An unconventional News Portal.

‘ಪನಾಮ ಪೇಪರ್ಸ್’: ‘ಸೋರಿಕೆ ಆಗಿಲ್ಲ; ಹ್ಯಾಕ್ ಮಾಡಲಾಗಿದೆ’!

‘ಪನಾಮ ಪೇಪರ್ಸ್’: ‘ಸೋರಿಕೆ ಆಗಿಲ್ಲ; ಹ್ಯಾಕ್ ಮಾಡಲಾಗಿದೆ’!

‘ಪನಾಮ ಪೇಪರ್ಸ್’ ಪ್ರಕರಣದಲ್ಲಿ ಮೌನ ಮುರಿದಿರುವ ‘ಮೊಸಾಕ್ ಫೋನ್ಸೆಕಾ’ ಕಂಪನಿ, ತನ್ನ ದಾಖಲೆಗಳು ಸೋರಿಕೆಯಾಗಿಲ್ಲ, ಬದಲಿಗೆ ‘ಹ್ಯಾಕ್’ ಮಾಡಲಾಗಿದೆ ಎಂಬ ಗಂಭೀರ ಆರೋಪವನ್ನು ಮಾಡಿದೆ.

ಕಂಪನಿ ಪಾಲುದಾರ ರೋಮನ್ ಫೋನ್ಸೆಕಾ ಮಾಧ್ಯಮಗಳ ಜತೆ ಬುಧವಾರ ಮಾತನಾಡಿದ್ದು, “ಕಾನೂನುಬದ್ಧವಾಗಿ ವ್ಯವಹಾರ ನಡೆಸಲಾಗಿದೆ. ಹೀಗಾಗಿ, ಈವರೆಗೆ ಯಾವುದೇ ದಾಖಲೆಗಳನ್ನು ಕಂಪನಿ ನಾಶ ಪಡಿಸಿಲ್ಲ. ದ್ವೀಪ ರಾಷ್ಟ್ರಗಳಲ್ಲಿ ವ್ಯವಹಾರ ನಡೆಸಲು ಕಂಪನಿ ನೆರವು ನೀಡುತ್ತಿತ್ತು” ಎಂದು ಸಮರ್ಥಿಸಿಕೊಂಡಿದ್ದಾರೆ.

ಮೋಸಾಕ್ ಫೋನ್ಸೆಕಾ ಕಂಪನಿಯ ಸುಮಾರು 11.5 ಮಿಲಿಯನ್ ದಾಖಲೆಗಳನ್ನು ಅಮೆರಿಕಾ ಮೂಲದ ‘ಅಂತರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟ’ ಇತ್ತೀಚೆಗೆ ಬಿಡುಗಡೆ ಮಾಡಿತ್ತು. ಹಲವು ದೇಶಗಳ ನಾಯಕರ, ಉದ್ಯಮಿಗಳ ಹಾಗೂ ಸೆಲೆಬ್ರಿಟಿಗಳ ಆರ್ಥಿಕ ವ್ಯವಹಾರದ ಕುರಿತು ಐತಿಹಾಸಿಕ ಮಾಹಿತಿ ಇವುಗಳಲ್ಲಿತ್ತು. “ಈ ದಾಖಲೆಗಳನ್ನು ತಪ್ಪು ಅರ್ಥದಲ್ಲಿ ಬಿಂಬಿಸಲಾಗಿದೆ,” ಎಂದು ಫೋನ್ಸೆಕಾ ಆರೋಪಿಸಿದ್ದಾರೆ.

“ಕಂಪನಿ ಕಡೆಯಿಂದ ಯಾವುದೇ ಸೋರಿಕೆಯಾಗಿಲ್ಲ. ಇದೊಂದು ಹ್ಯಾಕಿಂಗ್ ಪ್ರಕರಣ,” ಎಂದು ಕಂಪನಿ ಕೇಂದ್ರ ಕಚೇರಿ ಇರುವ ಪನಾಮದಲ್ಲಿ ಮಾಧ್ಯಮಗಳಿಗೆ ತಿಳಿಸಿದರು. ಈ ಕುರಿತು ಕಂಪನಿ ಕೂಡ ತನಿಖೆ ನಡೆಸಲಿದೆ ಎಂದು ಅವರು ಹೇಳಿದರು. ಈಗಾಗಲೇ ಪ್ರಕರಣದ ಕುರಿತು ಕಂಪನಿ ದೂರು ನೀಡಿದೆ.

‘ಮೋಸಾಕ್ ಫೋನ್ಸೆಕಾ’ ಕಂಪನಿಯ ಆರ್ಥಿಕ ವ್ಯವಹಾರಗಳು ಬಹಿರಂಗವಾಗುತ್ತಲೇ, ಜಗತ್ತಿನಾದ್ಯಂತ ಭಾರಿ ಸುದ್ದಿಯಾಗಿತ್ತು. ಐಸ್ಲ್ಯಾಂಡ್ ಪ್ರಧಾನಿ ಜನರ ಪ್ರತಿಭಟನೆ ಹಿನ್ನೆಲೆಯಲ್ಲಿ ರಾಜೀನಾಮೆ ಕೊಡಬೇಕಾಗಿ ಬಂದಿತ್ತು. ಭಾರತ ಮತ್ತು ಪಾಕಿಸ್ತಾನಗಳಲ್ಲಿ ಪ್ರತ್ಯೇಕ ತನಿಖಾ ತಂಡವನ್ನು ರಚಿಸಲಾಗಿದೆ.

Leave a comment

Top