An unconventional News Portal.

ಉಗಾದಿಗೆ ನಿರ್ಧಾರ ಪ್ರಕಟಿಸಲಿರುವ ಸರಕಾರ: ಉಪನ್ಯಾಸಕರಿಗೆ ಸಿಹಿನೋ? ಕಹಿನೋ?

ಉಗಾದಿಗೆ ನಿರ್ಧಾರ ಪ್ರಕಟಿಸಲಿರುವ ಸರಕಾರ: ಉಪನ್ಯಾಸಕರಿಗೆ ಸಿಹಿನೋ? ಕಹಿನೋ?

ದ್ವಿತೀಯ ಪಿಯುಸಿ ಉಪನ್ಯಾಸಕರ ಪ್ರತಿಭಟನೆ ಗುರುವಾರ ಐದನೇ ದಿನಕ್ಕೆ ಕಾಲಿಟ್ಟಿದೆ.

ಉಪನ್ಯಾಸಕರು ಮುಷ್ಕರ ಕೈ ಬಿಡುತ್ತಿಲ್ಲ; ಸರಕಾರ ಬೇಡಿಕೆಗಳಿಗೆ ಮಣಿಯುತ್ತಿಲ್ಲ. ಇವರ ನಡುವಿನ ಗುದ್ದಾಟಕ್ಕೆ ಪಿಯುಸಿ ಫಲಿತಾಂಶ ವಿಳಂಬವಾಗುವ ಸ್ಪಷ್ಟ ಸೂಚನೆ ಸಿಕ್ಕಿದೆ.

ವೇತನ ತಾರತಮ್ಯ ನಿವಾರಣೆಯಾಗುವವರೆಗೂ ಹೋರಾಟ ಕೈಬಿಡುವುದಿಲ್ಲ ಎಂದು ಉಪನ್ಯಾಸಕರು ಪಟ್ಟು ಹಿಡಿದಿದ್ದಾರೆ.
ಗುರುವಾರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಕರ್ ಪ್ರತಿಭಟನಾನಿರತ ಉಪನ್ಯಾಸಕರ ಸಭೆ ಕರೆದಿದ್ದರು. ಆದರೆ ಬೇಡಿಕೆಗಳ ಈಡೇರಿಕೆ ವಿಚಾರದಲ್ಲಿ ಸಹಮತ ಬರದ ಹಿನ್ನೆಲೆಯಲ್ಲಿ ಸಭೆ ವಿಫಲವಾಗಿದೆ.

ಉಗಾದಿ ರಜೆ ದಿನ ಶುಕ್ರವಾರ ಮತ್ತೆ ಸಭೆಯನ್ನು ಕರೆಯಲಾಗಿದೆ. ಇದರಲ್ಲಿ ಒಂದು ತೀರ್ಮಾನಕ್ಕೆ ಬರುವ ಸಾಧ್ಯತೆ ಇದೆ ಎಂದು ಸರಕಾರದ ಮೂಲಗಳು ವಿಶ್ವಾಸ ವ್ಯಕ್ತಪಡಿಸಿವೆ. ಸಭೆಯ ಫಲಾಫಲ ಏನೇ ಇದ್ದರೂ, ಮಧ್ಯಾಹ್ನ 12ರೊಳಗೆ ಸರಕಾರ ಪಿಯುಸಿ ಪ್ರಶ್ನೆ ಪತ್ರಿಕೆಗಳ ಮೌಲ್ಯಮಾಪನದ ಕುರಿತು ತನ್ನ ಮುಂದಿನ ನಡೆಯನ್ನು ಪ್ರಕಟಿಸಲಿದೆ ಎಂದು ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದ್ದಾರೆ.

‘ನಮ್ಮನ್ನು ಕೇಳಬೇಡಿ’:

‘ದೊಡ್ಡವರ ನಿರ್ಧಾರಗಳಿಗೆ ನಾವು ತಲೆ ಬಾಗಲೇಬೇಕು. ದಯವಿಟ್ಟು ಈ ಸಂಬಂಧ ನಮ್ಮನ್ನ ಏನೂ ಕೇಳಬೇಡಿ. ಎಲ್ಲಾ ಒಳ್ಳೆಯದಾಗುತ್ತೆ,’ ಎಂದು ಮಾಧ್ಯಮದವರಿಗೆ ಕೈಮುಗಿದು ಧರಣಿ ನಿರತ ಪಿಯು ಉಪನ್ಯಾಸಕರು ವಿಧಾನಸೌಧದಿಂದ ಕಾಲ್ಕಿತ್ತ ಘಟನೆ ಗುರುವಾರ ನಡೆಯಿತು.

ಈ ಸಂದರ್ಭದಲ್ಲಿ ಪರೋಕ್ಷವಾಗಿ ಎಸ್ಮಾ ಜಾರಿಗೊಳಿಸುವ ಬಗ್ಗೆ ಸಚಿವರು ಎಚ್ಚರಿಕೆ ನೀಡಿದ್ದರು. ಒಂದೋ ಕೆಲಸಕ್ಕೆ ಹಾಜರಾಗಿ ಇಲ್ಲವೇ ಕ್ರಮಕ್ಕೆ ಸಿದ್ದರಾಗಿ ಎಂದು ಖಡಕ್ ಸಂದೇಶ ರವಾನಿಸಿದ್ದರು. ಸಭೆ ಬಳಿಕ ಧರಣಿ ನಡೆಸುತ್ತಿದ್ದ ಉಪನ್ಯಾಸಕರು ದಿಢೀರ್ ಅಂತ ಕಾಲ್ಕಿತ್ತಿದ್ದರು. ಆಗ ಮಾಧ್ಯಮದವರು ಪ್ರಶ್ನಿಸಿದಾಗ, ‘ದೊಡ್ಡವರ ನಿರ್ಧಾರಗಳಿಗೆ ನಾವು ತಲೆಬಾಗಲೇಬೇಕು’ ಎಂದು ಎಂದು ಉಪನ್ಯಾಸಕರು ಕೈಮುಗಿದಿದರು.

ಹೋರಾಟ ಇನ್ನಷ್ಟು ತೀವ್ರ:

ಸರಕಾರ ನಮ್ಮ ಮೇಲೆ ಎಸ್ಮಾ ಕಾಯ್ದೆ ಜಾರಿಗೊಳಿಸಿದರೂ ಜೈಲಿಗೆ ಹೋಗಲು ಸಿದ್ಧರಿದ್ದೇವೆಯೇ ಹೊರತು ಮೌಲ್ಯಮಾಪನಕ್ಕೆ ಹಾಜರಾಗುವುದಿಲ್ಲ. ಎರಡು ದಶಕಗಳಿಂದ ಈ ಬೇಡಿಕೆ ಮುಂದಿಟ್ಟು ಹೋರಾಟ ನಡೆಸುತ್ತಿದ್ದರೂ ಸರಕಾರ ಯಾವುದೇ ತೀರ್ಮಾನಕ್ಕೆ ಬಾರದಿರುವುದು ಖಂಡನೀಯ ಎಂದು ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ತಿಳಿಸಿದ್ದಾರೆ.

ಮೌಲ್ಯಮಾಪನ ಬಹಿಷ್ಕರಿಸಲು ಸರಕಾರವೇ ನೇರ ಕಾರಣವಾಗಿದೆ. ಇದೇ ವರ್ಷದ ಜನವರಿ ಹಾಗೂ ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲೂ ಹೋರಾಟ ನಡೆಸಿದಾಗ ಶಿಕ್ಷಣ ಸಚಿವರು ಹಾಗೂ ಮುಖ್ಯಮಂತ್ರಿಯವರು ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಆಶ್ವಾಸನೆ ಮಾತ್ರವೇ ಉಳಿದಿದೆ. ಹೀಗಾಗಿ ಸಂಘದ ಪದಾಧಿಕಾರಿಗಳ ನೇತೃತ್ವದಲ್ಲಿ ಮೌಲ್ಯಮಾಪನ ಬಹಿಷ್ಕಾರ ನಿರ್ಧಾರ ಕೈಗೊಳ್ಳಲಾಗಿದೆ. ಈ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಎಚ್ಚರಿಸಿದರು.

ಕಳೆದ ಐದು ದಿನಗಳಿಂದ ಕೋಡಿಂಗ್, -ಡಿ ಕೋಡಿಂಗ್ ಆರಂಭವಾಗಿದೆ. ಇದಕ್ಕೆ ಉಪನ್ಯಾಸಕರು ಸಹಕಾರ ನೀಡಿಲ್ಲ. ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಜೊತೆ ಸಂಧಾನ ಸಭೆ ನಡೆಸಿ ಎಲ್ಲಾ ಬೇಡಿಕೆಗಳನ್ನು ಸಹಾನುಭೂತಿಯಿಂದ ಪರಿಶೀಲಿಸುವುದಾಗಿ ಭರವಸೆ ನೀಡಿದ್ದರು. ಆದರೂ ಉಪನ್ಯಾಸಕರು ಜಗ್ಗಿಲ್ಲ.
ಭರವಸೆ ಈಡೇರಿಸುವ ಬಾಯಿ ಮಾತಿನ ಭರವಸೆಗೆ ಉಪನ್ಯಾಸಕರು ಒಪ್ಪದೆ ಲಿಖಿತ ಭರವಸೆ ನೀಡುವಂತೆ ಪಟ್ಟು ಹಿಡಿದಿದ್ದಾರೆ.

ಏಪ್ರಿಲ್ 2 ರಿಂದ ಪಿಯುಸಿ ಮೌಲ್ಯಮಾಪನ ಆರಂಭವಾಗಬೇಕಿತ್ತು. ಆದರೆ ಪಿಯು ಉಪನ್ಯಾಸಕರ ವೇತನ ಪರಿಷ್ಕರಣೆಗೆಂದು ರಚಿಸಿದ್ದ ‘ಕುಮಾರ್ ನಾಯಕ್ ಸಮಿತಿ 2001’ರಲ್ಲಿ ಈ ಕುರಿತಂತೆ ವರದಿ ಸಲ್ಲಿಸಿದರೂ ಸಹ ಸರಕಾರ ಇದರ ಅನುಷ್ಠಾನಕ್ಕೆ ಮುಂದಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಪಿಯು ಉಪನ್ಯಾಸಕರು ಮೌಲ್ಯ ಮಾಪನ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಉಪನ್ಯಾಸಕರ ಹೋರಾಟಕ್ಕೆ ಕೆಲ ವಿಧಾನ ಪರಿಷತ್ ಸದಸ್ಯರು ಕೈ ಜೊಡಿಸಿದ್ದಾರೆ. ಅರುಣ್ ಶಹಾಪುರ್, “ಉಪನ್ಯಾಸಕರ ಬೇಡಿಕೆಗೆ ಸರ್ಕಾರ ಸರಿಯಾಗಿ ಸ್ಪಂದಿಸುತ್ತಿಲ್ಲ. ಬಲವಂತವಾಗಿ ಕೆಲಸ ಮಾಡಿಸಲು ಯತ್ನಿಸುತ್ತಿದೆ.” ಎಂದು ಆರೋಪಿಸಿದ್ದಾರೆ.

(ಚಿತ್ರ: ಸ್ವಾತಂತ್ರ್ಯ ಉದ್ಯಾನವನದಲ್ಲಿ ಪ್ರತಿಭಟನೆ ನಿರತ ಉಪನ್ಯಾಸಕರು. ಚಿತ್ರ: ಉದಯವಾಣಿ)

Leave a comment

Top