An unconventional News Portal.

ಕಾಂಗ್ರೆಸ್ ಕಾರ್ಯಕರ್ತರಿಗೆ ನಿಗಮ ಮಂಡಳಿ ಬೋನಸ್: ಅಂತಿಮ ಹಂತದಲ್ಲಿ ಪಟ್ಟಿ

ಕಾಂಗ್ರೆಸ್ ಕಾರ್ಯಕರ್ತರಿಗೆ ನಿಗಮ ಮಂಡಳಿ ಬೋನಸ್: ಅಂತಿಮ ಹಂತದಲ್ಲಿ ಪಟ್ಟಿ

ಖಾಲಿ ಇರುವ 8 ನಿಗಮ ಮಂಡಳಿ ಅಧ್ಯಕ್ಷ-ಉಪಾಧ್ಯಕ್ಷರ ನೇಮಕ ಹಾಗೂ ಸುಮಾರು 800 ನಿರ್ದೇಶಕ ಹಾಗೂ ಸದಸ್ಯರ ನೇಮಕಾತಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಈಗಾಗಲೇ ಪಟ್ಟಿ ಸಿದ್ಧತೆ ಭರದಿಂದ ಸಾಗಿದ್ದು, ಸಿಎಂ ಸಿದ್ದರಾಮಯ್ಯ ಇದಕ್ಕಾಗಿ ತಮ್ಮ ಪೂರ್ವ ನಿಗದಿತ ಕಾರ್ಯಕ್ರಮವನ್ನು ರದ್ಧುಗೊಳಿಸಿದ್ದಾರೆ ಎಂದು ಅವು ಹೇಳಿವೆ. ಸಿದ್ದರಾಮಯ್ಯ ‘ಸೌಖ್ಯ ಪ್ರಕೃತಿ ಚಿಕಿತ್ಸಾ ಕೇಂದ್ರ’ಕ್ಕೆ ತೆರಳಿ ಚಿಕಿತ್ಸೆ ಪಡೆಯಲಿದ್ದರು. ಆದರೆ, ನಿಗಮ-ಮಂಡಳಿ ನೇಮಕಾತಿ ಪೂರ್ಣಗೊಳಿಸಬೇಕಾದ ನಿರ್ಧಾರವನ್ನು ಪಕ್ಷ ಕೈಗೊಂಡ ಹಿನ್ನಲೆಯಲ್ಲಿ ಇಂದು ನಿಗಮ – ನೇಮಕಾತಿ ಪಟ್ಟಿ ಅಂತಿಮಗೊಳಿಸುವಲ್ಲಿ ಸಿಎಂ ನಿರತರಾಗಿದ್ದರು.

ಬಹುತೇಕ ನಿಗಮ ಮಂಡಳಿ ಪಟ್ಟಿ ಈಗಾಗಲೇ ಅಂತಿಮಗೊಂಡಿದೆ. ವಿಧಾನಪರಿಷತ್ ಸದಸ್ಯರು ಕೆಲವು ಬದಲಾವಣೆಗಳನ್ನು ಬಯಸಿದ್ದು, ಅವರು ತಮ್ಮ ವ್ಯಾಪ್ತಿಗೆ ಸಂಬಂಧಿಸಿದಂತೆ ಪರಿಷ್ಕರಣೆ ಮಾಡಿ ಶಿಫಾರಸು ಮಾಡುವುದು ಬಾಕಿಯಿದೆ. ಈ ಶಿಫಾರಸು ಬಂದ ಕೂಡಲೇ ಪಟ್ಟಿಯನ್ನು ಅಂತಿಮ ಪರಿಷ್ಕರಣೆ ಮಾಡಿ ಪಟ್ಟಿ ಪ್ರಕಟ ಮಾಡಲಾಗುತ್ತದೆ. ಒಂದು ಸಾವಿರಕ್ಕೂ ಹೆಚ್ಚಿನ ಸ್ಥಾನಗಳನ್ನು ತುಂಬುವ ಕಾರ್ಯ ನಡೆಯಬೇಕಿರುವುದರಿಂದ ಎರಡು ಹಂತಗಳಲ್ಲಿ ಪಟ್ಟಿ ಪ್ರಕಟವಾಗಲಿದೆ ಎನ್ನಲಾಗಿದೆ.

ಟಿಕೆಟ್ ಗಿಟ್ಟಿಸಿಕೊಂಡ ಹಾಗೂ ಪಕ್ಷದಲ್ಲಿ ಸ್ಥಾನ ಪಡೆದ ಕಾರ್ಯಕರ್ತರ ಬದಲಿಗೆ ಅವಕಾಶ ಪಡೆಯದ ಕಾರ್ಯಕರ್ತರ ಹೆಸರನ್ನು ಶಿಫಾರಸು ಮಾಡುವಂತೆ ವಿಧಾನಸಭೆ ಹಾಗೂ ವಿಧಾನಪರಿಷತ್ ಸದಸ್ಯರಿಗೆ ಸೂಚಿಸಲಾಗಿತ್ತು. ಶಿಫಾರಸು ಮಾಡುವ ಕಾರ್ಯವನ್ನು ಅವರುಗಳು ಪೂರ್ಣಗೊಳಿಸಿದ್ದಾರೆ. ಈ ಆಧಾರದ ಮೇಲೆ ಸಿಎಂ ಇವತ್ತು ಪಟ್ಟಿ ಅಂತಿಮಗೊಳಿಸಲಿದ್ದಾರೆ.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ಮುಕ್ಕಾಲು ವರ್ಷವಾದರೂ ಕಾರ್ಯಕರ್ತರಿಗೆ ಅಧಿಕಾರ ನೀಡುವ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದಿಯಾಗಿ ರಾಜ್ಯ ನಾಯಕತ್ವ ನೆಪಗಳನ್ನು ಹೇಳುತ್ತಾ ಬಂದಿತ್ತು.ಹೀಗಾಗಿ ಕಾರ್ಯಕರ್ತರಿಂದ ಒತ್ತಡ ಹಾಗೂ ಪಕ್ಷದ ಸೂಚನೆ ಹಿನ್ನೆಲೆಯಲ್ಲಿ ಪಟ್ಟಿ ಬಿಡುಗಡೆ ಭಾಗ್ಯ ಪಡೆಯುತ್ತಿದೆ.

Top