An unconventional News Portal.

‘ಪನಾಮ ಪೇಪರ್’ ತನಿಖಾ ವರದಿ: ದೊಡ್ಡ ಕುಳಗಳ ‘ಕಪ್ಪು ಹಣ’ದ ಕಾರ್ಯಾಚರಣೆ ಬಹಿರಂಗ

‘ಪನಾಮ ಪೇಪರ್’ ತನಿಖಾ ವರದಿ: ದೊಡ್ಡ ಕುಳಗಳ ‘ಕಪ್ಪು ಹಣ’ದ ಕಾರ್ಯಾಚರಣೆ ಬಹಿರಂಗ

ಸೋಮವಾರ ಜಗತ್ತನ್ನು ಬೆಚ್ಚಿ ಬೀಳಿಸಿರುವ ‘ಪನಾಮ ಪೇಪರ್’ ತನಿಖಾ ವರದಿಗೆ ಕೇಂದ್ರ ಸರಕಾರ ನಿಧಾನವಾಗಿಯಾದರೂ, ಪ್ರತಿಕ್ರಿಯಿಸಿದೆ.

ತೆರಿಗೆ ವಂಚಿಸುವ ಸಲುವಾಗಿ ವಿದೇಶದಲ್ಲಿ ಹೂಡಿಕೆ ಮಾಡಿದ ಭಾರತದ ಪ್ರಭಾವಿಗಳ ಬಗ್ಗೆ ತನಿಖೆ ನಡೆಸಲು ನಾನಾ ಸಂಸ್ಥೆಗಳ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ರಚಿಸಲು ಹಣಕಾಸು ಸಚಿವ ಅರುಣ್ ಜೇಟ್ಲಿ ಹಸಿರು ನಿಶಾನೆ ತೋರಿಸಿದ್ದಾರೆ. ಕಪ್ಪು ಹಣವನ್ನು ಮರಳಿ ದೇಶಕ್ಕೆ ತರುವ ಭರವಸೆ ನೀಡಿದ್ದು ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಗಳಿಸುವಲ್ಲಿ ಮಹತ್ವದ ಪಾತ್ರವಹಿಸಿತ್ತು. ಇದೀಗ, ‘ಅಂತರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟ’ ದೇಶದ ಗಡಿ ಆಚೆಗೆ ತೆರಿಗೆ ವಂಚಿಸಿ ಹಣ ಹೂಡಿಕೆ ಮಾಡಿದ ಹಲವು ದೇಶಗಳ ರಾಜಕಾರಣಿಗಳ ಹಾಗೂ ಅವರ ಕುಟುಂಬ ಮೂಲಗಳ ವ್ಯವಹಾರದ ಮಹತ್ವದ ದಾಖಲೆಯನ್ನು ಬಿಡುಗಡೆ ಮಾಡಿದೆ. ಏನಿದು ‘ಪನಾಮ ಪೇಪರ್’ ತನಿಖಾ ವರದಿ? ಈ ಕುರಿತು ಪ್ರಮುಖ ಅಂಶಗಳ ಪಟ್ಟಿ ಇಲ್ಲಿದೆ:


 

  1. ‘ಇಂಟರ್ನ್ಯಾಷನಲ್ ಕನ್ಸ್ಷಾರ್ಷಿಯಂ ಆಫ್ ಇನ್ವೆಸ್ಟಿಗೇಟಿವ್ ಜರ್ನಲಿಸ್ಟ್ಸ್’ ಸಂಸ್ಥೆ ಕಳೆದ ಒಂದು ವರ್ಷದ ಅವಧಿಯಲ್ಲಿ ಪನಾಮ ಮೂಲದ ಹೂಡಿಕೆ ಸಂಸ್ಥೆ ‘ಮೊಸಾಕ್ ಫೋನ್ಸೆಕಾ’ಗೆ ಸೇರಿದ ದಾಖಲೆಗಳನ್ನು ಅಧ್ಯಯನ ನಡೆಸಿ ವರದಿಯೊಂದನ್ನು ಬಿಡುಗಡೆ ಮಾಡಿದೆ. ಸುಮಾರು 11 ಮಿಲಿಯನ್ ದಾಖಲೆಗಳನ್ನು ಒಳಗೊಂಡ ಇದು ಬಹುದೊಡ್ಡ ತನಿಖಾ ವರದಿ ಎನ್ನಿಸಿಕೊಂಡಿದೆ.

  2. ಲಂಚ, ಶಸ್ತ್ರಾಸ್ತ್ರ ಖರೀದಿ, ತೆರಿಗೆ ವಂಚನೆ, ಮಾದಕ ದ್ರವ್ಯ ದಂಧೆಗೆ ಬಳಕೆಯಾದ ಕಪ್ಪು ಹಣದ ಮಾಹಿತಿಯನ್ನು ಈ ದಾಖಲೆಗಳು ಒಳಗೊಂಡಿವೆ. ಸುಮಾರು 110 ದೇಶಗಳ ಪ್ರಮುಖ ನಾಯಕರು ಹಾಗೂ ಅವರ ಸಂಬಂಧಿಗಳು ತಮ್ಮ ದೇಶದ ಗಡಿಯಾಚೆಗೆ ನಡೆಸುತ್ತಿದ್ದ ಕಳ್ಳ ವ್ಯವಹಾರವನ್ನು ‘ಪನಾಮ ಪೇಪರ್’ಗಳು ಬಹಿರಂಗಪಡಿಸಿವೆ.

  3. ಬಿಡುಗಡೆ ಮಾಡಲಾದ ದಾಖಲೆಗಳಲ್ಲಿ ಭಾರತದ ಪ್ರಮುಖ ಉದ್ಯಮಿಗಳು, ಬಾಲಿವುಡ್ ತಾರೆಯರ ಹೆಸರುಗಳೂ ಪ್ರಸ್ತಾಪವಾಗಿವೆ. ಇದರಲ್ಲಿ ಅದಾನಿ ಕುಟುಂಬ, ಟಿವಿಎಸ್ ಗ್ರೂಪ್, ರೆಡ್ ಬುಲ್ಸ್, ಸಿನಿ ತಾರೆ ಐಶ್ವರ್ಯ ರೈ, ಅಮಿತಾಬ್ ಬಚ್ಚನ್ ಅವರುಗಳು ತೆರಿಗೆ ವಂಚನೆಗಾಗಿ ವಿದೇಶಗಳಲ್ಲಿ ನಕಲಿ ಕಂಪನಿಗಳನ್ನು ತೆರೆದು ಹಣ ಹೂಡಿಕೆ ಮಾಡಿದ್ದಾರೆ ಎಂಬ ವಿಚಾರ ಬಯಲಾಗಿದೆ.

  4. ಕರ್ನಾಟಕ ಸರಕಾರದ ತೋಟಗಾರಿಕಾ ಸಚಿವ ಶಾಮನೂರು ಶಿವಶಂಕರಪ್ಪ ಅವರ ಅಳಿಯ ರಾಜೇಂದ್ರ ಪಾಟೀಲ್ ಹೆಸರು ಕೂಡ ಬಹಿರಂಗಗೊಂಡ ದಾಖಲೆಗಳಲ್ಲಿ ಅಡಕವಾಗಿದೆ.

  5. ರಷ್ಯಾ ಅಧ್ಯಕ್ಷ ಪುಟಿನ್ ಕುಟುಂಬದ ಆಪ್ತರು, ಚೀನಾ ಸರಕಾರದ ಪ್ರಮುಖ ನಾಯಕರು ಸೇರಿದಂತೆ ಹಲವು ದೇಶಗಳ ಹಿರಿಯ ನಾಯಕರು ತೆರಿಗೆ ವಂಚನೆಯಲ್ಲಿ ನಿರತರಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

  6. ದಿಲ್ಲಿ ಮೂಲದ, ಲೋಕಸತ್ತಾ ಪಕ್ಷದ ನಾಯಕ ಅನುರಾಗ್ ಕೇಜ್ರಿವಾಲ್ ಕೂಡ ವಿದೇಶದಲ್ಲಿ ಕಂಪನಿಯೊಂದನ್ನು ಸ್ಥಾಪಿಸಿ ತೆರಿಗೆ ವಂಚಿಸಲು ಹೊರಟಿದ್ದಾಗಿ ವರದಿ ಆರೋಪಿಸಿದೆ.

  7.  ಮೊಸಾಕ್ ಫೋನ್ಸೆಕಾ ಕಂಪನಿ, ತನ್ನ ಗ್ರಾಹಕರಿಗೆ ಹಣ ಹೂಡಿಕೆ ಮಾಡಲು ಅನುಕೂಲಕರವಾದ ವಾತಾವರಣವನ್ನು ಸೃಷ್ಟಿಸಿ ಕೊಡುತ್ತಿತ್ತು. ಬ್ರಿಟಿಷ್ ವರ್ಜೀನಿಯಾ ಐಲ್ಯಾಂಡ್ ಸೇರಿದಂತೆ ಹಲವು ದ್ವೀಪ ರಾಷ್ಟ್ರಗಳಲ್ಲಿ ಹೊಸತಾಗಿ ಕಂಪನಿ ಅಥವಾ ಟ್ರಸ್ಟ್ಗಳನ್ನು ಸ್ಥಾಪಿಸಿ, ಅದರಲ್ಲಿ ಕಪ್ಪು ಹಣವನ್ನು .ಹೂಡಿಕೆ ಮಾಡಲಾಗುತ್ತಿತ್ತು. ನಂತರ ಅದೇ ಹಣವನ್ನು ಸಾಲದ ರೂಪದಲ್ಲಿ ಅಥವಾ ದೇಣಿಗೆ ರೂಪದಲ್ಲಿ ಹೂಡಿಕೆದಾರರಿಗೆ ಮರಳಿ ನೀಡಲಾಗುತ್ತಿತ್ತು. ಈ ಮೂಲಕ ಆಯಾ ದೇಶಗಳ ಹಣಕಾಸು ಸಂಸ್ಥೆಗಳ ಕಣ್ಣಿಗೆ ಮಣ್ಣೆರಚುವ ಕೆಲಸ ನಡೆದುಕೊಂಡು ಬಂದಿತ್ತು.

  8. ಈ ಬಗ್ಗೆ ಸ್ವಿಸ್ ಮೂಲದ ಪತ್ರಿಕೆಯೊಂದು ಮೊದಲ ಬಾರಿಗೆ ದಾಖಲೆಗಳನ್ನು ಕಲೆ ಹಾಕಿತ್ತು. ಆ ದಾಖಲೆಗಳನ್ನು ‘ಐಸಿಐಜೆ’ಗೆ ಕಳುಹಿಸಿಕೊಟ್ಟಿತು. ಐಸಿಐಜೆ, ‘ಗಾರ್ಡಿಯನ್’ ಸೇರಿದಂತೆ ಕೆಲವು ಮಾಧ್ಯಮ ಸಂಸ್ಥೆಗಳನ್ನು ಅಹ್ವಾನಿಸಿ, 11 ಮಿಲಿಯನ್ ದಾಖಲೆಗಳ ಬಗ್ಗೆ ಅಧ್ಯಯನ ನಡೆಸಿತು.

  9. ಇದು ಪ್ರತಿಕೋದ್ಯಮ ಇತಿಹಾಸದಲ್ಲಿಯೇ ಅತಿ ದೊಡ್ಡ ದಾಖಲೆಗಳ ಬಿಡುಗಡೆ ಎನ್ನಲಾಗುತ್ತಿದೆ. ಹಿಂದೆ ವಿಕಿಲೀಕ್ಸ್ ಹಾಗೂ ಸ್ನೋಡನ್ ಬಿಡುಗಡೆ ಮಾಡಿದ ದಾಖಲೆಗಳಿಗಿಂತ ದೊಡ್ಡ ಪ್ರಮಾಣದ ದಾಖಲೆಗಳನ್ನು ‘ಪನಾಮ ಪೇಪರ್’ ಹೆಸರಿನಲ್ಲಿ ಹೊರಬಂದ ವರದಿ ಬಹಿರಂಗ ಪಡಿಸಿದೆ.

  10. ಈ ಬಗ್ಗೆ ಪ್ರತಿಕ್ರಿಯಿಸಿರುವ ‘ಮೊಸಾಕ್ ಫೋನ್ಸೆಕಾ’ ಸಂಸ್ಥೆ ಹಣ ಹೂಡಿಕೆ ಮಾಡುವುದು ಕಾನೂನಿನ ಪ್ರಕಾರ ಅಪರಾಧವೇನಲ್ಲ. ಆಯಾ ದೇಶಗಳ ಕಾನೂನಿನ ಅಡಿಯಲ್ಲಿಯೇ ವ್ಯವಹಾರ ಮಾಡಿದ್ದಾಗಿ ಸಮರ್ಥಿಸಿಕೊಂಡಿದೆ.

ENTER YOUR E-MAIL

Name
Email *
March 2017
M T W T F S S
« Feb    
 12345
6789101112
13141516171819
20212223242526
2728293031  

Top