An unconventional News Portal.

ಪೊಲೀಸರ ಪ್ರತಿಷ್ಠೆಗೆ ಬೇಸತ್ತು ‘ಬೈಕ್ ದೇಣಿಗೆ’ ಕೊಡಲು ಮುಂದಾದ ಕಾಲೇಜು ವಿದ್ಯಾರ್ಥಿ!

ಪೊಲೀಸರ ಪ್ರತಿಷ್ಠೆಗೆ ಬೇಸತ್ತು ‘ಬೈಕ್ ದೇಣಿಗೆ’ ಕೊಡಲು ಮುಂದಾದ ಕಾಲೇಜು ವಿದ್ಯಾರ್ಥಿ!

ಅಣ್ಣ ಮಾಡಿದ ತಪ್ಪಿಗೆ ತಮ್ಮನೊಬ್ಬ ಪೊಲೀಸ್ ಠಾಣೆ ಕಟ್ಟೆ ಕಾದು ಕಾದು ಸಾಕಾಗಿ, ಕೊನೆಗೆ ಬೈಕನ್ನು ‘ನೀವೇ ಇಟ್ಟಿಕೊಳ್ಳಿ’ ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗೆ ಎಸ್ಎಂಎಸ್ ಕಳಿಸಿದ ವಿಲಕ್ಷಣ ಘಟನೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನಲ್ಲಿ ನಡೆದಿದೆ. ತೀರ್ಥಹಳ್ಳಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರ ಕ್ಷೇತ್ರ.

ತೀರ್ಥಹಳ್ಳಿಯಿಂದ ಕುಪ್ಪಳ್ಳಿ ಮಾರ್ಗದಲ್ಲಿ ಸಿಗುವ ದೇವಂಗಿ ಸಮೀಪದ ಹಳ್ಳಿಯ ಶಶಾಂಕ್ ಎಂಬಾತ ಈ ಕತೆಯ ಕೇಂದ್ರಬಿಂದು. ಈತನ ಸಹೋದರ ಅಭಿಷೇಕ್ ಭಾರತೀಯ ಸೇನೆಯಲ್ಲಿ ಯೋಧ. ಜಮ್ಮುವಿನ ಹಿಮಚ್ಛಾದಿತ ಪರ್ವತಗಳಲ್ಲಿ ಗಡಿ ಕಾಯುತ್ತಿದ್ದಾನೆ. ಈತ ಊರಿಗೆ ಬಂದಾಗ ಸ್ಥಳೀಯ ಪೊಲೀಸರ ಜತೆಗೆ ಗಲಾಟೆ ಮಾಡಿಕೊಂಡಿದ್ದಾನೆ. ಈ ಸಮಯದಲ್ಲಿ ಆತ ತೆಗೆದುಕೊಂಡು ಹೋಗಿದ್ದ ಶಶಾಂಕನ ಅಪಾಚೆ ಬೈಕ್ (ಕೆಎ 14 ಇಡಿ 8264)ನ್ನು ಪೊಲೀಸರು ಠಾಣೆಗೆ ಕೊಂಡೊಯ್ದಿದ್ದಾರೆ. ಇದನ್ನು ವಾಪಾಸ್ ಪಡೆದುಕೊಳ್ಳಲು ಮೂರು ದಿನಗಳ ಕಾಲ ಠಾಣೆಯ ಮೆಟ್ಟಿಲು ಕಾದ ಶಶಾಂಕ್, ಕೊನೆಗೆ ಹತಾಶನಾಗಿ ಶನಿವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಚನ್ನಣ್ಣನವರ್ ಮೊಬೈಲ್  ನಂಬರಿಗೆ, ‘ಬೈಕ್ ಬೇಕಾದರೆ ಪೊಲೀಸ್ ಇಲಾಖೆಯವರೇ ಇಟ್ಟುಕೊಳ್ಳಲಿ’ ಎಂದು ಸಂದೇಶ ಕಳಿಸಿದ್ದಾನೆ.

ನಿಜಕ್ಕೂ ನಡೆದದ್ದು ಏನು?

ಸದ್ಯ ‘ಸಮಾಚಾರ’ಕ್ಕೆ ಸಿಕ್ಕ ಮಾಹಿತಿ ಪ್ರಕಾರ, ಭಾರತೀಯ ಸೇನೆಯಲ್ಲಿ ಯೋಧನಾಗಿರುವ ಅಭಿಷೇಕ್ ರಜೆಯ ಮೇಲೆ ಊರಿಗೆ ಬಂದಿದ್ದ. ಮಾ. 31ರಂದು ತನ್ನ ಹಳ್ಳಿಯಿಂದ ತಾಲೂಕು ಕೇಂದ್ರವಾದ ತೀರ್ಥಹಳ್ಳಿಗೆ ತಮ್ಮನ ಬೈಕ್ ತೆಗೆದುಕೊಂಡು ಹೋಗಿದ್ದಾನೆ. ಈ ಸಮಯದಲ್ಲಿ ಮಾರಿಕಾಂಬ ದೇವಿಯ ಜಾತ್ರೆಯೂ ನಡೆಯುತ್ತಿದ್ದಾದರಿಂದ ತೀರ್ಥಹಳ್ಳಿ ರಸ್ತೆಯಲ್ಲಿ ವಾಹನ ಓಡಾಟಕ್ಕೆ ಸ್ಥಳೀಯ ಪೊಲೀಸರು ನಿರ್ಬಂಧ ಹಾಕಿದ್ದರು. ಏಕಮುಖ ದಾರಿಯಲ್ಲಿ ಬೈಕ್ ಓಡಿಸಿಕೊಂಡು ಹೋದ ಅಭಿಷೇಕ್ ಹಾಗೂ ಪೇದೆ ಮುರಳಿ ಎಂಬುವವರ ಜತೆ ಮಾತಿನ ಚಕಮಕಿ ಶುರುವಾಗಿದೆ. ಇದು ಸಾಮಾನ್ಯವಾಗಿ ಸೈನಿಕರು ಹಾಗೂ ಸ್ಥಳೀಯ ಪೊಲೀಸರ ನಡುವೆ ಪ್ರತಿಷ್ಠೆಗಾಗಿ ನಡೆಯುವ ಜಗಳದಂತದ್ದು.

ಈ ಸಮಯದಲ್ಲಿ ಠಾಣೆಗೆ ಮಾಹಿತಿ ನೀಡಿದ ಪೇದೆ ಮುರಳಿ, ಸಣ್ಣ ಗಲಾಟೆಯನ್ನು ವಿಕೋಪಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಸ್ಥಳಕ್ಕೆ ಬಂದ ತೀರ್ಥಹಳ್ಳಿ ಠಾಣೆಯ ಎಸ್ಐ ಭರತ್ ಹಾಗೂ ವಾಹನ ಚಾಲಕ ರವಿ ತಮ್ಮ ಸಹೋದ್ಯೋಗಿ ಜತೆ ಜಗಳಕ್ಕೆ ನಿಂತ ಯೋಧ ಅಭಿಷೇಕ್ಗೆ ಸ್ಥಳಲ್ಲಿಯೇ ಬಾರಿಸಿದ್ದಾರೆ. ನಂತರ ಆತನನ್ನು ಜೀಪಿಗೆ ಹತ್ತಿಸಿಕೊಂಡು, ಬೈಕನ್ನೂ ತೆಗೆದುಕೊಂಡು ಸೊಪ್ಪುಗುಡ್ಡೆಯಲ್ಲಿರುವ ಠಾಣೆಗೆ ಬಂದಿದ್ದಾರೆ.  ಈ ಸಮಯದಲ್ಲಿ ಅಭಿಷೇಕ್ ಜೀಪಿನಿಂದ ಹಾರಿ ತಪ್ಪಿಸಿಕೊಂಡು ಮನೆ ತಲುಪಿಕೊಂಡಿದ್ದಾನೆ.

ಕೇಸೂ ದಾಖಲಿಸಲಿಲ್ಲ:

ಘಟನೆ ನಡೆದ ಬಗ್ಗೆ ಠಾಣೆಯ ಎಸ್ಐ ಕೇಸು ದಾಖಲಿಸಲು ಹೋಗಲಿಲ್ಲ. ಮಾರನೇ ದಿನ ಬೈಕ್ ತೆಗೆದುಕೊಂಡು ಹೋಗಲು ಬಂದ ಅಭಿಷೇಕ್ ತಮ್ಮ ಶಶಾಂಕ್ಗೆ ಠಾಣೆಯ ಮುಂದೆ ಕಾಯುವಂತೆ ಹೇಳಿದ್ದಾರೆ. ವಿದ್ಯಾರ್ಥಿಯನ್ನು ಕಾಯಿಸುವ ಮೂಲಕ ತಮ್ಮ ಪ್ರತಿಷ್ಠೆಗೆ ಪೆಟ್ಟುಕೊಟ್ಟ ಸೈನಿಕನ ಮೇಲಿನ ಕೋಪವನ್ನು ತೀರಿಸಿಕೊಳ್ಳುವ ಪ್ರಯತ್ನ ಇದಿರಬಹುದು. ಅವತ್ತು ರಾತ್ರಿವರೆಗೂ ಕಾದು ಕಾದು ಸುಸ್ತಾದ ಶಶಾಂಕ್ ಮನೆಗೆ ವಾಪಾಸಾಗಿದ್ದಾನೆ. ಇದೇ ದಿನಚರಿ ಶನಿವಾರ ಕೂಡ ಮುಂದುವರಿದಿದೆ. ಒಂದು ಹಂತದಲ್ಲಿ, “ಎಸ್ಐ ಭರತ್ ಕುಮಾರ್ 300 ರೂ. ದಂಡ ಕಟ್ಟಿ ಬೈಕ್ ತೆಗೆದುಕೊಂಡು ಹೋಗಲು ಹೇಳಿದರು. ಆದರೆ, ರಮೇಶ್ ಎಂಬ ಪೇದೆ ಬೈಕ್ ಕೊಡಲು ಒಪ್ಪಲಿಲ್ಲ. ದಫೇದಾರ್ ಒಬ್ಬರು ಬೈಕ್ ಕೀ ತೆಗೆದುಕೊಂಡು ರಜೆ ಹಾಕಿ ಹೋಗಿದ್ದಾರೆ. ನಾಳೆ ಬನ್ನಿ ಎಂದರು. ಅವರಿಗೆ ನನ್ನ ಅಣ್ಣನ ಮೇಲೆ ಕೋಪ ಹೋದಂತೆ ಕಾಣಿಸುತ್ತಿಲ್ಲ. ವಯಸ್ಸಾದ ತಂದೆ ಎದುರಿಗೆ ಬಾಯಿಗೆ ಬಂದಂತೆ ಬೈದರು,” ಎಂದು ಶಶಾಂಕ್ ಮಾಹಿತಿ ನೀಡುತ್ತಾನೆ.

ಎಸ್ಪಿಗೆ ಎಸ್ಎಂಎಸ್:

ಕಾದು ಹತಾಷನಾದ ಶಶಾಂಕ್ ಒಂದು ಹಂತದಲ್ಲಿ ಠಾಣೆಯ ಎದುರಿಗೆ ಹಾಕಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿವರ ಮೊಬೈಲ್ ನಂಬರ್ ಸಂಪರ್ಕಿಸಿದ್ದಾನೆ. ಮೊದಲು ಅವರಿಗೆ ‘ನನಗೆ ಬೈಕ್ ಬೇಡ, ನೀವೇ ಇಟ್ಟುಕೊಳ್ಳಿ,’ ಎಂದು ಎಸ್ಎಂಎಸ್ ಕಳಿಸಿದ್ದಾನೆ. ನಂತರ ಕರೆ ಮಾಡಿದ್ದಾರೆ. ಇದಕ್ಕೆ ಎಸ್ಪಿ ರವಿ ಚನ್ನಣ್ಣನವರ್ ಸ್ಪಂದಿಸಿದರಾದರೂ, ಠಾಣೆಯಲ್ಲಿ ಪೇದೆಗಳು ಬೈಕ್ ಕೊಡಲು ಸತಾಯಿಸಿದ್ದಾರೆ. ಅತ್ತ ಕಾನೂನಿನ ಪರಿಧಿಯೂ ನಿಲುಕದ, ಇತ್ತ ಮಾನವೀಯ ನೆಲೆಯನ್ನೂ ಎಟುಕದ ಹೀಗೊಂದು ವಿಲಕ್ಷಣ ಕತೆ, ಮಲೆನಾಡಿನ ಯುವಕನೊಬ್ಬ ‘ತಬರ’ನಂತೆ ವ್ಯವಸ್ಥೆ ಬಗ್ಗೆಯೇ ಹತಾಶತೆ ಬೆಳೆಸಿಕೊಳ್ಳುವಲ್ಲಿ ಕೊನೆಗೊಂಡಿದೆ.

Top