An unconventional News Portal.

‘ಡಾಗ್ ಮೈ ಡಾರ್ಲಿಂಗ್’: ನಾಯಿ ಸಾಕಲು ಹೋಗಿ ಬಿಕಾರಿಯಾದ ಮಿಲೇನಿಯರ್!

‘ಡಾಗ್ ಮೈ ಡಾರ್ಲಿಂಗ್’: ನಾಯಿ ಸಾಕಲು ಹೋಗಿ ಬಿಕಾರಿಯಾದ ಮಿಲೇನಿಯರ್!

ಸಂಬಂಧಗಳ ಬಗ್ಗೆ ನಂಬಿಕೆಗಳು ಕಳೆದು ಹೋದಾಗ ಪ್ರಾಣಿಗಳನ್ನು ಸಾಕಿ ಎಂಬುದು ಮನಶಾಸ್ತ್ರ ಹೇಳುವ ಬದುಕಿನ ಟಿಪ್ಸ್. ನೀವೊಂದು ನಾಯಿಯನ್ನೋ, ಬೆಕ್ಕನ್ನೋ ಅಥವಾ ಇನ್ಯಾವುದೋ ಪ್ರಾಣಿಯನ್ನು ಹಚ್ಚಿಕೊಂಡಿರಿ ಎಂದರೆ, ನಿಮ್ಮೊಳಗಿನ ಮನುಷ್ಯ ಸದಾ ಜೀವಂತವಾಗಿರುತ್ತಾನೆ ಎಂದರ್ಥ. ಒಮ್ಮೆ ಅಂತಃಕರಣ ಜಾಗೃತಗೊಂಡರೆ, ಮನಸ್ಸು ಚಿಕ್ಕಪುಟ್ಟ ಸೂಕ್ಷ್ಮಗಳಿಗೂ ಸ್ಪಂದಿಸಲು ಶುರು ಮಾಡುತ್ತದೆ. ಬಹುಶಃ ಚೀನಾದ ಈ ಶ್ವಾನ ಪ್ರೇಮಿಗೂ ಆಗಿದ್ದೂ ಅದೇ.

ವಿಷಯ ಏನಪ್ಪ ಅಂದರೆ, ಚೀನಾದಲ್ಲಿ ವಾಂಗ್ ಯಾನ್ ಎಂಬಾತನ ಸಾಕು ನಾಯಿಯೊಂದು ಒಂದು ದಿನ ಕಣ್ಮರೆಯಾಗಿತ್ತು. ಅದಕ್ಕಾಗಿ ಆತ ಹುಡುಕಾಡದ ಜಾಗವೇ ಇರಲಿಲ್ಲ. ಕೊನೆಯ ಪ್ರಯತ್ನ ಎಂಬಂತೆ, ಸ್ನೇಹಿತನೊಬ್ಬನ ಸಲಹೆಯಂತೆ, ವಾಂಗ್ ಯಾನ್ ತನ್ನ ಮನೆಯ ಸಮೀಪವೇ ಇದ್ದ ನಾಯಿಗಳನ್ನು ಕಡಿಯುವ ಕಸಾಯಿಖಾನೆಗೆ ಭೇಟಿ ನೀಡಿದ. ಅಲ್ಲಿ ಕಂಡ ದೃಶ್ಯಗಳು ಆತನನ್ನು ಯಾವ ಪರಿ ಕಾಡಿದವು ಎಂದರೆ, ಆತ ಊಟ, ನಿದ್ದೆ ಬಿಟ್ಟು ಯೋಚಿಸುವಂತಾಯಿತು.

ಮುಂದಿನ ಒಂದು ವಾರಗಳ ಕಾಲ ಆತ, ಅದೇ ಕಸಾಯಿಖಾನೆಯ ಸುತ್ತ ಓಡಾಡತೊಡಗಿದ. ಪ್ರತಿ ನಾಯಿಯೂ ಹತ್ಯೆ ಸಮಯದಲ್ಲಿ ಹೊರಡಿಸುವ ಚೀತ್ಕಾರಗಳಿಗೆ ಕಿವಿಯಾದ. ಕೊನೆಗೊಂದು ದಿನ ಅದೇನೋ ಗಟ್ಟಿ ನಿರ್ಧಾರ ಮಾಡಿದವನಂತೆ, ತನ್ನೆಲ್ಲಾ ಉದ್ಯಮವನ್ನು ಅಡ ಇಟ್ಟು 3 ಕೋಟಿ ರೂಪಾಯಿ ಸುರಿದು, ಇಡೀ ಕಸಾಯಿಖಾನೆಯನ್ನೇ ಕೊಂಡುಕೊಂಡ. ಅದಕ್ಕಾಗಿ ಅಲ್ಲೀವರೆಗೆ ಆತ ದುಡಿದ ಎಲ್ಲವನ್ನೂ ಕಳೆದುಕೊಂಡಿದ್ದ.

ಮಾರನೇ ದಿನವೇ ಕಸಾಯಿಖಾನೆಯಲ್ಲಿ ನಡೆಯುತ್ತಿದ್ದ ನಾಯಿಗಳ ಮಾರಣಹೋಮ ನಿಲ್ಲಿಸಿಬಿಟ್ಟ ವಾಂಗ್. ರಕ್ಷಣೆ ಮಾಡಿದ ನಾಯಿಗಳನ್ನು ಅಲ್ಲಿ ಸಾಕಲು ಶುರುಮಾಡಿದ. 2012ರಿಂದ ಇಲ್ಲೀವರೆಗೆ ವಾಂಗ್ ನೆಚ್ಚಿನ ಮನೆಯಲ್ಲಿ ಸುಮಾರು 2 ಸಾವಿರ ನಾಯಿಗಳು ನೆಮ್ಮದಿಯಾಗಿವೆ.

5_Chinese-millionaire_Slaughterhouse

ಆಚರಣೆ ವಿರುದ್ಧ: 

ವಾಂಗ್ ಶ್ವಾನ ಪ್ರೀತಿ ಇಷ್ಟಕ್ಕೆ ಸೀಮಿತವಾಗಲಿಲ್ಲ. ಚೀನಾದಲ್ಲಿ ಬೀಕರ ಆಚರಣೆಯೊಂದಿದೆ. ಸಂಪ್ರದಾಯದ ಹೆಸರಿನಲ್ಲಿ ಸುಮಾರು 10,000 ಕ್ಕೂ ಹೆಚ್ಚು ನಾಯಿಗಳನ್ನು ಪ್ರತಿ ವರ್ಷ ಕೊಲ್ಲಲಾಗುತ್ತಿತ್ತು. ಇದನ್ನು ವಾಂಗ್ ಯಾನ್ ವಿರೋಧಿಸತೊಡಗಿದ. ಯಾನ್ ಕೂಗಿಗೆ ಚೀನಾ ನಾಗರೀಕರು ಹಾಗೂ ಹಾಲಿವುಡ್ ಕಲಾವಿದರೂ ಸೇರಿದಂತೆ ಅನೇಕರು ಬೆಂಬಲ ವ್ಯಕ್ತಪಡಿಸಿದರು. ಸಂಪ್ರದಾಯದ ಹೆಸರಿನಲ್ಲಿ ಕ್ರೂರ ಆಚರಣೆಯನ್ನು ನಿಲ್ಲಿಸಬೇಕು ಎಂಬ ಕೂಗು ಎದ್ದಿತು. ಅದೀಗ ಒಂದು ಹಂತದಲ್ಲಿ ಹತೋಟಿಗೆ ಬಂದಿದೆ.

ಇತ್ತ ನಾಯಿಗಳಿಗಾಗಿಯೇ ದುಡಿದದ್ದು ಎಲ್ಲವನ್ನೂ ಕಳೆದುಕೊಂಡ ವಾಂಗ್ 2 ಸಾವಿರ ನಾಯಿಗಳನ್ನು ಸಾಕಲು ಒದ್ದಾಡುತ್ತಿದ್ದಾನೆ. ನನ್ನ ಪ್ರೀತಿಯ ನಾಯಿಗಳನ್ನು, ಅಷ್ಟೆ ಪ್ರೀತಿಯಿಂದ ನೋಡಿಕೊಳ್ಳುವವರಿಗೆ ಕೊಡುತ್ತೇನೆ ಎಂದು ಆತ ಹೇಳುತ್ತಿದ್ದಾನೆ. ಶ್ವಾನ ಪ್ರಿಯರ ಬರುವಿಕೆಗಾಗಿ ಕಾಯುತ್ತಿದ್ದಾನೆ.

Top