An unconventional News Portal.

‘ದಂಡ’ ಕೆಳಗಿಳಿಸದ ಪಟಿಯಾಲ ವಕೀಲರು: ನ್ಯಾಯಾಲಯದ ಆವರಣದಲ್ಲೇ ಕನ್ನಯ್ಯ ಮೇಲೆ ಹಲ್ಲೆ

‘ದಂಡ’ ಕೆಳಗಿಳಿಸದ ಪಟಿಯಾಲ ವಕೀಲರು: ನ್ಯಾಯಾಲಯದ ಆವರಣದಲ್ಲೇ ಕನ್ನಯ್ಯ ಮೇಲೆ ಹಲ್ಲೆ

ಪಟಿಯಾಲ ನ್ಯಾಯಾಲಯದ ಆವರಣದಲ್ಲಿರೊಚ್ಚಿಗೆದ್ದ ವಕೀಲರ ಗುಂಪು.

ಪಟಿಯಾಲ ನ್ಯಾಯಾಲಯದ ಆವರಣದಲ್ಲಿರೊಚ್ಚಿಗೆದ್ದ ವಕೀಲರ ಗುಂಪು.

ದಿಲ್ಲಿಯ ಪಟಿಯಾಲ ಕೋರ್ಟ್ ಆವರಣ ಬುಧವಾರವೂ ವಕೀಲರ ಗೂಂಡಾಗಿರಿಗೆ ಸಾಕ್ಷಿಯಾಯಿತು.

ಜವಹರ್ ಲಾಲ್ ನೆಹರೂ ಯೂನಿವರ್ಸಿಟಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ನಯ್ಯ ಕುಮಾರ್ ಮೇಲೆ ವಕೀಲರ ಗುಂಪೊಂದು ಹಲ್ಲೆ ನಡೆಸಿತು. ‘ದೇಶದ್ರೂಹ’ದ ಆರೋಪದ ಮೇಲೆ ವಿದ್ಯಾರ್ಥಿ ನಾಯಕನನ್ನು ದಿಲ್ಲಿ ಪೊಲೀಸರು ಬಂಧಿಸಿದ್ದರು. ಇಂದು ಅದರ ವಿಚಾರಣೆಗಾಗಿ ಪಟಿಯಾಲ ಕೋರ್ಟ್ ಆವರಣಕ್ಕೆ ಕರೆ ತರುತ್ತಲೇ, ವಕೀಲರ ಗುಂಪೊಂದು ಆರೋಪಿಯ ಮೇಲೆ ಹಲ್ಲೆ ನಡೆಸಿತು. ಜತೆಗೆ ಮಾಧ್ಯಮ ಪ್ರತಿನಿಧಿಗಳ ಮೇಲೂ ದಾಳಿ ನಡೆಸಲಾಯಿತು. ನ್ಯಾಯಾಲಯದ ಆವರಣದೊಳಗಿಂದ ಮಾಧ್ಯಮಗಳ ವಾಹನಗಳ ಮೇಲೆ ಭಾರಿ ಗಾತ್ರದ ಕಲ್ಲುಗಳನ್ನು ಎಸೆಯಲಾಯಿತು.

patiyala court_lawyers_assult-2

ಘಟನೆ ತಕ್ಷಣ ಸ್ಪಂದಿಸಿರುವ ಸುಪ್ರಿಂ ಕೋರ್ಟ್, ಪೊಲೀಸರ ಜತೆಗೆ ಹಿರಿಯ ವಕೀಲರ ತಂಡವೊಂದನ್ನು ಸ್ಥಳ ಪರಿಶೀಲನೆಗೆ ಕಳುಹಿಸಿದೆ. ಮಂಗಳವಾರ ಇದೇ ನ್ಯಾಯಾಲಯದ ಆವರಣದಲ್ಲಿ ವಕೀಲರು ಜೆ ಎನ್ ಯು ವಿದ್ಯಾರ್ಥಿಗಳು ಹಾಗೂ ವಕೀಲರ ಮೇಲೆ ಹಲ್ಲೆ ನಡೆಸಿತ್ತು. ಈ ಕುರಿತು ಸುಪ್ರಿಂ ಕೋರ್ಟ್ ಗಂಟೆ ಹಿಂದಷ್ಟೆ ಮಾರ್ಗಸೂಚಿಗಳನ್ನು ಪ್ರಕಟಿಸಿತ್ತು. ನ್ಯಾಯಾಲಯದ ಆವರಣದಲ್ಲಿ ಶಾಂತಿ ಕಾಪಾಡುವಂತೆ ಸೂಚಿಸಿತ್ತು. ಇದರ ನಡುವೆಯೂ ಇಂದು ಕನ್ನಯ್ಯ ಕುಮಾರ್ ಅವರನ್ನು ನ್ಯಾಯಾಲಯಕ್ಕೆ ಕರೆತರುತ್ತಿದ್ದ ವೇಳೆ ವಕೀಲರ ಗುಂಪು ಹಲ್ಲೆಗೆ ಮುಂದಾಗಿದೆ. ಈ ವಿಚಾರವನ್ನು ಮುಖ್ಯ ನ್ಯಾಯಾಲಯದ ಗಮನಕ್ಕೆ ವಕೀಲರಾದ ಇಂದಿರಾ ಜೈ ಸಿಂಗ್ ಗಮನಕ್ಕೆ ತಂದರು. “ಕಾನೂನು ಮತ್ತು ಸುವ್ಯವಸ್ಥೆ ವಿಚಾರವಾಗಿ ನಮ್ಮ ಗಮನವಿದೆ,’’ ಎಂದು ನ್ಯಾಯಾಲಯ ತಿಳಿಸಿತು. ವಕೀಲರ ತಂಡವೊಂದನ್ನು ಪಟಿಯಾಲ ಕೋರ್ಟ್ ಆವರಣಕ್ಕೆ ಕಳುಹಿಸಿ ಕೊಟ್ಟಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ದಿಲ್ಲಿ ಪೊಲೀಸ್ ಮುಖ್ಯಸ್ಥ, “ಆರೋಪಿಯನ್ನು ರಕ್ಷಿಸಲು ನಮ್ಮ ಪೊಲೀಸರು ಬದ್ಧರಾಗಿದ್ದಾರೆ,’’ ಎಂದರು. ನ್ಯಾಯಾಲಯದ ಆವರಣಕ್ಕೆ ಭಾರಿ ಪೊಲೀಸ್ ವ್ಯವಸ್ಥೆ ನಡುವೆಯೂ ನಡೆದ ಹಲ್ಲೆಯ ಬಗ್ಗೆ ಅವರು ನೈತಿಕ ಹೊಣೆಯನ್ನು ಹೊತ್ತುಕೊಳ್ಳಲು ನಿರಾಕರಿಸಿದರು.

ನ್ಯಾಯಾಲಯದ ಕಲಾಪಗಳನ್ನು ವರದಿ ಮಾಡುತ್ತಿದ್ದ ಪತ್ರಕರ್ತರು, “ಹಲ್ಲೆ ನಡೆಸಿದ ವಕೀಲರ ಗುಂಪು ಪಟಿಯಾಲ ನ್ಯಾಯಾಲಯದವರಲ್ಲ,” ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ನಡುವೆ, ಮಂಗಳವಾರ ಮಾಧ್ಯಮಗಳ ಮುಂದೆ ಹಲ್ಲೆ ನಡೆಸಿದ ವಕೀಲರೊಬ್ಬರು ಬಿಜೆಪಿ ಜತೆ ಸಂಬಂಧ ಹೊಂದಿದ್ದರು ಎಂಬ ಆರೋಪ ಕೇಳಿಬಂದಿದೆ. ಆರೋಪಿ ವಕೀಲ ಬಿಜೆಪಿಯ ಹಿರಿಯ ನಾಯಕರ ಜತೆ ತೆಗೆಸಿಕೊಂಡಿದ್ದ ಫೊಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಪಟಿಯಾಲ ನ್ಯಾಯಾಲಯ ಕನ್ನಯ್ಯ ಕುಮಾರ್ ಬಂಧನ ಅವಧಿಯನ್ನು ಮುಂದುವರಿಸಿದ್ದು, ಮಾರ್ಚ್ 2ಕ್ಕೆ ವಿಚಾರಣೆಯನ್ನು ಮುಂದೂಡಿದೆ.

photos: Internet

Top