An unconventional News Portal.

‘ಹಿರೇಮಠ್ ಪಟಾಕಿ’: ದೇವೇಗೌಡರ ಕುಟುಂಬದ ಮೇಲೆ 200 ಎಕರೆ ಭೂಕಬಳಿಕೆ ಆರೋಪ!

‘ಹಿರೇಮಠ್ ಪಟಾಕಿ’: ದೇವೇಗೌಡರ ಕುಟುಂಬದ ಮೇಲೆ 200 ಎಕರೆ ಭೂಕಬಳಿಕೆ ಆರೋಪ!

ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಮದ್ದೂರು ಜೆಡಿಎಸ್ ಶಾಸಕ ಡಿ.ಸಿ. ತಮ್ಮಣ್ಣ ಹಾಗೂ ಅವರ ಸಂಬಂಧಿಗಳು ಒಟ್ಟು 200 ಎಕರೆ ಭೂಮಿ ಕಬಳಿಕೆ ಮಾಡಿದ್ದಾರೆ…

ಹೀಗಂಥ ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಸಲಹೆಗಾರ ಎಸ್‌. ಆರ್. ಹಿರೇಮಠ್ ಭಾನುವಾರ ಗಂಭೀರ ಆರೋಪ ಮಾಡಿದ್ದಾರೆ.

ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಿಗಾನಹಳ್ಳಿಯಲ್ಲಿ 110 ಎಕರೆ ಗೋಮಾಳ, ಪರಿಶಿಷ್ಟರಿಗೆ ನೀಡಲಾದ ಏಳು ಎಕರೆ ಸೇರಿದಂತೆ ಒಟ್ಟು 200 ಎಕರೆ ಕಬಳಿಕೆ ಮಾಡಿದ್ದಾರೆ ಎಂದು ಹೇಳಿರುವ ಹಿರೇಮಠ್ ದಾಖಲೆಗಳನ್ನೂ ಬಿಡುಗಡೆ ಮಾಡಿದ್ದಾರೆ.

ದೀಪಾವಳಿಯ ಹಬ್ಬದ ಸಮಯದಲ್ಲಿ ಹುಬ್ಬಳ್ಳಿಯ ಪತ್ರಿಕಾಗೋಷ್ಠಿ ನಡೆಸಿದ ಹಿರೇಮಠ್ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಮೇಲೆ ಹರಿಹಾಯ್ದರು. “ಹಲವು ಪ್ರಕರಣಗಳಲ್ಲಿ ದಲಿತರನ್ನು ಹೆದರಿಸಿ, ಬೆದರಿಸಿ ಒತ್ತಾಯಪೂರ್ವಕವಾಗಿ ಜಮೀನನ್ನು ವಶಪಡಿಸಿಕೊಳ್ಳಲಾಗಿದೆ. 2014ರಲ್ಲೇ ಈ ಬಗ್ಗೆ ಸಮಗ್ರ ವಿಚಾರಣೆ ನಡೆಸಿದ್ದ ಅಂದಿನ ರಾಮನಗರ ಉಪವಿಭಾಗಾಧಿಕಾರಿ ಎಸ್‌. ನವೀನಕುಮಾರ್‌ ರಾಜು, ಬಿಡದಿ ಹೋಬಳಿಯ ಕೇತಿಗಾನಹಳ್ಳಿಯ ಸರ್ವೆ ನಂಬರ್‌ 60ರಲ್ಲಿ 4.37 ಎಕರೆ, 62ರಲ್ಲಿ 2.11 ಎಕರೆ ಜಮೀನುಗಳನ್ನು ದೇವೇಗೌಡರ ಕುಟುಂಬ ವರ್ಗ ಪರಭಾರೆ ಮಾಡಿಕೊಂಡ ಬಗ್ಗೆ ವರದಿ ನೀಡಿದ್ದರು. ಈ ಜಮೀನು ಸರ್ಕಾರಿ ಗೋಮಾಳವಾಗಿತ್ತು. ಆ ನಂತರ ಪರಿಶಿಷ್ಟ ಜಾತಿಗೆ ಸೇರಿದ ನರಸಹೊಲಯ ಅವರಿಗೆ ನೀಡಲಾಗಿತ್ತು. ಆ ಜಮೀನಿನ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ಎಚ್‌.ಡಿ. ದೇವೇಗೌಡ ಅವರ ನಾದಿನಿ ಸಾವಿತ್ರಮ್ಮ ಹನುಮೇಗೌಡರಿಂದ ಎಚ್‌.ಡಿ. ಕುಮಾರಸ್ವಾಮಿ 2004ರಲ್ಲಿ ಪರಭಾರೆ ಮಾಡಿಸಿಕೊಂಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿತ್ತು,” ಎಂದು ಆರೋಪಿಸಿದರು.

ಸಾವಿತ್ರಮ್ಮರಿಂದ ಕುಮಾರಸ್ವಾಮಿ ಜಮೀನು ಪರಭಾರೆ ಮಾಡಿಕೊಂಡಿರುವುದು

ಸಾವಿತ್ರಮ್ಮರಿಂದ ಕುಮಾರಸ್ವಾಮಿ ಜಮೀನು ಪರಭಾರೆ ಮಾಡಿಕೊಂಡಿರುವುದು

ದೇವೇಗೌಡ ಕುಟುಂಬದ ಭೂಕಬಳಿಕೆ ಇತಿಹಾಸ:

ಮಾತು ಮುಂದುವರಿಸಿದ ಅವರು, “ದೇವೇಗೌಡರ ಕುಟುಂಬ ಅಕ್ರಮವಾಗಿ ಭೂಕಬಳಿಕೆ ಮಾಡುವುದು ಇದೇ ಮೊದಲೇನೂ ಅಲ್ಲ. 1987ರಲ್ಲಿ ದೇವೇಗೌಡರು ನೀರಾವರಿ ಸಚಿವರಾಗಿದ್ದಾಗ ಕೇತಿಗಾನಹಳ್ಳಿಯಲ್ಲಿ ಅರ್ಧ ಎಕರೆ, ಒಂದು ಎಕರೆ ತುಂಡು ಭೂಮಿಗಳನ್ನು ಕಬಳಿಕೆ ಮಾಡಿದ್ದಾರೆ ಎಂದು ಮಾಜಿ ಶಾಸಕ ಸಿ.ಎಂ. ಲಿಂಗಪ್ಪ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರಿಗೆ ಪತ್ರ ಬರೆದಿದ್ದರು. ಮಂಡ್ಯದ ರೈತ ಹೋರಾಟಗಾರ, ಮಾಜಿ ಸಂಸದ ಜಿ. ಮಾದೇಗೌಡ, ಮದ್ದೂರು ಶಾಸಕ ಡಿ.ಸಿ. ತಮ್ಮಣ್ಣ ಸಹೋದರ ಡಿ.ಸಿ. ನಂಜುಂಡಯ್ಯರೂ ಕೇತಿಗಾನಹಳ್ಳಿಯಲ್ಲಿ ಭೂಕಬಳಿಕೆ ಮಾಡಿದ್ದ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ದೂರಿನ ತನಿಖೆ ನಡೆಸಿದ ಲೋಕಾಯುಕ್ತ ನ್ಯಾಯಮೂರ್ತಿ ವೈ. ಭಾಸ್ಕರ ರಾವ್‌ ಅಕ್ರಮದ ತನಿಖೆ ನಡೆಸುವಂತೆ ಉಪವಿಭಾಗಾಧಿಕಾರಿಗೆ ನಿರ್ದೇಶನ ನೀಡಿದ್ದರು. ಅದರನ್ವಯ ತನಿಖೆ ನಡೆಸಿ ಎಚ್‌.ಡಿ. ಕುಮಾರಸ್ವಾಮಿ, ನಂಜುಂಡಯ್ಯ ಭೂ ಕಬಳಿಕೆ ಮಾಡಿದ್ದರ ಬಗ್ಗೆ ಮಾಹಿತಿ ನೀಡಿದ್ದರು,” ಎಂದರು.

ವರದಿ ನೀಡಲು ಜಿಲ್ಲಾಧಿಕಾರಿ ‘ಮೀನಾಮೇಷ’:

“ಉಪವಿಭಾಗಾಧಿಕಾರಿಗಳು ಅಕ್ರಮ ನಡೆದ ಬಗ್ಗೆ ರಾಮನಗರ ಜಿಲ್ಲೆಯ ಅಂದಿನ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿಯಿಂದ ಸಮಗ್ರ ವರದಿ ತರಿಸುವಂತೆ ಕಳೆದ ಏಪ್ರಿಲ್‌ 29ರಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದಿದ್ದರು. ಇದನ್ನು ಆಧರಿಸಿ ಆಗಸ್ಟ್‌ 17ರಂದು ಆಯುಕ್ತರು ರಾಮನಗರ ಜಿಲ್ಲಾಧಿಕಾರಿಗಳಿಗೆ ಎರಡೆರಡು ಬಾರಿ ನೆನಪೋಲೆಗಳನ್ನು ಕಳಿಸಿದ್ದಾರೆ. ಹೀಗಿದ್ದೂ ಪ್ರಸ್ತುತ ಜಿಲ್ಲಾಧಿಕಾರಿಯಾಗಿರುವ ಮಮತಾ ಮಾಹಿತಿ ನೀಡದೆ ಮೀನಾಮೇಷ ಎಣಿಸುತ್ತಿದ್ದಾರೆ,” ಎಂದು ಹಿರೇಮಠ ಅಸಮಾಧಾನ ವ್ಯಕ್ತಪಡಿಸಿದರು.

ರಾಮನಗರ ಉಪವಿಭಾಗಾಧಿಕಾರಿ ನವೀನ್ ಕುಮಾರ್ ರಾಜು ಎಸ್. ನೀಡಿದ ವರದಿ

ರಾಮನಗರ ಉಪವಿಭಾಗಾಧಿಕಾರಿ ನವೀನ್ ಕುಮಾರ್ ರಾಜು ಎಸ್. ನೀಡಿದ ವರದಿ

ಹುಬ್ಬಳ್ಳಿಗೆ ಕಾಲಿಡುವ ಮುನ್ನ ಜಮೀನು ವಾಪಸ್ ಮಾಡಿ:

“ಉತ್ತರ ಕರ್ನಾಟಕದಲ್ಲಿ ಜೆಡಿಎಸ್‌ ಪಕ್ಷವನ್ನು ಬೆಳೆಸುವ ಉದ್ದೇಶದಿಂದ ಕುಮಾರಸ್ವಾಮಿ ಅವರು ಹುಬ್ಬಳ್ಳಿಯಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದಾರೆ. ಮೊದಲು ದಲಿತರ ಭೂಮಿಯನ್ನು ಅವರಿಗೆ ಹಿಂತಿರುಗಿಸಿ ಆದ ತಪ್ಪನ್ನು ಸರಿಪಡಿಸಿಕೊಳ್ಳಿ; ನಂತರ ಬನ್ನಿ. ಇಲ್ಲದಿದ್ದರೆ ಇಲ್ಲಿನ ಜನ ಕ್ಷಮಿಸುವುದಿಲ್ಲ,” ಎಂದು ಎಸ್‌.ಆರ್‌.ಹಿರೇಮಠ್ ಎಚ್ಚರಿಕೆ ನೀಡಿದರು.

ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಹಿರೇಮಠ್, “ಬಡವರಿಗೆ ಸೇರಬೇಕಾದ ‌ಜಮೀನು ಭ್ರಷ್ಟರ ಪಾಲಾಗಿದೆ. ರಾಜ್ಯದ ಮುಖ್ಯಮಂತ್ರಿಯಾಗಿದ್ದವರೇ ದಲಿತರಿಗೆ ಸೇರಿದ ಭೂಮಿಯನ್ನು ಕಬಳಿಸಿದರೆ ಹೇಗೆ? ಇದರಲ್ಲಿ ಅಧಿಕಾರಿಗಳೂ ಶಾಮೀಲಾಗಿದ್ದಾರೆ. ಸರಕಾರ ಈ‌ ಕೂಡಲೇ ಕುಮಾರಸ್ವಾಮಿ ಮತ್ತು ಇತರರಿಂದ ಜಮೀನು ಮುಟ್ಟುಗೋಲು ಹಾಕಿಕೊಂಡು ಆರೋಪಿಗಳ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸಬೇಕು; ಮಾತ್ರವಲ್ಲ ಜೈಲಿಗಟ್ಟಬೇಕು,” ಎಂದು ಒತ್ತಾಯಿಸಿದರು.

ಚಿತ್ರ ಕೃಪೆ: ಪ್ರಜಾವಾಣಿ, ದಿ ಹಿಂದೂ

Leave a comment

Top