An unconventional News Portal.

ಟ್ಯಾಗ್ ಲೈನ್ ಎಂಬ ಪ್ರಚಾರ ತಂತ್ರ ಮತ್ತು ಅಡಿಬರಹದ ಹಿಂದಿರುವ ಆಶಯ!

ಟ್ಯಾಗ್ ಲೈನ್ ಎಂಬ ಪ್ರಚಾರ ತಂತ್ರ ಮತ್ತು ಅಡಿಬರಹದ ಹಿಂದಿರುವ ಆಶಯ!

ಟ್ಯಾಗ್ ಲೈನ್ ಅಥವಾ ಸ್ಲೋಗನ್ಸ್…

ಯಾವುದೇ ಸಂಸ್ಥೆ ಜನರನ್ನು ತನ್ನತ್ತ ಸೆಳೆಯಲು ಬಳಸುವ ಆಕರ್ಷಕರ ವಾಕ್ಯಗಳು. ಜನರ ಮನಸ್ಸನ್ನು ಗೆಲ್ಲಬೇಕು ಎಂದುಕೊಂಡ ಎಲ್ಲಾ ಕಂಪೆನಿಗಳು ಇದನ್ನು ಬಳಸಿಯೇ ಬಳಸುತ್ತವೆ. ಇವತ್ತಿನ ಮುಕ್ತ ಮಾರುಕಟ್ಟೆಯ ಓಘದಲ್ಲಿ ಟ್ಯಾಗ್ ಲೈನ್ಸ್ ಅಗತ್ಯವಾಗಿರುವ ಮಾರುಕಟ್ಟೆಯ ತಂತ್ರ ಕೂಡ. ಕೆಲವೊಮ್ಮೆ ಕಂಪೆನಿಗಳಿಗಿಂತ ಟ್ಯಾಗ್ ಲೈನ್ ಗಳೇ ಜನಪ್ರಿಯತೆ ಗಳಿಸಿರುವ ಉದಾಹರಣೆಗಳೂ ಇವೆ. ಕೆಲವೊಮ್ಮೆ ಇದೇ ಅಡಿಬರಹಗಳು ನಗೆಪಾಟಲಿಗೆ ಈಡಾಗಿದ್ದೂ ಇದೆ. ಇದು ಹೆಚ್ಚು ಕಡಿಮೆ ಎಲ್ಲಾ ಉದ್ಯಮಗಳಿಗೆ ಅನ್ವಯಿಸುವ ಮಾತು.

ಆದರೆ ಮಾಧ್ಯಮ ಸಂಸ್ಥೆಗಳ ವಿಷಯಕ್ಕೆ ಬಂದಾಗ  ಟ್ಯಾಗ್ ಲೈನ್ ಗಳು ಅಷ್ಟಾಗಿ ಮಹತ್ವ ಪಡೆದುಕೊಂಡಿದ್ದು ಕಾಣಿಸುವುದಿಲ್ಲ. ಟ್ಯಾಗ್ ಲೈನ್ ಗಳು ಮಾಧ್ಯಮ ಸಂಸ್ಥೆಗಳನ್ನು ಉತ್ತುಂಗಕ್ಕೆ ಒಯ್ದ ಉದಾಹರಣೆಗಳು ಇಲ್ಲವೇ ಇಲ್ಲವೆನ್ನುವಷ್ಟು ಅಪರೂಪ. ಹೀಗಿದ್ದೂ ಮಾಧ್ಯಮಗಳು ಟ್ಯಾಗ್ ಲೈನ್ ಗಳನನ್ನು ಬಳಸದೇ ಬಿಟ್ಟಿಲ್ಲ. ಜನರ ಮುಂದೆ ತಮ್ಮ ವಿಶ್ವಾಸಾರ್ಹತೆ, ತಮ್ಮೊಳಗಿನ ಸಿದ್ಧಾಂತಗಳನ್ನು ಸೂಚ್ಯವಾಗಿ ಬಿಟ್ಟುಕೊಡಲು ಮಾಧ್ಯಮಗಳು ಅನಾದಿ ಕಾಲದಿಂದಲೂ ಸ್ಲೋಗನ್ ಗಳ ಮೊರೆ ಹೋಗಿವೆ. ಕೆಲವೊಮ್ಮೆ ತಮ್ಮೊಳಗಿನ ಅಜೆಂಡಾಗಳನ್ನು ಮುಚ್ಚಿಡಲೂ ಈ ಟ್ಯಾಗ್ ಲೈನ್ ಗಳನ್ನು ಜಾಣತನದಿಂದ ಬಳಸಿದ್ದಿದೆ.

ಮಾಧ್ಯಮಗಳಲ್ಲಿ ಸ್ಲೋಗನ್ ಗಳನ್ನು ಬಳಸುವ ಪರಂಪರೆ ಬಹಳ ಹಿಂದಿನಿಂದಲೇ ನಡೆದುಕೊಂಡು ಬಂದಿದೆ. 1770ರ ಸುಮಾರಿಗೆ ಮೊದಲ ಬಾರಿಗೆ ಅಮೆರಿಕಾದ ಪತ್ರಿಕೆಗಳಲ್ಲಿ ಸ್ಲೋಗನ್ ಗಳು ರಾರಾಜಿಸಿದವು. ಬ್ರಿಟನ್ ಖ್ಯಾತ ಪತ್ರಿಕೆ ಸಂಡೇ ಟೈಮ್ಸ್- ಸಂಡೇ ಟೈಮ್ಸ್ ಇಲ್ಲದೇ ಅದು ಸಂಡೇಯೇ ಅಲ್ಲ (Sunday isn’t Sunday without the Sunday Times) ಎನ್ನುವ ಅಡಿಬರಹವನ್ನು ಇಟ್ಟುಕೊಂಡಿತ್ತು. ನಿಮಗೆ (ಸುದ್ದಿ) ಸಂಬಂಧಿಸಿದ್ದಾದರೆ ಅದು ನಮಗೂ ಸಂಬಂಧಿಸಿದ್ದು (If It Matters To You, It Matters To Us) ಎನ್ನುವುದು ಅಮೆರಿಕಾದ ಖ್ಯಾತ ಹೆರಾಲ್ಡ್ ಪತ್ರಿಕೆಯ ಅಡಿ ಬರಹ. ಅದೇ ರೀತಿ, ನಾವು ಬಾಯಿ ತೆರೆದರೆ ಜಗತ್ತೇ ಕಿವಿಯಾಗುತ್ತದೆ ಎಂಬ ಅಹಮ್ಮಿಕೆಯ ಸಾಲನ್ನು (When The Times speaks, the World listens) ಟಾಗ್ ಲೈನ್ ಆಗಿ ಇಟ್ಟುಕೊಂಡಿತ್ತು ಬ್ರಿಟನ್ ಮೂಲದ ಪತ್ರಿಕೆ ‘ದಿ ಟೈಮ್ಸ್’.

Untitled-1 copy.jpg2

ಕನ್ನಡದ ದಿನಪತ್ರಿಕೆಗಳ ಮಾಸ್ಟ್ ಹೆಡ್ಸ್..

ಇದು ವಿದೇಶಿ ಮಾಧ್ಯಮಗಳ ಕಥೆ ಆದರೆ, ಕನ್ನಡದ ಮಾಧ್ಯಮಗಳ ಸ್ಲೋಗನ್ ಗಳದ್ದು ಇನ್ನೊಂದು ಕಥೆ. ಇಲ್ಲಿ ಪತ್ರಿಕೆಗಳ ಟ್ಯಾಗ್ ಲೈನ್ ಗಳದ್ದು ಒಂದು ತೂಕವಾದರೆ, ಟಿವಿ ಮಾಧ್ಯಮಗಳದ್ದೇ ಇನ್ನೊಂದು ತೂಕ. ‘ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ’ ಎಂಬುದು ಪ್ರಜಾವಾಣಿಯ ಅಡಿಬರಹ. 1948ರಲ್ಲಿ ಆರಂಭವಾದ ಈ ಪತ್ರಿಕೆ ಇವತ್ತು ಕನ್ನಡದ ಮುಖ್ಯವಾಹಿನಿಯಲ್ಲಿರುವ ಹಳೆಯ ಪತ್ರಿಕೆ.

ವಿಜಯ ಕರ್ನಾಟಕ ‘ಸಮಸ್ತ ಕನ್ನಡಿಗರ ಹೆಮ್ಮೆ’ ಎಂಬ ಹೆಸರಿನಲ್ಲಿ 1999ರಲ್ಲಿ ಪ್ರಕಟಣೆ ಆರಂಭಿಸಿತು. ಬಲುಬೇಗ ಕನ್ನಡದ ನಂಬರ್ .1 ಪತ್ರಿಕೆಯಾಗಿ ಹೊರ ಹೊಮ್ಮಿತು. ಸದ್ಯ ಪ್ರಸಾರ ಸಂಖ್ಯೆಯಲ್ಲಿ ಯಾವ ಸ್ಥಾನದಲ್ಲಿದೆ ಎಂಬ ಗೊಂದಲಗಳಿವೆ.

2011ರಲ್ಲಿ ಜನರ ಕೈಗೆ ‘ವಿಜಯವಾಣಿ’ ಎಂಬ ಪತ್ರಿಕೆಯನ್ನು ಕೈಗಿಟ್ಟವರು ಉದ್ಯಮಿ ವಿಜಯ ಸಂಕೇಶ್ವರ್.  ‘ಕನ್ನಡಿಗರ ಧ್ವನಿ’ ಎಂಬುದು ಇದರ ಅಡಿಬರಹವಾದರೂ, ಹೆಚ್ಚಿನವರ ಕಣ್ಣು ಓಡುವುದು ಮಾಸ್ಟರ್ ಹೆಡ್ ಪಕ್ಕದಲ್ಲೇ ಇರುವ ವಿಜಯ ಸಂಕೇಶ್ವರರ ಫೋಟೋದತ್ತ. ಇದು ಬಹುಶಃ ಕನ್ನಡದ ದಿನ ಪತ್ರಿಕೆಗಳ ಪೈಕಿ ತನ್ನ ಮಾಲಿಕರ ಫೊಟೋವನ್ನೇ ಮಾರ್ಕೆಟಿಂಗ್ ಸರಕಾಗಿಸಿಕೊಂಡ ಮೊದಲ ಪ್ರಯತ್ನ ಇರಬಹುದು.

ಇತ್ತೀಚೆಗೆ ಬಿಡುಗಡೆಯಾದ ‘ವಿಶ್ವವಾಣಿ’ಯೂ ಅಡಿಬರಹದೊಂದಿಗೇ ಹೊರ ಬಂತು. ‘ವಿಶ್ವಾಸವೇ ವಿಶ್ವ’ ಎನ್ನುವುದು ಇವರ ಸ್ಲೋಗನ್.  ಕರಾವಳಿ ಕರ್ನಾಟಕದ ಜನಪ್ರಿಯ ದಿನ ಪತ್ರಿಕೆ ಉದಯವಾಣಿ. ‘ಜನಮನದ ಜೀವನಾಡಿ’ ಎಂಬ ಟ್ಯಾಗ್ ಲೈನ್ ಹೊತ್ತು ಪ್ರಕಟವಾಗುವ ಈ ಪತ್ರಿಕೆ ಆರಂಭವಾಗಿದ್ದು 1971ರಲ್ಲಿ.

ಬಹಿರಂಗವಾಗಿಯೇ ಹಿಂದೂ ಮೂಲಭೂತವಾದದ ಜತೆಗಿರುವ ಪತ್ರಿಕೆ ‘ಹೊಸದಿಗಂತ’. ಸದ್ಯ ಕರ್ನಾಟಕದಾದ್ಯಂತ ಪ್ರಕಟವಾಗುವ  ಹೊಸದಿಗಂತ 1979ರಲ್ಲಿ ಮಂಗಳೂರಿನಲ್ಲಿ ಆರಂಭವಾಯ್ತು. ‘ರಾಷ್ಟ್ರ ಜಾಗೃತಿಯ ದೈನಿಕ’ ಎಂಬುದು ಇದರ ಸ್ಲೋಗನ್.

ಇನ್ನು ಇತ್ತೀಚೆಗಷ್ಟೇ ಸ್ಲೋಗನ್ ಮೊರೆಹೋಗಿದ್ದು ಕನ್ನಡದ ಮತ್ತೊಂದು ಹಳೆಯ ದೈನಿಕ ‘ಕನ್ನಡ ಪ್ರಭ’. 1967ರಲ್ಲೇ ಆರಂಭವಾದ ಹಳೆಯ ಪತ್ರಿಕೆ ಇದು. ಸದ್ಯ ಏಷಿಯಾನೆಟ್ ಸಂಸ್ಥೆ ಇದನ್ನು ಖರೀದಿಸಿದೆ. ಹೀಗಾಗಿ ತನ್ನ ಸಹ ಸಂಸ್ಥೆ ‘ಸುವರ್ಣ ನ್ಯೂಸ್’ನ ಟ್ಯಾಗ್ ಲೈನ್, ‘ನೇರ. ದಿಟ್ಟ. ನಿರಂತರ’ವನ್ನೇ ‘ಕನ್ನಡ ಪ್ರಭ’ವೂ ಬಳಸುತ್ತಿದೆ. 2008ರಲ್ಲಿ ಆರಂಭವಾದ ಸುವರ್ಣ ನ್ಯೂಸ್ ಕನ್ನಡದ ಪ್ರಮುಖ ಸುದ್ದಿ ಮಾಧ್ಯಮವೂ ಹೌದು. ಮಲಯಾಳಂನ ಏಷಿಯಾನೆಟ್ ಸಮೂಹ ಇದರ ಮಾತೃ ಸಂಸ್ಥೆ.

ಇನ್ನು, ಕನ್ನಡದ ಪ್ರಮುಖ ಸುದ್ದಿ ವಾಹಿನಿಗಳ ಟ್ಯಾಗ್ ಲೈನ್ ಗಳು ಆಸಕ್ತಿದಾಯಕವಾಗಿವೆ:

  • ಟಿವಿ 9: ಉತ್ತಮ ಸಮಾಜಕ್ಕಾಗಿ
  • ಸುವರ್ಣ ನ್ಯೂಸ್: ನೇರ. ದಿಟ್ಟ. ನಿರಂತರ
  • ಕಸ್ತೂರಿ ನ್ಯೂಸ್ 24: ಮುಕ್ತ. ನಿರ್ಭೀತ. ನ್ಯಾಯಸಮ್ಮತ
  • ಜನಶ್ರೀ ನ್ಯೂಸ್: ಜನ ಮನ ದನಿ
  • ಪಬ್ಲಿಕ್ ಟಿವಿ: ಯಾರ ಆಸ್ತಿಯೂ ಅಲ್ಲ, ಇದು ನಿಮ್ಮ ಟಿವಿ
  • ರಾಜ್ ನ್ಯೂಸ್ ಕನ್ನಡ: ನಂಬಿಕೆಯೇ ಪ್ರತಿಬಿಂಬ
  • ಈ ಟಿವಿ ನ್ಯೂಸ್ ಕನ್ನಡ: ಸುದ್ದಿಯೇ ಜೀವಾಳ
  • ಬಿಟಿವಿ: ಭರವಸೆಯ ಬೆಳಕು
  • ಪ್ರಜಾ ಟಿವಿ: ನಮ್ಮ ಯುದ್ಧ ಭ್ರಷ್ಟಾಚಾರದ ವಿರುದ್ಧ
  • ಸಮಯ ನ್ಯೂಸ್: ಸಮಾಚಾರ ನಿರಂತರ

ಇದು ಮಾಧ್ಯಮಗಳ ಟ್ಯಾಗ್ ಲೈನ್ ಕತೆ. ಮಾಧ್ಯಮಗಳ ಅಂತರಾಳದ ಆಶಯಗಳನ್ನು ಈ ಅಡಿಬರಹಗಳು ಧ್ವನಿಸುತ್ತವೆ ಎಂದು ಕೆಲವರು ನಂಬುತ್ತಾರೆ. ಹೀಗಾಗಿ, ಇವುಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ, ಅಷ್ಟೆ!

Leave a comment

Top