An unconventional News Portal.

ಪತ್ರಕರ್ತರ ಮೇಲೆ ಹಲ್ಲೆ: ಹಾಸನದಲ್ಲಿ ಇಂದು ಪ್ರತಿಭಟನೆ

ಪತ್ರಕರ್ತರ ಮೇಲೆ ಹಲ್ಲೆ: ಹಾಸನದಲ್ಲಿ ಇಂದು ಪ್ರತಿಭಟನೆ

ಹಾಸನ ಜಿಲ್ಲೆಯ ಸಿಗರನಹಳ್ಳಿಯಲ್ಲಿ ದಲಿತರಿಗೆ ದೇವಾಲಯ ಪ್ರವೇಶ ನಿಷೇಧಿಸಿದ್ದರ ಬಗ್ಗೆ ವರದಿ ಮಾಡಲು ತೆರಳಿದ್ದ ವರದಿಗಾರರ ಮೇಲೆ ನಡೆದ ಹಲ್ಲೆ ಖಂಡಿಸಿ ಶನಿವಾರ ಸಂಜೆ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಇಲ್ಲಿನ ಅಂಬೇಡ್ಕರ್ ಪ್ರತಿಮೆ ಮುಂಭಾಗ ಸಂಜೆ 5 ಗಂಟೆಗೆ ಕಪ್ಪು ಪಟ್ಟಿ ಧರಿಸಿ ಪತ್ರಕರ್ತರ ಮೇಲೆ ನಡೆದ ಹಲ್ಲೆಯನ್ನು ಖಂಡಿಸುವ ಸಾಂಕೇತಿಕ ಪ್ರತಿಭಟನೆಗೆ ಪ್ರಗತಿಪರ ಸಂಘಟನೆಗಳು ಕರೆ ನೀಡಿವೆ. ಘಟನೆಯಲ್ಲಿ ಶಾಸಕ ರೇವಣ್ಣರ ಪಾತ್ರದ ಬಗ್ಗೆಯೂ ಅನುಮಾನಗಳು ಎದ್ದಿದ್ದು, ಅವರ ಕುತಂತ್ರವೇ ಇಷ್ಟಕ್ಕೆಲ್ಲಾ ಕಾರಣ ಎಂದು ಸಂಘಟಕರು ಆರೋಪಿಸುತ್ತಿದ್ದಾರೆ.

ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ಸಿಗರನಹಳ್ಳಿಯ ದೇವಸ್ಥಾನಕ್ಕೆ ದಲಿತರು ಪ್ರವೇಶ ಮಾಡಿದ್ದರು. ಇದರಿಂದ ದೇವಸ್ಥಾನಕ್ಕೆ ಮೈಲಿಗೆ ಆಯಿತು ಎಂಬ ತಗಾದೆ ತೆಗೆದ ಊರಿನ ಮೇಲ್ವರ್ಗದ ಜನ ದೇವಸ್ಥಾನದ ಬಾಗಿಲು ಮುಚ್ಚಿದ್ದರು. ಏ. 1ರಂದು ಜಾತ್ರೆ ಸಲುವಾಗಿ ದೇವಸ್ಥಾನವನ್ನು ಶುದ್ಧಗೊಳಿಸುವ ಕೆಲಸ ನಡೆಯಿತು. ಈ ಸಮಯದಲ್ಲಿ ಜಾತ್ರೆಯಲ್ಲಿ ತಮ್ಮ ಪಾತ್ರವನ್ನೂ ಪರಿಗಣಿಸುವಂತೆ ದಲಿತರು ಕೋರಿಕೆ ಸಲ್ಲಿಸಿದರು. ಇದು ಊರಿನ ಮಟ್ಟದಲ್ಲಿ ಗಲಭೆ ವಾತಾವರಣವನ್ನು ಸೃಷ್ಟಿಸಿತ್ತು.

ಇದನ್ನು ವರದಿ ಮಾಡಲು ತೆರಳಿದ್ದ ಇಬ್ಬರು ಪತ್ರಕರ್ತರು ಹಾಗೂ ಸ್ಥಳದಲ್ಲಿದ್ದ ಪೊಲೀಸರ ಮೇಲೆ ಗ್ರಾಮಸ್ಥರು ಶುಕ್ರವಾರ ಏಕಾಏಕಿ ಹಲ್ಲೆ ನಡೆಸಿದ್ದರು. ಹಲ್ಲೆ ಪರಿಣಾಮ ಗಂಭೀರ ಗಾಯಗಳಾದ್ದರಿಂದ ಐವರು ಪೊಲೀಸರು ಸೇರಿದಂತೆ, ಇಬ್ಬರು ಪತ್ರಕರ್ತರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಘಟನೆ ಕುರಿತು ಎಲ್ಲಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಸದ್ಯ ದಲಿತ ಹಾಗೂ ಎಡಪಕ್ಷಗಳು ಹಾಸನದಲ್ಲಿ ಶನಿವಾರ ಸಾಂಕೇತಿಕ ಪ್ರತಿಭಟನೆ ನಡೆಸಲು ಮುಂದಾಗಿವೆ.

Top