An unconventional News Portal.

ಪತಿ ಪ್ರಧಾನಿಯಾಗುವ ಕನಸನ್ನು ಹಿಂದೆಯೇ ಬಿಟ್ಟು ಹೋದರು ಕಮಲಾ ಅದ್ವಾನಿ

ಪತಿ ಪ್ರಧಾನಿಯಾಗುವ ಕನಸನ್ನು ಹಿಂದೆಯೇ ಬಿಟ್ಟು ಹೋದರು ಕಮಲಾ ಅದ್ವಾನಿ

ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅದ್ವಾನಿ ಅವರ ಪತ್ನಿ ಕಮಲಾ ಅದ್ವಾನಿ ಹೃದಯಾಘಾತದಿಂದ ಬುಧವಾರ ಸಾವನ್ನಪ್ಪಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ದಿಲ್ಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. “ಹೃದಯಾಘಾತಕ್ಕೆ ಒಳಗಾದ ನಂತರ ಅವರನ್ನು ಆಸ್ಪತ್ರೆಗೆ ಕರೆತರಲಾಯಿತು. ಚಿಕಿತ್ಸೆಗೆ ಸ್ಪಂದಿಸದ ಅವರು ಅಸುನೀಗಿದರು,” ಎಂದು ವೈದ್ಯರು ತಿಳಿಸಿದ್ದಾರೆ.

ಕಳೆದ ಎರಡು ಮೂರು ವರ್ಷಗಳಿಂದ ವಯೋ ಸಹಜ ಕಾಯಿಲೆಗಳಿಂದ ಅವರು ಬಳಲುತ್ತಿದ್ದರು. ಹಿಂದೆಯೂ ಅವರನ್ನು ಹಲವು ಬಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರಿಗೆ ಸುಮಾರು 85 ವರ್ಷ ವಯಸ್ಸಾಗಿತ್ತು.

ಪತಿ ಅಡ್ವಾಣಿ, ಪುತ್ರಿ ಪ್ರತಿಭಾ ಅಡ್ವಾಣಿ ಹಾಗೂ ಪುತ್ರ ಜಯಂತ್ ಅವರುಗಳನ್ನು ಕಮಲಾ ಅಗಲಿದ್ದಾರೆ. 1965 ರಲ್ಲಿ ಅಡ್ವಾಣಿ ಅವರನ್ನು ವಿವಾಹವಾಗಿದ್ದ ಕಮಲಾ ಐದು ದಶಕಗಳ ಕಾಲ ತುಂಬ ಜೀವನ ನಡೆಸಿದ್ದರು.

ಅಡ್ವಾಣಿ ಅವರ ರಾಜಕೀಯ ಬೆಳವಣಿಗೆಗಳಲ್ಲಿ ಕಮಲಾ ಅವರ ಪಾತ್ರ ದೊಡ್ಡದಿತ್ತು. 2014ರಲ್ಲಿ ಪುತ್ರ ಹಾಗೂ ಪುತ್ರಿಯ ಒತ್ತಡಕ್ಕೆ ಮಣಿದು 50 ನೇ ವರ್ಷದ ವಿವಾಹ ಸಂಭ್ರಮವನ್ನು ಆಚರಿಸಿಕೊಂಡಿದ್ದರು. ತಮ್ಮ ಪತಿ ಒಂದು ಬಾರಿಯಾದರೂ ಪ್ರಧಾನಿಯಾಗುವುದನ್ನು ಕಣ್ತುಂಬಿ ನೋಡಬೇಕೆಂಬ ಕನಸು ಕಂಡಿದ್ದರು. ಆದರೆ ವಿಧಿಯಾಟದ ಮುಂದೆ ಅವರ ಕನಸು ಕೊನೆಯವರೆಗೂ ಈಡೇರಲೇ ಇಲ್ಲ.

ಗುಜರಾತ್‍ನ ಗಾಂಧಿ ನಗರದ ಲೋಕಸಭಾ ಕ್ಷೇತ್ರದಿಂದ ಅಡ್ವಾಣಿ ಸ್ಪರ್ಧಿಸಿದಾಗ ಇಳಿವಯಸ್ಸಿನಲ್ಲೂ ಅವರ ಪರ ಪ್ರಚಾರ ನಡೆಸಿ ಕಾರ್ಯಕರ್ತರಲ್ಲಿ ಹುರುಪು ತುಂಬಿದ್ದರು. ಪಕ್ಷದಲ್ಲಿ ಅಡ್ವಾಣಿ ಎಷ್ಟೇ ಎತ್ತರಕ್ಕೆ ಬೆಳೆದರೂ ಎಂದು ಕೂಡಾ ರಾಜಿಕೀಯ ಹಸ್ತಕ್ಷೇಪ ಮಾಡುತ್ತಿರಲಿಲ್ಲ.

ಹಿಂದೂಸ್ತಾನಿ ಗಾಯಾನದಲ್ಲಿ ಆಪಾರ ಆಸಕ್ತಿ ಹೊಂದಿದ್ದ ಕಮಲಾ , ಪ್ರತಿ ದಸರಾ ಹಬ್ಬದ ವೇಳೆ ಗುಜರಾತ್‍ನಲ್ಲಿರುವ ಸೋಮನಾಥ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಿದ್ದರು.

ಗಣ್ಯರ ಸಂತಾಪ:

ಅಡ್ವಾಣಿ ಅವರ ಪತ್ನಿ ಕಮಲಾ ಅಡ್ವಾಣಿ ನಿಧನಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ, ಕೇಂದ್ರ ಸಚಿವರಾದ ರಾಜ್‍ನಾಥ್‍ಸಿಂಗ್, ವೆಂಕಯ್ಯನಾಯ್ಡ, ಅರುಣ್ ಜೇಟ್ಲಿ, ಸುಷ್ಮ ಸ್ವರಾಜ್, ಮನೋಹರ್ ಪರಿಕ್ಕರ್, ಸದಾನಂದಾಗೌಡ, ಅನಂತ್ ಕುಮಾರ್, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸೇರಿದಂತೆ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.

Leave a comment

Top