An unconventional News Portal.

ಪತ್ನಿ ಪ್ರೀತಿಗೆ ವಿಮಾನ ಅಪಹರಿಸಿದ್ದ ಮುಸ್ತಫಾ ಹಸ್ತಾಂತರಕ್ಕೆ ಸಿಪ್ರಸ್ ‘ಗ್ರೀನ್ ಸಿಗ್ನಲ್’!

ಪತ್ನಿ ಪ್ರೀತಿಗೆ ವಿಮಾನ ಅಪಹರಿಸಿದ್ದ ಮುಸ್ತಫಾ ಹಸ್ತಾಂತರಕ್ಕೆ ಸಿಪ್ರಸ್ ‘ಗ್ರೀನ್ ಸಿಗ್ನಲ್’!

ಮಾರ್ಚ್ ತಿಂಗಳ ಕೊನೆಯಲ್ಲಿ ಈಜಿಪ್ಟ್ ವಿಮಾನ ಅಪಹರಿಸಿ ಸುದ್ದಿ ಕೇಂದ್ರಕ್ಕೆ ಬಂದಿದ್ದ ಸೈಫ್ ಎಲ್-ದೀನ್ ಮುಸ್ತಫಾನನ್ನು ತವರು ದೇಶಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಗೆ ಸಿಪ್ರಸ್ ಗುರುವಾರ ಚಾಲನೆ ನೀಡಿದೆ.

ಸಿಪ್ರಸ್ ಸುದ್ದಿ ಸಂಸ್ಥೆ, ‘ಮೀನಾ’ ವರದಿ ಪ್ರಕಾರ, ಈಜಿಪ್ಟ್ ಅಧಿಕಾರಿಗಳು ಆರೋಪಿಯನ್ನು ಹಸ್ತಾಂತರಿಸುವಂತೆ ಕೋರಿಕೆ ಮುಂದಿಟ್ಟಿದ್ದಾರೆ. ಇದನ್ನು ಒಪ್ಪಿರುವ ಸಿಪ್ರಸ್ ಅಧಿಕಾರಿಗಳು ಮುಸ್ತಫಾನನ್ನು ವಾಪಾಸ್ ಈಜಿಪ್ಟ್ಗೆ ಕಳುಹಿಸಲು ರಾಜತಾಂತ್ರಿಕ ಪ್ರಕ್ರಿಯೆ ಆರಂಭಿಸಿದ್ದಾರೆ. ಅಲ್ಲಿಯವರೆಗೂ ಮುಸ್ತಫಾನನ್ನು ಪೊಲೀಸ್ ಕಸ್ಟಡಿಯಲ್ಲಿಯೇ ಇರಿಸಿಕೊಳ್ಳಲಾಗುವುದು ಎಂದು ವರದಿ ಹೇಳಿದೆ.

ಮಾ. 29ರ ಮುಂಜಾನೆ ಈಜಿಪ್ಟ್ನ ಅಲೆಗ್ಸಾಂಡ್ರಿಯಾ ನಗರದಿಂದ ರಾಜಧಾನಿ ಖೈರೋಗೆ ಹೊರಟಿದ್ದ ವಿಮಾನ ಮಾರ್ಗಮಧ್ಯದಲ್ಲಿ ಅಪಹರಣಕ್ಕೆ ಈಡಾಗಿತ್ತು. ಯುರೋಪಿನಲ್ಲಿ ಐಸಿಸ್ ದಾಳಿಗಳ ಹಿನ್ನಲೆಯಲ್ಲಿ, ಅಪಹರಣ ಭಾರಿ ಆತಂಕವನ್ನು ಮೂಡಿಸಿತ್ತು. ವಿಮಾನದಲ್ಲಿ ಒಟ್ಟು 181 ಪ್ರಯಾಣಿಕರಿದ್ದರು.

ಆದರೆ, ಅಪಹರಣಕಾರ ಮುಸ್ತಫಾ ವಿಮಾನವನ್ನು ಸಿಪ್ರಸ್ನಲ್ಲಿ ಇಳಿಸುವಂತೆ ಪೈಲಟ್ಗೆ ಸೂಚನೆ ನೀಡಿದ್ದ. ಆತನ ಜತೆಗೆ ಸಂಧಾನ ಮಾತುಕತೆ ಆರಂಭಿಸುತ್ತಿದ್ದಂತೆ, ಇದು ಭಯೋತ್ಪಾದನಾ ಕೃತ್ಯವಲ್ಲ; ಬದಲಿಗೆ ಕೌಟುಂಬಿಕ ಕಾರಣಗಳಿಗಾಗಿ ವಿಮಾನವನ್ನು ಹೈಜಾಕ್ ಮಾಡಲಾಗಿದೆ ಎಂದು ಗೊತ್ತಾಗಿತ್ತು. ಏಳು ಗಂಟೆಗಳ ಸಂಧಾನ ಪ್ರಕ್ರಿಯೆ ನಂತರ ಮುಸ್ತಫಾ ಸಿಪ್ರಸ್ ಪೊಲೀಸರಿಗೆ ಶರಣಾಗಿದ್ದ.

“24 ವರ್ಷಗಳಿಂದ ಕುಟುಂಬವನ್ನು ನೋಡದ ನನ್ನ ಮನಸ್ಥಿತಿ ಹೇಗಿರಬಹುದು? ಈಜಿಪ್ಟ್ ನನ್ನ ಕುಟುಂಬ ಜತೆ ಸೇರಲು ಅವಕಾಶ ನೀಡದ ಹಿನ್ನೆಲೆಯಲ್ಲಿ ವಿಮಾನ ಅಪಹರಣ ಮಾಡಬೇಕಾಗಿ ಬಂತು,” ಎಂದು ಮುಸ್ತಫಾ ಸಿಪ್ರಸ್ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ವಿವರಿಸಿದ್ದ.

ಮುಸ್ತಫಾ ಜತೆಗಿನ ಐದು ವರ್ಷಗಳ ದಾಂಪತ್ಯ ಜೀವನ ಒಂದು ‘ಕಪ್ಪು ಅಧ್ಯಾಯ’ ಎಂದು ಸಿಪ್ರಸ್ನಲ್ಲಿ ನೆಲೆಸಿರುವ ಆತನ ಪತ್ನಿ ನಂತರ ಮಾಧ್ಯಮಗಳಿಗೆ ತಿಳಿಸಿದ್ದರು. ಮುಸ್ತಫಾ ಮಾನಸಿಕವಾಗಿ ಸದೃಢನಾಗಿಲ್ಲ ಎಂದು ಪೊಲೀಸರು ನ್ಯಾಯಾಲಯದಲ್ಲಿ ಸಲ್ಲಿಸಿದ್ದ ದಾಖಲೆಗಳಲ್ಲಿ ಅನುಮೋದಿಸಿದ್ದರು.

ಇದೀಗ, ಮುಸ್ತಫಾ ಮೇಲೆ ಭಯೋತ್ಪಾದನಾ ಕೃತ್ಯ ಸೇರಿದಂತೆ ಹಲವು ಕ್ರಿಮಿನಲ್ ಮೊಕದ್ದಮೆಗಳನ್ನು ಈಜಿಪ್ಟ್ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಆರೋಪಿಯನ್ನು ಮರಳಿ ಸ್ವದೇಶಕ್ಕೆ ಕರೆತರಲು ಪ್ರಕ್ರಿಯೆ ಆರಂಭಿಸಿದ್ದಾರೆ. ಇದಕ್ಕೆ ಸಿಪ್ರಸ್ ಕಡೆಯಿಂದ ಸಕಾರಾತ್ಮಕ ಸ್ಪಂದನೆಯೂ ಸಿಕ್ಕಿದೆ. ಪತ್ನಿಗಾಗಿ ವಿಮಾನ ಅಪಹರಿಸಿ ಸುದ್ದಿ ಮಾಡಿದ್ದ ಮುಸ್ತಫಾ ಸದ್ಯದಲ್ಲಿಯೇ ತನ್ನ ತವರು ದೇಶದ ಜೈಲಿಗೆ ಹಸ್ತಾಂತರಗೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ.

Top