An unconventional News Portal.

ರಜೆ ದಿನ ಸಿಎಂ ವಿಡಿಯೋ ಕಾನ್ಫರೆನ್ಸ್; ಬರ ಕಾಮಗಾರಿ ಲೋಪದ ಹೊಣೆ ಡಿಸಿಗಳಿಗೆ ವರ್ಗಾವಣೆ

ರಜೆ ದಿನ ಸಿಎಂ ವಿಡಿಯೋ ಕಾನ್ಫರೆನ್ಸ್; ಬರ ಕಾಮಗಾರಿ ಲೋಪದ ಹೊಣೆ ಡಿಸಿಗಳಿಗೆ ವರ್ಗಾವಣೆ

ಬರ ಪರಿಹಾರ ಕಾಮಗಾರಿಯಲ್ಲಿ ಲೋಪವಾದರೆ ಜಿಲ್ಲಾಧಿಕಾರಿಗಳೇ ನೇರ ಹೊಣೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.

ಸರಕಾರಿ ರಜೆ ದಿನ ಭಾನುವಾರ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಉತ್ತರ ಕರ್ನಾಟಕದ 12 ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳ ಜತೆ ವಿಡಿಯೋ ಸಂವಾದ ನಡೆಸಿದ ಸಿಎಂ, ಬರ ಪರಿಹಾರ ಕಾಮಗಾರಿಗೆ ಹಣದ ಕೊರತೆ ಇಲ್ಲ. ಸಮರೋಪಾದಿಯಲ್ಲಿ ಕೆಲಸ, ಕಾರ್ಯಗಳನ್ನು ಕೈಗೊಳ್ಳಬೇಕೆಂದು ತಾಕೀತು ಮಾಡಿದರು.

ಜಿಲ್ಲಾಧಿಕಾರಿಗಳು, ಸಿಇಒಗಳು, ಕಂದಾಯ, ಆರೋಗ್ಯ ಮತ್ತಿತರ ಇಲಾಖೆ ಅಧಿಕಾರಿಗಳು ಪ್ರತಿ ದಿನ ಕುಡಿಯುವ ನೀರು, ಗೋವುಗಳಿಗೆ ಮೇವು ಒದಗಿಸಲು ಕ್ರಮ ಕೈಗೊಳ್ಳಬೇಕು. ಮೈ ಚಳಿ ಬಿಟ್ಟು ಕೆಲಸದಲ್ಲಿ ತೊಡಗದಿದ್ದರೆ ಜಿಲ್ಲಾಧಿಕಾರಿಗಳೇ ನೇರ ಹೊಣೆ ಎಂದರು. 

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತಿಂಗಳಲ್ಲಿ ಎರಡು ದಿನ ಬರಪೀಡಿತ ಜಿಲ್ಲೆಗಳಿಗೆ ಖುದ್ದು ಭೇಟಿ ನೀಡಬೇಕು. ಸ್ಥಳೀಯ ಶಾಸಕರನ್ನು ಭೇಟಿ ಮಾಡಿ ಸಮಾಲೋಚಿಸಿ ಬರ ಪರಿಹಾರ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಬೇಕು. ಬರ ಪರಿಹಾರ ಕಾಮಗಾರಿ ವಿಚಾರದಲ್ಲಿ ಯಾವುದೇ ತೊಡಕು ಕಂಡುಬಂದರೆ ಸಂಬಂಧಪಟ್ಟ ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳ ಜತೆ ಮಾತುಕತೆ ನಡೆಸಿ ಸಮಸ್ಯೆ ನಿವಾರಣೆ ಮಾಡಬೇಕು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಮೇವು ಬ್ಯಾಂಕು, ಗೋ ಶಾಲೆಗಳಿಗೆ ಭೇಟಿ ಕೊಟ್ಟು ಮೇವು ದಾಸ್ತಾನು, ಜಾನುವಾರುಗಳ ಔಷಧ ಸಂಗ್ರಹಿಸಿರುವ ಕುರಿತು ಮಾಹಿತಿ ನೀಡಬೇಕು. ಹಾಗಾಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸೂಚಿಸಿದರು.ಜಿಲ್ಲಾ ಉಸ್ತುವಾರಿ ಮಂತ್ರಿಗಳೂ ಕೂಡ ಆಯಾ ಜಿಲ್ಲೆಗಳಿಗೆ ಭೇಟಿ ನೀಡಿ ಪ್ರಗತಿ ಪರಿಶೀಲಿಸಬೇಕು. ತೀವ್ರ ಬರಗಾಲಕ್ಕೆ ತುತ್ತಾಗಿರುವ ಪ್ರದೇಶಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಮಾರ್ಶಿಸಬೇಕು ಎಂದು ಹೇಳಿದರು.

ರಾಜ್ಯದ 12 ಜಿಲ್ಲೆಗಳ 274 ಗ್ರಾಮಗಳಲ್ಲಿ ನೀರಿನ ಸಂಪನ್ಮೂಲವೇ ಬರಿದಾಗಿದೆ. 667 ಟ್ಯಾಂಕರ್‍ಗಳ ಮೂಲಕ ನೀರನ್ನು ಪೂರೈಕೆ ಮಾಡಲಾಗುತ್ತದೆ. ಹೆಚ್ಚು ಸಮಸ್ಯೆ ಇರುವ ಕಡೆ ಮೊದಲ ಆದ್ಯತೆ ನೀಡಿ, ನೀರು ಪೂರೈಕೆ ಮಾಡಬೇಕೆಂದು ತಿಳಿಸಿದರು.
ಜಲಾಶಯಗಳಲ್ಲಿ ಲಭ್ಯವಿರುವ ನೀರನ್ನು ಕುಡಿಯುವ ನೀರು ಪೂರೈಕೆಗೆ ಮಾತ್ರ ಬಳಸಿಕೊಳ್ಳಬೇಕು. ಬೇರೆ ಉದ್ದೇಶಕ್ಕೆ ಬಳಸಿಕೊಂಡರೆ ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರಿಗೆ ತೊಂದರೆಯಾಗದಂತೆ ವಿದ್ಯುತ್ ಸರಬರಾಜು ಮಾಡಲು ಇಂಧನ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಸಂಪುಟ ಉಪ ಸಮಿತಿ ಸಭೆ:

ಬರ ಪೀಡಿತ 12 ಜಿಲ್ಲೆಗಳಲ್ಲಿ ಸಂಪುಟ ಉಪ ಸಮಿತಿ ಸಭೆ ಇನ್ನು 10 ದಿನದೊಳಗಾಗಿ ಬೀದರ್ ಅಥವಾ ಕಲಬುರ್ಗಿಯಲ್ಲಿ ನಡೆಯಲಿದೆ. ಜಿಲ್ಲಾಧಿಕಾರಿಗಳು ಪ್ರತಿ ದಿನ ತಹಸೀಲ್ದಾರ್, ಇಒ, ಇಂಧನ, ಆರೋಗ್ಯ, ಪಶುಸಂಗೋಪನೆ, ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿರಬೇಕು ಎಂದು ಸಭೆಯಲ್ಲಿ ಸಿಎಂ ಹೇಳಿದರು.

ಹಣ ಬಿಡುಗಡೆ:

ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಪೂರೈಸಲು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಪಡೆಗೆ ತಲಾ 50ಲಕ್ಷ ರೂ. ಹಣ ಬಿಡುಗಡೆ ಮಾಡಲಾಗಿದೆ. ಎಲ್ಲಾ ಕ್ಷೇತ್ರಗಳಲ್ಲೂ ಕ್ರಿಯಾ ಯೋಜನೆ ಸಿದ್ಧವಾಗಿದ್ದು, ಆಯಾ ತಾಲ್ಲೂಕಿನ ತಹಸೀಲ್ದಾರ್, ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ಇನ್ಸ್‍ಪೆಕ್ಟರ್‍ಗಳು, ಕೃಷಿ ಸಹಾಯಕರು ಸೇರಿದಂತೆ ಕೆಳಹಂತದ ಅಧಿಕಾರಿಗಳು ಸಮಸ್ಯೆ ಇರುವ ಗ್ರಾಮಗಳಿಗೆ ತೆರಳಿ ವಾಸ್ತವ ಸ್ಥಿತಿ ತಿಳಿದು ಕೊಳ್ಳುವಂತೆ ಸಲಹೆ ಮಾಡಿದರು.

ಈವರೆಗೆ 70 ಮೇವು ಬ್ಯಾಂಕ್, 11 ಗೋ ಶಾಲೆಗಳನ್ನು ತೆರೆಯಲಾಗಿದೆ. 2015-16ನೇ ಸಾಲಿನಲ್ಲಿ ಕುಡಿಯುವ ನೀರು ಪೂರೈಕೆಗಾಗಿ ಬರಪೀಡಿತ ಜಿಲ್ಲೆಗಳಿಗೆ 275 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿತ್ತು. ಇದರಲ್ಲಿ 175 ಕೋಟಿ ರೂ. ವೆಚ್ಚವಾಗಿದೆ. ಇತ್ತೀಚೆಗೆ 30 ಕೋಟಿ ರೂ.ಹಣವನ್ನು ಸಹ ಬಿಡುಗಡೆ ಮಾಡಲಾಗಿದೆ. ಹೊಸದಾಗಿ ಬೋರ್‍ವೆಲ್ ಕೊರೆಸಿಕೊಳ್ಳಲು ಖಾಸಗಿಯವರನ್ನು ಬಳಕೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಸಿಎಂ ಸೂಚಿಸಿದರು.

ಕೇಂದ್ರಕ್ಕೆ ಮನವಿ:

ಬರ ಪರಿಹಾರ ಕಾಮಗಾರಿಗಳಿಗೆ ನೆರವು ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ. ಕೇಂದ್ರದ ಅಧಿಕಾರಿಗಳ ತಂಡ ಅಧ್ಯಯನ ನಡೆಸಿ ಹೋಗಿದೆ. ಕಂದಾಯ ಸಚಿವ ಶ್ರೀನಿವಾಸ್‍ಪ್ರಸಾದ್ ಮತ್ತು ಕೃಷಿ ಸಚಿವ ಕೃಷ್ಣಬೈರೇಗೌಡರು ಕೇಂದ್ರ ಸಚಿವರನ್ನು ಭೇಟಿ ಮಾಡಿ ರಾಜ್ಯದ ಪರಿಸ್ಥಿತಿಯ ಮನವರಿಕೆ ಮಾಡಿಕೊಟ್ಟಿದ್ದಾರೆ.

ಮಹಾರಾಷ್ಟ್ರಕ್ಕೆ ನಿಯೋಗ:

ಕೃಷ್ಣಾ ಮತ್ತು ಭೀಮಾ ನದಿಗೆ ತಲಾ 2 ಟಿಎಂಸಿ ನೀರು ಬಿಡುಗಡೆ ಮಾಡುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‍ಗೆ ಮನವಿ ಮಾಡಲಾಗಿದೆ. ಸಧ್ಯದಲ್ಲೇ ಸಚಿವರಾದ ಎಂ.ಪಾಟೀಲ್ ಮತ್ತು ಎಸ್.ಆರ್.ಪಾಟೀಲ್ ನೇತೃತ್ವದ ನಿಯೋಗ ಅಲ್ಲಿಗೆ ಭೇಟಿ ನೀಡಲಿದೆ. ನಮಗೆ ಅಲ್ಲಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ ಎಂದರು.

ವಾಚ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಬಿಯಲ್ಲಿ ದೂರು ದಾಖಲಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ದೂರು ದಾಖಲಿಸಲು ಎಸಿಬಿಯಲ್ಲಿ ಅವಕಾಶ ಇದೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ; ತನಿಖೆಯಾಗಲಿ. ನಿಗಮ ಮಂಡಳಿಗಳಿಗೆ ಎರಡು ದಿನಗಳಲ್ಲಿ ನಿರ್ದೇಶಕರ ನೇಮಕವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ENTER YOUR E-MAIL

Name
Email *
March 2017
M T W T F S S
« Feb    
 12345
6789101112
13141516171819
20212223242526
2728293031  

Top