರಿಂದ 25ರ ನಡುವಿನ ವಯೋಮಾನದವರು ಶೇ. 19ರಷ್ಟಿದ್ದಾರೆ. ಹೀಗಾಗಿ, ಇದು ಇವತ್ತಿನ ಯುವ ಸಮುದಾಯದ ಅಭಿಪ್ರಾಯಗಳು ಎಂದು ಪರಿಗಣಿಸುವುದು ಸೂಕ್ತ.

ಇವರಲ್ಲಿ ಅರ್ಧಕ್ಕಿಂತ ಹೆಚ್ಚಿನ ಅಂದರೆ ಶೇ. 58.6ರಷ್ಟು ಜನ ನ್ಯೂಸ್ ಚಾನಲ್ಗಳನ್ನು ‘ನೋಡ್ತಾ ಇರ್ತೀನಿ ಯಾವಾಗ್ಲೂ’ ಎಂದು ಪ್ರತಿಕ್ರಿಯಿಸಿದ್ದಾರೆ. ಶೇ. 29.3ರಷ್ಟು ಜನ ಚಾನಲ್ಗಳನ್ನು ಚೇಂಜ್ ಮಾಡುವಾಗ ಸಿಗುವ ನ್ಯೂಸ್ ಚಾನಲ್ಗಳ ಬಗ್ಗೆ ದೃಷ್ಟಿ ನೆಟ್ಟಿರುವುದಾಗಿ ತಿಳಿಸಿದ್ದಾರೆ. ನ್ಯೂಸ್ ಚಾನಲ್ಗಳನ್ನು ಕಂಡ್ರೆ ಆಗಲ್ಲ ಎಂದವರ ಸಂಖ್ಯೆ ಶೇ. 6ರಷ್ಟು. ಸುದ್ದಿ ವಾಹಿನಿಗಳ ಪಾಲಿಗೆ ಇದೊಂದು ಆಶಾದಾಯಕ ಪ್ರತಿಕ್ರಿಯೆ.


 

samachara_survey_media_2

ಇವರಲ್ಲಿ ಯಾರ್ಯಾರು ಎಷ್ಟು ಗಂಟೆ ಟಿವಿ ಮುಂದೆ ಇರುತ್ತಾರೆ ಎಂಬ ಕುತೂಹಲದ ಪ್ರಶ್ನೆಗೆ ಬಂದ ಉತ್ತರಗಳು ಹೊಸ ಆಲೋಚನೆಗೆ ಎಡೆ ಮಾಡಿಕೊಡುವಂತಿವೆ. ಸಮೀಕ್ಷೆಯಲ್ಲಿ ಪಾಲ್ಗೊಂಡವರಲ್ಲಿ ದಿನದಲ್ಲಿ ಒಂದು ಗಂಟೆ ಟಿವಿ ಮುಂದೆ ಕಳೆಯುವವರು ಸಂಖ್ಯೆ ಶೇ. 34. 1ರಷ್ಟಿದೆ. ಒಂದು ಗಂಟೆಗಿಂತ ಜಾಸ್ತಿ ನೋಡುವವರ ಸಂಖ್ಯೆ ಶೇ. 38.2ರಷ್ಟಿದೆ. ಅಂದರೆ ದಿನದಲ್ಲಿ ಒಂದು ಗಂಟೆ ಅಥವಾ ಒಂದು ಗಂಟೆಗಿಂತ ಸ್ವಲ್ಪ ಹೆಚ್ಚಿನ ಅವಧಿಯನ್ನು ಟಿವಿ ಮುಂದೆ ಕಳೆಯುವವರ ಸಂಖ್ಯೆ ದೊಡ್ಡದಿದೆ. ‘ನಾನು ಇರೋವಾಗ ಮನೆಯಲ್ಲಿ ಟಿವಿ ಆನ್ ಆಗಿರಲೇ ಬೇಕು’ ಎಂಬುವವರ ಸಂಖ್ಯೆಯೂ ಶೇ. 11.4ರಷ್ಟಿದೆ. ಇವರು ಎಷ್ಟು ಅವಧಿ ಮನೆಯಲ್ಲಿ ಇರುತ್ತಾರೆ ಎಂಬ ಮಾಹಿತಿ ಸಿಕ್ಕಿಲ್ಲ. ದಿನದಲ್ಲಿ ಐದು ಗಂಟೆ ಅಥವಾ ಅದಕ್ಕಿಂತ ಹೆಚ್ಚಿನ ಸಮಯವನ್ನು ಟಿವಿ ಮುಂದೆ ಕಾಲ ಕಳೆಯುವವರ ಸಂಖ್ಯೆ ಶೇ. 11.4ರಷ್ಟು ಮಾತ್ರವೇ ಇದೆ.

ಇನ್ನು ನ್ಯೂಸ್ ಚಾನಲ್ ನೋಡುವ ಯುವ ಸಮುದಾಯ ಮನಸ್ಥಿತಿ ಹೇಗಿದೆ ಎಂಬ ಪ್ರಶ್ನೆಗೂ ಸಮೀಕ್ಷೆ ಬೆಳಕು ಚೆಲ್ಲಿದೆ. ‘ಕೈಲಿ ರಿಮೋಟ್ ಇದ್ರೆ ಚಾನಲ್ ಚೇಂಜ್ ಮಾಡ್ತಾನೆ ಇರೋರ’ ಸಂಖ್ಯೆ ಹೆಚ್ಚು ಕಡಿಮೆ ಅರ್ಧದಷ್ಟಿದೆ. ಶೇ. 45.2ರಷ್ಟು ಜನ ಹೀಗಂತ ಪ್ರತಿಕ್ರಿಯಿಸಿದ್ದಾರೆ. ಇವರನ್ನು ಹೊರತು ಪಡಿಸಿದರೆ ಯಾವುದಾದ್ರೂ ಒಂದು ಚಾನಲ್ ಗುರಿ ಇಟ್ಟುಕೊಂಡು ಉಳಿದವನ್ನು (ಬಹುಶಃ ಬ್ರೇಕ್ ಬಂದಾಗ) ಸ್ಕಿಪ್ ಮಾಡುವವರ ಸಂಖ್ಯೆ ಶೇ. 18.5ರಷ್ಟಿದೆ. ಸುದ್ದಿ ವಾಹಿನಿಗಳ ನಿರ್ಧಿಷ್ಟ ಕಾರ್ಯಕ್ರಮ ವೀಕ್ಷಕರ ಸಂಖ್ಯೆ ಶೇ. 21.8ರಷ್ಟಿದೆ. ಇದು ಸುದ್ದಿ ವಾಹಿನಿಗಳು ಕಾರ್ಯಕ್ರಮದ ಮೇಲೆ ಇನ್ನಷ್ಟು ಶ್ರಮವಹಿಸುವ ಅಗತ್ಯತೆಯನ್ನು ಸಾರಿ ಹೇಳುತ್ತಿದೆ. ಇನ್ನು ಈ ಬಗ್ಗೆ ಯೋಚಿಸದೆ ಟಿವಿ ನೋಡುತ್ತಿದ್ದೇವೆ ಅಂದವರ ಸಂಖ್ಯೆಯೂ ಶೇ. 11. 3ರಷ್ಟಿದೆ.


 

samachara_survey_media_3

ಇವರಲ್ಲಿ ಟಿವಿ ನೋಡಲು ಮನೆಯನ್ನು ಅವಲಂಬಿಸುವವರ ಸಂಖ್ಯೆಯೇ ದೊಡ್ಡದಿದೆ. ಶೇ. 73.4ರಷ್ಟು ಜನ ಮನೆಯಲ್ಲಿ ಟಿವಿ ನೋಡುತ್ತೇವೆ ಎಂದು ಪ್ರತಿಕ್ರಿಯಿಸಿದ್ದಾರೆ. ಕಚೇರಿಗಳಲ್ಲಿ ಟಿವಿ ನೋಡುವವರ ಸಂಖ್ಯೆ ಶೇ. 9.7ರಷ್ಟಿದ್ದರೆ, ಮೊಬೈಲ್ ಹಾಗೂ ಕಂಪ್ಯೂಟರ್ನಲ್ಲಿ ನ್ಯೂಸ್ ಚಾನಲ್ ವೀಕ್ಷಿಸುತ್ತೀವಿ ಅಂದವರ ಶೇ. 9.7. ಅಂದರೆ ಇನ್ನೂ ನ್ಯೂಸ್ ಚಾನಲ್ ಎಂದರೆ ಟಿವಿಯಲ್ಲಿಯೇ ನೋಡಬೇಕು ಎಂಬ ನಂಬಿಕೆ ಪ್ರಬಲವಾಗಿರುವುದು ಕಂಡುಬರುತ್ತಿದೆ.

ಇದರಲ್ಲಿ ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ವೇಳೆಯಲ್ಲಿ ಆಗ್ಗಾಗ್ಗೆ ಟಿವಿ ನೋಡುವವರ ಸಂಖ್ಯೆ ಶೇ. 22.8 ರಷ್ಟಿದೆ. ನೀವು ಯಾಕಾಗಿ ಟಿವಿ ನೋಡುತ್ತೀರಿ ಎಂದರೆ ಮಾಹಿತಿ ಮತ್ತು ಮನೋರಂಜನೆಗಾಗಿ ಎಂದವರು ಬಹುಸಂಖ್ಯಾತರು. ಅಂದರೆ ಇವತ್ತಿನ ಟಿವಿ ವೀಕ್ಷಕರು ಮಾಹಿತಿ ಹಾಗೂ ಮನೋರಂಜನೆ ಎರಡನ್ನೂ ಬಯಸುತ್ತಾರೆ ಮತ್ತು ಪ್ರತ್ಯೇಕವಾಗಿ ಎಂಬುದನ್ನು ಗಮನಿಸಬೇಕಿದೆ.


 

samachara_survey_media_4

ಬೆಳಗ್ಗಿನ ಹೊತ್ತು ಟಿವಿ ನೋಡುವವರ ಮನಸ್ಥಿತಿ ಏನು ಎಂಬುದಕ್ಕೂ ಸಮೀಕ್ಷೆ ಒಂದಷ್ಟು ಒಳನೋಟಗಳನ್ನು ನೀಡುತ್ತಿದೆ. ಯೋಗ ಕಾರ್ಯಕ್ರಮಕ್ಕಾಗಿ ಟಿವಿ ಹಾಕುವವರ ಸಂಖ್ಯೆ ಶೇ. 6.5ರಷ್ಟಿದ್ದರೆ, ಜ್ಯೋತಿಷ್ಯಕ್ಕಾಗಿ ಟಿವಿ ಆನ್ ಮಾಡುವವರು ಶೇ. 3.7ರಷ್ಟಿದ್ದಾರೆ. ಭಕ್ತಿಗೀತೆಗಾಗಿ ಟಿವಿಯನ್ನು ಅವಲಂಭಿಸುವವರ ಶೇ. 23.1ರಷ್ಟಿದ್ದಾರೆ. ಕ್ರಿಕೆಟ್ ಸುದ್ದಿಗಾಗಿ ಶೇ. 8.3ರಷ್ಟು ಜನ ಬೆಳಗ್ಗಿನ ಹೊತ್ತಿಗೆ ಟಿವಿ ಹಾಕುತ್ತಿದ್ದಾರೆ. ಇವ್ಯಾವುದೂ ಇಲ್ಲದೆ, ಟಿವಿ ಆನ್ ಮಾಡುವವರ ಸಂಖ್ಯೆ ಅತ್ಯಧಿಕ; ಶೇ. 31.5ರಷ್ಟು!


 

samachara_survey_media_5

ಇನ್ನು ಮಧ್ಯಾಹ್ನ ಹಾಗೂ ಸಂಜೆ ಟಿವಿ ನೋಡುವವರ ಮನಸ್ಥಿತಿಯ ಬಗ್ಗೆಯೂ ಸಮೀಕ್ಷೆ ಬೆಳಕು ಚೆಲ್ಲಿದೆ. ಮಧ್ಯಾಹ್ನ ಅಡುಗೆ, ಬ್ಯೂಟಿ ಟಿಪ್ಸ್, ವೈದ್ಯರ ಸಲಹೆ ಎಲ್ಲವನ್ನೂ ಬಿಟ್ಟು ಬೇರೆ ಬೇಕು ಎಂದವರ ಸಂಖ್ಯೆ ಅರ್ಧಕ್ಕಿಂತ ಹೆಚ್ಚಿದೆ. ಶೇ. 53.8ರಷ್ಟು ಜನ ಹೊಸ ತರಹದ ಮಧ್ಯಾಹ್ನದ ಕಾರ್ಯಕ್ರಮಗಳು ಬೇಕು ಎಂಬ ಹಂಬಲ ವ್ಯಕ್ತಪಡಿಸಿದ್ದಾರೆ.

ಸಂಜೆ ಹೊತ್ತಿಗೆ ರಿಲ್ಯಾಕ್ಸ್ ಆಗೋಕಾಗಿ ಟಿವಿ ನೋಡ್ತಿವಿ ಅಂದವರ ಸಂಖ್ಯೆ 27.3ರಷ್ಟಿದೆ. ಕೊಂಚ ಗಂಭೀರ ಪ್ಯಾನಲ್ ಚರ್ಚೆಗಳನ್ನೂ ನೋಡುತ್ತೀವಿ ಅಂದವರು ಶೇ. 10.7ರಷ್ಟಿದ್ದರೆ, ಸುದ್ದಿಗಳಿಗಾಗಿ ಟಿವಿ ಚಾನಲ್ಗಳನ್ನು ಸ್ಕಿಪ್ ಮಾಡುವವರು ಶೇ. 38.8ರಷ್ಟಿದೆ.


 

samachara_survey_media_6

ರಾತ್ರಿ ವೇಳೆ ಕ್ರೈಂ ಕಾರ್ಯಕ್ರಮಗಳನ್ನು ಜನ ವೀಕ್ಷಿಸುತ್ತಾರೆ ಎಂಬ ನಂಬಿಕೆ ಟಿವಿ ಚಾನಲ್ ಒಳಗೆ ಪ್ರಬಲವಾಗಿ ಬೇರೂರಿದೆ. ಆದರೆ, ಸಮೀಕ್ಷೆಯಲ್ಲಿ ಪಾಲ್ಗೊಂಡವರ ಪ್ರಕಾರ ಕ್ರೈಂ ಕಾರ್ಯಕ್ರಮಗಳನ್ನು ವೀಕ್ಷಿಸುತ್ತೀವಿ ಎಂದವರ ಸಂಖ್ಯೆ ಶೇ. 3. 3 ಅಷ್ಟೆ. ಡಿಬೇಟ್ಗಳನ್ನು ನೋಡುತ್ತಿವಿ ಅಂದವರು ಶೇ. 13. 1ರಷ್ಟು. ಉಳಿದಂತೆ ಬೆಳಗ್ಗೆಯಿಂದ ಸುದ್ದಿಗಳನ್ನು ತಿಳ್ಕೊಬೇಕು ಅಂದವರ ಸಂಖ್ಯೆಯೇ ದೊಡ್ಡದಿದೆ. ಶೇ. 67.2ರಷ್ಟು ಜನ ‘ದಿನದ ಸುದ್ದಿ ಸಾರ’ಕ್ಕಾಗಿ ರಾತ್ರಿ ಟಿವಿಯನ್ನು ಅವಲಂಬಿಸಿದ್ದಾರೆ.

ಇವರಲ್ಲಿ ಬಹುತೇಕರಿಗೆ ಟಿಆರ್ಪಿ ಅಥವಾ ಜಿಆರ್ಪಿ ಎಂಬ ಪದಗಳ ಪರಿಚಯ ಇದೆ. ಶೇ. 61. 8ರಷ್ಟು ಜನರಿಗೆ ಟಿವಿ ವೀಕ್ಷಕರನ್ನು ಅಳೆಯುವ ಮಾನದಂಡದ ಬಗ್ಗೆ ಅರಿವಿದ್ದರೆ, ಶೇ. 17ರಷ್ಟು ಜನ ಅದರ ಬಗ್ಗೆ ತಿಳ್ಕೊಬೇಕು ಎಂದು ಆಸಕ್ತಿ ತೋರಿಸಿದ್ದಾರೆ.

ಇದಿಷ್ಟು ಇವತ್ತಿನ ಅಂತರ್ಜಾಲ ಬಳಸುವ ಟಿವಿ ವೀಕ್ಷಕರ ಮನಸ್ಥಿತಿ. ಕಳೆದ ವರ್ಷ ನವೆಂಬರ್ ವೇಳೆಗೆ ಈ ಸಮೀಕ್ಷೆಯನ್ನು ಆರಂಭಿಸಲಾಗಿತ್ತು. ಇದಕ್ಕೆ ಇವತ್ತಿಗೂ ಪ್ರತಿಕ್ರಿಯೆಗಳು ಬರುತ್ತಿವೆ. ಹತ್ತು ವರ್ಷಗಳ ಹಿಂದೆ ಆರಂಭಗೊಂಡ ಕನ್ನಡದ ಸುದ್ದಿ ವಾಹಿನಿಗಳು, ಹೊಸದಾಗಿ ಕಿರುತೆರೆಗೆ ಬಂದಿರುವ ವಾಹಿನಿಗಳು ಹಾಗೂ ಲಾಂಚಿಂಗ್ಗೆ ಕಾಯುತ್ತಿರುವ ಸುದ್ದಿ ವಾಹಿನಿಗಳು ಭವಿಷ್ಯದ ವೀಕ್ಷಕರ ಮನಸ್ಥಿತಿಯನ್ನು ಅರಿಯಲು ಈ ಸಮೀಕ್ಷೆ ಸಹಾಯಕ ಎಂಬ ನಂಬಿಕೆ ನಮ್ಮದು. ಹಾಗೆಯೇ, ‘ಜನ ಏನು ಬಯಸುತ್ತಾರೋ, ನಾವದನ್ನು ಕೊಡುತ್ತೇವೆ,’ ಎಂಬ ಸಿದ್ದಮಾದರಿಯ ಉತ್ತರ ನೀಡುವ ಮುನ್ನ ಈ ಸಮೀಕ್ಷೆಯಲ್ಲಿ ವ್ಯಕ್ತವಾದ ಅದೇ ಜನರ ಅಭಿಪ್ರಾಯಗಳು ನೆನಪಿಸಿಕೊಂಡರೆ ಸಾಕು ಎಂಬುದು ಆಶಯ.

Photos: Samachara, Internet

Leave a comment

FOOT PRINT

Top