An unconventional News Portal.

ಮತ್ತೆ ಮುರಿದು ಬಿದ್ದ ಸಂಧಾನ ಸಭೆ: ಪಿಯುಸಿ ಮೌಲ್ಯಮಾಪನದ ಗೊಂದಲ ಮುಂದುವರಿಕೆ

ಮತ್ತೆ ಮುರಿದು ಬಿದ್ದ ಸಂಧಾನ ಸಭೆ: ಪಿಯುಸಿ ಮೌಲ್ಯಮಾಪನದ ಗೊಂದಲ ಮುಂದುವರಿಕೆ

ವೇತನ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಪಿಯುಸಿ ಉಪನ್ಯಾಸಕರ ಜತೆ ಭಾನುವಾರ ನಡೆಸಿದ ಸರಕಾರದ ಮಾತುಕತೆ ಮತ್ತೆ ಮುರಿದು ಬಿದ್ದಿದೆ.

ಈ ಮೂಲಕ, ಪಿಯುಸಿ ಮೌಲ್ಯಮಾಪನದ ಡೋಲಾಯಮಾನ ಪರಿಸ್ಥಿತಿ ಇನ್ನಷ್ಟು ದಿನಗಳು ಮುಂದುವರಿಯಲಿದೆ. ಭಾನುವಾರ ಬೆಂಗಳೂರಿನ ಕೆ. ಆರ್. ವೃತ್ತದ ಬಳಿ ಇರುವ ‘ಸರ್ವ ಶಿಕ್ಷಣ ಅಭಿಯಾನ’ ಯೋಜನೆ ನಿರ್ದೇಶಕರ ಕಚೇರಿಯಲ್ಲಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಪ್ರತಿಭಟನಾಕಾರರ ಜತೆ ಸಭೆ ಕರೆದಿದ್ದರು.

ಸಭೆ ಆರಂಭವಾಗುತ್ತಿದ್ದಂತೆ, ಸಚಿವ ಕಿಮ್ಮನೆ ರತ್ನಾಕರ್, “ವೇತನ ಪರಿಷ್ಕರಣೆ ವಿಚಾರದಲ್ಲಿ ಸರಕಾರ ಮಧ್ಯದ ಹಾದಿಯನ್ನು ಅನುಸರಿಸಲು ಸಿದ್ಧವಿದೆ. 40-50 ಕೋಟಿ ರೂಪಾಯಿಗಳನ್ನು ಹೆಚ್ಚುವರಿಯಾಗಿ ನೀಡಲು ಸಿಎಂ ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಿದ್ದಾರೆ. ಹೀಗಾಗಿ, ಪ್ರತಿಭಟನೆಯನ್ನು ಕೈ ಬಿಟ್ಟು, ಮೌಲ್ಯಮಾಪನ ಪ್ರಕ್ರಿಯೆ ಶುರುಮಾಡಿ,” ಎಂದು ಪಿಯುಸಿ ಉಪನ್ಯಾಸಕರ ಸಂಘದ ಪದಾಧಿಕಾರಿಗಳಿಗೆ ತಿಳಿಸಿದರು.

ಪ್ರತಿಭಟನೆ ನಡೆಸುತ್ತಿರುವ ಉಪನ್ಯಾಸಕರು ವೇತನ ಪರಿಷ್ಕರಣೆಗಾಗಿ ‘ಕುಮಾರ್ ನಾಯಕ್ ವರದಿ’ಯನ್ನು ಜಾರಿಗೊಳಿಸುವಂತೆ ಪಟ್ಟು ಹಿಡಿದಿದ್ದಾರೆ. ಒಂದು ವೇಳೆ ವರದಿಯನ್ನು ಯಥಾವತ್ತಾಗಿ ಜಾರಿ ಮಾಡಿದರೆ, 120 ಕೋಟಿ ರೂಪಾಯಿಗಳನ್ನು ಪ್ರತಿ ವರ್ಷ ಹೆಚ್ಚುವರಿಯಾಗಿ ಸರಕಾರ ನೀಡಬೇಕಿದೆ.

ಸಚಿವರ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿದ ಪ್ರತಿಭಟನಾಕಾರರು, “ಸರಕಾರ ಹಿಂದೆಯೂ ಇಂತಹದ್ದೇ ಆಶ್ವಾಸನೆ ನೀಡಿತ್ತು. ಒಂದು ವೇಳೆ ಮೌಲ್ಯ ಮಾಪನ ಶುರು ಮಾಡಿದರೆ, ಮುಂದಿನ ವರ್ಷ ಇಂತಹ ಸಮಯ ಬರುವವರೆಗೂ ನಮ್ಮ ಕಡೆ ಯಾರೂ ಗಮನಹರಿಸುವುದಿಲ್ಲ. ಹೀಗಾಗಿ, ವರದಿಯನ್ನು ಯಥಾವತ್ತಾಗಿ ಜಾರಿ ಮಾಡಿ. ನಂತರ ಮುಂದಿನ ಕೆಲಸ,” ಎಂದರು.

ಹೀಗೆ, ಎರಡೂ ಕಡೆಯ ವಾದ ವಿವಾದಗಳ ನಡುವೆ ಸಭೆ ಮುಕ್ತಾಯಗೊಂಡಿತು.

ನಂತರ ಮಾಧ್ಯಮಗಳ ಜತೆ ಮಾತನಾಡಿದ ಸಚಿವ ಕಿಮ್ಮನೆ ರತ್ನಾಕರ್, “ಸರಕಾರ ಪಿಯುಸಿ ಉಪನ್ಯಾಸಕ ಮನವೊಲಿಸಲು ಸಕಲ ಪ್ರಯತ್ನ ಮಾಡುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ಏ. 13ರ ವೇಳೆಗೆ ಸರಕಾರದ ಅಂತಿಮ ನಿರ್ಧಾರವನ್ನು ಪ್ರಕಟಿಸಲಾಗುವುದು,” ಎಂದರು.

ಪಿಯುಸಿ ಮರು ಪರೀಕ್ಷೆಯ ಕುರಿತು ಮಾಹಿತಿ ನೀಡಿದ ಅವರು, “ಈ ಬಾರಿಯ ಪಿಯುಸಿ ರಸಾಯನ ಶಾಸ್ತ್ರ ಪರೀಕ್ಷೆಯನ್ನು ಕ್ರಮಬದ್ಧವಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಅದರ ಸಂಪೂರ್ಣ ಹೊಣೆಯನ್ನು ನಾನೇ ಹೊತ್ತುಕೊಂಡಿದ್ದೇನೆ,” ಎಂದರು.

Top