An unconventional News Portal.

ಸುದ್ದಿ ಸಂಸ್ಥೆಯ ಸ್ವರೂಪದಲ್ಲೇ ಬದಲಾವಣೆ: ಇಲ್ಲಿ ವರದಿಗಾರರಿಗೇ ಹೆಚ್ಚಿನ ಮನ್ನಣೆ!

ಸುದ್ದಿ ಸಂಸ್ಥೆಯ ಸ್ವರೂಪದಲ್ಲೇ ಬದಲಾವಣೆ: ಇಲ್ಲಿ ವರದಿಗಾರರಿಗೇ ಹೆಚ್ಚಿನ ಮನ್ನಣೆ!

ಎಲ್ಲಾ ಕ್ಷೇತ್ರಗಳಂತೆ ಪತ್ರಿಕೋದ್ಯಮದಲ್ಲೂ ಹೊಸತನದ ತುಡಿತ ಈಗ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಅದರ ಮುಂದುವರಿದ ಭಾಗವೇ 101reporters.com. ಇದೊಂದು ಸ್ವತಂತ್ರ ನ್ಯೂಸ್ ಏಜೆನ್ಸಿ. ಆದರೆ ಇಲ್ಲಿ ವರದಿಗಾರರಿಗೇ ಮೊದಲ ಪ್ರಾಶಸ್ತ್ಯ, ಪ್ರಕಾಶಕರಿಗೆ ಏನಿದ್ದರೂ ನಂತರದ ಸ್ಥಾನ.

fd8EJ2jtಇನ್ನೇನು ಚಾಲನೆ ಸಿಗಬೇಕಾಗಿರುವ 101reporters.com ಬೆಂಗಳೂರು ಮೂಲದ ಸಂಸ್ಥೆ. ಇದರ ಉದ್ದೇಶ ಎಲ್ಲೋ ಇರುವ ವರದಿಗಾರರು ಮತ್ತು ಪ್ರಕಾಶಕರನ್ನು ತಂತ್ರಜ್ಞಾನದ ಮೂಲಕ ಒಂದೇ ಸೂರಿನಡಿ ತರುವುದು. ಇಬ್ಬರಿಗೂ ಸಮಾನ ಅವಕಾಶಗಳಿರುವ ವೇದಿಕೆಯನ್ನು ನಿರ್ಮಾಣ ಮಾಡುವುದು ಈ ಸುದ್ದಿ ಸಂಸ್ಥೆಯ ಆಶಯ.

ನಡುವಿನ ಕೊಂಡಿ: 

ಇವತ್ತು ಪತ್ರಿಕೋದ್ಯಮದಲ್ಲಿ ಪ್ರಕಾಶಕರು ಮತ್ತು ವರದಿಗಾಗರು ಇಬ್ಬರೂ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ವರದಿಗಾರಿಗೆ ಸರಿಯಾದ ಪ್ರಕಾಶಕರು ಸಿಗುತ್ತಿಲ್ಲ, ಪ್ರಕಾಶಕರಿಗೆ ಮೂಲೆ ಮೂಲೆಯ ಸುದ್ದಿಗಳನ್ನು ಎತ್ತಿಕೊಡಲು ಸೂಕ್ತ ವರದಿಗಾರರ ಕೊರತೆ ಇದೆ. ಹೀಗೆ ಸುದ್ದಿಗಳ ಬೇಡಿಕೆ ಮತ್ತು ಪೂರೈಕೆ ನಡುವಿನ ವ್ಯತ್ಯಾಸವನ್ನು ನಿವಾರಿಸುತ್ತೀವಿ ಎನ್ನುತ್ತಿದೆ ಹೊಸ ತಲೆಮಾರಿನ, ಹೊಸ ಆಲೋಚನೆಯ ಈ ಸಂಸ್ಥೆ.

ಭಾರತದ  ಮೂಲೆ ಮೂಲೆಯಿಂದ ಸುದ್ದಿಗಳನ್ನು ಹೆಕ್ಕಿ ತಂದು ರಾಷ್ಟ್ರೀಯ ಮಾಧ್ಯಮಗಳ ಮುಂದಿಡುವುದು ಸಂಸ್ಥೆಯ ಗುರಿ. ಇದಕ್ಕಾಗಿ ಮುಂದಿನ ಆರು ತಿಂಗಳಲ್ಲಿ ದೇಶದ ಎಲ್ಲಾ 664 ಜಿಲ್ಲೆಗಳಲ್ಲೂ ಕನಿಷ್ಠ ಓರ್ವ ವರದಿಗಾರನನ್ನು ಹೊಂದುವ ದೂರದೃಷ್ಟಿ ಇಟ್ಟುಕೊಳ್ಳಲಾಗಿದೆ.

ವರದಿಗಾರರಿಗೆ ಪ್ರಾಶಸ್ತ್ಯ: 

ಮೊದಲೇ ಹೇಳಿದಂತೆ ಇದು ವರದಿಗಾರರನ್ನು ಅಡಿಪಾಯವಾಗಿ ಇಟ್ಟುಕೊಂಡಿರುವ ಸಂಸ್ಥೆ. ಇಲ್ಲಿಗೆ ಯಾರೂ ಬೇಕಾದರೂ ವರದಿಗಳನ್ನು ಕಳುಹಿಸಬಹುದು. ಮೊದಲಿಗೆ ನಿಮ್ಮ ವರದಿಯ ಸಿನಾಪ್ಸಿಸ್ ಒಂದನ್ನು ಸಂಸ್ಥೆಗೆ ಕಳುಹಿಸಿಕೊಡಬೇಕು. ಅದಕ್ಕೆ ಸಂಸ್ಥೆ ಒಪ್ಪಿಗೆ ನೀಡುತ್ತಿದ್ದಂತೆ, ಪದಗಳ ಮಿತಿ ಮತ್ತು ಸಮಯವನ್ನು ನಿಗದಿ ಪಡಿಸಲಾಗುತ್ತದೆ. ಹೇಳಿದ ಸಮಯಕ್ಕೆ ನೀವು ಸುದ್ದಿಯನ್ನು ಸಂಸ್ಥೆಗೆ ತಲುಪಿಸಬೇಕು. ಸದ್ಯ ಇಂಗ್ಲೀಷ್ ಭಾಷೆಯಲ್ಲಿ ಮಾತ್ರ ಸುದ್ದಿಗಳನ್ನು ನೀಡುವ ಅವಕಾಶಗಳಿವೆ. ಮುಂದೆ ಇದನ್ನೇ ಭಾರತದ ಸ್ಥಳೀಯ ಭಾಷೆಗಳಿಗೂ ವಿಸ್ತರಿಸಲಾಗುತ್ತದೆ.

ವರದಿಗಾರನಿಗೆ ವರದಿಗಾರಿಕೆಯ ಕಲೆ ಒಲಿಯದಿದ್ದರೂ ಪರವಾಗಿಲ್ಲ, ಅದನ್ನು ಸಂಸ್ಥೆಯಲ್ಲಿನ ಸಂಪಾದಕೀಯ ವಿಭಾಗವೇ ತಿದ್ದಿ ತೀಡಿ ವರದಿಯ ರೂಪ ನೀಡುತ್ತದೆ. ಒಮ್ಮೆ ಸುದ್ದಿ ಸೂಕ್ತ ರೂಪಕ್ಕೆ ಬಂದ ನಂತರ, ಪ್ರಕಾಶನ ಸಂಸ್ಥೆಗಳಿಗೆ ವರದಿಗಾರನ ಬೈಲೈನ್ ಸಹಿತ ಕಳುಹಿಸಲಾಗುತ್ತದೆ. ಈ ಸುದ್ದಿಯನ್ನು ಯಾರು ಪ್ರಕಟಿಸುತ್ತಾರೋ, ಅವರು ಸಂಸ್ಥೆಗೆ ಇಂತಿಷ್ಟು ಹಣ ನೀಡಬೇಕು. ಅದರಲ್ಲೇ ಒಂದು ಭಾಗ 30 ದಿನಗಳೊಳಗೆ ವರದಿಗಾರನ ಕೈ ಸೇರುತ್ತದೆ. ಹೆಚ್ಚು ಹೆಚ್ಚು ಮಾಧ್ಯಮಗಳು ಪ್ರಕಟಿಸುವಂತಹ ಸ್ಟೋರಿ ನೀಡಿದರೆ, ವರದಿಗಾರ ಹೆಚ್ಚಿನ ಮೊತ್ತ ಜೇಬಿಗಿಳಿಸಿಕೊಳ್ಳಬಹುದು. ಒಂದೊಮ್ಮೆ ವರದಿಗಾರನ ಸುದ್ದಿ ಪ್ರಕಟವಾಗದೇ ಹೋದರೂ, ಸಂಸ್ಥೆಯೇ ಒಂದಿಷ್ಟು ಹಣವನ್ನು ವರದಿಗಾರನಿಗೆ ತಲುಪಿಸುತ್ತದೆ.

ಈಗಾಗಲೇ 12 ನಗರಗಳಿಂದ 75 ವರದಿಗಾಗರು ಮತ್ತು 6 ಮಾಧ್ಯಮ ಸಂಸ್ಥೆಗಳು ಈ ಪ್ರಯತ್ನಕ್ಕೆ ಕೈ ಜೋಡಿಸಿವೆ ಎಂದು ಸಂಸ್ಥೆಯ ವೆಬ್ ಸೈಟ್ ಹೇಳುತ್ತಿದೆ. ಮಾಧ್ಯಮ ಲೋಕದಲ್ಲಿ ಸುದ್ದಿ ಸಂಸ್ಥೆಗಳ ಸ್ವರೂಪವನ್ನು ಮೀರುವ ಇದು ಹೊಸ ಪ್ರಯತ್ನ. ಹೀಗೊಂದು ಅಸಾಂಪ್ರದಾಯಿಕ ಹೆಜ್ಜೆ ಇಡಲು ಹೊರಟಿರುವ 101reporters.com ಗೆ ನೀವೂ ಒಮ್ಮೆ ಭೇಟಿ ಕೊಟ್ಟು ನೋಡಿ…

Top