An unconventional News Portal.

ವಿನಾಯಕ್ ಬಾಳಿಗ ಕೊಲೆ ಪ್ರಕರಣ: ತನಿಖೆ ದಿಕ್ಕು ತಪ್ಪಿಸಲು ಅಖಾಡಕ್ಕಿಳಿದ ‘ಸ್ವಾಮೀಜಿ’!

ವಿನಾಯಕ್ ಬಾಳಿಗ ಕೊಲೆ ಪ್ರಕರಣ: ತನಿಖೆ ದಿಕ್ಕು ತಪ್ಪಿಸಲು ಅಖಾಡಕ್ಕಿಳಿದ ‘ಸ್ವಾಮೀಜಿ’!

ಮಾಹಿತಿ ಹಕ್ಕು ಕಾರ್ಯಕರ್ತ, ಭಾರತೀಯ ಜನತಾ ಪಕ್ಷದ ಬೂತ್ ಮಟ್ಟದ ಕಾರ್ಯಕರ್ತ ಮಂಗಳೂರು ಮೂಲದ ವಿನಾಯಕ್ ಬಾಳಿಗ ಕೊಲೆ ಪ್ರಕರಣ ತನಿಖೆ ಹಾದಿ ತಪ್ಪಿಸುವ ಪ್ರಯತ್ನಗಳಿಗೆ ಬೆಂಗಳೂರು ಮೂಲದ ಲಾಬಿಗಳು ಚಾಲನೆ ನೀಡಿವೆ.

ದಕ್ಷಿಣ ಕನ್ನಡದ ಮೂಲ್ಕಿಯಿಂದ ಬಂದು ಸದ್ಯ ಬೆಂಗಳೂರಿನಲ್ಲಿ ನೆಲೆ ಕಂಡುಕೊಂಡಿರುವ ಸ್ವಾಮೀಜಿಯೊಬ್ಬರು ಪ್ರಕರಣದ ತನಿಖೆಯನ್ನು ದಿಕ್ಕು ತಪ್ಪಿಸಲು ಸಕಲ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ ಎಂಬ ಮಾಹಿತಿ ‘ಸಮಾಚಾರ’ಕ್ಕೆ ಲಭ್ಯವಾಗಿದೆ. ಗೃಹ ಇಲಾಖೆಯ ಮೂಲಗಳ ಪ್ರಕಾರ, ಮೈಸೂರಿನ ಕಾಂಗ್ರೆಸ್ ನಾಯಕರೊಬ್ಬರ ಮೂಲಕ ಈ ಸ್ವಾಮೀಜಿ, ಗೃಹ ಸಚಿವ ಜಿ. ಪರಮೇಶ್ವರ ಅವರಿಗೆ ‘ಹೇಳಿಸುವ’ ಕೆಲಸಕ್ಕೆ ಕೈ ಹಾಕಿದ್ದಾರೆ. ಇದಕ್ಕಾಗಿ ಮಂಗಳೂರಿನ ಕೆಲವು ಬಿಲ್ಡರ್ಗಳು ಹಾಗೂ ಬಾಳಿಗ ಅವರಿಂದ ಕಾನೂನಿನ ತೊಡಕಿಗೆ ಸಿಲುಕಿದ್ದ ಕೆಲವು ವ್ಯಕ್ತಿಗಳು ಸ್ವಾಮೀಜಿಗೆ ಭಕ್ಷೀಸು ಸಲ್ಲಿಸಿರುವ ಆತಂಕಕಾರಿ ಬೆಳವಣಿಗೆ ಇದು.

ಪ್ರಕರಣದ ಹಿನ್ನೆಲೆ:

ಮಂಗಳೂರಿನ ಕೋಡಿಯಾಲ್ ಬೈಲಿನಲ್ಲಿ ವಾಸವಿದ್ದ ವಿನಾಯಕ್ ಬಾಳಿಗ ಮಾಹಿತಿ ಹಕ್ಕು ಕಾಯ್ದೆಯನ್ನು ಅಸ್ತ್ರದಂತೆ ಬಳಸುತ್ತಿದ್ದವರು. ಮಾ. 21ರಂದು ಮುಂಜಾನೆ ಎಂದಿನಂತೆ ಬೆಳಗ್ಗೆ 5.45ರ ಸುಮಾರಿಗೆ ತಮ್ಮ ಮನೆಯ ಸಮೀಪದ ವೆಂಕಟರಮಣ ದೇವಸ್ಥಾನಕ್ಕೆ ತೆರಳಿ ಬಾಳಿಗ ಪೂಜೆ ಸಲ್ಲಿಸಿ ವಾಪಾಸಾಗುತ್ತಿದ್ದರು. ಈ ಸಮಯದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಯುವಕರು ಬಾಳಿಗರನ್ನು ಕೊಲೆ ಮಾಡಿದ್ದರು. ಅವಿವಾಹಿತರಾಗಿದ್ದ ವಿನಾಯಕ್ ಬಾಳಿಗ ಹಲವು ವರ್ಷಗಳಿಂದ ಮಾಹಿತಿ ಹಕ್ಕು ಕಾರ್ಯಕರ್ತರಾಗಿ ಕೆಲಸ ಮಾಡುತ್ತಿದ್ದರು. ಸುಮಾರು 91 ವಿಚಾರಗಳಲ್ಲಿ ‘ಸಾರ್ವಜನಿಕ ಹಿತಾಸಕ್ತಿ ಅರ್ಜಿ’ಯನ್ನು ದಾಖಲಿಸಿ, ಅನ್ಯಾಯಗಳನ್ನು ನ್ಯಾಯಾಲಯದ ಕಟಕಟೆಗೆ ಎಳೆದು ತರುವ ಪ್ರಯತ್ನದಲ್ಲಿದ್ದರು. ಹೀಗಾಗಿ, ವಿನಾಯಕ್ ಬಾಳಿಗರ ಕೊಲೆ ಸುದ್ದಿಯಾಗುತ್ತಿದ್ದಂತೆ ದೊಡ್ಡ ಕುಳಗಳ ಕೈವಾಡದ ಬಗ್ಗೆ ಸಹಜವಾಗಿಯೇ ಅನುಮಾನ ಮೂಡಿತ್ತು.

ಫೀಲ್ಡಿಗೆ ಇಳಿದ ಕಮಿಷನರ್:

ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿವರು ಮಂಗಳೂರಿನ ಪೊಲೀಸ್ ಕಮಿಷನರ್ ಚಂದ್ರ ಸೇಖರ್ (ಚಂದ್ರಶೇಖರ್ ಅಲ್ಲ). ಹಾಳಾಗಿ ಹಕಾಲೆದ್ದು ಹೋಗಿರುವ ಮಂಗಳೂರಿನ ಪೊಲೀಸ್ ಇಲಾಖೆಯ ಹೊಣೆಗಾರಿಕೆಯನ್ನು ಹೊತ್ತುಕೊಂಡಿರುವ ಮೆತ್ತನೆ ಸ್ವಭಾವದ ಅಧಿಕಾರಿ ಇವರು. ಪ್ರಕರಣದ ಜಾಡು ಹಿಡಿದ ಹೊರಟವರಿಗೆ ಇದೊಂದು ಸುಪಾರಿ ಕೊಲೆ ಎಂಬುದು ಆರಂಭದಲ್ಲಿಯೇ ಅರ್ಥವಾಗಿ ಹೋಗಿತ್ತು. ಕೊನೆಗೆ, ಕಳೆದ ತಿಂಗಳ ಕೊನೆಯಲ್ಲಿ ಇಬ್ಬರು ಆರೋಪಿಗಳನ್ನೂ ಬಂಧಿಸಿದ್ದರು.

ಜಾಡು ದೊಡ್ಡದಿತ್ತು:

ಆದರೆ, “ಬಂಧಿತ ಯುವಕರು ಇಡೀ ಪ್ರಕರಣದಲ್ಲಿ ಕಾಲಾಳುಗಳಾಗಿ ಕೆಲಸ ಮಾಡಿದವರು. ಅವರ ಹಿಂದೆ ದೊಡ್ಡವರ ಕೈವಾಡ ಬಗ್ಗೆ ಮಾಹಿತಿ ಲಭ್ಯವಾಗಿತ್ತು,” ಎನ್ನುತ್ತಾರೆ ಮಂಗಳೂರಿನ ಪೊಲೀಸ್ ಅಧಿಕಾರಿಯೊಬ್ಬರು. ಬಾಳಿಗ ಅವರ ಕೊಲೆಗೆ ಸುಮಾರು 2 ಕೋಟಿಯಷ್ಟು ಹಣವನ್ನು ಸಂಗ್ರಹಿಸಲಾಗಿದೆ ಎಂಬ ಮಾಹಿತಿಯೂ ಇದೆಯಾದರೂ, ಇನ್ನೂ ಅಧಿಕೃತವಾಗಿ ಪ್ರಕಟಗೊಂಡಿಲ್ಲ. ಆದರೆ, ಬಂಧಿತ ಆರೋಪಿಗಳಿಗೆ ಕೇವಲ 13 ಸಾವಿರ ಮಾತ್ರವೇ ಸಂದಾಯವಾಗಿತ್ತು. “ಉಳಿದ ಹಣವನ್ನು ಮಂಗಳೂರಿನ ಪೊಲೀಸರಿಂದ ಶುರುವಾಗಿ, ಹಲವರಿಗೆ ಮೊದಲೇ ಸಂದಾಯವಾಗಿದೆ ಎಂಬ ಅನುಮಾನಗಳಿವೆ,” ಎಂದು ಅವರು ತಿಳಿಸುತ್ತಾರೆ.

ಶಣೈ ಪಾರಾರಿ:

ತನಿಖೆ ಮುಂದುವರಿಯುತ್ತಿದ್ದಾಗಲೇ ಅದೇ ಕೋಡಿಯಾಲ್ ಬೈಲ್ ನ ಮತ್ತೊಬ್ಬ ಮಹಾತ್ವಾಕಾಂಕ್ಷಿ ಯುವಕ ಮನೆಯಲ್ಲಿಲ್ಲ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಆತ ದಕ್ಷಿಣ ಕನ್ನಡದಲ್ಲಿ ‘ನಮೋ ಬ್ರಿಗೇಡ್’ (ಇವತ್ತಿನ ಯುವ ಬ್ರಿಗೇಡ್) ಸ್ಥಾಪಕ ನರೇಶ್ ಶಣೈ ಎಂಬ ಮಾಹಿತಿ ಮಾಧ್ಯಮಗಳಲ್ಲಿ ಬಹಿರಂಗವಾಯಿತು. ಪೊಲೀಸರು ಕೂಡ ಆತನ ಮನೆಗೆ ಭೇಟಿ ನೀಡಿ ಬಂದರು. “ನರೇಶ್ ಶಣೈ ವಿರುದ್ಧ ಬಾಳಿಗ ಕೊಲೆ ಪ್ರಕರಣದಲ್ಲಿ ಪ್ರಬಲ ಸಾಕ್ಷಿಗಳು ಸಿಕ್ಕ ನಂತರವೇ ಆತನ ಹೆಸರು ಬಹಿರಂಗವಾಗಿ ಪ್ರಸ್ತಾಪವಾಯಿತು,” ಎಂದು ಮೂಲಗಳು ಮಾಹಿತಿ ನೀಡುತ್ತವೆ. “ಈ ಬಗ್ಗೆ ಈಗಲೇ ಏನೂ ಹೇಳಲು ಸಾಧ್ಯವಿಲ್ಲ. ಸಾಕ್ಷಿಗಳಿದ್ದರೆ ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ,” ಎನ್ನುತ್ತಾರೆ ಮಂಗಳೂರು ಪೊಲೀಸ್ ಕಮಿಷನರ್ ಚಂದ್ರ ಸೇಖರ್. ಸದ್ಯ ಸಿಕ್ಕಿರುವ ಮಾಹಿತಿ ಪ್ರಕಾರ, ಹರಿದ್ವಾರದಲ್ಲಿ ನರೇಶ್ ಶಣೈನನ್ನು ವಶಕ್ಕೆ ಪಡೆಯಲಾಗಿದೆ ಎನ್ನಲಾಗುತ್ತಿದೆ.

ಪರ ಯಾರಿದ್ದಾರೆ?:

ಇದು ಮಂಗಳೂರಿನ ಬಿಜೆಪಿ ಮತ್ತು ಸಂಘಪರಿವಾರದಲ್ಲಿ ತಳಮಳವನ್ನು ಮೂಡಿಸಿದೆ ಈ ಬೆಳವಣಿಗೆ. ಕೊಲೆಯಾದ ವಿನಾಯಕ್ ಬಾಳಿಗ 1988ರಿಂದಲೇ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದವರು. ಮಂಗಳೂರು ಬಿಜೆಪಿ ನಾಯಕ ಪ್ರತಾಪ್ ಪ್ರಕಾರ, “ಬಾಳಿಗ ಪಕ್ಷ ಸ್ಥರದಲ್ಲಿ ಇದ್ದವರಲ್ಲ. ಆದರೆ ಪಕ್ಷದ ಕುರಿತು ಅನುಕಂಪ ಇಟ್ಟುಕೊಂಡವರು” ಎನ್ನುತ್ತಾರೆ. ಬಾಳಿಗ ಅವರ ಸ್ನೇಹಿತ ಗಣೇಶ್, “ಬಾಳಿಗ ಕೋಡಿಯಾಲ್ ಬೈಲಿನಲ್ಲಿ ಬಿಜೆಪಿ ಬೂತ್ ವಾಲೆಂಟಿಯರ್ ಆಗಿ ಕೆಲಸ ಮಾಡಿದ್ದವರು. ಅವರ ಕೊಲೆಯಾದರೂ ಪಕ್ಷದಿಂದ ಯಾರೂ ಮುತುವರ್ಜಿ ವಹಿಸಲಿಲ್ಲ,” ಎನ್ನುತ್ತಾರೆ. “ಬಾಳಿಗ ಅವರ ಕೊಲೆಯ ಪ್ರಕರಣದ ತನಿಖೆ ನಡೆಯುತ್ತಿದೆ. ನಾವೇನು ಮಾಡಬೇಕು ಎಂದು ಆಲೋಚನೆ ಮಾಡುತ್ತಿದ್ದೇವೆ,” ಎನ್ನುತ್ತಾರೆ ಪ್ರತಾಪ್.

ಲಾಬಿ ಆರಂಭ:

ಹೀಗೆ, ತನಿಖೆ ಒಂದು ದಾರಿಯಲ್ಲಿ ಸಾಗುತ್ತಿದ್ದಾಗಲೇ, ಬೆಂಗಳೂರು ಮೂಲದ ಸ್ವಾಮಿ ಅಖಾಡಕ್ಕೆ ಇಳಿದಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಇವರು ಹಿಂದಿನಿಂದಲೂ ಮಂಗಳೂರು ಹಾಗೂ ಉಡುಪಿ ಜಿಲ್ಲೆಯ ಪೊಲೀಸ್ ಇಲಾಖೆಯ ಮೇಲೆ ತಮ್ಮದೇ ಆದ ಹಿಡಿತವನ್ನು ಹೊಂದಿದ್ದವರು ಎಂದು ಮೂಲಗಳು ಹೇಳುತ್ತವೆ. ಪೊಲೀಸ್ ವರ್ಗಾವಣೆ ವಿಚಾರದಲ್ಲಿ ಸ್ವಾಮಿಗೆ ಕಪ್ಪಕಾಣಿಕೆ ಸಲ್ಲಿಕೆಯಾಗುವುದು ನಡೆದುಕೊಂಡು ಬಂದಿತ್ತು. ಇದೀಗ ಬಾಳಿಗ ಕೊಲೆ ಪ್ರಕರಣದ ಉರುಳು ಗಟ್ಟಿಯಾಗುತ್ತಿದ್ದಂತೆ, ದೊಡ್ಡ ಕುಳಗಳು ಮತ್ತದೇ ಸ್ವಾಮಿ ಜತೆ ಮಾತುಕತೆ ಆರಂಭಿಸಿದ್ದಾರೆ. ಅವರಿಗೆ ಆಪ್ತರಿರುವ ಮೈಸೂರು ಮೂಲದ ಕಾಂಗ್ರೆಸ್ ನಾಯಕರೊಬ್ಬರ ಮೂಲಕ ಗೃಹ ಸಚಿವ ಜಿ. ಪರಮೇಶ್ವರ್ ಅವರಿಗೆ ಒತ್ತಡ ಹೇರುವ  ಪ್ರಯತ್ನ ನಡೆಸುತ್ತಿದ್ದಾರೆ ಎನ್ನುತ್ತವೆ ಉನ್ನತ ಮೂಲಗಳು.

ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ಬೆಳವಣಿಗೆ ಮಂಗಳೂರಿನ ವಿನಾಯಕ್ ಬಾಳಿಗ ಕೊಲೆ ಪ್ರಕರಣದಲ್ಲಿ ಅದೆಂತಹ ಪರಿಣಾಮ ಬೀರಲಿದೆ ಎಂಬುದು ಮುಂದಿನ ದಿನಗಳಲ್ಲಿ ಬಹಿರಂಗವಾಗಬೇಕಿದೆ.   

ENTER YOUR E-MAIL

Name
Email *
January 2017
M T W T F S S
« Dec    
 1
2345678
9101112131415
16171819202122
23242526272829
3031  

Top