An unconventional News Portal.

ಪಿಯುಸಿ ಫಲಿತಾಂಶ ಕಂಪ್ಲೀಟ್ ಡಿಟೇಲ್ಸ್: ಬಡವರ ಮಕ್ಕಳ ಸಾಧನೆ, ನಕಲು ತಡೆಯಿಂದ ಫಲಿತಾಂಶ ಕುಸಿತ

ಪಿಯುಸಿ ಫಲಿತಾಂಶ ಕಂಪ್ಲೀಟ್ ಡಿಟೇಲ್ಸ್: ಬಡವರ ಮಕ್ಕಳ ಸಾಧನೆ, ನಕಲು ತಡೆಯಿಂದ ಫಲಿತಾಂಶ ಕುಸಿತ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ಶೇ 57. 20 ರಷ್ಟು ಫಲಿತಾಂಶ ಬಂದಿದೆ. ಎಂದಿನಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಕಳೆದ ಸಾಲಿನ ಫಲಿತಾಂಶಕ್ಕೆ ಹೋಲಿಸಿದರೆ ಈ ಬಾರಿ ಶೇ 3.32 ರಷ್ಟು ಫಲಿತಾಂಶ ಕುಸಿತ ಕಂಡಿದೆ.

ಜಿಲ್ಲಾವಾರು ಫಲಿತಾಂಶದಲ್ಲಿ ದಕ್ಷಿಣ ಕನ್ನಡ( 90.480) ಮೊದಲ ಸ್ಥಾನ ಪಡೆದರೆ, ಉಡುಪಿ( 90.35) ಎರಡನೇ ಸ್ಥಾನ, ಕೊಡಗು(79.35) ಮೂರನೇ ಸ್ಥಾನ ಹಾಗೂ ಯಾದಗಿರಿ (44.16) ಕೊನೆಯ ಸ್ಥಾನಗಳಿಸಿವೆ. ಕಲಾ ವಿಭಾಗದಲ್ಲಿ ಶೇ. 42.12, ವಾಣಿಜ್ಯ ವಿಭಾಗ ಶೇ.64.16, ವಿಜ್ಞಾನ ವಿಭಾಗ ಶೇ. 62.25 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿಜ್ಞಾನ, ಕಲಾ, ಮತ್ತು ವಾಣಿಜ್ಯ ವಿಭಾಗದಲ್ಲಿ ಅತೀ ಹೆಚ್ಚು ಅಂಕ ಪಡೆದವರಲ್ಲಿ ಬಾಲಕೀಯರೇ ಮೊದಲ ಸ್ಥಾನ ಪಡೆದಿರುವುದು ಈ ಬಾರಿಯ ಫಲಿತಾಂಶದ ವಿಶೇಷವಾಗಿದೆ.

ಬಾಳೆ ಹಣ್ಣಿನ ವ್ಯಾಪಾರಿಯೊಬ್ಬರ ಪುತ್ರಿ ಬಳ್ಳಾರಿ ಜಿಲ್ಲೆಯ ಕೊಟ್ಟೂರು ತಾಲೂಕಿನ ಇಂದೂ ಪಿಯು ಕಾಲೇಜಿನ ಅನಿತಾ ಬಸಪ್ಪ ಅವರು 600ಕ್ಕೆ 597 ಅಂಕ ಗಳಿಸಿ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನಗಳಿಸಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಬೆಂಗಳೂರು ನಗರದ ಸರ್ದಾರ್ ಪಟೇಲ್ ಪಿಯು ಕಾಲೇಜಿನ ವಿದ್ಯಾರ್ಥಿನಿ ರಕ್ಷಿತಾ ತಮನ್ 600ಕ್ಕೆ 596 ಅಂಕ ಪಡೆದು ಪ್ರಥಮ ಸ್ಥಾನ ಗಳಿಸಿದ್ದಾರೆ. ಉಡುಪಿ ಜಿಲ್ಲೆಯ ನೇಹಾ ಶೆಟ್ಟಿ ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ವಿಜಯಪುರದ ವಿ ಬಿ ದರ್ಬಾರ್ ಪಿಯು ಕಾಲೇಜಿನ ಸಹನಾ ಕುಲಕರ್ಣೀ ಅವರು 594 ಅಂಕ ಪಡೆದು ಪ್ರಥಮ ಸ್ಥಾನ ಪಡೆದಿದ್ದಾರೆ. ಬೆಂಗಳೂರಿನ ಛಾಯಾಶ್ರೀ ವಿ ಮತ್ತು ದೀಕ್ಷಾ ನಾಯಕ್ ಅವರು ಕೂಡಾ ಅಷ್ಟೇ ಅಂಕಗಳನ್ನು ಗಳಿಸಿದ್ದಾರೆ.ವಿಶೇಷ ಅಂದರೆ ಮೂರು ವಿಭಾಗದಲ್ಲೂ ಅತೀ ಹೆಚ್ಚು ಅಂಕ ಪಡೆದವರು ವಿದ್ಯಾರ್ಥಿನಿಗಳಾಗಿದ್ದಾರೆ.

ಒಟ್ಟು 6,36,368 ವಿದ್ಯಾರ್ಥಿಗಳು ಪರೀಕ್ಷೆ ಬರದಿದ್ದು, 3,64,013 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಒಟ್ಟು 163484(ಶೇ.50.02) ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದರೆ, 2,50,029(ಶೇ.64.79) ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ.
ಬುಧವಾರ ಬೆಂಗಳೂರಿನ ಪದವಿ ಪೂರ್ವ ಶಿಕ್ಷಣ ಮಂಡಳಿಯ ಕಚೇರಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವ ಕಿಮ್ಮನೆ ರತ್ನಾಕರ ಅವರು, ಫಲಿತಾಂಶವನ್ನು ಪ್ರಕಟಿಸಿದರು.

ಫಲಿತಾಂಶದಲ್ಲಿ ಕುಸಿತ

ಹೆಚ್ಚುತ್ತಿರುವ ನಕಲು ಪ್ರಮಾಣವನ್ನು ತಡೆಗಟ್ಟುವ ಉದ್ದೇಶದಿಂದ ಶಿಕ್ಷಣ ಇಲಾಖೆ ಈ ಬಾರಿ ಬಿಗಿಯಾದ ಕ್ರಮ ಕೈಗೊಂಡ ಪರಿಣಾಮ ದ್ವೀತಿಯ ಪಿಯುಸಿ ಫಲಿತಾಂಶ ಕುಸಿತ ಕಂಡಿದೆ. 2015ರಲ್ಲಿ ಶೇ 60.54 ಫಲಿತಾಂಶ ಬಂದಿದ್ದರೆ, ಈ ಬಾರಿ ಶೇ 57.20 ಬಂದಿದೆ. ಒಟ್ಟಾರೆ. ಶೇ. 3.34 ರಷ್ಟು ಫಲಿತಾಂಶ ಕುಸಿತ ಕಂಡಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ, ಹೆಚ್ಚಿನ ಸ್ಕ್ವಾಡ್, ಪೊಲೀಸ್ ಭಿಗಿ ಭದ್ರತೆ ಕೈಗೊಂಡಿರುವುದರಿಂದ ಸ್ವಲ್ಪ ಮಟ್ಟಿಗೆ ಹಿನ್ನಡೆಯಾಗಿದೆ. “ನಕಲು ತಡೆಗಟ್ಟುವ ಉದ್ದೇಶದಿಂದ ಮುಂದೆಯೂ ಇನ್ನಷ್ಟು ಸುಧಾರಣಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಪ್ರತಿಭಾವಂತಾ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ಇಲಾಖೆ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಿದೆ. ಫಲಿತಾಂಶ ಹೆಚ್ಚಳ ಮಾಡುವುದರ ಜೊತೆಗೆ ಸುಧಾರಣೆ ಮಾಡುವುದು ನಮ್ಮ ಮುಂದಿರುವ ಬಹು ದೊಡ್ಡ ಸವಾಲು,” ಎಂದು ಫಲಿತಾಂಶ ಪ್ರಕಟಿಸಿದ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.

ನಗರ ವಿದ್ಯಾರ್ಥಿಗಳು ಮೇಲುಗೈ

ನಗರ ಪ್ರದೇಶ ಶೇ.57.36 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು 56.66 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 91 ಸರ್ಕಾರಿ ಕಾಲೇಜುಗಳು ಶೂನ್ಯ ಫಲಿತಾಂಶ ದಾಖಲಿಸಿದ್ದರೆ, 88 ಖಾಸಗಿ ಕಾಲೇಜುಗಳಲ್ಲಿ ಶೂನ್ಯ ಸಂಪಾದನೆ ಮಾಡಿವೆ.

ಬಾಲಕಿಯರೇ ಮೊದಲು

ಎಂದಿನಂತೆ ಬಾಲಕಿಯರು ಈ ಬಾರಿಯೂ ಬಾಲಕರನ್ನು ಹಿಂದಿಕ್ಕಿದ್ದಾರೆ. ಬಾಲಕಿಯರು ಶೇ. 64.78 ಪಡೆದಿದ್ದರೆ, ಬಾಲಕರ ತೇರ್ಗಡೆ ಫಲಿತಾಂಶ ಶೇ.50.02 ಆಗಿದೆ.

ವಿಭಾಗವಾರು ಫಲಿತಾಂಶಗಳನ್ನು ಗಮನಿಸಿದಾಗ, ಕಲಾ ವಿಭಾಗದ ತೇರ್ಗಡೆ ಫಲಿತಾಂಶ ಶೇ.42.12 ಆಗಿದ್ದರೆ, ವಾಣಿಜ್ಯ ವಿಭಾಗದ ಫಲಿತಾಂಶ ಶೇ. 64.16 ಆಗಿದೆ, ಹಾಗೂ ವಿಜ್ಞಾನ ವಿಭಾಗದ ಫಲಿತಾಂಶ ಶೇ.62.25 ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ.

ಎರಡು ಬಾರಿ ಸೋರಿಕೆಯಾಗಿ ಕುತೂಹಲ ಕೆರಳಿಸಿದ್ದ ರಸಾಯನ ಶಾಸ್ತ್ರ ವಿಷಯದಲ್ಲಿ 1280 ವಿದ್ಯಾರ್ಥಿಗಳು 100/ 100 ಅಂಕಗಳನ್ನು ಪಡೆದಿದ್ದಾರೆ. ಈ ಬಾರಿ ಕನ್ನಡ ಮಾದ್ಯಮದ ವಿದ್ಯಾರ್ಥಿಗಳಿಗೆ ಹೋಲಿಸಿದರೆ( ಶೇ. 46.89) ಆಂಗ್ಲ ಮಾದ್ಯಮದ( ಶೇ.65.71) ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದಾರೆ.

ಶೇ.44.16 ತೇರ್ಗಡೆ ಪ್ರಮಾಣದೊಂದಿಗೆ ಯಾದಗಿರಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ಅದೇ ರೀತಿ ಶೂನ್ಯ ಫಲಿತಾಂಶ ಪಡೆದ ಕಾಲೇಜುಗಳ ಸಂಖ್ಯೆಯಲ್ಲಿ ಈ ಬಾರಿ ಏರಿಕೆಯಾಗಿದೆ. 45 ರಷ್ಟಿದ್ದ ಸಂಖ್ಯೆಯು ಈ ಬಾರಿ 91 ಕ್ಕೆ ಏರಿದೆ.

ಫಲಿತಾಂಶ ತಡೆ ಇಲ್ಲ

“ರಸಾಯನಶಾಸ್ತ್ರ ಪ್ರಶ್ನೆ ಪ್ರತ್ರಿಕೆ ಸೋರಿಕೆ ಹಗರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಆರೋಪಿಗಳ ಮಕ್ಕಳ ಫಲಿತಾಂಶವನ್ನು ತಡೆ ಹಿಡಿದಿಲ್ಲ,” ಎಂದು ಸಚಿವ ಕಿಮ್ಮನೆ ರತ್ನಾಕರ ಅವರು ಸ್ಪಷ್ಟಪಡಿಸಿದರು. “ಮಕ್ಕಳ ಫಲಿತಾಂಶ ತಡೆ ಹಿಡಿಯುವಂತೆ ಸಿಐಡಿಯಿಂದ ಶಿಕ್ಷಣ ಇಲಾಖೆಗೆ ಯಾವುದೇ ಮಾಹಿತಿ ಬಂದಿಲ್ಲ. ಈಗ ಫಲಿತಾಂಶ ಪ್ರಕಟಿಸಲಾಗಿದ್ದು ಮುಂದೆ ಸಿಐಡಿ ವರದಿ ಆಧರಿಸಿ ಕಾನೂನು ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ,” ಎಂದು ಸಚಿವರು ಹೇಳಿದರು.

ಗೊಂದಲದ ನಡುವೆ ಪರೀಕ್ಷೆ:

ಈ ಬಾರಿ ಎರಡು ಬಾರಿ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಮೂರನೇ ಬಾರಿಗೆ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಬಗ್ಗೆ ಸಿಐಡಿ ತನಿಖೆ ನಡೆಯುತ್ತಿದೆ. ಈ ನಡುವೆ, ಗಣಿತ ಪ್ರಶ್ನೆಪತ್ರಿಕೆಯಲ್ಲಿ ಪಠ್ಯೇತರ ಪ್ರಶ್ನೆಗಳನ್ನು ಕೇಳಿದ್ದರಿಂದ 21 ಕೃಪಾಂಕ ನೀಡಬೇಕೆಂಬ ಒತ್ತಾಯ ಕೇಳಿ ಬಂದಿತ್ತು. ಕೃಪಾಂಕ ನೀಡುವ ಕುರಿತು ಸರಕಾರ ಬಹಿರಂಗವಾಗಿ ಹೇಳಿಕೆ ನೀಡಿಲ್ಲ. ಆದರೆ ಅನಧಿಕೃತವಾಗಿ ಕೃಪಾಂಕ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ವರ್ಷ ಖಾಸಗಿ ವೆಬ್‍ಸೈಟ್‍ಗಳಲ್ಲಿ ಪ್ರಕಟಿಸಿದ ಫಲಿತಾಂಶ ಗೊಂದಲಕ್ಕೀಡಾದ ಹಿನ್ನೆಲೆಯಲ್ಲಿ ಈ ಬಾರಿ, ಇಲಾಖೆಯ ವೆಬ್‍ಸೈಟ್‍ನಲ್ಲಿ ಮಾತ್ರ ಫಲಿತಾಂಶ ಪ್ರಕಟಿಸಲಾಗುವುದೆಂದು ತಿಳಿಸಿದರು.

ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಜೂ. 7ಕ್ಕೆ ಕೊನೆಯ ದಿನಾಂಕ
ಸ್ಕ್ಯಾನಿಂಗ್ ಪ್ರತಿ ಪಡೆಯಲು 400 ರೂ.
ಸ್ಕ್ಯಾನಿಂಗ್ ಪ್ರತಿಗೆ ಅರ್ಜಿ ಸಲ್ಲಿಸಲು ಮೇ 30 ಕೊನೆಯ ದಿನಾಂಕ
ಪರೀಕ್ಷಾ ಶುಲ್ಕ ಕಟ್ಟಲು ಜೂನ್ 6 ಕೊನೆಯ ದಿನಾಂಕ
ಜುಲೈ 1 ರಿಂದ 13 ರವರೆಗೆ ಸಪ್ಲಿಮೆಂಟ್ರಿ ಪರೀಕ್ಷೆ
ಪೂರಕ ಪರೀಕ್ಷೆ ಕಟ್ಟಲು ಒಂದು ವಿಷ್ಯಕ್ಕೆ 101 ರೂ.
ಮೂರು ವಿಷಯಕ್ಕೆ 301 ರೂ.

Top