An unconventional News Portal.

ಮಾತ್ರೆಗಳಿಗೂ ಸಸ್ಯಾಹಾರದ ಲೇಪನ: ಪರಿಶೀಲನೆಯಲ್ಲಿ ಪ್ರಸ್ತಾವನೆ

ಮಾತ್ರೆಗಳಿಗೂ ಸಸ್ಯಾಹಾರದ ಲೇಪನ: ಪರಿಶೀಲನೆಯಲ್ಲಿ ಪ್ರಸ್ತಾವನೆ

ಫಾರ್ಮಸಿಯಲ್ಲಿ ನೀವು ಶುದ್ಧ ಸಸ್ಯಾಹಾರಿ ಕ್ಯಾಪ್ಸೂಲ್ ಪಡೆಯುವ ದಿನ ದೂರವಿಲ್ಲ. ದೇಶದಲ್ಲಿ ಸಸ್ಯಜನ್ಯ ಸೆಲ್ಯುಲೋಸ್ ಆಧರಿತ ಗುಳಿಗೆಗಳನ್ನು ಪರಿಚಯಿಸುವ ಸಂಬಂಧ ಸಲ್ಲಿಸಲಾಗಿರುವ ಪ್ರಸ್ತಾವನೆ ದೇಶದ ಅತ್ಯುನ್ನತ ಔಷಧ ನಿಯಂತ್ರಕರ ಪರೀಶೀಲನೆಯಲ್ಲಿದೆ.

“ಪ್ರಾಣಿಜನ್ಯ ಜೆಲೆಟಿನ್ಗಿಂತ ಇದು ಹೆಚ್ಚು ಸುರಕ್ಷಿತ ಎಂಬ ಅಂಶದ ಬಗ್ಗೆಯೂ ಪರಿಶೀಲನೆ ನಡೆದಿದೆ,” ಎಂದು ಡ್ರಗ್ ಕಂಟ್ರೋಲರ್ ಜನರಲ್ ಜಿ.ಎನ್.ಸಿಂಗ್ ಹೇಳಿದ್ದಾರೆ.

ಸದ್ಯ ಜೆಲೆಟಿನ್ ಅನ್ನು ಹಸು, ಹಂದಿ ಮತ್ತಿತರ ಪ್ರಾಣಿಗಳ ಸಂಸ್ಕರಿತ ಮೂಳೆ, ಚರ್ಮ ಹಾಗೂ ಕೋಶಗಳಿಂದ ತಯಾರಿಸುವ ವಿಧಾನ ಜಾರಿಯಲ್ಲಿದೆ. ಈ ಸಂಬಂಧ, “ಔಷಧ ನಿಯಂತ್ರಕರು ಫ್ಯಾರ್ಮಸ್ಯೂಟಿಕಲ್ ಉದ್ಯಮ ಹಾಗೂ ಗ್ರಾಹಕರಿಂದ ಪ್ರತಿಕ್ರಿಯೆಗಳನ್ನು ಪಡೆಯುತ್ತಿದ್ದಾರೆ. ಆ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ,” ಎಂದು ಸಿಂಗ್ ತಿಳಿಸಿದ್ದಾರೆ. ಮೇ ಕೊನೆಯ ವೇಳೆಗೆ ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ ಎಂದು ಮೂಲಗಳು ಹೇಳಿವೆ.

ಈ ಪ್ರಸ್ತಾವನೆಗೆ ಸರಕಾರದ ವಿವಿಧ ಹಂತಗಳಲ್ಲಿ ವ್ಯಾಪಕ ಬೆಂಬಲ ದೊರಕಿದೆ. ಇದು ಪ್ರಾಣಿಜನ್ಯ ಜೆಲೆಟಿನ್ಗಿಂತ ಹೆಚ್ಚು ಸುರಕ್ಷಿತ ಎಂದು ಹೇಳಲಾಗಿದೆ. ಅದಾಗ್ಯೂ, ವೈಜ್ಞಾನಿಕ ಮೌಲ್ಯಮಾಪನ ಕೈಗೊಂಡ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮೂಲಗಳು ಹೇಳಿವೆ.

ಬ್ಯೂರೊ ಆಫ್ ಇಂಡಿಯನ್ ಸ್ಟ್ಯಾಂಡಡ್ರ್ಸ್ ಈಗಾಗಲೇ ಗುಣಮಟ್ಟ ಹಾಗೂ ನಿಯಮಾವಳಿಯನ್ನು ನಿಗದಿಪಡಿಸಿದ್ದು, ಸಸ್ಯಜನ್ಯ ಕ್ಯಾಪ್ಸೂಲ್ ಉತ್ಫಾದಿಸುವ ಬಗ್ಗೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇಲ್ಲಿ ಬಳಸುವ ಪ್ರಮುಖ ಉತ್ಪನ್ನವನ್ನು ಆಹಾರ ಉತ್ಪನ್ನಗಳಲ್ಲಿ, ಜೆಲ್ಲಿ ಏಜೆಂಟ್ ಆಗಿಯೂ ಬಳಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಒಂದು ಲಕ್ಷ ಕೋಟಿ ಮೌಲ್ಯಕ್ಕಿಂತಲೂ ಬೃಹತ್ತಾದ ಭಾರತೀಯ ಫಾರ್ಮಸ್ಯೂಟಿಕಲ್ ಉದ್ಯಮ ಇದೀಗ ಪ್ರಾಣಿಜನ್ಯ ಜೆಲೆಟಿನ್ ಅವಲಂಭಿಸಿದೆ.

Top