An unconventional News Portal.

ಪ್ರಶ್ನೆ ಪತ್ರಿಕೆ ಜಾಲಕ್ಕೆ ‘ಕೋಕಾ’ ಬಿಸಿ: ಅಪರೂಪಕ್ಕೆ ಬಳಸುವ ಈ ಕಾಯ್ದೆ ಏನು- ಎತ್ತ?

ಪ್ರಶ್ನೆ ಪತ್ರಿಕೆ ಜಾಲಕ್ಕೆ ‘ಕೋಕಾ’ ಬಿಸಿ: ಅಪರೂಪಕ್ಕೆ ಬಳಸುವ ಈ ಕಾಯ್ದೆ ಏನು- ಎತ್ತ?

ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಆರೋಪಿಗಳ ಮೇಲೆ ಸಿಐಡಿ ಪೊಲೀಸರು ಕೋಕಾ (ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ-2000) ಅಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ. ಇದರಿಂದಾಗಿ ತಲೆ ಮರೆಸಿಕೊಂಡಿರುವ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಸಿಗುವುದು ಕಷ್ಟವಾಗಲಿದೆ.
“ದ್ವಿತೀಯ ಪಿಯುಸಿ ಕೆಮಿಸ್ಟ್ರಿ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧ ಬಂಧಿತ ಆರೋಪಿಗಳ ವಿರುದ್ಧ ಕೋಕಾ ಕಾಯ್ದೆ ಸೆಕ್ಷನ್ 3ರ ಅಡಿ ಕೇಸು ದಾಖಲಿಸಲಾಗಿದೆ. ವಿಶೇಷ ಕಾಯ್ದೆ ಅಡಿ ಕೇಸು ದಾಖಲಿಸಿದ ಮಾಹಿತಿಯನ್ನು ಪ್ರಧಾನ ಸಿವಿಲ್ ಸೆಷನ್ಸ್ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ,” ಎಂದು ಸಿಐಡಿ ಡಿಜಿಪಿ ಕಿಶೋರ್‍ಚಂದ್ರ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

“ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಈಗಾಗಲೇ ಹತ್ತು ಆರೋಪಿಗಳನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ಶಿವಕುಮಾರಯ್ಯ ಸೇರಿದಂತೆ ಇತರೆ ಆರೋಪಿಗಳನ್ನು ಪತ್ತೆ ಕಾರ್ಯಾಚರಣೆ ನಡೆಯುತ್ತಿದೆ. ಕಳೆದ ಹತ್ತು ವರ್ಷದಿಂದ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿರುವ ಸಂಬಂಧ ಈಗಾಗಲೇ ಆರು ಪ್ರಕರಣ ದಾಖಲಾಗಿವೆ. ಸಂಘಟಿತ ಅಪರಾಧ ಕೃತ್ಯ ಎಸಗುವ ಸಂದರ್ಭದಲ್ಲಿ ಈ ಕಾಯ್ದೆ ಅಡಿ ಕೇಸು ದಾಖಲಿಸಲಾಗುತ್ತದೆ. ಪ್ರಶ್ನೆ ಪತ್ರಿಕೆ ಸೋರಿಕೆ ಜಾಲದ ಹಳೇ ಪ್ರಕರಣ ಪರಿಗಣಿಸಿ ಕೋಕಾ ಕಾಯ್ದೆ ಅಡಿ ಕೇಸು ದಾಖಲಿಸಲಾಗಿದೆ,” ಎಂದು ಮಾಹಿತಿ ನೀಡಿದರು.

ಸಿಐಡಿ ಪೊಲೀಸರ ಈ ಕ್ರಮದಿಂದ ತಲೆಮರೆಸಿಕೊಂಡಿರುವ ಆರೋಪಿಗಳಿಗೆ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಸಿಗುವುದಿಲ್ಲ. ಮಾತ್ರವಲ್ಲ, 90 ದಿನಗಳ ಬದಲಿಗೆ 180 ದಿನಗಳ ಕಾಲ ತನಿಖೆ ಮಾಡಲು ತನಿಖಾಧಿಕಾರಿಗಳಿಗೆ ಅವಕಾಶ ವಿಸ್ತರಣೆಗೊಳ್ಳುತ್ತದೆ. ಸೂಚಿತ ಪ್ರಧಾನ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವಷ್ಟೇ ಪ್ರಕರಣದ ವಿಚಾರಣೆ ನಡೆಸಲಿದೆ. ಆರೋಪಿಗಳ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶವಿದೆ. ಆರೋಪಿಗಳ ಪೊಲೀಸ್ ಕಸ್ಟಡಿ ಅವಧಿಯನ್ನು ವಿಸ್ತರಿಸಿಕೊಳ್ಳಲು ಕಾಯ್ದೆ ನೆರವಾಗಲಿದೆ.

“ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ಪೂರ್ಣವಾದ ಬಳಿಕ ಆರೋಪಿಯ ಪಾತ್ರ ಆಧರಿಸಿ ವಿವಿಧ ಸೆಕ್ಷನ್ ಅಡಿ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು. ಒಂದಕ್ಕಿಂತೂ ಹೆಚ್ಚು ಸೋರಿಕೆ ಪ್ರಕರಣದಲ್ಲಿ ಶಾಮೀಲಾಗಿರುವುದು ತನಿಖೆಯಲ್ಲಿ ಕಂಡು ಬಂದರೆ ಅಂತಹವರ ವಿರುದ್ಧ ಈ ಕಾಯ್ದೆ ಅಡಿ ತನಿಖೆ ನಡೆಸಲಾಗುವುದು,” ಎಂದು ಕಿಶೋರ್ ಚಂದ್ರ ಹೇಳಿದರು.

ಪ್ರಶ್ನೆ ಪತ್ರಿಕೆ ಸೋರಿಕೆ; ದಾಖಲಾಗಿರುವ ಪ್ರಕರಣ: 

2008: ವಿಜಯನಗರ ಠಾಣೆ
2008: ಚಂದ್ರಾಲೇಔಟ್ ಪೊಲೀಸ್ ಠಾಣೆ
2009: ಮಲ್ಲೇಶ್ವರ ಪೊಲೀಸ್ ಠಾಣೆ
2011: ಗುಬ್ಬಿ ಪೊಲೀಸ್ ಠಾಣೆ
2013: ತುಮಕೂರು ಪೊಲೀಸ್ ಠಾಣೆ
2014 ನಂದಿನಿ ಬಡಾವಣೆ ಪೊಲೀಸ್ ಠಾಣೆ

ಕೋಕಾ ಬಳಕೆ ಇತಿಹಾಸ:

ಕೆ.ಆರ್. ಪುರಂನಲ್ಲಿ ಪಾಲಿಕೆ ಸದಸ್ಯೆ ಮಂಜುಳಾದೇವಿ ಅವರ ಪತಿ ಸಿರಪುರ ಶ್ರೀನಿವಾಸ್ ಅವರನ್ನು ಹತ್ಯೆ ಮಾಡಿದ್ದ 12 ಆರೋಪಿಗಳ ವಿರುದ್ಧ ಸಿಸಿಬಿ ಪೊಲೀಸರು 2014ರಲ್ಲಿ ಕೋಕಾ ಕಾಯ್ದೆ ಅಡಿ ಕೇಸು ದಾಖಲಿಸಿದ್ದರು. ಈ ಮೂಲಕ ಕಾಯ್ದೆ ಜಾರಿಯಾದ 14 ವರ್ಷಗಳ ಬಳಿಕ ಸಿಸಿಬಿ ಸಂಘಟಿತ ಅಪರಾಧ ದಳದ ಡಿವೈಎಪಿ ರವಿಕುಮಾರ್ ಈ ಕಾಯ್ದೆಯನ್ನು ಮೊದಲು ಪ್ರಯೋಗಿಸಿದ್ದರು. ಇದಾದ ಬಳಿಕ ಶಿವಮೊಗ್ಗದಲ್ಲಿ ಬನ್ನಂಜೆ ರಾಜನ ವಿರುದ್ಧ ಈ ಕಾಯ್ದೆ ಅಡಿ ಕೇಸು ದಾಖಲಿಸಲಾಗಿತ್ತು. ನಂತರ ಮಂಗಳೂರಿನಲ್ಲಿ ನಾಯಕ್ ಕೊಲೆ ಪ್ರಕರಣದಲ್ಲಿ ಈ ಕಾಯ್ದೆ ಅಡಿ ಕೇಸು ದಾಖಲಿಸಲಾಗಿತ್ತು. ಸಿಐಡಿ ಪೊಲೀಸರದ್ದು ನಾಲ್ಕಯ ಪ್ರಕರಣ.

Top