An unconventional News Portal.

ಪತ್ನಿ ಮಕ್ಕಳ ಆಸ್ತಿ ವಿವರವನ್ನೂ ಸಲ್ಲಿಸುವಂತೆ ಮಲ್ಯಗೆ ಸುಪ್ರಿಂ ಸೂಚನೆ

ಪತ್ನಿ ಮಕ್ಕಳ ಆಸ್ತಿ ವಿವರವನ್ನೂ ಸಲ್ಲಿಸುವಂತೆ ಮಲ್ಯಗೆ ಸುಪ್ರಿಂ ಸೂಚನೆ

ಪತ್ನಿ ಮತ್ತು ಮಕ್ಕಳೂ ಸೇರಿದಂತೆ ತಮ್ಮ ಹೆಸರಿನಲ್ಲಿ ಇರುವ ಸಂಪೂರ್ಣ ಆಸ್ತಿಪಾಸ್ತಿ ವಿವರಗಳನ್ನು ಏಪ್ರಿಲ್ 21ಕ್ಕೆ ಮುನ್ನ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಗುರುವಾರ ಮದ್ಯ ಉದ್ಯಮಿ ವಿಜಯ್ ಮಲ್ಯಗೆ ನಿರ್ದೇಶನ ನೀಡಿದೆ.

ವಿಜಯ್ ಮಲ್ಯ ಹಾಗೂ ಈಗ ಅಸ್ತಿತ್ವದಲ್ಲಿಲ್ಲದ ‘ಕಿಂಗ್ ಫಿಶರ್ ಏರ್ ಲೈನ್ಸ್’ನ ಆಸ್ತಿ ಪಾಸ್ತಿ ವಿವರಗಳನ್ನು ಘೋಷಿಸಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಇದೇ ವೇಳೆ, ನಾಲ್ಕು ಸಾವಿರ ಕೋಟಿ ರೂ. ಪಾವತಿಸುವ ಲಿಕ್ಕರ್ ಉದ್ಯಮ ದೊರೆ ವಿಜಯ್ ಮಲ್ಯ ಅವರ ಪ್ರಸ್ತಾವವನ್ನು ಬ್ಯಾಂಕುಗಳು ತಿರಸ್ಕರಿಸಿವೆ. ‘ನಮಗೆ ನಿಮ್ಮಿಂದ ಸಂದಾಯವಾಗಬೇಕಿರುವ ಸಾಲವನ್ನು ಪೂರ್ತಿಯಾಗಿ ಪಾವತಿಸುವ ನಿಮ್ಮ ಸಾಚಾತನ ಮತ್ತು ಗಂಭೀರತೆಯನ್ನು ಸಾಬೀತು ಪಡಿಸಲು ದೇಶದಲ್ಲಿ ನೀವು ಉಪಸ್ಥಿತರಿರಬೇಕು’ ಎಂದು ಬ್ಯಾಂಕುಗಳು ಮಲ್ಯ ಅವರಿಗೆ ತಾಕೀತು ಮಾಡಿವೆ.

ವಿಜಯ್ ಮಲ್ಯ ಅವರ ಬ್ಯಾಂಕ್ ಸಾಲ ಬಾಕಿ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಏ 26 ರಿಂದ ಪುನರಾರಂಭಿಸಲಿದೆ. ಜಸ್ಟಿಸ್ ಕುರಿಯನ್ ಜೋಸೆಫ್ ಮತ್ತು ರೊಹಿಂಟನ್ ಎಫ್ ನಾರೀಮಾನ್ ಅವರನ್ನು ಒಳಗೊಂಡ ಸುಪ್ರೀಂ ಪೀಠವು ಈ ಕುರಿತ ಆದೇಶವನ್ನುಗುರುವಾರ ಹೊರಡಿಸಿದೆ.

ಬ್ಯಾಂಕುಗಳ ಸಾಲವನ್ನು ತೀರಿಸುವ ತಮ್ಮ ಸಾಚಾತನವನ್ನು ಸಾಬೀತು ಪಡಿಸುವ ನಿಟ್ಟಿನಲ್ಲಿ ಎಷ್ಟು ಮೊತ್ತದ ಹಣವನ್ನು ಠೇವಣಿ ಇರಿಸಬಹುದು ಎಂಬುದನ್ನು ತಿಳಿಸಿ ಎಪ್ರಿಲ್ 21ರ ಒಳಗೆ ತನ್ನ ಆದೇಶಕ್ಕೆ ಉತ್ತರ ಸಲ್ಲಿಸುವಂತೆ ಸುಪ್ರೀಂ ಕೋರ್ಟ್, ಮಲ್ಯ ಅವರಿಗೆ ಆದೇಶಿಸಿದೆ.

ಮಲ್ಯ ಅವರು ಭಾರತಕ್ಕೆ ಯಾವಾಗ ವಾಪಸ್ ಬರುತ್ತಾರೆ? ಎಂದು ಮಲ್ಯ ಪರ ವಕೀಲರನ್ನು ನ್ಯಾಯಾಲಯ ಪ್ರಶ್ನಿಸಿದೆ. ವಿಜಯ್ ಮಲ್ಯ ಅವರು ಪರಿಷ್ಕೃತ ಪ್ರಸ್ತಾವವನ್ನು ಸಲ್ಲಿಸಿದ್ದಾರೆ ಎಂದು ಎಸ್‍ಬಿಐ ನೇತೃತ್ವದ ಬ್ಯಾಂಕುಗಳ ಒಕ್ಕೂಟ ಗುರುವಾರ ಸುಪ್ರೀಂಕೋರ್ಟಿಗೆ ತಿಳಿಸಿದೆ. ಆದರೆ ಈ ಪ್ರಸ್ತಾವಕ್ಕೆ ಸಂಬಂಧಿಸಿದಂತೆ ಮಲ್ಯ ಅವರು ತಮ್ಮಲ್ಲಿ ನೇರವಾಗಿ ಮಾತುಕತೆ ನಡೆಸಬೇಕು ಎಂದು ಬ್ಯಾಂಕುಗಳು ತಿಳಿಸಿವೆ.

ಇದಕ್ಕೆ ಮುನ್ನ ಕಿಂಗ್‍ಫಿಷರ್ ಏರ್‍ಲೈನ್ಸ್‍ಗೆ ಸಂಬಂಧಿಸಿದಂತೆ ಪಾವತಿ ಮಾಡಬೇಕಾಗಿದ್ದ 8000 ಕೋಟಿ ರೂಪಾಯಿ ಸಾಲದ ಪೈಕಿ 4000 ಕೋಟಿ ರೂಪಾಯಿಗಳನ್ನು ಪಾವತಿ ಮಾಡುವುದಾಗಿ ಮದ್ಯ ಉದ್ಯಮಿ ವಿಜಯ್ ಮಲ್ಯ ನೀಡಿದ ಕೊಡುಗೆಯನ್ನು ತಾವು ತಿರಸ್ಕರಿಸಿರುವುದಾಗಿ ಬ್ಯಾಂಕುಗಳು ಸುಪ್ರೀಂಕೋರ್ಟ್‍ಗೆ ತಿಳಿಸಿವೆ. ಬ್ಯಾಂಕುಗಳು ಏಪ್ರಿಲ್ 2 ರಂದು ಸಭೆ ಸೇರಿ ಸೆಪ್ಟೆಂಬರ್ ತಿಂಗಳಿನಲ್ಲಿ 4000 ಕೋಟಿ ರೂಪಾಯಿ ಸಂದಾಯ ಮಾಡುವುದಾಗಿ ಮುಂದಿಟ್ಟ ಪ್ರಸ್ತಾವದ ಬಗ್ಗೆ ಚರ್ಚಿಸಿದ್ದವು.

‘ಅವರು (ಮಲ್ಯ) ನೀಡಲು ಒಪ್ಪಿಕೊಂಡಿರುವ 4000ಕೋಟಿ ಸಾಲದ ಮೇಲಿನ ಬಡ್ಡಿಗೂ ಸಾಕಾಗುವುದಿಲ್ಲ. ಅದನ್ನು ನೀಡುತ್ತಾರೆ ಎಂಬುದಕ್ಕೆ ಖಚಿತತೆಯೂ ಇಲ್ಲ. ಇನ್ನು ಉಳಿದ 5 ಸಾವಿರ ಕೋಟಿಯನ್ನು ಯಾವಾಗ ನೀಡುತ್ತಾರೆಂಬುದಕ್ಕೆ ಸ್ಪಷ್ಟನೆ ನೀಡಿಲ್ಲ. ಹೀಗಾಗಿ ಮಲ್ಯ ಅವರ ಪ್ರಸ್ತಾವವನ್ನು ತಿರಸ್ಕರಿಸುತ್ತಿದ್ದೇವೆಂದು’ ಸಭೆ ನಂತರ ಮಾಧ್ಯಮಗಳಿಗೆ ಒಕ್ಕೂಟ ಸ್ಪಷ್ಟಪಡಿಸಿದೆ.

ಇನ್ನು ಬ್ಯಾಂಕ್ ಗಳ ಪ್ರತಿಕ್ರಿಯೆ ಕೇಳಿದ ಕಿಂಗ್ ಫಿಶರ್ ಕಂಪನಿಯು ಮುಂದಿನ ಪ್ರಸ್ತಾವನೆಗಾಗಿ 2 ವಾರಗಳ ಕಾಲ ಕಾಲಾಕಾಶ ನೀಡುವಂತೆ ಸುಪ್ರೀಂನಲ್ಲಿ ಮನವಿ ಮಾಡಿಕೊಂಡಿದೆ. ಮಲ್ಯ ಪ್ರಸ್ತಾವವನ್ನು ಬ್ಯಾಂಕುಗಳು ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ಏ.21 ರೊಳಗಾಗಿ ತಮ್ಮ ಎಲ್ಲಾ ಆಸ್ತಿ ಪಾಸ್ತಿಗಳ ವಿವರವನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸುಪ್ರೀಂಕೋರ್ಟ್ ಮಲ್ಯಗೆ ಸೂಚನೆ ನೀಡಿದೆ.

Top